ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ: ಉಡುಪಿ ನಗರ ಖಾಲಿ ಖಾಲಿ; ಜನಜೀವನ ಸ್ತಬ್ಧ
Team Udayavani, Mar 22, 2020, 9:21 PM IST
ಜನರಿಲ್ಲದೆ ಬಿಕೋ ಎನ್ನುತ್ತಿರುವ ಸಿಟಿ ಬಸ್ಸು ತಂಗುದಾಣ.
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಕರೆನೀಡಿರುವ ಜನತಾ ಕರ್ಫ್ಯೂಗೆ ಉಡುಪಿ ನಗರಾದ್ಯಂತ ರವಿವಾರ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ನಗರದ ಪ್ರತಿಯೊಂದು ಭಾಗದಲ್ಲೂ ಜನಸಂಚಾರ ಇಲ್ಲದೆ ಸ್ತಬ್ಧಗೊಂಡಿತ್ತು.
ಹಾಲು, ಮೆಡಿಕಲ್ ಶಾಪ್‌ಗ್ಳು, ಕೆಲವು ಪೆಟ್ರೋಲ್ ಬಂಕ್‌ಗಳು ತೆರೆದಿದ್ದವು. ಉಳಿದಂತೆ ಬಹುತೇಕ ಜನರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದರು. ಅನ್ಯಜಿಲ್ಲೆಗಳ ಒಂದಷ್ಟು ಮಂದಿ ಆಶ್ರಯ ಅರಸುತ್ತಾ ಬಂದ್ ಇರುವ ಅಂಗಡಿಗಳೆದುರು ಮಲಗಿದ್ದರು ಬಿಟ್ಟರೆ ಉಳಿದಂತೆ ಬಂದ್‌ಗೆ ಶಾಂತ ರೀತಿಯ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರದ 35 ವಾರ್ಡ್‌ಗಳಲ್ಲೂ ಜನ ಸಂಚಾರ ವಿರಳವಾಗಿತ್ತು. ಕೆಲವೊಂದು ಬೈಕ್, ಕಾರುಗಳ ಓಡಾಟ ಬಿಟ್ಟರೆ ಹೆಚ್ಚಿನ ಮನೆಮಂದಿ ಹೊರಬರಲೂ ಕೂಡ ತಯಾರಿರಲಿಲ್ಲ.
ಬಸ್ಸುಗಳು ಠಿಕಾಣಿ
ಬಂದ್‌ಗೆ ಎಲ್ಲರೂ ಸಾರ್ವತ್ರಿಕವಾಗಿ ಬೆಂಬಲ ವ್ಯಕ್ತಪಡಿಸಿದ ಕಾರಣ ಖಾಸಗಿ ಬಸ್ಸುಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಲಾಗಿತ್ತು. ಈ ನಡುವೆ ಸಿಟಿ, ಸರ್ವಿಸ್ ಹಾಗೂ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದಲ್ಲಿದ್ದ ಕೆಲವು ಮಂದಿ ಪ್ರಯಾಣಿಕರು ಬಸ್ಸು ಎಷ್ಟು ಗಂಟೆಗೆ ಆರಂಭವಾಗುತ್ತದೆ ಎಂದು ಕಂಡ-ಕಂಡವರಲ್ಲಿ ವಿಚಾರಿಸುತ್ತಿದ್ದರು.
ಹೊಟೇಲ್‌ಗಳೆಲ್ಲವೂ ಬಂದ್
ರವಿವಾರ ನಗರದಲ್ಲಿ ಒಂದೇ ಒಂದು ಹೊಟೇಲ್ ಕೂಡ ತೆರೆದಿರಲಿಲ್ಲ. ಬೆಳಗ್ಗಿನಿಂದ ಸಂಜೆಯವರೆಗೂ ಪರಿಸ್ಥಿತಿ ಇದೇ ರೀತಿಯಾಗಿತ್ತು. ಮಧ್ಯಾಹ್ನ ನಗರದ ಒಂದು ಹೊಟೇಲ್‌ನವರು ಊಟವನ್ನು ಪಾರ್ಸೆಲ್ ಮೂಲಕ ನೀಡುತ್ತಿದ್ದರು. ಹೆಚ್ಚಿನವರು ಇದನ್ನು ಪಡೆದುಕೊಂಡು ಬಂದ್ ಇರುವ ಅಂಗಡಿ ಮುಂಭಾಗದಲ್ಲಿ ಕುಳಿತುಕೊಂಡು ಊಟಮಾಡುತ್ತಿದ್ದರು.
ಬಂದ್‌ನಲ್ಲೂ ಕ್ರಿಕೆಟ್ ಆಟ
ನಗರದೆಲ್ಲೆಡೆ ಬಂದ್ ವಾತಾವರಣವಿದ್ದರೂ ಎಂಜಿಎಂ ಕಾಲೇಜು ಕ್ರೀಡಾಂಗಣ, ಕರಾವಳಿ ಜಂಕ್ಷನ್‌ನ ಪಾರ್ಕಿಂಗ್ ಪ್ರದೇಶಗಳು ಸಹಿತ ಹಲವೆಡೆ ಯುವಕರು ಕ್ರಿಕೆಟ್ ಆಟವಾಡುತ್ತಿದ್ದರು. ಕೆಲವು ಯುವಕರು ಸೈಕಲ್ ಹಾಗೂ ಬೈಕ್‌ಗಳಲ್ಲಿ ತೆರಳುತ್ತಿದ್ದರು. ಬೀಡಿನಗುಡ್ಡೆಯಲ್ಲಿ ವಲಸೆ ಕಾರ್ಮಿಕರು ತಮ್ಮ ಜೋಪಡಿಯಲ್ಲಿದ್ದುಕೊಂಡೇ ಬಂದ್‌ಗೆ ಬೆಂಬಲ ನೀಡಿದರು. ಮಕ್ಕಳೆಲ್ಲ ವಿವಿಧ ರೀತಿಯ ಅಟಾಟೋಪಗಳಲ್ಲಿ ಮಗ್ನರಾಗಿದ್ದರು.
ಪ್ರಯಾಣಿಕರ ಪರದಾಟ
ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದವರು ಬಸ್ ಇಲ್ಲದೆ ಪರದಾಟ ನಡೆಸುತ್ತಿರುವ ದೃಶ್ಯವೂ ಕಂಡುಬಂತು. ಕೆಲವು ವ್ಯಕ್ತಿಗಳು ಆಟೋ, ಲಾರಿ, ಟೆಂಪೋ ಹತ್ತಿ ಲಿಫ್ಟ್ ಕೇಳುತ್ತಿದ್ದರು. ಸದಾ ಜನರಿಂದ ಗಿಜಿಗುಡುತ್ತಿದ್ದ ಮಾಲ್‌ಗಳು, ಪಾರ್ಕ್‌ಗಳು, ಹೊಟೇಲ್‌ಗಳು ಬಂದ್ ಆಗಿದ್ದವು.
ವ್ಯಾಪಾರ ಡಲ್
ಬಂದ್ ಇದ್ದರೂ ಗ್ರಾಹಕರಿಗಾಗಿ ತೆರೆದಿದ್ದ ಹಾಲು, ಮೆಡಿಕಲ್ ಶಾಪ್‌ಗ್ಳಲ್ಲಿ ವ್ಯಾಪಾರ ಡಲ್ ಆಗಿತ್ತು. ಬೆಳಗ್ಗಿನ ಹೊತ್ತು ಕೆಲವು ಮಂದಿ ದಿನನಿತ್ಯದ ಗ್ರಾಹಕರು ಬಂದಿರುವುದನ್ನು ಬಿಟ್ಟರೆ ಉಳಿದಂತೆ ಯಾರು ಕೂಡ ಬಂದಿಲ್ಲ. ಶೇ.10ರಷ್ಟು ಮಾತ್ರ ವ್ಯಾಪಾರವಾಗಿದೆ ಎಂದು ನಗರದ ಹಾಲಿನ ಅಂಗಡಿ ಮಾಲಕರೊಬ್ಬರು ತಿಳಿಸಿದರು.
ರಸ್ತೆಗಳೆಲ್ಲ ಖಾಲಿ
ಸದಾ ವಾಹನ ದಟ್ಟಣೆ, ಜನಸಂಚಾರದಿಂದ ಗಿಜಿಗುಡುತ್ತಿದ್ದ ನಗರದ ಪ್ರಮುಖ ಭಾಗಗಳಾದ ಕಿನ್ನಿಮೂಲ್ಕಿ, ಅಜ್ಜರಕಾಡು, ಬ್ರಹ್ಮಗಿರಿ, ಸಿಟಿ ಬಸ್ಸುನಿಲ್ದಾಣ, ಸರ್ವಿಸ್ ಬಸ್ಸು ನಿಲ್ದಾಣ, ಕರಾವಳಿ ಬೈಪಾಸು, ಡಯಾನ ಸರ್ಕಲ್, ಕೆಎಂ ಮಾರ್ಗ, ಪಿಪಿಸಿ ಬಳಿಯ ರಸ್ತೆಗಳು ಜನ ಹಾಗೂ ವಾಹನ ಸಂಚಾರವಿರದೆ ಖಾಲಿ-ಖಾಲಿಯಾಗಿದ್ದವು.
ಪೊಲೀಸರ ಸಂಖ್ಯೆಯೂ ವಿರಳ
ಬಂದ್ ಎಂದರೆ ಅಲ್ಲಿ ಪೊಲೀಸರಿರುವುದು ಸಹಜ. ಆದರೆ ರವಿವಾರ ನಡೆದ ಜನತಾ ಕರ್ಫ್ಯೂನಲ್ಲಿ ಹಾಗಿರಲಿಲ್ಲ. ಪೊಲೀಸರ ಸಂಖ್ಯೆಯೂ ವಿರಳವಾಗಿತ್ತು. ಎಂದಿನಂತೆ ಪೊಲೀಸರು ಕರ್ತವ್ಯ ನಿರ್ವಹಿಸಿದರು. ಇದಕ್ಕಾಗಿ ಹೆಚ್ಚುವರಿ ಪೊಲೀಸರನ್ನು ನೇಮಕ ಮಾಡಿರಲಿಲ್ಲ. ಜನಸಂಖ್ಯೆ ಹಾಗೂ ವಾಹನ ಓಡಾಟ, ಟ್ರಾಫಿಕ್ ದಟ್ಟಣೆ ಇಲ್ಲದ ಕಾರಣ ಪೊಲೀಸರು ಕೂಡ ನೆಮ್ಮದಿಯ ಉಸಿರು ಬಿಟ್ಟರು.
ಗ್ರಾಹಕರ ಕೊರತೆ
ಸಾರ್ವಜನಿಕರಿಗೆ ಅಗತ್ಯವಾದ ಪೆಟ್ರೋಲ್ ಪಂಪ್‌ಗ್ಳು ನಗರದಲ್ಲಿ ತೆರೆದಿದ್ದವು. ಒಂದೆರಡು ಕಡೆ ಹೊರತುಪಡಿಸಿ ಉಳಿದೆಲ್ಲ ಕಡೆ ತೆರೆದಿತ್ತು. ಆದರೆ ವಾಹನಗಳ ಓಡಾಟವಿಲ್ಲದಿರುವುದರಿಂದ ಇಂಧನ ತುಂಬಿಸಿಕೊಳ್ಳಲು ಪೆಟ್ರೋಲ್ ಪಂಪ್‌ಗ್ಳಿಗೆ ಬರುವ ವಾಹನಗಳ ಸಂಖ್ಯೆ ವಿರಳವಾಗಿತ್ತು. ಹೀಗಾಗಿ ಗ್ರಾಹಕರ ಕೊರತೆ ಕಂಡು ಬಂತು.
ರಸ್ತೆಗಳಲ್ಲಿ ವಾಹನ ಓಡಾಟವೇ ಪೂರ್ಣ ಪ್ರಮಾಣದಲ್ಲಿ ಸ್ತಬ್ಧವಾಗಿತ್ತು. ಇದರಿಂದಾಗಿ ಯಾರೂ ಪೆಟ್ರೋಲ್ ಪಂಪ್ ಕಡೆ ಬರಲಿಲ್ಲ. ಗ್ರಾಹಕರಿಗೆ ತೊಂದರೆ ಆಗಬಾರದು ಅನ್ನುವ ಕಾರಣಕ್ಕೆ ಪಂಪ್‌ಗ್ಳು ತೆರೆದಿದ್ದವು. ಸಂಜೆ ತನಕ 20 ಲೀ. ಇಂಧನ ಕೂಡ ಮಾರಾಟ ಆಗಲಿಲ್ಲ. ಎಂದು ಕಡಿಯಾಳಿ ರಾಜರಾಜೇಶ್ವರಿ ಪಂಪ್‌ನವರು ಹೇಳಿದರು.
ಕೋವಿಡ್ 19 ವಿರೋಧಿ ಹೋರಾಟಕ್ಕೆ ಜನಬೆಂಬಲ
ದೇಶಾದ್ಯಂತ ಕೋವಿಡ್ 19 ವೈರಸ್ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಜನಬೆಂಬಲ ವ್ಯಕ್ತವಾಗಿದ್ದು ಜನರು ಸ್ವಯಂಪ್ರೇರಿತವಾಗಿ ನಿತ್ಯದ ಚಟುವಟಿಕೆಗಳಿಂದ ದೂರ ಉಳಿದರು. ಈ ಮೂಲಕ ರೋಗ ತಡೆಗೆ ಸಿದ್ಧವಾಗಿರುವುದಾಗಿ ಸಂದೇಶ ಸಾರಿದರು.
ಮಲ್ಪೆ ಬಂದರು
ಮಲ್ಪೆ: ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಮಲ್ಪೆ ಮೀನುಗಾರಿಕೆ ದಕ್ಕೆ ಸ್ತಬ್ಧವಾಗಿದೆ. ವ್ಯಾಪಾರ ವಹಿವಾಟು ಇಲ್ಲದೆ ಬಿಕೋ ಎನ್ನುವಂತಿತ್ತು. ಹೊಟೇಲು ಅಂಗಡಿ ಮುಂಗಟ್ಟುಗಳು ಇಡೀ ದಿನ ಬಾಗಿಲು ತೆರೆಯಲಿಲ್ಲ. ಮಲ್ಪೆ ಪೇಟೆ ಸೇರಿದಂತೆ ಸುತ್ತಮುತ್ತ ಪ್ರದೇಶಗಳಾದ ಕೊಡವೂರು, ತೆಂಕನಿಡಿಯೂರು, ತೊಟ್ಟಂ, ಕೆಮ್ಮಣ್ಣು, ಹೂಡೆ, ಕಡೆಕಾರ್, ಕಿದಿಯೂರು ಪ್ರದೇಶಗಳಲ್ಲೂ ಕೂಡ ಜನರು ರಸ್ತೆಗೆ ಇಳಿಯದ ಪರಿಣಾಮ ಇಡೀ ಪ್ರದೇಶ ಪ್ರಶಾಂತವಾಗಿತ್ತು. ಬೀಚ್ ಕಡೆ ಮುಖ ಮಾಡುವುದನ್ನು ನಿಲ್ಲಿಸಿದ್ದರಿಂದ ಮಲ್ಪೆ ಬೀಚ್ ಅಕ್ಷರಃ ಮಲಗಿದಂತಿತ್ತು. ಜನರು ಇಡೀ ದಿನವನ್ನು ಟಿವಿ ಮುಂದೆ ಕುಳಿತುಕೊಂಡು ಕಳೆದರು.
ಬ್ರಹ್ಮಾವರ
ಬ್ರಹ್ಮಾವರ: ಇಲ್ಲಿನ ತುರ್ತು ಸೇವೆಗಳಾದ ಆಸ್ಪತ್ರೆ, ಪೆಟ್ರೋಲ್ ಪಂಪ್, ಮೆಡಿಕಲ್ ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆಗಳು ಸ್ತಬ್ಧಗೊಂಡಿತ್ತು. ಎಲ್ಲ ಅಂಗಡಿ ಮುಂಗಟ್ಟು, ಹೊಟೇಲ್, ಕಚೇರಿಗಳು ಮುಚ್ಚಿದ್ದವು. ಜನ ಸಂಚಾರ ಅತ್ಯಂತ ವಿರಳವಾಗಿತ್ತು. ಆಟೋ, ಟ್ಯಾಕ್ಸಿ ಸಂಚಾರ ಸ್ಥಗಿತಗೊಳಿಸಲಾಯಿತು. ಹೆದ್ದಾರಿಯಲ್ಲೂ ವಾಹನ ಸಂಚಾರ ತೀರಾ ಕಡಿಮೆಯಾಗಿದ್ದು ತಾಲೂಕು ವ್ಯಾಪ್ತಿಯ ಪ್ರಮುಖ ಕೇಂದ್ರಗಳಾದ ಬಾರಕೂರು, ಮಂದಾರ್ತಿ, ಕೊಕ್ಕರ್ಣೆ, ಪೇತ್ರಿ ಮೊದಲಾದೆಡೆಯೂ ಜನತಾ ಕರ್ಫ್ಯೂ ಯಶಸ್ವಿಯಾಯಿತು.
ಪಡುಬಿದ್ರಿ
ಪಡುಬಿದ್ರಿ: ಜನತಾ ಕರ್ಫ್ಯೂಗೆ ಪಡುಬಿದ್ರಿ ಸುತ್ತಮುತ್ತ ಉತ್ತಮ ಬೆಂಬಲ ವ್ಯಕ್ತವಾಗಿದೆ. ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವರ್ಷಾವಧಿ ಉತ್ಸವ ವಿಧಿಗಳು ಇಂದೂ ಸರಳವಾಗಿಯೇ ನಡೆಯಿತು. ಪಡುಬಿದ್ರಿ ಸುತ್ತಮುತ್ತ ವ್ಯಾಪಾರ ಮಳಿಗೆಗಳು ಸಂಪೂರ್ಣ ಬಂದ್ ಆಗಿದ್ದವು. ಹಾಲು, ದಿನ ಪತ್ರಿಕೆ ಮಳಿಗೆಗಳನ್ನು ಬಂದ್ ನಿಂದ ಹೊರತುಪಡಿಸಲಾಗಿತ್ತು.ಉಚ್ಚಿಲದಲ್ಲೊಂದು ಚಹಾದ ಕ್ಯಾಂಟೀನ್, ಅಲ್ಲಲ್ಲಿನ ಮೆಡಿಕಲ್ ಶಾಪ್‌ಗ್ಳನ್ನು ಹೊರತುಪಡಿಸಿ ಅಂಗಡಿಗಳೆಲ್ಲಾ ಮುಚ್ಚಿತ್ತು.
ಕಟಪಾಡಿ
ಕಟಪಾಡಿ:ಜನತಾ ಕರ್ಫ್ಯೂನಿಂದಾಗಿ ಕಟಪಾಡಿ ಪರಿಸರದ ಹೆಚ್ಚಿನ ಎಲ್ಲೆಡೆ ಮೆಡಿಕಲ್‌ಗಳೂ ಮುಚ್ಚಿದ್ದು, ಔಷಧಿ ಖರೀದಿಗಾಗಿ ಅನಾರೋಗ್ಯ ಪೀಡಿತರು ಪರದಾಟ ನಡೆಸುವಂತಾಗಿತ್ತು.ಕಟಪಾಡಿಯಲ್ಲಿ 2, ಶಂಕರಪುರ 1 ಮೆಡಿಕಲ್‌ಗಳು ಮಾತ್ರ ಬೆಳಿಗ್ಗೆ ಸ್ವಲ್ಪ ಸಮಯ ತೆರೆದು ಕೊಂಡಿದ್ದು, ಉಳಿದಂತೆ ಇತರೇ ಎಲ್ಲ ಮೆಡಿಕಲ್‌ಗಳು ಬಾಗಿಲು ಮುಚ್ಚಿರುವುದು ಕಂಡು ಬಂದಿತ್ತು.ಅಂಗಡಿ ಮುಗ್ಗಟ್ಟುಗಳು, ಹೊಟೇಲುಗಳು, ಇತರೇ ವ್ಯಾಪಾರ ಮಹಲುಗಳು, ಜವುಳಿ ಮಳಿಗೆಗಳು, ಬಹುತೇಕ ರಿಕ್ಷಾ , ಕಾರು, ಟೆಂಪೋ ಸಹಿತ ಟೂರಿಸ್ಟ್ ವಾಹನ ತಂಗುದಾಣಗಳು , ಹೊರ ಬಾರ್, ರೆಸ್ಟೋರೆಂಟ್, ವೈನ್ ಶಾಪ್‌ಗ್ಳು ಸಹಿತ ಬಹುತೇಕ ಜನಜೀವನವು ಸ್ತಬ್ಧಗೊಂಡಿತ್ತು.
ಹಿರಿಯಡಕ
ಹಿರಿಯಡಕ: ಕೋವಿಡ್ 19 ವೈರಸ್ ರೋಗಾಣು ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಜನತಾ ಕರ್ಫ್ಯೂ ಕರೆಗೆ ಹಿರಿಯಡಕ ಹಾಗೂ ಪೆರ್ಡೂರು ಸುತ್ತಮುತ್ತಲಿನ ಪರಿಸರದಲ್ಲಿ ಸಾರ್ವತ್ರಿಕ ಬೆಂಬಲ ವ್ಯಕ್ತವಾಗಿದ್ದು ಸಂಪೂರ್ಣ ಬಂದ್ ಆಗಿತ್ತು.
ರವಿವಾರ ಬೆಳಗ್ಗಿಯಿಂದಲೆ ಹಿರಿಯಡಕ ಹಾಗೂ ಪೆರ್ಡೂರಿನ ಸುತ್ತಮುತ್ತಲಿನ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ರಿಕ್ಷಾ, ಕಾರು, ಬಸ್ ಸಹಿತ ಯಾವುದೇ ವಾಹನಗಳು ರಸ್ತೆಗಿಳಿಯದೆ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿವೆ.
ಕಾಪು
ಕಾಪು: ಜನತಾ ಕರ್ಫ್ಯೂ ಪಾಲನೆಯ ಕರೆಗೆ ಕಾಪು ತಾಲೂಕಿನಾದ್ಯಂತ ಸಾರ್ವತ್ರಿಕ ಜನ ಬೆಂಬಲ ವ್ಯಕ್ತವಾಗಿದೆ. ರವಿವಾರ ಮುಂಜಾನೆಯಿಂದಲೇ ತಾಲೂಕಿನ ಕೇಂದ್ರ ಪ್ರದೇಶ, ಕಾಪು ಪುರಸಭೆ ವ್ಯಾಪ್ತಿ, ಉಚ್ಚಿಲ, ಎಲ್ಲೂರು, ಬೆಳಪು, ಮಜೂರು, ಉಳಿಯಾರಗೋಳಿ, ಮುದರಂಗಡಿ, ಇನ್ನಂಜೆ ಸಹಿತ ಎಲ್ಲೆಡೆಯಲ್ಲಿ ಜನರೇ ಸ್ವಯಂ ಪ್ರೇರಿತ ಬಂದ್ ಆಚರಿಸಿದರು. ನಗರ ಪ್ರದೇಶಗಳು ಮಾತ್ರವಲ್ಲದೇ ಗ್ರಾಮೀಣ ಪ್ರದೇಶಗಳಲ್ಲೂ ಉತ್ತಮ ಸ್ಪಂಧನೆ ವ್ಯಕ್ತವಾಗಿದ್ದು ನಾಗರಿಕರು ಬೆಳಗ್ಗಿನಿಂದಲೇ ಮನೆಯಿಂದ ಹೊರಬರದೇ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿದರು.
ಕಲ್ಯಾಣಪುರ ಸಂತೆಕಟ್ಟೆ
ಉಡುಪಿ: ರವಿವಾರ ಎಂದಾಕ್ಷಣ ಕಲ್ಯಾಣಪುರ ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂತೆ ವ್ಯಾಪಾರಸ್ಥರು, ಗ್ರಾಹಕರು ತುಂಬಿರುವುದು ಸಹಜ. ಪಕ್ಕದಲ್ಲಿ ನೂತನ ಸಂತೆ ಮಾರುಕಟ್ಟೆ ಕಟ್ಟಡ ರಚನೆಯಾಗಿದ್ದರೂ ಒಂದು ವರ್ಷದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಜನರು ನಿಂತು ವ್ಯಾಪಾರ ನಡೆಸುತ್ತಿದ್ದರು, ಬಸ್, ಲಾರಿ, ಕಾರುಗಳು ಮಾತ್ರ ಜಾಗರೂಕತೆಯಿಂದ ಮುಂದೆ ಚಲಿಸಬೇಕಿತ್ತು. ಆದರೆ ಈ ರವಿವಾರ ಮಾತ್ರ ಇಡೀ ರಾಷ್ಟ್ರೀಯ ಹೆದ್ದಾರಿ ಜನರಿಲ್ಲದೆ ಬಿಕೋ ಎನ್ನುವಂತಿತ್ತು. ರವಿವಾರದ ಸಂತೆಗೆ ಹೋಲಿಸಿದರೆ ಮಾ. 22ರ ರವಿವಾರ ಪೂರ್ಣ ಬಂದ್ ಇತ್ತು.
ಶಿರ್ವ
ಶಿರ್ವ: ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶದ ಪ್ರಧಾನಿಯವರು ಕರೆ ನೀಡಿದ ಜನತಾ ಕರ್ಫ್ಯೂಗೆ ಶಿರ್ವ, ಮೂಡುಬೆಳ್ಳೆ, ಪಡುಬೆಳ್ಳೆ , ಬಂಟಕಲ್ಲು, ಸೂಡ ಪರಿಸರದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಯಾವುದೇ ಬಂದ್‌ನ ಸಂದರ್ಭದಲ್ಲಿ ಸಂಪೂರ್ಣ ಬಂದ್ ಆಚರಿಸದ ಶಿರ್ವ ಹಾಗೂ ಸುತ್ತಮುತ್ತಲಿನ ಪರಿಸರದ ವ್ಯಾಪಾರಿಗಳು/ನಾಗರಿಕರು ಸ್ವಯಂಪ್ರೇರಿತರಾಗಿ ಬಂದ್ ನಡೆಸಿ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ಚರ್ಚ್, ಮಾರುಕಟ್ಟೆ, ಬಸ್‌ನಿಲ್ದಾಣಗಳು ಸಂಪೂರ್ಣ ಸ್ತಬ್ದಗೊಂಡಿತ್ತು.ಎಲ್ಲ ಅಂಗಡಿ ಮುಂಗಟ್ಟುಗಳು, ಮೆಡಿಕಲ್ ಶಾಪ್, ಆಸ್ಪತ್ರೆ,ಹಾಲಿನ ಅಂಗಡಿ,ಸಾರಿಗೆ ವಾಹನ ಸೇರಿಂತೆ ಎಲ್ಲವೂ ಬಂದ್ ಆಗಿತ್ತು. ಬಸ್ಸು ನಿಲ್ದಾಣದ ಬಳಿಯ ಒಂದು ಹೊಟೇಲ್ ಮತ್ತು ಪೆಟ್ರೋಲ್ ಬಂಕ್ ಚಾಲೂ ಇದ್ದರೂ ವಾಹನ ಸಂಚರಿಸದೆ ವ್ಯವಹಾರ ಕಡಿಮೆಯಾಗಿತ್ತು. ಗ್ರಾಮೀಣ ಪ್ರದೇಶದ ಮನೆಗಳಲ್ಲಿಯೂ ಜನರು ಮನೆಯಿಂದ ಹೊರಗೆ ಬಾರದೆ ಮನೆಯೊಳಗಡೆ ಇದ್ದು ಬೆಂಬಲ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.