ದಯೆಯೇ ಧರ್ಮದ ಮೂಲವಯ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ
Team Udayavani, Apr 22, 2017, 9:59 AM IST
ಉಡುಪಿ: ಆತ್ಮಶುದ್ಧಿ, ಮಾನವೀಯತೆ ಇರಬೇಕು. ದಯೆಯೇ ಧರ್ಮದ ಮೂಲವಯ್ಯ ಎಂದು ಬಸವಣ್ಣನವರು ಹೇಳಿದಂತೆ ಸರಳ ವ್ಯಾಖ್ಯಾನ ಸಾಕು. ಇನ್ನೊಬ್ಬರಿಗೆ ಕೆಡುಕು ಬಯಸದೆ ಇರುವುದೇ ಧರ್ಮ. ಇವು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನುಡಿಮುತ್ತುಗಳು.
ಶ್ರೀ ಬಾರಕೂರು ಮಹಾಸಂಸ್ಥಾನದಲ್ಲಿ ಶುಕ್ರವಾರ ನಡೆದ ನಾಗದೇವರ ಮತ್ತು ಮೂಲ ದೈವಗಳ ಪುನಃಪ್ರತಿಷ್ಠಾಪನೆ, ನಾಗಮಂಡಲೋತ್ಸವ, ಅಳಿಯಕಟ್ಟು ಪರಂಪರೆಯ ಸಮುದಾಯಗಳ ಸಂಸ್ಥಾನ ಲೋಕಾರ್ಪಣೆ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದ ಅವರು, ಭೂತಾಳ ಪಾಂಡ್ಯನ ಅಳಿಯಕಟ್ಟು ಪರಂಪರೆಯ ಸಂಸ್ಥಾನವನ್ನು ಮತ್ತೆ ಲೋಕಾರ್ಪಣೆ ಮಾಡಲಾಗಿದೆ. ಇತಿಹಾಸ ಗೊತ್ತಿದ್ದವರಿಂದ ಭವಿಷ್ಯ ನಿರ್ಮಾಣ ಸಾಧ್ಯ. ಆದ್ದರಿಂದ ಈ ಕೆಲಸ ಶ್ಲಾಘನೀಯ ಎಂದರು.
ಮಾನವೀಯ ಮೌಲ್ಯ ನೆಲೆಸಲಿ
ಕೆಲವು ಜಾತಿಯವರಿಗೆ ದೇವಸ್ಥಾನಗಳ ಪ್ರವೇಶ ಇದ್ದಿರಲಿಲ್ಲ. ಬಾರಕೂರಿನಲ್ಲಿ 365 ದೇವಸ್ಥಾನಗಳಿದ್ದವು. ಎಲ್ಲ ಜಾತಿಯವರಿಗೂ ದೇವಸ್ಥಾನಗಳಿದ್ದವು ಎಂದು ಕೇಳಿದೆ. ಕೆಲವರಿಗೆ ಪ್ರವೇಶ, ಕೆಲವರಿಗೆ ನಿರ್ಬಂಧ ಇದೆಲ್ಲ ದೇವರ ದೃಷ್ಟಿಯಲ್ಲಿ ಇಲ್ಲ. ಇದು ಅಮಾನವೀಯ. ಅದಕ್ಕಾಗಿಯೇ ನಾರಾಯಣಗುರು ಪ್ರತ್ಯೇಕ ದೇವಸ್ಥಾನ ನಿರ್ಮಿಸಿದರು. ಜಾತಿಯನ್ನು ನಮ್ಮ ಸ್ವಾರ್ಥಕ್ಕೋಸ್ಕರ ಮಾಡಲಾಯಿತು. ಹುಟ್ಟುವಾಗ ಸಿಗುವ ಹಣೆಪಟ್ಟಿ ಸಾಯುವ ವರೆಗೆ ಹೋಗುವುದಿಲ್ಲ. ಜಾತಿ ವ್ಯವಸ್ಥೆ ಜೀವಂತವಾಗಿರುವವರೆಗೆ ಶೋಷಣೆ ತಪ್ಪಿದ್ದಲ್ಲ. ಮಾನವೀಯ ಮೌಲ್ಯ ನೆಲೆಸಿದಾಗ ಮಾತ್ರ ಇದರ ನಿರ್ಮೂಲನೆ ಸಾಧ್ಯ ಎಂದರು.
ನಾನು ನಾಸ್ತಿಕ ಅಲ್ಲ
ಕೆಲವರು ನನ್ನನ್ನು ನಾಸ್ತಿಕರು ಅಂತಾರೆ. ನಾನು ನಾಸ್ತಿಕ ಅಲ್ಲ. ಆದರೆ ಅನೇಕ ಆಸ್ತಿಕರಂತೆ ಢೋಂಗಿತನ ನನಗೆ ಇಲ್ಲ. ದೇವನೊಬ್ಬ ನಾಮ ಹಲವು. ಯಾವ ದೇವಸ್ಥಾನಕ್ಕೆ ಹೋದ್ರೇನು? ನಮ್ಮೂರ ದೇವರೇ ಸಾಕಲ್ವ. ನಾನು ನಮ್ಮೂರ ದೇವಸ್ಥಾನಕ್ಕೆ ಹೋಗುತ್ತೇನೆ. ಕಷ್ಟ ಬಂದಾಗ ದೇವಸ್ಥಾನ ಹುಡುಕಿಕೊಂಡು ಹೋಗುವುದಿಲ್ಲ. ಆತ್ಮಶುದ್ಧಿ ಇಲ್ಲದಿದ್ದರೆ, ಮಾನವೀಯತೆ ಇಲ್ಲದಿದ್ದರೆ ಯಾವ ದೇವರಿಂದಲೂ ಅವರ ಸಮಸ್ಯೆ ಪರಿಹಾರ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ತಾವೇ ಉದ್ಯಮ ಸೃಷ್ಟಿಸಿದ ಬಂಟರು ದೇವರಲ್ಲಿ “ಒಳ್ಳೇದು ಮಾಡಪ್ಪ’ ಎಂದರೆ ಸಾಕು. ಅದಕ್ಕೆ ಮಂತ್ರ ಬೇಕೆ? ಮನುಷ್ಯತ್ವದಲ್ಲಿ ನಂಬಿಕೆ ಬೇಕು. ಬಸವಣ್ಣನವರು ಹೇಳಿದಂತೆ “ಇವನಾರವ ಇವನಾರವ ಇವನಾರವ ಎಂದೆಣಿಸದಿರಯ್ಯ’ ಅನುಸರಿಸಬೇಕು. ಬಸವಣ್ಣನವರು ಅನುಭವ ಮಂಟಪದಲ್ಲಿ ಪುರುಷರು, ಸ್ತ್ರೀಯರನ್ನು ಸೇರಿಸಿ ಸಂಸತ್ತು ನಡೆಸಿದರು. ಭೂತಾಳ ಪಾಂಡ್ಯನೂ ಸ್ತ್ರೀಯರಿಗೆ ಮಹತ್ವ ಕೊಟ್ಟ. ಅಳಿಯ ಸಂತಾನ ಪದ್ಧತಿ ಸಮಾನತೆಯ ಸಂಕೇತ. ಬಂಟ ಸಮುದಾಯಕ್ಕೆ ಸಾಹಸ ಪ್ರವೃತ್ತಿ ಬಂದದ್ದೇ ಅಳಿಯ ಸಂತಾನ ಪದ್ಧತಿಯಿಂದ ಇರಬಹುದು. ಉದ್ಯೋಗಕ್ಕೆ ಕೈಚಾಚುವ ಬದಲು ತಾವೇ ಉದ್ಯಮ ಸೃಷ್ಟಿಸಿ ಉದ್ಯೋಗದಾತರಾದರು ಎಂದು ಅವರು ಹೇಳಿದರು.
ರಾಜನೇ ಬಂದಂತಾಗಿದೆ
ಸಂಸ್ಥಾನದ ಮುಖ್ಯಸ್ಥ ಡಾ| ವಿಶ್ವಸಂತೋಷ ಭಾರತಿ ಸ್ವಾಮೀಜಿ ಆಶೀರ್ವಚಿಸಿ, 1600 ವರ್ಷಗಳ ಹಿಂದೆ ಬಾರಕೂರಿನಲ್ಲಿ ಆಳ್ವಿಕೆ ನಡೆಸಿದ ಭೂತಾಳ ಪಾಂಡ್ಯನ ಕಾಲದ ಭೂತಾರಾಧನೆ, ನಾಗಾರಾಧನೆ ಪರಂಪರೆಯ ಶ್ರೇಷ್ಠವಾದ ಶ್ರದ್ಧಾಕೇಂದ್ರವನ್ನು ಮರು ನಿರ್ಮಿಸಲು ಮೂರು ವರ್ಷಗಳ ಹಿಂದೆ ನಿರ್ಧರಿಸಿದೆ. ಈಗ ಅದರ ಒಂದು ಹಂತ ಮುಗಿದಿದೆ. ಈಗ ಇದರ ಉದ್ಘಾಟನೆಗೆ ಮುಖ್ಯಮಂತ್ರಿ ಬಂದಿರುವುದು ರಾಜನೇ ಬಂದಂತಾಗಿದೆ ಎಂದು ಅವರು ಹೇಳಿದರು.
50 ಲ. ರೂ. ಅನುದಾನ
ಇದೇ ಪ್ರಥಮ ಬಾರಿಗೆ ಬಂಟರ ಸಂಸ್ಥಾನಕ್ಕೆ 50 ಲ. ರೂ. ಮೊತ್ತವನ್ನು ಮುಖ್ಯಮಂತ್ರಿ ಮಂಜೂರು ಮಾಡಿದ್ದಾರೆ. ಅರ್ಧಾಂಶ ಈಗ ಬಂದಿದೆ. ಇನ್ನು ಅರ್ಧ ಭಾಗ ಬರಲಿದೆ. ಸ್ವಾತಂತ್ರ್ಯ ಸಿಕ್ಕಿದ 70 ವರ್ಷಗಳಲ್ಲಿ ಬಂಟ ಸಮುದಾಯಕ್ಕೆ ಅನುದಾನ ಸಿಕ್ಕಿರಲಿಲ್ಲ. ಬಂಟರು ಸಿರಿವಂತರು ಎಂದು ಹೇಳುತ್ತಾರೆ. ಆದರೆ ಮೂರು ಲಕ್ಷ ಜನರು ಮಾತ್ರ ಸಿರಿವಂತರು, ಉಳಿದ 15 ಲಕ್ಷ ಬಡವರಿದ್ದಾರೆ. ಇವರಿಗೆ ನೆರವಾಗುವುದೇ ಸಂಸ್ಥಾನದ ಉದ್ದೇಶ ಎಂದು ಸ್ವಾಮೀಜಿ ಹೇಳಿದರು.
ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀಗುರುಸಿದ್ದರಾಜ ಯೋಗೀಂದ್ರ ಸ್ವಾಮೀಜಿ, ಸಚಿವರಾದ ಪ್ರಮೋದ್ ಮಧ್ವರಾಜ್, ರುದ್ರಪ್ಪ ಮಾನಪ್ಪ ಲಮಾಣಿ, ಮುಖ್ಯಸಚೇತಕ ಅಶೋಕ ಪಟ್ಟಣ, ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ, ಶಾಸಕರಾದ ವಿನಯಕುಮಾರ್ ಸೊರಕೆ, ಗೋಪಾಲ ಪೂಜಾರಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ. ಶ್ರೀನಿವಾಸ್, ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ, ಉದ್ಯಮಿಗಳಾದ ಧರ್ಮಪಾಲ ದೇವಾಡಿಗ, ವರದರಾಜ ಶೆಟ್ಟಿ, ಮಾಲಾಡಿ ಅಜಿತ್‌ಕುಮಾರ್ ರೈ, ಮಂಗಳೂರಿನ ಸದಾನಂದ ಶೆಟ್ಟಿ, ಶಬರಿಮಲೆ ಪಂದಲ ರಾಜ ವಂಶಸ್ಥ ರಾಜ ಕೇರಳ ವರ್ಮ, ಕಾರ್ಯಕ್ರಮ ಉಸ್ತುವಾರಿ ಸಮಿತಿ ಅಧ್ಯಕ್ಷ ಗುರ್ಮೆ ಸುರೇಶ ಶೆಟ್ಟಿ ಉಪಸ್ಥಿತರಿದ್ದರು.
ಮಾಜಿ ಲೋಕಾಯುಕ್ತ ನ್ಯಾ| ಮೂ| ಸಂತೋಷ್ ಹೆಗ್ಡೆ, ಮುಂಬಯಿ ಉದ್ಯಮಿ ಶಶಿಕಿರಣ್ ಶೆಟ್ಟಿ ಪರವಾಗಿ ಸುರೇಂದ್ರ ಶೆಟ್ಟಿ, ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ, ಮಂಗಳೂರು ವಿ.ವಿ. ಪ್ರಾಧ್ಯಾಪಕ ಡಾ| ಕೆ. ಚಿನ್ನಪ್ಪ ಗೌಡರಿಗೆ ಭೂತಾಳ ಪಾಂಡ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು ಮತ್ತು ಸಂಸ್ಥಾನದ ಆಡಳಿತಾಧಿಕಾರಿ ಅನಿಲ್‌ಕುಮಾರ್ ಶೆಟ್ಟಿ, ಮುಂಬೈನ ಡಾ| ಸತ್ಯಪ್ರಕಾಶ್ ಶೆಟ್ಟಿ, ಅನಿವಾಸಿ ಭಾರತೀಯ ಉದ್ಯಮಿ ವಕ್ವಾಡಿ ಪ್ರವೀಣ್ ಶೆಟ್ಟಿ, ಬಾರಕೂರು ಶಾಂತಾರಾಮ ಶೆಟ್ಟಿ ದಂಪತಿಯನ್ನು ಸಮ್ಮಾನಿಸಲಾಯಿತು. ವಕ್ವಾಡಿ ಪ್ರವೀಣ್ ಶೆಟ್ಟಿ ಸ್ವಾಗತಿಸಿದರು.
ಸಂಸ್ಥಾನದ ಆರೋಗ್ಯ ಮತ್ತು ಶಿಕ್ಷಣ ಭಾರತೀ ಯೋಜನೆಗಳಿಗೆ ಚಾಲನೆ ನೀಡಲಾಯಿತು.
ನಂಜೇಗೌಡರ ಅಮರಕೋಶ
ನಾನು 4ನೇ ತರಗತಿಯಲ್ಲಿರುವಾಗ ಮೇಸ್ಟ್ರರಾಗಿದ್ದ ನಂಜೇಗೌಡರು “ಯಸ್ಯಜ್ಞಾನ ದಯಾಸಿಂಧು…’ ಅಮರಕೋಶ ಹೇಳಿಕೊಡುತ್ತಿದ್ದರು. ನನಗೆ ಅದು ಏನೆಂದೇ ಕೊನೆಗೂ ಅರ್ಥವಾಗಲಿಲ್ಲ. ದೇವರ ಭಕ್ತಿಗೆ ಸಂಸ್ಕೃತ, ಮಂತ್ರಗಳೆಲ್ಲ ಬೇಕೋ? ಅದಕ್ಕಾಗಿಯೇ ದಾಸರು, ಸೂಫಿಗಳು, ಶರಣರು ಆಡುಭಾಷೆಯಲ್ಲಿ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಬರೆದರು. ಹಿಂದೂ ಧರ್ಮದ ಮೂಲವೇ ಸಹಿಷ್ಣುತೆ. ಇಷ್ಟು ಅರ್ಥಮಾಡಿಕೊಂಡರೆ ಮನುಷ್ಯತ್ವವನ್ನು ಅರ್ಥ ಮಾಡಿಕೊಳ್ಳಬಹುದು. ದೇವರೋ ದೈವಗಳ್ಳೋ ಏನು ಬೇಕಾದ್ರು ಕರ್ಕೊಳ್ಳಿ. ಭಕ್ತಿ ಇದ್ರೆ ಸಾಕು.
ಸಿದ್ದರಾಮಯ್ಯ, ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
Japan rivals: ನಿಸ್ಸಾನ್-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!
Legislative House: ಶಾಸನಸಭೆಯೊಳಗೆ ಪೊಲೀಸ್ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು
Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.