ಮಹಿಳೆಯರ ಭಾವನೆ ಅರ್ಥ ಮಾಡಿಕೊಳ್ಳಲು ಕರೆ
Team Udayavani, Mar 9, 2019, 12:30 AM IST
ಉಡುಪಿ: ಮಹಿಳೆಯರ ಭಾವನೆಯನ್ನು ಅರ್ಥ ಮಾಡಿ ಕೊಳ್ಳಬೇಕಾದ ಅಗತ್ಯವಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕರೆ ನೀಡಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿ.ಪಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ತ್ರೀ ಶಕ್ತಿ ಒಕ್ಕೂಟ ಹಾಗೂ ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟದ ವತಿಯಿಂದ ಶುಕ್ರವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಮಹಿಳಾ ದಿನಾಚರಣೆ ಮತ್ತು ಜಿಲ್ಲಾ ಸ್ತ್ರೀಶಕ್ತಿ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಉತ್ತರ ಕರ್ನಾಟಕದ ಜಿಲ್ಲೆಯಲ್ಲಿ ಮಹಿಳಾ ಮೀಸಲಾತಿಯಿಂದ ಗೆಲುವು ಪಡೆದವರೊಂದಿಗೆ ಸಭೆಯಲ್ಲಿ ಗಂಡಂದಿರೂ ಪಾಲ್ಗೊಳ್ಳಬೇಕೆಂದು ನಿರ್ಣಯ ತಳೆದ ಘಟನೆ ನಡೆದಿತ್ತು. ಬೆಂಗಳೂರು ಮಹಾನಗರಪಾಲಿಕೆಯ ಮಹಿಳಾ ಸದಸ್ಯರ ಅಧಿಕೃತ ಮೊಬೈಲ್ ಸೆಟ್ ಗಂಡಂದಿರ ಕೈಯಲ್ಲಿರುತ್ತದೆ. ಹೀಗಾದರೆ ಮಹಿಳಾ ಅಧಿಕಾರದಿಂದ ಪ್ರಯೋಜನವಿಲ್ಲ. ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ನಿರ್ಣಯ ತಳೆಯುವ ಹಂತಕ್ಕೆ ಬಲಗೊಳ್ಳಬೇಕು. ಇದು ಶಿಕ್ಷಣದಿಂದ ಸಾಧ್ಯವಾಗುತ್ತದೆ. ಈಗ ಐಎಎಸ್ ಅಧಿಕಾರಿಗಳು ಬರುತ್ತಿದ್ದರೂ ಸಂಖ್ಯೆ ಕಡಿಮೆ ಇದೆ. ನ್ಯಾಯಾಧೀಶರಲ್ಲಿಯೂ ಸಂಖ್ಯೆ ಕಡಿಮೆ ಇದೆ ಎಂದು ಸಂಸದೆ ಹೇಳಿದರು.
ಸ್ವಸಹಾಯ ಗುಂಪುಗಳ ಚಟುವಟಿಕೆಗಳಿಂದ ಮಹಿಳೆಯರು ಆರ್ಥಿಕ ಮತ್ತು ಸಾಮಾಜಿಕವಾಗಿ ಬಲಗೊಳ್ಳುತ್ತಿದ್ದಾರೆ ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು. ಗಂಡು ಮತ್ತು ಹೆಣ್ಣುಗಳ ಜನನ ಸಂಖ್ಯೆ ಸಮತೋಲನದಲ್ಲಿರಬೇಕಾದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹೇಳಿದರು. ಜಿ.ಪಂ. ಅಧ್ಯಕ್ಷ ದಿನಕರ ಬಾಬು ಉದ್ಘಾಟಿಸಿದರು.
ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಶುಭಕೋರಿದರು. ಜಿ.ಪಂ. ಸಿಇಒ ಸಿಂಧು ರೂಪೇಶ್, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಜಿ.ಪಂ. ಸದಸ್ಯರಾದ ಶಿಲ್ಪಾ ಜಿ. ಸುವರ್ಣ, ಗೀತಾಂಜಲಿ ಸುವರ್ಣ, ರೇಶ್ಮಾ ಉದಯಕುಮಾರ ಶೆಟ್ಟಿ, ಮಹಿಳಾ ಮಂಡಳಿಗಳ ಒಕ್ಕೂಟದ ಜಿಲ್ಲಾಧ್ಯಕ್ಷೆ ಸರಳಾ ಕಾಂಚನ್, ಕಾರ್ಯದರ್ಶಿ ವಸಂತಿ ರಾವ್ ಕೊರಡ್ಕಲ್, ಒಕ್ಕೂಟ ಮತ್ತು ಸ್ತ್ರೀ ಸಂಘಗಳ ಒಕ್ಕೂಟದ ಪದಾಧಿಕಾರಿಗಳಾದ ಯಶೋದಾ ಶೆಟ್ಟಿ, ರಾಧಾದಾಸ್, ಧನಲಕ್ಷ್ಮೀ, ಜಯಂತಿ, ಶಾಲಿನಿ, ಶ್ರೀಮತಿ ಮೊದಲಾದವರು ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್ ಸ್ವಾಗತಿಸಿ, ವೀಣಾ ನಿರ್ವಹಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.