ವಿಶ್ವವಿದ್ಯಾನಿಲಯಗಳ ಆಡಳಿತ ವಿಕೇಂದ್ರೀಕರಣಕ್ಕೆ ಹೊಸ ಕಾಯ್ದೆ
"ಉದಯವಾಣಿ' ಕಚೇರಿಯಲ್ಲಿ ಸಚಿವ ಡಾ| ಅಶ್ವತ್ಥನಾರಾಯಣ ಸಂದರ್ಶನ
Team Udayavani, Nov 27, 2022, 7:05 AM IST
ಮಣಿಪಾಲ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಗೆ ಪೂರಕವಾಗಿ ವಿಶ್ವವಿದ್ಯಾನಿಲಯಗಳ ಅಧಿಕಾರ ವಿಕೇಂದ್ರೀಕರಣಕ್ಕೆ ಹೊಸ ಕಾಯ್ದೆಯನ್ನು ಜಾರಿಗೆ ತರಲಿದ್ದೇವೆ ಎಂದು ಉನ್ನತ ಶಿಕ್ಷಣ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಡಾ| ಸಿ.ಎನ್. ಅಶ್ವತ್ಥನಾರಾಯಣ ಅವರು ಹೇಳಿದರು.
ಶನಿವಾರ ಮಣಿಪಾಲದಲ್ಲಿರುವ “ಉದಯವಾಣಿ’ ಪ್ರಧಾನ ಕಚೇರಿಗೆ ಭೇಟಿ ನೀಡಿ, ಸಂಪಾದಕೀಯ ಬಳಗದೊಂದಿಗೆ ಮಾತನಾಡಿದ ಅವರು, ವಿ.ವಿ.ಗಳು ಯಾರೋ ಕೆಲವರ ಹಿಡಿತದಲ್ಲಿದ್ದರೆ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಇದಕ್ಕೆ ಕಾಯ್ದೆಯ ಮೂಲಕ ಬದಲಾವಣೆ ತರಬೇಕಾದ ಅನಿವಾರ್ಯ ಇದೆ.
ಹೀಗಾಗಿ ವಿ.ವಿ.ಯ ಮಾನಿಟರಿಂಗ್, ಸೂಪರ್‌ವಿಷನ್, ಮ್ಯಾನೇಜ್‌ಮೆಂಟ್, ಗವರ್ನೆನ್ಸ್, ಲೀಡರ್‌ಶಿಪ್ ಹೀಗೆ ಎಲ್ಲವೂ ವಿಕೇಂದ್ರೀಕರಣಗೊಂಡು, ವಿ.ವಿ. ಹಂತದಲ್ಲೇ ನಿರ್ಧಾರಗಳನ್ನು ಕೈಗೊಳ್ಳಲು ಪೂರಕವಾಗುವಂತೆ ಕಾಯ್ದೆ ರೂಪಿಸಿ, ಅನುಷ್ಠಾನ ಮಾಡಲಿದ್ದೇವೆ. ಇದರ ಮೊದಲ ಭಾಗವಾಗಿ ಬೆಂಗಳೂರಿನ ವಿಶ್ವೇಶ್ವರಯ್ಯ ಯುನಿವರ್ಸಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್ (ಯುವಿಸಿಇ) ಅನ್ನು ಪ್ರತ್ಯೇಕ ಸಂಸ್ಥೆಯಾಗಿ ರೂಪಿಸಿದ್ದೇವೆ. ಹೀಗೆ ಎಲ್ಲ ವಿ.ವಿ.ಗಳಲ್ಲೂ ಬೆಸ್ಟ್ ಪ್ರ್ಯಾಕ್ಟಿಸ್ ಬರಬೇಕು ಎಂದರು.
ಹೆಚ್ಚುವರಿ 30 ಐಟಿಐ ಅಭಿವೃದ್ಧಿ
ರಾಜ್ಯದಲ್ಲಿ ಟಾಟಾ ಸಮೂಹದ ಜತೆ ಸೇರಿ ಸರಕಾರಿ ಐಟಿಐಗಳ ಉನ್ನತೀಕರಣ ಪ್ರಕ್ರಿಯೆ ನಡೆಯುತ್ತಿದೆ. ಮೊದಲ ಹಂತದಲ್ಲಿ 150 ಐಟಿಐಗಳ ಅಭಿವೃದ್ಧಿ ಮಾಡುತ್ತಿದ್ದೇವೆ. ಪೂರಕವಾಗಿ ಹೆಚ್ಚುವರಿ 30 ಐಟಿಐಗಳ ಸೇರ್ಪಡೆಯಾಗಿವೆ. ಉಳಿದ 50 ಐಟಿಐಗಳ ಅಭಿವೃದ್ಧಿಯನ್ನು ಮುಂದಿನ ದಿನಗಳಲ್ಲಿ ಮಾಡಲಿದ್ದೇವೆ ಎಂದು ಹೇಳಿದರು.
ನಿಧಿ ಸಂಗ್ರಹ ಅಗತ್ಯ
ವಿ.ವಿ.ಗಳಲ್ಲಿರುವ ಅಧ್ಯಯನ ಪೀಠಗಳಲ್ಲಿ ಸಂಶೋಧನೆ, ಕಾರ್ಯಕ್ರಮಗಳನ್ನು ನಡೆಸಲು ಅನುದಾನದ ಆವಶ್ಯಕತೆ ಇರುತ್ತದೆ. ಇದಕ್ಕಾಗಿ ಸರಕಾರವನ್ನೇ ಕಾಯುವುದು ಸರಿಯಲ್ಲ. ಸ್ಥಳೀಯವಾಗಿ ನಿಧಿ ಸಂಗ್ರಹ ಮತ್ತು ಅದರ ಸಮರ್ಪಕ ಬಳಕೆಗೆ ಸೂಕ್ತ ಕ್ರಮ ಆಗಬೇಕು. ವಿದ್ಯಾರ್ಥಿಗಳ ಪ್ರವೇಶಾತಿಯಿಂದ ಬರುವ ಶುಲ್ಕದಿಂದಲೇ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಸಾಧ್ಯವಿಲ್ಲ. ಶಿಕ್ಷಣದಲ್ಲಿ ಸಮಾಜ ಮತ್ತು ನಮ್ಮೆಲ್ಲರ ಭವಿಷ್ಯ ಇದೆ ಎಂಬುದನ್ನು ಅರ್ಥಮಾಡಿಕೊಂಡು ದಾನಿಗಳು, ಹಳೇ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳನ್ನು ಬೆಳೆಸಲು ಮುಂದೆ ಬರಬೇಕು ಎಂದರು.
ಪ್ರಸಕ್ತ ಸಾಲಿನಿಂದಲೇ ಜಾರಿ
ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಸಿಇಟಿಯಲ್ಲಿ ಅನೇಕ ರೀತಿಯ ಬದಲಾವಣೆ ತರುತ್ತಿದ್ದೇವೆ. ನ್ಯೂನತೆ ಸರಿಪಡಿಸುವ ಕಾರ್ಯವೂ ಆಗುತ್ತಿದೆ. ತಾಂತ್ರಿಕ ಕಾರಣದಿಂದ ಕೆಲವು ಸಮಸ್ಯೆಯೂ ಉದ್ಭವಿಸುತ್ತಿವೆ. ಹೀಗಾಗಿ ವಿದ್ಯಾರ್ಥಿಗಳ ಸಮಯ ಉಳಿಸಲು ಹಾಗೂ ಅರ್ಜಿ ಸಲ್ಲಿಸುವಲ್ಲಿ ಆಗುತ್ತಿರುವ ಲೋಪ ಸರಿಪಡಿಸಿಲು 2023ರ ಸಿಇಟಿಗೆ ಅನ್ವಯವಾಗುವಂತೆ ವಿದ್ಯಾರ್ಥಿಗಳು ಪಿಯುಸಿ ವ್ಯಾಸಂಗ ಮಾಡುತ್ತಿರುವಾಗಲೇ ಅರ್ಜಿ ಭರ್ತಿ ಮಾಡಬಹುದಾದ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಹೇಳಿದರು.
ಏಕರೂಪ ಆಡಳಿತ
ಎಲ್ಲ ವಿ.ವಿ.ಗಳಲ್ಲೂ ಏಕರೂಪ ಪಠ್ಯಕ್ರಮ ಜಾರಿ ಅಸಾಧ್ಯ. ಆದರೆ ಏಕರೂಪ ಆಡಳಿತ, ಶೈಕ್ಷಣಿಕ ಕಾರ್ಯಸೂಚಿಗಳನ್ನು ಜಾರಿಗೆ ತರಲು ಸಾಧ್ಯವಿದೆ. ಪರೀಕ್ಷೆ, ದಾಖಲಾತಿ ಹಾಗೂ ಸಂಯೋಜನೆಗೆ ಅನುಕೂಲವಾಗುವಂತೆ ಸಮಗ್ರ ವಿಶ್ವವಿದ್ಯಾನಿಲಯ ಹಾಗೂ ಕಾಲೇಜು ನಿರ್ವಹಣ ವ್ಯವಸ್ಥೆ (ಯುಯು ಎಂಎಸ್) ಈಗಾಗಲೇ ಜಾರಿಗೆ ತಂದಿದ್ದೇವೆ. ಇದು ದೇಶದಲ್ಲೇ ಮೊದಲ ಕ್ರಮವಾಗಿದೆ. ಯುನಿಫೈಡ್ ಡೇಟಾ ಸಂಗ್ರಹ ಇದರಿಂದ ಆಗಲಿದೆ ಎಂದರು.
ಗುಣಮಟ್ಟದ ಶಿಕ್ಷಣಕ್ಕೆ ಒತ್ತು
ನಾವೀಗ ವಿಶ್ವದ ಜತೆಗೆ ಸ್ಪರ್ಧೆ ಮಾಡಬೇಕಿದೆ. ಇದಕ್ಕೆ ಗುಣಮಟ್ಟದ ಶಿಕ್ಷಣವೇ ದಾರಿ. ಈ ನಿಟ್ಟಿನಲ್ಲಿ ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ಸುಧಾರಣೆ ತರಲು ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಅನುಕೂಲವಾಗಿದೆ. ವಿ.ವಿ.ಗಳಲ್ಲಿ ಗುಣಮಟ್ಟದ ವಿಷಯವಾಗಿ ದೊಡ್ಡ ರೀತಿಯ ಸುಧಾರಣೆಗಳು ಆಗುತ್ತಿವೆ.
ಆವಿಷ್ಕಾರ, ವಿಜ್ಞಾನ, ತಂತ್ರಜ್ಞಾನ, ಬಯೋಟೆಕ್ನಾಲಜಿ ಹೀಗೆ ಎಲ್ಲ ಕ್ಷೇತ್ರದಲ್ಲೂ ಕರ್ನಾಟಕ ಸಾಧನೆ ಮಾಡುತ್ತಿದೆ. ಹೊಸ ಪ್ರತಿಭೆಗಳು ಹೊರ ಬರಬೇಕು. ಈ ಮೂಲಕ ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಸಮಾಜ ಎದುರಿಸುತ್ತಿರುವ ಎಲ್ಲ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಶಿಕ್ಷಣದ ಮೂಲಕ ಮಾಡುತ್ತಿದ್ದೇವೆ ಎಂದರು.
ಉಡುಪಿಗೆ ಹೊಸ ವಿ.ವಿ. ಸಾಧ್ಯತೆ
ರಾಜ್ಯದಲ್ಲಿ ಹೊಸದಾಗಿ ಸರಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ ಮಾಡುತ್ತಿಲ್ಲ. ಈಗಾಗಲೇ ಇರುವ ಎಂಜಿನಿಯರಿಂಗ್ ಕಾಲೇಜುಗಳ ಬಲವರ್ಧನೆಗೆ ಒತ್ತು ನೀಡುತ್ತಿದ್ದೇವೆ. ಉಡುಪಿ ಜಿಲ್ಲೆಯ ಬೇಡಿಕೆಯಂತೆ ಪ್ರತ್ಯೇಕ ವಿ.ವಿ.ಯ ಸ್ಥಾಪನೆಯ ಬಗ್ಗೆ ಮುಖ್ಯಮಂತ್ರಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಬರಲಿದೆ. ರಾಜ್ಯದಲ್ಲಿ ಎಂಜಿನಿಯರಿಂಗ್ ಕಾಲೇಜುಗಳ ಕೊರತೆಯಿಲ್ಲ. ಇರುವ ಸೀಟುಗಳು ಭರ್ತಿಯಾಗುತ್ತಿಲ್ಲ. ಈ ಸಮಸ್ಯೆ ಡಿಪ್ಲೊಮಾ ಸಹಿತ ಬೇರೆ ಬೇರೆ ಕೋರ್ಸ್‌ಗಳಲ್ಲೂ ಇದೆ. ಇದನ್ನು ಮೊದಲು ಸರಿಮಾಡುವ ಆವಶ್ಯಕತೆಯಿದೆ ಎಂದು ಸಚಿವ ಡಾ| ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಉಪೇಂದ್ರ ಪೈ ಜನ್ಮದಿನಾಚರಣೆ ; ಸಚಿವ ಅಶ್ವ ತ್ಥನಾರಾಯಣರಿಂದ ಗತಕಾಲದ ಸ್ಮರಣೆ
ಉಡುಪಿ: ಆಧುನಿಕ ಮಣಿಪಾಲದ ನಿರ್ಮಾತೃಗಳಲ್ಲಿ ಹಿರಿಯರಾದ ತೋನ್ಸೆ ಉಪೇಂದ್ರ ಪೈಯವರ 128ನೇ ಜನ್ಮದಿನವನ್ನು ಆಚರಿಸಲಾಯಿತು. ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥನಾರಾಯಣ ಅವರು ಉಪೇಂದ್ರ ಪೈಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಮಣಿಪಾಲ ಸಂಸ್ಥೆ ಈಗ ಜಾಗತಿಕವಾಗಿ ಗುರುತಿಸಿಕೊಂಡಿದೆ. ನಾನೂ ಮಂಗಳೂರು ಕೆಎಂಸಿಯ ಪ್ರಾಕ್ತನ ವಿದ್ಯಾರ್ಥಿ. ಆಗ ಕಾಲೇಜು ವಿದ್ಯಾರ್ಥಿ ಸಂಘದ ಚುನಾಯಿತ ಅಧ್ಯಕ್ಷನೂ ಆಗಿದ್ದೆ. ಉಪೇಂದ್ರ ಪೈಯವರಂತಹ ಹಿರಿಯರ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅತೀವ ಸಂತಸ ವಾಗುತ್ತಿದೆ ಎಂದರು. ಇದೇ ದಿನ ಉಪೇಂದ್ರ ಪೈಯವರ ಪುತ್ರ, ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್ ಯು. ಪೈಯವರ ಜನ್ಮದಿನವೂ ಆಗಿರುವುದರಿಂದ ಸಚಿವರು ಸತೀಶ್ ಯು. ಪೈಯವರನ್ನು ಅಭಿನಂದಿಸಿದರು.
ಉದಯವಾಣಿ ಸಮೂಹಕ್ಕೆ ಮೆಚ್ಚುಗೆ
“ಉದಯವಾಣಿ’, “ತರಂಗ’ ಓದುತ್ತಾ ಬೆಳೆದಿರುವುದರ ಜತೆಗೆ ಇದರಿಂದ ಪ್ರಭಾವಿತನೂ ಆಗಿದ್ದೇನೆ. ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಸ್ತಂಭವಾಗಿ ಸಮಾಜಕ್ಕೆ ಧ್ವನಿ, ಶಕ್ತಿಯಾಗಿ, ಸಮಾಜವನ್ನು ಬೆಳೆಸುವ ಕೆಲಸ “ಉದಯವಾಣಿ’ ಮಾಡುತ್ತಿದೆ ಎಂದು ಸಚಿವ ಡಾ| ಅಶ್ವತ್ಥನಾರಾಯಣ ಶ್ಲಾಘಿಸಿದರು. ಮಣಿಪಾಲ ಎನರ್ಜಿ ಆ್ಯಂಡ್ ಇನ್ಫ್ರಟೆಕ್‌ನ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಸಾಗರ್ ಮುಖೋಪಾಧ್ಯಾಯ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.