Rain ಕಬ್ಬಿನಾಲೆ, ಸಿದ್ದಾಪುರ: ಸುಂಟರಗಾಳಿಗೆ ಅಪಾರ ಹಾನಿ
Team Udayavani, Jul 4, 2024, 12:43 AM IST
ಹೆಬ್ರಿ: ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಬ್ಬಿನಾಲೆ ಕೇಸರಬೈಲು ಪರಿಸರದಲ್ಲಿ ಮಂಗಳವಾರ ತಡರಾತ್ರಿ ಬೀಸಿದ ಬಾರಿ ಸುಂಟರಗಾಳಿಗೆ ಹಲವಾರು ಮನೆಗಳ ಮೇಲ್ಛಾವಣಿ ಹಾರಿ ಹೋಗಿ ಅಪಾರ ನಷ್ಟ ಸಂಭವಿಸಿದೆ.
ಮಂಗಳವಾರ ರಾತ್ರಿ ಒಂದು ಗಂಟೆ ಹೊತ್ತಿಗೆ ಸುಂಟರ ಗಾಳಿ ಬೀಸಿದ್ದು, ಕಬ್ಬಿನಾಲೆ ಕೇಸರಬೈಲು ಸಂಜೀವ ರೈ ಹಾಗೂ ಸದಾಶಿವ ಶೆಟ್ಟಿ ಅವರ ಮನೆಯ ಛಾವಣಿ ಸಂಪೂರ್ಣ ಹಾರಿ ಹೋಗಿದೆ. ಅಡಿಕೆ, ಬಾಳೆ, ತೆಂಗು, ಹಲಸು ಹಾಗೂ ಮಾವಿನ ಮರ ಸಹಿತ ಸುಮಾರು 600ಕ್ಕೂ ಮಿಕ್ಕಿ ಮರಗಳು ಬಿದ್ದಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ರಸ್ತೆ ಸಂಚಾರ ಬಂದ್
ಸುಂಟರಗಾಳಿಗೆ ರಸ್ತೆ ಬದಿಯಲ್ಲಿರುವ ಬೃಹದಾ ಕಾರದ ಸುಮಾರು 5ಕ್ಕೂ ಮಿಕ್ಕಿ ಮರಗಳು ಹೆಬ್ರಿ- ಕಬ್ಬಿನಾಲೆ ರಸ್ತೆಯ ಮಧ್ಯೆ ಕೊಂಕಣರಬೆಟ್ಟು ಸಮೀಪ ಕೇಸರಬೈಲು ಬಳಿ ರಸ್ತೆಗೆ ಉರುಳಿದ ಪರಿಣಾಮ ಬೆಳಗ್ಗೆಯಿಂದ 6 ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ಬಂದಾಗಿತ್ತು. ಮಧ್ಯಾಹ್ನ ತನಕ ಕಬ್ಬಿನಾಲೆಯಿಂದ ಹೆಬ್ರಿಗೆ ಹೋಗುವ ಮತ್ತು ಹೆಬ್ರಿಯಿಂದ ಕಬ್ಬಿನಾಲೆ ಕಡೆ ಬರುವ ಬಸ್ ಸಂಚಾರವಿಲ್ಲದೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಗ್ರಾಮಸ್ಥರು ಗುಲಾಡಿ ಗ್ರಾ. ಪಂ. ಹಾಗೂ ವಿವಿಧ ಇಲಾಖೆಯವರು ಸೇರಿಕೊಂಡು ರಸ್ತೆಯಲ್ಲಿದ್ದ ಮರಗಳನ್ನು ತೆರವುಗೊಳಿಸಿದರು.
ಲಕ್ಷಾಂತರ ರೂ. ನಷ್ಟ
ಸಂಜೀವ ರೈ ಅವರ ಮನೆಗೆ 2.5 ಲಕ್ಷ ರೂ. ಹಾಗೂ ತೋಟಕ್ಕೆ 1 ಲಕ್ಷ ರೂ. ಮಿಕ್ಕಿ ನಷ್ಟ ಸಂಭವಿಸಿದೆ. ಸದಾಶಿವ ಶೆಟ್ಟಿ ಮನೆಗೆ 60,000 ರೂ. ತೋಟಕ್ಕೆ 50,000 ರೂ. ನಷ್ಟ ಅಂದಾಜಿಸಲಾಗಿದೆ. ಕೇಸರಬೈಲು ಸುತ್ತಮುತ್ತ ಹಲವಾರು ಅಡಿಕೆ ತೆಂಗು ತೋಟಗಳು, ರಬ್ಬರ್ ತೋಟಗಳು, ಹಾಗೂ ಬೃಹತ್ ಭೋಗಿ ಮರಗಳು ಧರೆಗಿಳಿದಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ. ಹಲವು ವಿದ್ಯುತ್ ಕಂಬಗಳು ತುಂಡಾಗಿದ್ದು, ಮೆಸ್ಕಾಂಗೆ 1 ಲಕ್ಷಕ್ಕೂ ಮಿಕ್ಕಿ ನಷ್ಟವಾಗಿದೆ.
ಗ್ರಾಮಸ್ಥರಿಗೆ ಸಹಾಯ
ಬೆಳಗ್ಗೆ ವಿಷಯ ತಿಳಿದ ಕೂಡಲೇ 300ಕ್ಕೂ ಮಿಕ್ಕಿ ಗ್ರಾಮಸ್ಥರು, ಗ್ರಾಮ ಪಂಚಾಯತ್ ಪ್ರತಿನಿಧಿಗಳು ಕೇಸರಬೈಲಿನಲ್ಲಿ ನೆರೆದು, ಹಾನಿಗೀಡಾದ ಮನೆಗಳಿಗೆ ಮೇಲ್ಛಾವಣಿ ಹೊದಿಸಲು ಹಾಗೂ ಬಿದ್ದ ಮರಗಳನ್ನು ತೆರೆವುಗೊಳಿಸಲು ಸಹಕರಿಸಿದರು. ತಹಶೀಲ್ದಾರ್ ಸಹಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಶಾಲೆಗೆ ಹೋಗದ ವಿದ್ಯಾರ್ಥಿಗಳು
ಸುಂಟರಗಾಳಿ ಕಾರಣದಿಂದ ರಸ್ತೆ ಸಂಚಾರ ಸಂಪೂರ್ಣ ಮುಚ್ಚಿದ್ದ ಪರಿಣಾಮ ಬೆಳಗ್ಗೆ ಯಾವುದೇ ಬಸ್‌ಗಳು, ಶಾಲಾ ಬಸ್ಸುಗಳು ಕಬ್ಬಿನಾಲೆಗೆ ಬರಲಿಲ್ಲ. ಆದ್ದರಿಂದ ಈ ಭಾಗದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಸಾಧ್ಯವಾಗಲಿಲ್ಲ.
2 ವರ್ಷಗಳ ಹಿಂದೆ ಸುಂಟರಗಾಳಿ
ಎರಡು ವರ್ಷಗಳ ಹಿಂದೆ ಇದೇ ಪರಿಸರದಲ್ಲಿ ಸುಂಟರಗಾಳಿ ಬೀಸಿ ಅಪಾರ ಹಾನಿಯಾಗಿತ್ತು.
ಗುಂಪಾಗಿ ನಿಂತು ಜೀವ ಉಳಿಸಿಕೊಂಡೆವು
ರಾತ್ರಿ ಒಂದು ಗಂಟೆ ಹೊತ್ತಿಗೆ ಗಾಳಿ ಬೀಸಲು ಆರಂಭಿಸಿತು. ಮರಗಳು ಧರೆಗುರುಳುವ ಶಬ್ದಗಳು ಕೇಳಿಸುತ್ತಿತ್ತು. ಹೊರಗಡೆ ಬಂದು ನೋಡುವಾಗ ಮನೆಯ ಹೆಂಚು ಹಾರಿದ್ದು ಕಂಡು ಭಯಭೀತರಾದೆವು. ಮನೆಯ ಸುತ್ತಲಿನ ಮರಗಳು ಧರೆಗುರುಳಿದವು. ಗಾಳಿ ಆರಂಭವಾಗುತ್ತಿದ್ದಂತೆ ವಿದ್ಯುತ್ ಕೂಡ ಕೈಕೊಟ್ಟಿತು. ಎಲ್ಲೆಲ್ಲೂ ಕತ್ತಲು. ಮರಗಳು ಯಾವ ಕಡೆ ಬೀಳುತ್ತವೆ ಎನ್ನುವುದು ಕಾಣುತ್ತಿಲ್ಲ. ಮನೆಯವರೆಲ್ಲ ಗುಂಪಾಗಿ ನಿಂತು ಜೀವವನ್ನು ಉಳಿಸಿಕೊಂಡೆವು.
-ಮಮತಾ ಕೇಸರಬೈಲು, ಕಬ್ಬಿನಾಲೆ
ಸಿದ್ದಾಪುರ: ಪಶ್ಚಿಮಘಟ್ಟದ ತಪ್ಪಲಿನ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ಬೀಸಿದ ಸುಂಟರಗಾಳಿಗೆ ಅಪಾರ ಪ್ರಮಾಣದ ಕೃಷಿ, ಮನೆ, ದನದ ಕೊಟ್ಟಿಗೆಗಳು, ನೂರಾರು ವಿದ್ಯುತ್ ಕಂಬಗಳಿಗೆ ಹಾನಿಯಾಗಿ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ.
ಶಂಕರನಾರಾಯಣ ಗ್ರಾ.ಪಂಚಾಯತ್ ವ್ಯಾಪ್ತಿಯಲ್ಲಿ ಎರಡು ಮನೆ, ದನದ ಕೊಟ್ಟಗೆ ಮತ್ತು ಅಪಾರ ಕೃಷಿ ಹಾನಿಗೀಡಾಗಿದೆ. ಕುಳ್ಳುಂಜೆ ಗ್ರಾಮದ ಮಾವಿನಕೋಡ್ಲು ಸುಬ್ಬ ನಾಯ್ಕ ಅವರ ಮನೆಗೂ ಹಾನಿಯಾಗಿದೆ. ದನದ ಕೊಟ್ಟಿಗೆ ಗಾಳಿಗೆ ಹಾರಿ ಹೋಗಿದ್ದು, ಸಂಪೂರ್ಣ ಹಾನಿಗೊಂಡಿದೆ. 1,000ಕ್ಕೂ ಹೆಚ್ಚು ಅಡಿಕೆ ಮರ, 50ಕ್ಕೂ ಹೆಚ್ಚು ತೆಂಗಿನ ಮರ, ಅಪಾರ ಪ್ರಮಾಣದ ಬಾಳೆ, ಗೇರು ಕಾಳು ಮೆಣಸು ಗಿಡಗಳು ಹಾನಿಗೊಂಡಿವೆ. ಸುಬ್ಬ ನಾಯ್ಕ ಅವರ ಪತ್ನಿ ಸುಶೀಲಾ ಅವರಿಗೆ ಗಾಯಗಳಾಗಿವೆ. ಪುತ್ರಿ ಪ್ರೇಮಾ ನಾಯ್ಕ ಅವರ ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. 10 ಲ.ರೂ. ಗೂ ಹೆಚ್ಚು ನಷ್ಟ ಸಂಭವಿಸಿದೆ.
ಕುಳ್ಳುಂಜೆ ಗ್ರಾಮದ ಮಾವಿನಕೋಡ್ಲು ಚಟ್ರೆ ಗುಲಾಬಿ ನಾಯ್ಕ ಅವರು ಅಡಿಕೆ ತೋಟವು ಸುಂಟರಗಾಳಿಗೆ ಹಾನಿಗೊಂಡಿವೆ. 600ಕ್ಕೂ ಹೆಚ್ಚು ಅಡಿಕೆ ಮರ ಹಾನಿಗೊಂಡಿವೆ. ಸುಮಾರು 2 ಲಕ್ಷ ರೂ.ಗೂ ಹೆಚ್ಚು ಹಾನಿ ಸಂಭವಿಸಿದೆ.
ಅಮಾಸೆಬೈಲಿನಲ್ಲೂ ಹಾನಿ
ಅಮಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ರಟ್ಟಾಡಿ, ತೆಂಕೂರು, ಹೊರ್ಲಿಜೆಡ್ಡು, ನಡಂಬೂರು, ಹಳೆ ಅಮಾಸೆಬೈಲು, ಜಡ್ಡಿನಗದ್ದೆ ಪ್ರದೇಶದಲ್ಲಿ ಬೀಸಿದ ಸುಂಟರಗಾಳಿ ಅಪಾರ ಪ್ರಮಾಣದ ಮನೆ ಹಾನಿ, ಕೃಷಿ ಹಾನಿ ಸಂಭವಿಸಿದೆ. ಹೆಂಗವಳ್ಳಿ ಗ್ರಾ.ಪಂ.ನಲ್ಲಿ ಮೂರು ಮನೆಗಳಿಗೆ ಹಾನಿ ಸಂಭವಿಸಿದೆ.
ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಮನೆ ಹಾಗೂ ದನದ ಕೊಟ್ಟಿಗೆಗಳು ಹಾನಿಗೀಡಾಗಿವೆ. 20ಕ್ಕೂ ಹೆಚ್ಚು ಅಡಿಕೆ ಮತ್ತು ತೆಂಗಿನ ತೋಟಗಳು ಹಾನಿ ಗೊಂಡಿವೆ. ಹೆಂಗವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 3 ಮನೆಗಳಿಗೆ ಹಾನಿಯಾಗಿವೆ.
ರಟ್ಟಾಡಿಯ ತೆಂಕೂರು ದುರ್ಗಿ ಅವರ ಮನೆಯ ಮೇಲೆ ಮರ ಬಿದ್ದು, ಮನೆ ಸಂಪೂರ್ಣ ಹಾನಿಗೊಂಡಿದೆ. ಮನೆಯ ಮೇಲೆ ಮರಬಿದ್ದ ಪರಿಣಾಮ ಯಜಮಾನ ಚಂದ್ರ ಅವರ ತಲೆಗೆ ಗಂಭೀರ ಗಾಯವಾಗಿದೆ. ಇಬ್ಬರು ಮಕ್ಕಳು ಸಹಿತ ಆರು ಮಂದಿ ಅಪಾಯದಿಂದ ಪಾರಾಗಿದ್ದಾರೆ.
ಸುಂಟರಗಾಳಿಗೆ ಕೋಟ್ಯಂತರ ರೂಪಾಯಿ ಹಾನಿ ಸಂಭವಿಸಿದೆ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಒಟ್ಟು ಸುಮಾರು 5 ಸಾವಿರಕ್ಕೂ ಹೆಚ್ಚು ಅಡಿಕೆ ಮರಗಳು ಹಾನಿಗೊಂಡಿವೆ. 200ಕ್ಕೂ ಹೆಚ್ಚು ತೆಂಗಿನ ಮರಗಳು ಹಾನಿಯಾಗಿವೆ.
ಘಟನ ಸ್ಥಳಕ್ಕೆ ತಹಶೀಲ್ದಾರ್ ಸಹಿತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭೇಟಿ ನೀಡಿದರು.
ಏಕಾಏಕಿ ಬಿರುಸಿನ ಗಾಳಿ
ಈ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದರೂ ಈ ಪ್ರಮಾಣದಲ್ಲಿ ಗಾಳಿ ಬೀಸಿರಲಿಲ್ಲ. ಬುಧವಾರ ರಭಸವಾಗಿ ಗಾಳಿ ಬೀಸಿದ್ದಲ್ಲದೆ ಜತೆಯಾಗಿ ಮಳೆಯೂ ಸುರಿದ ಪರಿಣಾಮ ಅಪಾರ ಹಾನಿ ಸಂಭವಿಸಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.