ಕಾಪು ಸ.ಮಾ.ಹಿ.ಪ್ರಾ. ಶಾಲೆಗೆ ಕಂಪ್ಯೂಟರ್ ಕೊಡುಗೆ ನೀಡಿದ ಹಳೆ ವಿದ್ಯಾರ್ಥಿ
ನಮ್ಮ ಶಾಲೆ - ನಮ್ಮ ಹೆಮ್ಮೆ ಲೇಖನದಿಂದ ಪ್ರೇರಣೆ
Team Udayavani, Nov 21, 2019, 5:24 AM IST
ಕಾಪು: ಕಾಪು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಪು ದಿ| ಬಾಲಕೃಷ್ಣ ಭಟ್ ಮತ್ತು ದಿ| ಸುಗುಣಾ ಭಟ್ ಅವರ ಸ್ಮರಣಾರ್ಥ ಅವರ ಮಗ ಕಾಪು ಪೂರ್ಣಾನಂದ ಭಟ್ ದುಬೈ ಅವರು ಸುಮಾರು 50 ಸಾವಿರ ರೂಪಾಯಿ ಮೌಲ್ಯದ ಕಂಪ್ಯೂಟರ್‌ನ್ನು ಕೊಡುಗೆಯಾಗಿ ನೀಡಿದರು.
ಉದಯವಾಣಿಯಲ್ಲಿ ಪ್ರಕಟಿತ ನಮ್ಮ ಶಾಲೆ – ನಮ್ಮ ಹೆಮ್ಮೆ ಲೇಖನ ಮಾಲಿಕೆಯಲ್ಲಿ 112 ವರ್ಷಗಳನ್ನು ಪೂರೈಸಿರುವ ಕಾಪು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಬಗ್ಗೆ ನ. 3ರ ಉದಯವಾಣಿಯಲ್ಲಿ ವಿಶೇಷ ಲೇಖನವನ್ನು ಪ್ರಕಟಿಸಲಾಗಿತ್ತು.
ಪ್ರಸ್ತುತ ದುಬೈಯಲ್ಲಿ ಉದ್ಯೋಗದಲ್ಲಿ ಇರುವ ಪೂರ್ಣಾನಂದ ಭಟ್ ಅವರು ತಾನು ಕಲಿತ ಶಾಲೆಯ ಬಗ್ಗೆ ಉದಯವಾಣಿಯಲ್ಲಿ ಪ್ರಕಟಿತ ಲೇಖನವನ್ನು ಇಂಟರ್‌ನೆಟ್ ಮೂಲಕ ಓದಿದ್ದು, ಈ ಬಗ್ಗೆ ಸಹೋದರನಿಂದ ಮಾಹಿತಿ ಸಂಗ್ರಹಿಸಿ ಶಾಲೆಗೆ ಆಗಮಿಸಿ, ಕಂಪ್ಯೂಟರ್‌ನ್ನು ಕೊಡುಗೆಯಾಗಿ ನೀಡಿದರು. ಅದರೊಂದಿಗೆ ಶಾಲೆಯ ಎಲ್ಲಾ ಮಕ್ಕಳಿಗೆ ಪೆನ್ನು, ಪೆನ್ಸಿಲ್, ಚಾಕಲೇಟ್ ಸಹಿತ ವಿವಿಧ ವಸ್ತುಗಳನ್ನು ನೀಡಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪೂರ್ಣಾನಂದ್ ಭಟ್ ಅವರ ಪತ್ನಿ ದೀಪಾ ಪಿ. ಭಟ್, ಸಹೋದರ ಪರಮಾನಂದ ಭಟ್, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಕೃಷ್ಣ ಆಚಾರ್ಯ, ಉಪಾಧ್ಯಕ್ಷೆ ಆಶಾ ಶಂಕರ್, ಶಿಕ್ಷಣ ಇಲಾಖೆಯ ಅಧಿಕಾರಿ ಇಂದಿರಾ, ಮುಖ್ಯೋಪಾಧ್ಯಾಯನಿ ರಜನಿ ಕುಮಾರಿ, ಶಿಕ್ಷಕಿಯರು, ಮಕ್ಕಳ ಪೋಷಕರು, ಎಸ್.ಡಿ.ಎಂ.ಸಿ ಸದಸ್ಯರು ಉಪಸ್ಥಿತರಿದ್ದರು.
ಕನ್ನಡ ಮಾಧ್ಯಮ ಶಾಲೆಗಳ ಬೆಳವಣಿಗೆಗೆ ಪೂರಕ ಲೇಖನ
ನಮ್ಮ ಶಾಲೆ – ನಮ್ಮ ಹೆಮ್ಮೆ ಲೇಖನ ಮಾಲಿಕೆಯ ಮೂಲಕ ಉದಯವಾಣಿಯಲ್ಲಿ 100 ವರ್ಷಗಳನ್ನು ಪೂರೈಸಿದ ಕನ್ನಡ ಮಾಧ್ಯಮ ಶಾಲೆಗಳ ಬಗೆಗಿನ ಲೇಖನಗಳು ಅತ್ಯುತ್ತಮವಾಗಿ ಮೂಡಿಬರುತ್ತಿವೆ. ಈ ಮೂಲಕ ನಾವು ಕಲಿತ ಶಾಲೆಯ ಇಂದಿನ ಸ್ಥಿತಿಗತಿಯನ್ನು ಅರಿತುಕೊಳ್ಳಲು ಸಾಧ್ಯವಾಗಿದೆ. ಶಾಲೆಯ ಅಗತ್ಯಕ್ಕೆ ಪೂರಕವಾಗಿ ಮೂಲ ಸೌಕರ್ಯಗಳನ್ನು ಜೋಡಿಸಿ ಕೊಡಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಇದೇ ರೀತಿಯಲ್ಲಿ ಅನುಕೂಲಸ್ಥ ಹಳೆ ವಿದ್ಯಾರ್ಥಿಗಳು ತಾವು ಕಲಿತ ಶಿಕ್ಷಣ ಸಂಸ್ಥೆಗೆ ಬೇಕಾದ ಕೊಡುಗೆಯನ್ನು ಒದಗಿಸಿಕೊಟ್ಟು, ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು ಸರಕಾರ ಮತ್ತು ಊರವರೊಂದಿಗೆ ಕೈಜೋಡಿಸುವುದು ಅಗತ್ಯವಿದೆ.
-ಪೂರ್ಣಾನಂದ ಭಟ್
ಹಳೆ ವಿದ್ಯಾರ್ಥಿ, ಕಾಪು ಶಾಲೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.