ಅಂದು ವರವಾಗಿದ್ದ ಇಂದ್ರಾಣಿ ಇಂದು ನದಿ ಪಾತ್ರದ ಜನರಿಗೆ ಶಾಪ !
Team Udayavani, Feb 28, 2020, 5:17 AM IST
ಜಾನುವಾರು ಗಳಿಗೆ ಮೇವು ಬೆಳೆಯುತ್ತಿರುವ ದೃಶ್ಯ.
ಇಂದ್ರಾಳಿ: ಇಂದಿನ ಇಂದ್ರಾಣಿ ನದಿಯ ಬಗ್ಗೆ ಉದಯವಾಣಿ ಸುದಿನ ಅಧ್ಯಯನ ತಂಡವು ಸತತವಾಗಿ 16 ದಿನಗಳಿಂದ ಅಧ್ಯಯನ ಪೂರ್ಣ ವರದಿಯನ್ನು ಪ್ರಸ್ತುತಪಡಿಸುತ್ತಿದೆ. ನಗರಸಭೆಯ ಮುಂದಾಲೋಚನೆಯ ಕೊರತೆ ಹಾಗೂ ನಿರ್ಲಕ್ಷ್ಯದಿಂದ ಸಾವಿರಾರು ಜನರ ಕೃಷಿ ಹಾಗೂ ದಿನದ ಅಗತ್ಯವನ್ನು ಪೂರೈಸಬಹುದಾದ ಜಲಮೂಲವನ್ನು ನಾವು ಬರಿದು ಮಾಡಿಕೊಂಡಿದ್ದೇವೆ.
ಹಾಗಾದರೆ ಹಿಂದೆ ಈ ಇಂದ್ರಾಣಿ ನದಿ ಹೇಗಿತ್ತು ಎಂಬ ಕುತೂಹಲ ಇದ್ದೇ ಇದೆ. ಈ ಹಿನ್ನೆಲೆಯಲ್ಲೇ ಅಧ್ಯಯನ ತಂಡವು ಮೊದಲು ಆರಂಭಿಸಿದ್ದು ಅಧ್ಯಯನವನ್ನು ಇಂದ್ರಾಣಿ ನದಿ ಪಾತ್ರದಿಂದಲೇ. ಆ ಮೂಲದಿಂದ ಅದು ಸಾಗರವನ್ನು ಸೇರುವವರೆಗೂ ನಡೆಸಿದ ಅಧ್ಯಯನದಲ್ಲಿ ಸಿಕ್ಕಿದ್ದು ನೂರಾರು ನೆನಪುಗಳು ಮತ್ತು ಬೇಸರಗಳು.
ನದಿ ಯಾವಾಗಲೂ ಸಂಸ್ಕೃತಿ ಹಾಗೂ ಆರ್ಥಿಕತೆಗೆ ಸಂಬಂಧಿಸಿದ್ದು. ನಾವು ಆ ದೃಷ್ಟಿಯಿಂದಲೇ ನೋಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯತೆ ಅರಿವಾಗುವುದು. ಈ ಮಾಹಿತಿ ಕೊರತೆ ಮತ್ತು ಮುಂದಾ ಲೋಚನೆಯ ಕೊರತೆ ನಮ್ಮ ಜನಪ್ರತಿ ನಿಧಿಗಳಲ್ಲಿ, ಅಧಿಕಾರಿಗಳಲ್ಲಿ ಹಾಗೂ ನಾಗರಿಕರಾದ ನಮ್ಮಲ್ಲೂ ಹೆಚ್ಚಿದೆ. ಆದ ಕಾರಣವೇ ನಮ್ಮ ಇಂದ್ರಾಣಿ ನದಿ ಇಂದು ಕೊಳಚೆ ನೀರು ಹರಿಸುವ ಸಾಧನವಾಗಿರುವುದು.
ನಮ್ಮ ಬದುಕಾಗಿತ್ತು
ನದಿ ಪಾತ್ರದುದ್ದಕ್ಕೂ ಹೋದಾಗ ಎಲ್ಲರೂ ನೆನಪು ಮಾಡಿ ಕೊಂಡಿದ್ದು ತಮ್ಮ ಬಾಲ್ಯದ ದಿನಗಳನ್ನು. ಮಠದಬೆಟ್ಟು ಪ್ರದೇಶದಲ್ಲಿನ ಜಾನಕಮ್ಮ, “ಈಗ ಏನು ಎಂದು ಹೇಳು ವುದು? ಹಿಂದೆ ಇದೇ ನದಿಯಲ್ಲಿ ನಾವು ಸ್ನಾನ ಮಾಡು ತ್ತಿದ್ದೆವು. ಕುಡಿಯಲು ನೀರು ಬಳಸುತ್ತಿದ್ದೆವು. ಕೃಷಿ ಮಾಡು ತ್ತಿದ್ದೆವು. ನಮ್ಮ ಬಾವಿಗಳಲ್ಲಿ ಬೇಸಗೆಯಲ್ಲೂ ನೀರು ತುಂಬಿ ರುತ್ತಿತ್ತು. ಜಾನುವಾರುಗಳಿಗೂ ಇಲ್ಲಿಂದಲೇ ನೀರು ಪೂರೈಸು ತ್ತಿದ್ದೆವು. ಅಂದು ನಮ್ಮ ಬದುಕಾಗಿತ್ತು ಈ ನದಿ’ ಎನ್ನುತ್ತಾರೆ.
ಈ ಅಭಿಪ್ರಾಯ ಇವರೊಬ್ಬರದೇ ಅಲ್ಲ. ಕಂಬಳಕಟ್ಟದ ಬಳಿಯ ಕೃಷಿಕ ಅಪ್ಪು, “ಮೂರು ಬೆಳೆಗಳನ್ನು ಇಲ್ಲಿ ತೆಗೆಯು ತ್ತಿದ್ದೆವು. ಇದೇ ನದಿಯನ್ನು ಅವಲಂಬಿಸಿ ಬದುಕುತ್ತಿದ್ದೆವು. ಊಟಕ್ಕೆ ಕಡಿಮೆ ಇರಲಿಲ್ಲ. ಜಾನುವಾರುಗಳಿಗೂ ಹುಲ್ಲು ಸಿಗುತ್ತಿತ್ತು, ಬೇರೆ ಮೇವು ಆಶ್ರಯಿಸಬೇಕಿರಲಿಲ್ಲ. ಇವೆಲ್ಲವೂ ಇಂದು ಇಲ್ಲವಾಗಿವೆೆ. ಮಳೆಗಾಲದ ಬೆಳೆ ಬೆಳೆಯಲೂ ಯೋಚಿಸುತ್ತಿದ್ದೇವೆ. ಉಳಿದ ಎರಡು ಬೆಳೆಗಳನ್ನು ಬಿಟ್ಟು ಹತ್ತು ವರ್ಷಗಳಾಯಿತು’ ಎಂದು ವಿವರಿಸುತ್ತಾರೆ.
ನನ್ನ ಹೆಸರು ಹಾಕಬೇಡಿ ಎಂದು ಹೇಳಿದ ಮತ್ತೂಬ್ಬ ಕೃಷಿಕರು, “ಭತ್ತ, ಬೇಳೆಕಾಳು, ತರಕಾರಿ, ತೆಂಗು ಎಲ್ಲವನ್ನೂ ಬೆಳೆಯುತ್ತಿದ್ದ ಪ್ರದೇಶವಿದು. ವರ್ಷಪೂರ್ತಿ ಕೃಷಿ ಚಟುವಟಿಕೆಗೆ ಪೂರಕವಾಗಿತ್ತು ಈ ನದಿ. ಈಗ ಪರಿಸ್ಥಿತಿ ಸಂಪೂರ್ಣ ವಿರುದ್ಧವಾಗಿದೆ. ಇದೇ ನದಿಯಿಂದ ನಮ್ಮ ಬಾವಿಗಳು ಹಾಳಾಗಿವೆ, ವಿವಿಧ ರೋಗ ರುಜಿನಗಳ ಭಯದಲ್ಲಿದ್ದೇವೆ. ಬೆಳೆಯೂ ಇಲ್ಲ, ಪ್ರತಿಯೊಂದಕ್ಕೂ ನಗರವನ್ನು ಆಶ್ರಯಿಸಬೇಕಿದೆ. ನಿಜಕ್ಕೂ ದುರಂತ’ ಎಂದು ಬೇಸರ ವ್ಯಕ್ತಪಡಿಸಿದರು.
ಅವರು ಹೇಳುವಂತೆ ಒಂದು ಕಾಲದಲ್ಲಿ ನಮಗೆ ವರವಾಗಿದ್ದ ಈ ನದಿ ಈಗ ಶಾಪ ಎಂಬಂತಾಗಿದೆ. ಇದರಿಂದ ಯಾವುದೂ ಕೈ ಹಿಡಿಯುತ್ತಿಲ್ಲ ಎನ್ನುತ್ತಾರೆ ಅವರು.
ಸಂಸ್ಕೃತಿಯ ವಾಹಕ
ನದಿಯ ಬುಡದಲ್ಲೇ ಸಂಸ್ಕೃತಿ-ಸಂಪ್ರದಾಯಗಳು ಅರಳುವಂಥವು. ಅಂತದ್ದೇ ಕೆಲವು ಸಂಪ್ರದಾಯಗಳು ಹಿಂದೆ ಇಂದ್ರಾಣಿ ನದಿ ಪಾತ್ರದಲ್ಲೂ ಇದ್ದವು. ಕೊಡಂಕೂರು ಬಳಿ ಹೋದಾಗ ಮನೆಯೊಂದರ ಹಿರಿ ಜೀವ ನೆನಪಿಸಿಕೊಳ್ಳು ತ್ತಿದ್ದರು. “ಹಿಂದೆ ಇದೇ ನದಿಯಲ್ಲಿ ಯುಗಾದಿಯ ಸಂದರ್ಭ ಮಠದಬೆಟ್ಟುವಿನಿಂದ ಹಿಡಿದು ಕಲ್ಮಾಡಿವರೆಗೂ ಎಲ್ಲರೂ ಬಲೆ ಹಾಕಿ ಮೀನು ಹಿಡಿದು, ಅದರ ಅಡುಗೆ ಮಾಡಿ ತಮ್ಮ ಗತಿಸಿದ ಹಿರಿಯರಿಗೆ ಅರ್ಪಿಸಿ ಪೂಜಿಸುತ್ತಿದ್ದರು. ಅದು ಅವರ ಸಂಪ್ರದಾಯ. ಯಾವ ವರ್ಷವೂ ತಪ್ಪಿಸುತ್ತಿರಲಿಲ್ಲ. ಒಂದು ಉತ್ಸವದಂತೆ ತೋರುತ್ತಿತ್ತು’.
ಈಗ ಅವೆಲ್ಲವೂ ಮಾಯವಾಗಿವೆ. ಈ ಕೊಳಚೆಯಲ್ಲಿ ಮೀನು ಹಿಡಿಯುವವರಿಲ್ಲ. ಅದರಲ್ಲೀಗ ಕೆಲವೆಡೆ ಕ್ಯಾಟ್ ಫಿಶ್‌ಗಳು ಮಾತ್ರ ಇವೆಯಂತೆ. ಅವುಗಳನ್ನೂ ಹಿಡಿಯುವ ಕೆಲವರು ದೂರದೂರಿನಲ್ಲಿ ಮಾರುತ್ತಾರೆಯೇ ಹೊರತು ಸ್ಥಳೀಯವಾಗಿಯಲ್ಲ ಎಂದು ವಿವರಿಸಿದರು ಆ ಹಿರಿಜೀವ.
ಇಂದ್ರಾಣಿ ನದಿಯ ಕಲುಷಿತ ನೀರಿನ ಸಮಸ್ಯೆಗೆ ಒಂದು ಪರಿಹಾರೋಪಾಯವಿದೆ. ಉಡುಪಿಯ ಕಲುಷಿತ ನೀರನ್ನು ಭೂಮ್ಯಂತರ್ಗತ ಕೊಳವೆ ವ್ಯವಸ್ಥೆಯ ಮೂಲಕ ಶುದ್ಧೀಕರಣ ಘಟಕಕ್ಕೆ ಹರಿಸಬೇಕು. ಅಲ್ಲಿ ಶುದ್ಧೀಕರಿಸಿ ಶುದ್ಧ ನೀರನ್ನು ಭೂಗತ ಪೈಪ್‌ಲೈನ್ ಮೂಲಕ ಸಮುದ್ರಕ್ಕೆ ಹರಿಸಬೇಕು. ಅಲ್ಲದೆ ಮುಂಬಯಿ, ಬೆಂಗಳೂರು, ಬೆಳಗಾವಿ ನಗರಗಳಲ್ಲಿ ಇರುವಂತೆ ಪ್ರಮುಖ ಡ್ರೈನೇಜ್‌ಗಳನ್ನು ಭೂಗತ ಕೊಳವೆಗಳಲ್ಲಿ ಹರಿಸಬೇಕು. ಇದರಿಂದ ಸೊಳ್ಳೆ ಉತ್ಪಾದನೆಯಾಗುವುದನ್ನು ತಡೆಯಬಹುದಲ್ಲದೆ ಕಲುಷಿತ ನೀರು ಕುಡಿಯುವ ನೀರಿನ ಮೂಲಗಳಿಗೆ ಸೇರುವುದನ್ನು ತಡೆಯಬಹುದು. ಹೀಗೆ ಮಾಡಿದರೆ ಇಂದ್ರಾಣಿ ನದಿ ಶುದ್ಧವಾಗಿ ಉಳಿಯಬಹುದು. ಅದರಲ್ಲಿ ಚೆಕ್ ಡ್ಯಾಮ್ ಸ್ಥಾಪಿಸಿದರೆ ಬೇಸಗೆಯ ಅಗತ್ಯ ಸಂದರ್ಭಕ್ಕೆ ನೀರಿನ ಮೂಲವಾಗಿ ಬಳಕೆಯಾದೀತು.
-ದಿನಕರ ಮೆಂಡನ್, ಮಣಿಪಾಲ
ಒಂದು
ನದಿಯೆಂದರೆ ನಾವು
ಬರೀ ಸಣ್ಣ ಹರಿಯುವ ತೊರೆ ಎಂದುಕೊಂಡೋ, ನಮ್ಮ ಕಸ ಎಸೆಯುವ ತೋಡು ಎಂದುಕೊಂಡೋ, ನಮ್ಮ ಎಲ್ಲ ತ್ಯಾಜ್ಯಗಳನ್ನು ಹೊತ್ತೂಯ್ದು ಸಮುದ್ರಕ್ಕೆ ಸೇರಿಸುವ ಸಾಧನವೆಂದೋ ತಿಳಿದುಕೊಳ್ಳುತ್ತೇವೆ. ಈ ಅಭಿಪ್ರಾಯ ಬರೀ ಜನರಲ್ಲಲ್ಲ, ನಮ್ಮ ಊರಿಗೆ ಒಂದಿಷ್ಟು ಅಭಿವೃದ್ಧಿ ಮಾಡಿ ಎಂದು ಆರಿಸಿ ಕಳಿಸುವ ಜನಪ್ರತಿನಿಧಿಗಳಲ್ಲಿದೆ. ಆಡಳಿತ ಜಾರಿಗೊಳಿಸಬೇಕಾದ ಅಧಿಕಾರಿ ವರ್ಗದಲ್ಲಿದೆ. ಇದೆಲ್ಲದರ ಪರಿಣಾಮ ನಮಗೆ ಇಂದ್ರಾಣಿಯಲ್ಲಿ ಕಾಣುತ್ತಿದೆ. ವಾಸ್ತವವಾಗಿ ಒಂದು ನದಿ ತ್ಯಾಜ್ಯ ಹೊತ್ತೂಯ್ಯುವ ಸಾಧನವಲ್ಲ ; ಬದಲಾಗಿ ಆರ್ಥಿಕತೆ ಮತ್ತು ಸಂಸ್ಕೃತಿಯ ವಾಹಕ. ನಮ್ಮ ನದಿಗಳನ್ನು ಕೊಂದುಕೊಂಡರೆ ಸ್ಥಳೀಯ ಆರ್ಥಿಕತೆಯ ಮೇಲೆ ಬೀರುವ ದುಷ್ಪರಿಣಾಮವನ್ನು ಬೇರೆಲ್ಲಿಂದಲೂ ಸರಿದೂಗಿಸುವುದ ಕ್ಕಾಗುವುದಿಲ್ಲ. ಹಾಗಾಗಿಯೆ ಸ್ಥಳೀಯ ಜಲಮೂಲಗಳನ್ನು ಉಳಿಸಿಕೊಳ್ಳಬೇಕಾದ ತುರ್ತು ಈಗಿನದು. ಅಧಿಕಾರಿಗಳು, ಜನಪ್ರತಿನಿಧಿಗಳಿಗಿಂತ ಮೊದಲು ನಾಗರಿಕರಾದ ನಾವೇ ಮೊದಲು ಎದ್ದು ನಿಲ್ಲಬೇಕು. ಇಂದಿನಿಂದ ಇಂದ್ರಾಣಿ ಹೇಗೆ ವರವಾಗಿದ್ದಳು ಎಂಬ ವಿವರಣೆ.
ಹೊಳೆ ಮೀನುಗಾರಿಕೆ ಎಲ್ಲಿ ಹೋಯಿತು?
ಈ ಪ್ರಶ್ನೆಗೆ ಉತ್ತರ ಕೊಟ್ಟವರು ಕಲ್ಮಾಡಿ ಬಳಿಯ ಹಿರಿಯ ಮೀನುಗಾರ ರಾಮ ಕಾಂಚನ್. “ಹಿಂದೆ ಈ ಇಂದ್ರಾಣಿ ಮತ್ತು ಉದ್ಯಾವರ ಹೊಳೆಯಲ್ಲಿ ಹೊಳೆ ಮೀನುಗಾರಿಕೆಯನ್ನು ಸಾಕಷ್ಟು ಮಂದಿ ಮಾಡುತ್ತಿದ್ದರು. ಹೊಳೆ ಮೀನುಗಳಿಗೆ ಸಾಕಷ್ಟು ಬೇಡಿಕೆ ಇತ್ತು. ವರ್ಷಪೂರ್ತಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶವಿತ್ತು. ಅದೀಗ ಇಲ್ಲ. ಈಗ ಈ ಕೊಳಚೆಯಿಂದ ಮೀನುಗಳೂ ನಾಶವಾಗಿವೆ. ಜತೆಗೆ ಯಾರೂ ಸಹ ಇದರಲ್ಲಿ ಮೀನು ಹಿಡಿಯಲು ಹೋಗುವುದಿಲ್ಲ’ ಎನ್ನುತ್ತಾರೆ.
ಅಷ್ಟೇ ಏಕೆ? ಸ್ಥಳೀಯರೂ ಈಗ ಹೊಳೆ ಮೀನು ಎಂದರೆ ದೂರ ಓಡುತ್ತಾರೆ. ಅದಕ್ಕೆ ಬೇಡಿಕೆಯೇ ಇಲ್ಲ ಎಂಬುದು ರಾಮ ಕಾಂಚನ್ ಅವರ ಅಭಿಪ್ರಾಯ.ನಿಜ. ಮಳೆಗಾಲದಲ್ಲಿ ಸಮುದ್ರ ಮೀನುಗಾರಿಕೆಗೆ ನಿಷೇಧ ವಿರುತ್ತದೆ. ಈ ಸಂದರ್ಭ ಮೀನುಗಾರರು ಸ್ಥಳೀಯ ಹೊಳೆ ಯನ್ನು ಮೀನುಗಾರಿಕೆಗೆ ಅವಲಂಬಿಸುತ್ತಿದ್ದರು (ನಾಡದೋಣಿ ಮೀನುಗಾರಿಕೆ). ಅದರಿಂದ ಅವರ ಆರ್ಥಿಕ ಅಗತ್ಯಗಳು ಈಡೇರುತ್ತಿದ್ದವು. ಆದಾಯ ಕೊರತೆಯಾಗುತ್ತಿರಲಿಲ್ಲ; ಸ್ಥಳೀಯ ಮಾರುಕಟ್ಟೆಗೂ ಹಣ ಹರಿದು ಬರುತ್ತಿತ್ತು. ನಿರು ದ್ಯೋಗದ ಸಮಸ್ಯೆ ಕಾಡುತ್ತಿರಲಿಲ್ಲ. ಅವೆಲ್ಲವೂ ಈಗ ಇವೆ.ವರ್ಷದಿಂದ ವರ್ಷಕ್ಕೆ ಸಮುದ್ರ ಮೀನುಗಾರಿಕೆಗೆ ತೆರಳುವ ದಿನಗಳು (ಹವಾಮಾನ ವೈಪರೀತ್ಯ ಮತ್ತಿತರ ಕಾರಣಗಳಿಂದ) ಕಡಿಮೆಯಾಗುತ್ತಿರುವ ಈ ಹೊತ್ತಿನಲ್ಲಿ ಒಂದು ಸಮೃದ್ಧ ಹೊಳೆ ಇದ್ದಿದ್ದರೆ ಹೇಗೆ ಹಲವರ ನಿರುದ್ಯೋಗ ಸಮಸ್ಯೆ ನೀಗಿಸುತ್ತಿತ್ತು ಎಂದು ಲೆಕ್ಕ ಹಾಕಿಕೊಳ್ಳಿ. ನಿಜಕ್ಕೂ, ನದಿ ಆರ್ಥಿಕತೆಯ ಮೂಲ.
ಇಂದ್ರಾಣಿ ನದಿಯ ಕಥೆ ಓದಿ ನಗಬೇಕೋ ಅಳಬೇಕೋ ಗೊತ್ತಾಗದು!
ಉಡುಪಿಗೆ ಅದರದ್ದೇ ಆದ ಪ್ರತಿಷ್ಠೆ, ಪಾವಿತ್ರ್ಯ ಇದೆ. ಆದರೆ ನಮ್ಮ ಕಾಲಬುಡದಲ್ಲಿ ನಮ್ಮ ಇಂದ್ರಾಣಿ ತೀರ್ಥ ನದಿಗೆ ತ್ಯಾಜ್ಯ ಕಲುಷಿತ ನೀರು ಬಿಟ್ಟು ಆ ನದಿಯ ತಟದಲ್ಲಿ ಇರುವ ನಮ್ಮ ಸಮಾಜ, ಪರಿಸರದ ಮಕ್ಕಳ, ಹಿರಿಯರ ಆರೋಗ್ಯ ಹಾಳಾಗುತ್ತಿದ್ದರೂ ಸಾರ್ವಜನಿಕರ ಬಾವಿಯ ನೀರು ಕಲುಷಿತ ಆಗುತ್ತಿದ್ದರೂ ಏನೇನೋ ಕಥೆ ಕಟ್ಟುತ್ತಿದ್ದೇವೆ. ಇದರ ಹಿಂದೆ ಇರುವ ಅಸಡ್ಡೆ, ಸ್ವಾರ್ಥ, ಲಾಭಗಳ ಲೆಕ್ಕಾಚಾರ ಯಾರಿಗೂ ಗೊತ್ತಿಲ್ಲ ಎಂದರೆ ಅಪಹಾಸ್ಯ ಆದೀತು!
ಜನಪ್ರತಿನಿಧಿಗಳನ್ನು ಆರಿಸಿ ಕಳುಹಿಸುವುದು ಬರೀ ಉದ್ಘಾಟನ ಸಮಾರಂಭ, ಪ್ರತಿಭಟನೆಗಳ ಮುಂಚೂಣಿಯಲ್ಲಿ ಪೋಸ್ ನೀಡಲೆಂದು ಅಲ್ಲವೇ ಅಲ್ಲ. ಇಚ್ಛಾಶಕ್ತಿ ಇದ್ದರೆ ಎಂತಹ ಸಮಸ್ಯೆಗಳನ್ನೂ ಬಹುಬೇಗ ಪರಿಹರಿಸಬಹುದು. ಈಗಿನ ಜಲ್ಲಾಡಳಿತ ಜಿಲ್ಲಾಧಿಕಾರಿಯವರ ಕೈಯಲ್ಲಿ ಇದೆ. ಹಾಗಾಗಿ ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳು ಜಿಲ್ಲಾಧಿಕಾರಿಗೆ ಈ ಜ್ವಲಂತ ಸಮಸ್ಯೆಯನ್ನು ಶೀಘ್ರವಾಗಿ ಪರಿಹಾರ ನೀಡಲು ಒತ್ತಡ ಹೇರಬೇಕು. ಈ ನದಿಗೆ ಕಲುಷಿತ ನೀರು ಬಿಡುವವರ ಮೇಲೆ ಕ್ರಿಮಿನಲ್ ಕೇಸ್ ಹಾಕುವ ಸಾರ್ವಜನಿಕ ನೋಟಿಸನ್ನು ಜಿಲ್ಲಾಧಿಕಾರಿಗಳು ಹೊರಡಿಸಲಿ. ಅನಂತರ ನದಿ ಶುದ್ಧೀಕರಣ ನಡೆಯಲಿ. ಸೂಚನೆ ಧಿಕ್ಕರಿಸಿದವರು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಿ.
ಎಲ್ಲದಕ್ಕೂ ಇಚ್ಛಾಶಕ್ತಿ ಬೇಕು. ಮುಂಬರುವ ದಿನಗಳಲ್ಲಿ ಈ ಸಮಸ್ಯೆ ಪರಿಹಾರ ಆಗದಿದ್ದಲ್ಲಿ ಕೇಂದ್ರ ಸರಕಾರದ ಸ್ವತ್ಛ ಭಾರತ್ ಅಡಿಯಲ್ಲಿ ಪ್ರಧಾನಿ ಮೋದಿಜಿಯವರ ಗಮನ ಸೆಳೆದರೂ ಅಚ್ಚರಿ ಪಡಬೇಕಾಗಿಲ್ಲ.
– ಓರ್ವ ಓದುಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.