ನನೆಗುದಿಗೆ ಬಿದ್ದ ಕಂಡ್ಲೂರು ದೂಪದಕಟ್ಟೆ -ವಾಲ್ತೂರು ರಸ್ತೆ ದುರಸ್ತಿ
Team Udayavani, May 17, 2018, 6:15 AM IST
ಬಸ್ರೂರು: ಕಾವ್ರಾಡಿ ಗ್ರಾ.ಪಂ. ವ್ಯಾಪ್ತಿಯ ಕಂಡ್ಲೂರಿನ ದೂಪದ ಕಟ್ಟೆಯಿಂದ ಪಶ್ಚಿಮಕ್ಕೆ ಸಾಗುವ ವಾಲ್ತೂರು ರಸ್ತೆ ತೀವ್ರ ಹದಗೆಟ್ಟಿದ್ದು ಐದು ವರ್ಷಗಳು ಕಳೆದರೂ ಸಂಪೂರ್ಣ ದುರಸ್ತಿಯಾಗಿಲ್ಲ.
ಭರವಸೆ ಮಾತ್ರ
ಸುಮಾರು 4 ಕಿ.ಮೀ. ಉದ್ದದ ಈ ರಸ್ತೆ ದುರಸ್ತಿಗೆ ಸ್ಥಳೀಯರು ನಾಲ್ಕು ಬಾರಿ ಪ್ರತಿಭಟನೆ ನಡೆಸಿದ್ದೂ ಅಲ್ಲದೆ ಕಾವ್ರಾಡಿ ಗ್ರಾ.ಪಂ.ಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಿಯೂ ಆಗಿದೆ. ಆದರೆ ಪ್ರಯೋಜನವಾಗಿಲ್ಲ. ಪ್ರತಿಭಟನೆ ಹಿನ್ನೆಲೆಯಲ್ಲಿ ಶಾಸಕರ ಅನುದಾನ 40 ಲಕ್ಷ ರೂ. ಮಂಜೂರಾಗಿದ್ದು ಸದ್ಯದಲ್ಲಿಯೇ ದುರಸ್ತಿ ಮಾಡಲಾಗುವುದು ಎನ್ನುವ ಭರವಸೆ ವ್ಯಕ್ತವಾಗಿತ್ತು. ಆದರೆ ಯಾವುದೇ ಕಾಮಗಾರಿ ನಡೆದಿಲ್ಲ.
ಚುನಾವಣೆ ಬಹಿಷ್ಕಾರ ಎಚ್ಚರಿಕೆ ಹಿನ್ನೆಲೆಯಲ್ಲಿ ತೇಪೆ!
ಇತ್ತೀಚೆಗೆ ವಿಧಾನಸಭಾ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಸ್ಥಳೀಯರು ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಆಡಳಿತ ರಸ್ತೆ ಆರಂಭವಾಗುವ ದೂಪದಕಟ್ಟೆಯಿಂದ ಪಡುವಾಲ್ತೂರು ಶಾಲೆಯವರೆಗೆ ಕೇವಲ 1.5 ಕಿ.ಮೀ. ವ್ಯಾಪ್ತಿಯಲ್ಲಿ ಹೊಂಡಗಳನ್ನು ಮುಚ್ಚಿ ತೇಪೆ ಹಾಕುವ ಕಾರ್ಯ ಮಾಡಿದೆ.
ಗುದ್ದಲಿಪೂಜೆ ಮಾತ್ರ
ಈ ಮಧ್ಯೆ ಪಡುವಾಲ್ತೂರು ಹಿರಿಯ ಪ್ರಾಥಮಿಕ ಶಾಲೆಯಿಂದ ಸಾರ್ಕಲ್ಲು ದೇವಸ್ಥಾನದವರೆಗೆ 15 ಲಕ್ಷ ರೂ.
ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನಡೆದು ಕೆಲವು ತಿಂಗಳೇ ಕಳೆದಿವೆ. ಆದರೆ ಯಾವುದೇ ಕಾಮಗಾರಿ ಆರಂಭವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ರಸ್ತೆ ಮುಂದೆ ಸಾಗಿ ಒಂದು ರಸ್ತೆ ನೇರಳೆಕಟ್ಟೆಗೂ ಮತ್ತೂಂದು ಅಂಪಾರಿಗೂ ಸಾಗುತ್ತಿದ್ದು ಈ ರಸ್ತೆಯೂ ಹೊಂಡ ಬಿದ್ದಿದೆ.
ಕಣ್ಣೊರೆಸುವ ತಂತ್ರ
ದೂಪದಕಟ್ಟೆಯಿಂದ ವಾಲ್ತೂರಿಗೆ ಸಾಗುವ 4 ಕಿ.ಮೀ.ಉದ್ದದ ಈ ರಸ್ತೆಗೆ ಡಾಂಬರು ಅಥವಾ ಕಾಂಕ್ರೀಟ್ ಹಾಕಲಾಗುವುದು ಎಂದು ಜನಪ್ರತಿನಿಧಿಗಳು ಕಳೆದ 5 ವರ್ಷಗಳಿಂದ ಹೇಳುತ್ತ ನಮ್ಮನ್ನು ಮೂರ್ಖರನ್ನಾಗಿಸಿದ್ದಾರೆ. ಬಹಿಷ್ಕಾರದ ಎಚ್ಚರಿಕೆ ಕಾರಣ ತೇಪೆ ಮಾತ್ರ ಹಾಕಲಾಗಿದೆ. ನೇರಳಕಟ್ಟೆ , ಅಂಪಾರಿಗೆ ಸಾಗುವ ರಸ್ತೆಯ ಪರಿಸ್ಥಿತಿಯೂ ಇದೇ ಆಗಿದೆ.
– ನಾರಾಯಣ, ಸ್ಥಳೀಯ ನಿವಾಸಿ
ಡಾಮರು ಹಾಕಲಾಗುವುದು
ಕಂಡ್ಲೂರು ದೂಪದಕಟ್ಟೆಯಿಂದ ವಾಲ್ತೂರಿಗೆ ಸಾಗುವ 4 ಕಿ.ಮೀ.ಉದ್ದದ ರಸ್ತೆಗೆ ಶೀಘ್ರವೇ ಡಾಮರು ಹಾಕಿಸಲು ಶಾಸಕರ ಆನುದಾನ40 ಲಕ್ಷ ರೂ. ಬಿಡುಗಡೆಯಾಗಿದೆ. ಶೀಘ್ರವೇ ಈ ಕಾಮಗಾರಿಯನ್ನು ನಡೆಸಲಾಗುವುದು. ಆದರೆ ಈ ಅನುದಾನದಲ್ಲಿ ಎಲ್ಲ ರಸ್ತೆಗೆ ಡಾಮರು ಹಾಕಿಸಲು ಸಾಧ್ಯವಿಲ್ಲ.
– ಗೋಪಾಲ, ಪಿಡಿಒ, ಕಾವ್ರಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.