ಕಡಬ ಆಧಾರ್ ಕೇಂದ್ರ: ಸೇವೆ ಸ್ಥಗಿತ!
ಸೇವೆ ಸಿಗದೆ ಹೈರಾಣಾಗಿರುವ ತಾಲೂಕಿನ ಜನತೆ
Team Udayavani, Apr 27, 2019, 2:53 PM IST
ನಾಗರಾಜ್ ಎನ್.ಕೆ.
ಕಡಬ ಎ. 26: ಇಂದು ಸರಕಾರದ ಯಾವುದೇ ಯೋಜನೆಗೆ ಅರ್ಜಿ ಸಲ್ಲಿಸ ಬೇಕಿದ್ದರೂ ಆಧಾರ್ ಕಾರ್ಡ್ ಅಗತ್ಯ ಬೇಕು. ಆದರೆ ನೂತನ ತಾಲೂಕು ಕೇಂದ್ರ ಕಡಬದ ತಹಶೀಲ್ದಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಧಾರ್ ಕೇಂದ್ರ ಕಳೆದ 5 ತಿಂಗಳಿನಿಂದ ಸೇವೆ ಸ್ಥಗಿತ ಗೊಳಿಸಿದೆ. ಇದರಿಂದಾಗಿ ಜನರಿಗೆ ಆಗುತ್ತಿ ರುವ ತೊಂದರೆಯನ್ನು ಸರಿಪಡಿಸಲು ಯಾವ ಅಧಿಕಾರಿಗಳೂ ಮುಂದಾಗುತ್ತಿಲ್ಲ. ಜನಪ್ರತಿನಿಧಿಗಳಂತೂ ಈ ಕುರಿತು ತಲೆಕೆಡಿಸಿಕೊಂಡಿಲ್ಲ.
42 ಗ್ರಾಮಕ್ಕೆ ತೊಂದರೆ
ಕಡಬದಲ್ಲಿದ್ದ ಆಧಾರ್ ಕೇಂದ್ರದಲ್ಲಿ ಸೇವೆ ಸ್ಥಗಿತ ಗೊಂಡಿರುವ ಕಾರಣ ದಿಂದಾಗಿ ನೂತನ ಕಡಬ ತಾಲೂಕಿನ 42 ಗ್ರಾಮಗಳ ಜನರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಈ ಕುರಿತು ಕಂದಾಯ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸರ್ವರ್ ಸಮಸ್ಯೆ, ಸಾಫ್ಟ್‌ವೇರ್ ಬದಲಾವಣೆ ಎಂದೆಲ್ಲ ಉತ್ತರಿಸುತ್ತಾರೆ. ಈ ಹಿಂದೆ ಪಂಜದಲ್ಲಿ ಕಾರ್ಯಾಚರಿಸುತ್ತಿದ್ದ ಆಧಾರ್ ಕೇಂದ್ರವೂ ಸೇವೆ ಸ್ಥಗಿತಗೊಳಿಸಿರುವುದರಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ಇದೀಗ ಕಡಬ ತಾಲೂಕಿನ ಜನರು ಪುತ್ತೂರು ಪ್ರಧಾನ ಅಂಚೆ ಕಚೇರಿಯ ಆಧಾರ್ ಕೇಂದ್ರವನ್ನೇ ಅವಲಂಬಿಸಬೇಕಿದೆ. ದೂರದ ಕೌಕ್ರಾಡಿ, ಇಚ್ಲಂಪಾಡಿ, ಶಿರಾಡಿ ಹಾಗೂ ಸುಳ್ಯ ತಾಲೂಕಿನಿಂದ ಕಡಬ ತಾಲೂಕಿಗೆ ಸೇರ್ಪಡೆಯಾಗಿರುವ ಏನೆಕಲ್, ಸುಬ್ರಹ್ಮಣ್ಯ, ಐನೆಕಿದು, ಬಳ್ಪ, ಕೇನ್ಯ, ಎಣ್ಮೂರು, ಎಡಮಂಗಲ ಮೊದಲಾದ ಗ್ರಾಮಗಳ ಜನರು ಪುತ್ತೂರಿನ ಆಧಾರ್ ಕೇಂದ್ರಕ್ಕೆ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಕಡಬದ ಅಂಚೆ ಕಚೇರಿ ಹಾಗೂ ಬ್ಯಾಂಕ್ ಶಾಖೆಗಳಲ್ಲಿ ಅಧಾರ್ ವ್ಯವಸ್ಥೆ ಮಾಡುವ ಅವಕಾಶಗಳಿದ್ದರೂ, ಯಾರೂ ಈ ಕುರಿತು ಕ್ರಮ ಕೈಗೊಂಡಿಲ್ಲ.
ಟೋಕನ್ ಸಿಗುವುದೇ ಕಷ್ಟ
ಪುತ್ತೂರಿನ ಅಂಚೆ ಕಚೇರಿಯ ಆಧಾರ್ ಕೇಂದ್ರದಲ್ಲಿ ಸರ್ವರ್ ಹಾಗೂ ವಿದ್ಯುತ್ ಪೂರೈಕೆ ಸರಿಯಾಗಿದ್ದರೆ ದಿನಕ್ಕೆ ಸರಾಸರಿ 30 ಜನರಿಗೆ ಆಧಾರ್ ನೋಂದಣಿ ಮಾಡಬಹುದಾಗಿದೆ. ಆದಕ್ಕೂ 2 ವಾರಗಳ ಮೊದಲೇ ಟೋಕನ್ ಪಡೆಯಬೇಕು. ಕೆಲವರಂತೂ ಬೆಳಗಿನ ಜಾವ ಹೋಗಿ ಟೋಕನ್ ಪಡೆಯಲು ಸರತಿ ಸಾಲಿನಲ್ಲಿ ನಿಂತು ಟೋಕನ್ ಪಡೆಯುತ್ತಿದ್ದಾರೆ. ಪುತ್ತೂರಿನ ತಾಲೂಕು ಕಚೇರಿ ಹಾಗೂ ಬ್ಯಾಂಕ್‌ಗಳಲ್ಲಿ ಆಧಾರ್ ಸೇವೆ ಇದ್ದರೂ, ಅಲ್ಲಿ ಪುತ್ತೂರು ತಾಲೂಕಿನವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಕಡಬ ತಾಲೂಕಿನ ಜನರಿಗೆ ಪುತ್ತೂರಿನ ಅಂಚೆ ಕಚೇರಿ ಮಾತ್ರ ಆಧಾರ್ ಸೇವೆಗೆ ಆಧಾರವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.