ಹೊಸಗನ್ನಡದ ಮುಂಗೋಳಿ ಮುದ್ದಣ
ಕನ್ನಡ ಕೆಟ್ಟಿದ ಹಿರಿಯರು
Team Udayavani, Nov 7, 2020, 5:14 AM IST
ಉಡುಪಿ ನಗರಸಭೆ ಎದುರಿಗಿರುವ ಮುದ್ದಣ ಪುತ್ಥಳಿ.
ಕವಿ ಮುದ್ದಣ ತಾವು ಜೀವಿಸಿದ್ದ ಅಲ್ಪ ವರ್ಷಗಳಲ್ಲಿ ಹೊಸಗನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಮೂಲ್ಯವಾದದ್ದು. ಹೀಗಾಗಿಯೇ ಅವರನ್ನು ಹೊಸಗನ್ನಡದ ಮುಂಗೋಳಿ ಎಂದು ಕರೆಯಲಾಗುತ್ತದೆ.
ಉಡುಪಿ: “ಹೊಸಗನ್ನಡದ ಮುಂಗೋಳಿ’ ಎಂದು ಕವಿ ಮುದ್ದಣ ಪ್ರಸಿದ್ಧ. ಇವರ ಕಾಲಮಾನ 24-1-1870ರಿಂದ 15-2-1901. ಮುದ್ದಣ ಎನ್ನುವುದು ಕಾವ್ಯನಾಮ. ಮೂಲ ಹೆಸರು ಲಕ್ಷ್ಮೀನಾರಾಯಣಪ್ಪ. ಕಾರ್ಕಳ ತಾಲೂಕು ನಂದಳಿಕೆ ಇವರ ಹುಟ್ಟೂರು. ರತ್ನಾವತಿ ಕಲ್ಯಾಣ, ಶ್ರೀರಾಮ ಪಟ್ಟಾಭಿಷೇಕ, ಅದ್ಭುತ ರಾಮಾಯಣ, ರಾಮಾಶ್ವಮೇಧ ಮೊದಲಾದ ಪ್ರಸಿದ್ಧ ಕೃತಿಗಳನ್ನು ರಚಿಸಿದ ಮುದ್ದಣ ಬಡತನ, ಅನಾರೋಗ್ಯದಿಂದ ಬಳಲಿ ಕೇವಲ 31ರ ಪ್ರಾಯದಲ್ಲಿಯೇ ಮೃತಪಟ್ಟರು.
ಮುದ್ದಣ ಉಡುಪಿ ಮತ್ತು ಕುಂದಾಪುರದ ಬೋರ್ಡ್ ಹೈಸ್ಕೂಲ್, ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್‌ನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಅವರ ತಂದೆ ತಿಮ್ಮಪ್ಪಯ್ಯ ಮತ್ತು ತಾಯಿ ಮಹಾಲಕ್ಷ್ಮೀ. ಮುದ್ದಾಗಿ ಕಾಣುತ್ತಿದ್ದ ಕಾರಣ ಮುದ್ದಣ ಎಂದು ಕರೆಯುತ್ತಿದ್ದರೆಂಬ ಮಾತೂ ಇದೆ. ಇದೇ ಹೆಸರನ್ನು ಮುಂದೆ ಕಾವ್ಯನಾಮವಾಗಿ ಬಳಸಿಕೊಂಡರಂತೆ.
ನಂದಳಿಕೆ ಮುರೂರು ಚರಡಪ್ಪನವರ ಪಾಠಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಮುದ್ದಣ ಬಳಿಕ ಶಿಕ್ಷಕರ ತರಬೇತಿ ಶಿಕ್ಷಣ ಪಡೆದರು. ದೈಹಿಕ ಶಿಕ್ಷಣ ತರಬೇತಿ ಯನ್ನು ಮದ್ರಾಸಿನಲ್ಲಿ ಪಡೆದ ಬಳಿಕ ಉಡುಪಿ ಯಲ್ಲಿ ವ್ಯಾಯಾಮ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. 1889ರ ವೇಳೆ ಉಡುಪಿಯಲ್ಲಿ ಇದ್ದರೆಂದು ತಿಳಿದು ಬರುತ್ತದೆ. 1893ರಲ್ಲಿ ಕಮಲಾಬಾಯಿ ಜತೆ ವಿವಾಹವಾಯಿತು. ರಾಮಾಶ್ವಮೇಧ ಕೃತಿ ಯಲ್ಲಿ ಮುದ್ದಣ – ಮನೋರಮೆಯರ ಸಂವಾದ ಪ್ರಸಿದ್ಧ.
ಉಡುಪಿಯಲ್ಲಿದೆ ಪ್ರತಿಮೆ
ಉಡುಪಿ ನಗರಸಭೆ ಎದುರು ಮುದ್ದಣನ ಪ್ರತಿಮೆ ಇದೆ. ಉಡುಪಿ ಚರ್ಚ್ ಎದುರಿನ ಮನೆಯಲ್ಲಿ ವಾಸಿಸುತ್ತಿದ್ದುದರಿಂದ ಈ ಮಾರ್ಗಕ್ಕೆ ಕವಿ ಮುದ್ದಣ ಮಾರ್ಗ (ಕೆಎಂ ಮಾರ್ಗ) ಎಂದು ನಾಮಕರಣ ಮಾಡಲಾಗಿದೆ. ಎಂಜಿಎಂ ಕಾಲೇಜಿನಲ್ಲಿ ಪ್ರತೀ ವರ್ಷ ಮುದ್ದಣ ಸಾಹಿತ್ಯೋತ್ಸವ ನಡೆಯುತ್ತಿದ್ದು, ಈ ಸಭಾಂಗಣಕ್ಕೆ “ಮುದ್ದಣ ಮಂಟಪ’ ಎಂದು ಹೆಸರು ಇರಿಸಲಾಗಿದೆ. ಕಾಲೇಜಿನ ಒಳಗೆಯೂ ಒಂದು ಪುತ್ಥಳಿಯನ್ನು ಸ್ಥಾಪಿಸಲಾಗಿದೆ.
ಹುಟ್ಟೂರಿನಲ್ಲಿ ಹಲವು ಸ್ಮಾರಕ, ಚಟುವಟಿಕೆ
1979ರಲ್ಲಿ ಹುಟ್ಟೂರು ನಂದಳಿಕೆಯಲ್ಲಿ ಮುದ್ದಣ ಸ್ಮಾರಕ ಮಿತ್ರ ಮಂಡಳಿ ಆರಂಭವಾಗಿ ಇಂದಿಗೂ ಚಟುವಟಿಕೆಗಳನ್ನು ನಡೆಸು ತ್ತಿದೆ. ನಂದಳಿಕೆಯಲ್ಲಿ 1958ರಲ್ಲಿ ಕವಿ ಮುದ್ದಣ ಸ್ಮಾರಕ ರೈತ ಯುವಕ ಸಂಘ ಆರಂಭವಾಯಿತು. 1979ರಲ್ಲಿ ರೈತ ಯುವಕ ಸಂಘವು ಕವಿ ಮುದ್ದಣ ಸ್ಮಾರಕ ಮಿತ್ರ ಮಂಡಳಿಯೊಂದಿಗೆ ವಿಲೀನಗೊಂಡಿತು. 1982ರ ಜ. 24ರಂದು ವಿಶೇಷ ಅಂಚೆ ಕವರ್ ಬಿಡುಗಡೆಯಾಯಿತು. 1987ರಲ್ಲಿ ವಿವಿಧ ಕಾಲೇಜುಗಳ ಎನ್ನೆಸ್ಸೆಸ್ ಘಟಕಗಳ ಸಹಯೋಗದಲ್ಲಿ ಸರಕಾರ ಕೊಟ್ಟ ಎಂಟು ಎಕ್ರೆ ಸ್ಥಳದಲ್ಲಿ ಮುದ್ದಣ ವನವನ್ನು ನಿರ್ಮಿಸಲಾಯಿತು. ಅದೇ ವರ್ಷ ಕವಿ ಮುದ್ದಣ ಸ್ಮಾರಕ ಭವನ, ಮುದ್ದಣ ಸ್ಮಾರಕ ಗ್ರಂಥಾಲಯ ಉದ್ಘಾಟನೆಗೊಂಡವು. 2017ರ ನ. 1ರಂದು ವಿಶೇಷ ಅಂಚೆ ಚೀಟಿ ಬಿಡುಗಡೆಯಾಯಿತು. ಮುದ್ದಣನ 150ನೆಯ ವರ್ಷಾಚರಣೆ, ಮುದ್ದಣ ಪ್ರಕಾಶನದ ರಜತ ಸಂಭ್ರಮ ಮತ್ತು ನಂದಳಿಕೆ ಮಹಾಲಿಂಗೇಶ್ವರ ಹಿ.ಪ್ರಾ. ಶಾಲೆಯ 75ನೆಯ ವರ್ಷದ ಅಂಗವಾಗಿ ವಿಶೇಷ ಅಂಚೆ ಕವರ್ ಬಿಡುಗಡೆಗೊಂಡಿದೆ. ಮುದ್ದಣ ಮನೋರಮೆಯರ ಸಲ್ಲಾಪದ ಚಿತ್ರ ಒಳಗೊಂಡ ಅಂಚೆ ಮೊಹರು ನಂದಳಿಕೆ ಅಂಚೆ ಕಚೇರಿಯಲ್ಲಿ 2015ರ ಜ. 24ರಿಂದ ಚಾಲ್ತಿಯಲ್ಲಿದೆ.