![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Jun 11, 2024, 5:58 PM IST
ಕಾರ್ಕಳ: ಮಿಯ್ನಾರಿನ ಕಾಡಂಬಳ ಸರಕಾರಿ ಪ್ರಾಥಮಿಕ ಶಾಲೆಗೆ ಮಕ್ಕಳು ಪಠ್ಯ ಪುಸ್ತಕದ ಬ್ಯಾಗ್ ಮಾತ್ರ ತರುವುದಲ್ಲ, ಇನ್ನೊಂದು ಚೀಲದಲ್ಲಿ ಮನೆಯ ಕಸವನ್ನೂ ಹಿಡಿದುಕೊಂಡು ಬರಬೇಕು. ಇದು ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿರುವ ಚಂದ್ರಶೇಖರ ಭಟ್ ಅವರು ಮಾಡಿರುವ ನಿಯಮ.
ಮಕ್ಕಳಿಗೆ ಸ್ವಚ್ಛತೆಯ ಪಾಠವನ್ನು ಕೇವಲ ಪಠ್ಯ ರೂಪದಲ್ಲಿ ಮಾಡದೆ ಅವರಲ್ಲಿ ಸ್ವಚ್ಛತೆಯ ಅರಿ ವನ್ನು ಮೂಡಿಸಲು ಮಾಡಿರುವ ವಿನೂತನ ಕಾರ್ಯಕ್ರಮವಿದು. ವಯಕ್ತಿಕ ಸ್ವಚ್ಛತೆ ಜತೆಗೆ ಸುತ್ತಲ ಪರಿಸರ, ಓಣಿ, ಊರು ಸ್ವಚ್ಛತೆಯ ಬಗ್ಗೆ ಕೂಡ ಗಮನ ಹರಿಸುವಂತೆ ಅವರು ಬದುಕಿನ ಪಾಠ ಕಲಿಸುತ್ತಾರೆ.
ಈ ಶಾಲೆಯಲ್ಲಿ ಆರು ಹೆಣ್ಣು, ಮೂರು ಗಂಡು ಸೇರಿ 9 ಮಕ್ಕಳು ಕಲಿಯುತ್ತಿದ್ದಾರೆ. ಇವರು ಪ್ರತಿ ದಿನವೂ ಮನೆಯ ಕಸವನ್ನು ಚೀಲದಲ್ಲಿ ತರುತ್ತಾರೆ. ಮನೆಯ ಒಣ ಕಸ, ಪ್ಲಾಸ್ಟಿಕ್ ವಸ್ತುಗಳಾದ ಪ್ಲಾಸ್ಟಿಕ್ ಚೀಲ, ಬಾಟಲಿ, ಕವರ್ ಇತ್ಯಾದಿಗಳನ್ನು ಚೀಲದಲ್ಲಿ ತುಂಬಿಕೊಂಡು ಶಾಲೆಗೆ ಬರುತ್ತಾರೆ.
ವಾರಕ್ಕೆ 9ರಿಂದ 10 ಕೆ.ಜಿ ತ್ಯಾಜ್ಯ ಸಂಗ್ರಹ ಮಕ್ಕಳು ತಂದ ತ್ಯಾಜ್ಯವನ್ನು ಶಾಲೆಯಲ್ಲಿ ದೊಡ್ಡ ಚೀಲದಲ್ಲಿ ತುಂಬಿ ಸಂಗ್ರಹಿಲಾಗುತ್ತದೆ. ವಾರಕ್ಕೆ 9ರಿಂದ 10 ಕೆ.ಜಿ ತ್ಯಾಜ್ಯ ಸಂಗ್ರಹವಾಗುತ್ತದೆ. ಇದನ್ನು ವಾರಕೊಮ್ಮೆ ಸ್ಥಳೀಯ ಪಂಚಾಯತ್‌ನ ತ್ಯಾಜ್ಯ ಸಂಗ್ರಹದ ವಾಹನಕ್ಕೆ ನೀಡಲಾಗುತ್ತದೆ. ಇದರಿಂದ ಮನೆಯಲ್ಲಿ ಕಸದ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಮಕ್ಕಳಲ್ಲಿ ಸ್ವಚ್ಛತೆಯ ಅರಿವು ಮೂಡುತ್ತದೆ
ಪರಿಣಾಮ, ಲಾಭಗಳೇನು?
*ಮಕ್ಕಳಿಗೆ ಬಾಲ್ಯದಲ್ಲೇ ಸ್ವಚ್ಛತೆ, ಪರಿಸರ ಸಂರಕ್ಷಣೆಯ ಪಾಠ ದೊರೆಯುತ್ತದೆ.
* ಪ್ಲಾಸ್ಟಿಕ್ ಚೀಲಗಳನ್ನು ಬಳಸದಂತೆ ಎಳವೆಯಲ್ಲೇ ಜಾಗೃತಿ ಮೂಡುತ್ತದೆ.
* ಮನೆಯ ಕಸವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಿದಂತೆ ಆಗುತ್ತದೆ.
* ಜಾನುವಾರು, ಪ್ರಾಣಿಗಳು ವಿಷಯುಕ್ತ ಆಹಾರ ತಿನ್ನುವುದು ಕಡಿಮೆಯಾಗುತ್ತದೆ.
ಬಹುಮಾನವೂ ಇದೆ
ಅತೀ ಹೆಚ್ಚು ತ್ಯಾಜ್ಯವನ್ನು ಮನೆಯಿಂದ ಸಂಗ್ರಹಿಸಿ ತಂದ ಮಕ್ಕಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನೂ ಮುಖ್ಯ ಶಿಕ್ಷಕರು ಘೋಷಿಸಿದ್ದಾರೆ. ತಿಂಗಳ ಕೊನೆಗೆ ದಿನ ಪ್ರಾರ್ಥನೆ ವೇಳೆ ಬಹುಮಾನ ವಿತರಣೆ. ಸಾಬೂನು, ಕೈಕವಚ ಮೊದಲಾದ ಸ್ವಚ್ಛತೆಗೆ ಬಳಸುವ ವಸ್ತುಗಳೇ ಬಹುಮಾನ! ಬಹುಮಾನದ ಆಸೆಗೆ ಮಕ್ಕಳು ಮನೆಯದ್ದು ಮಾತ್ರವಲ್ಲ, ದಾರಿಯಲ್ಲಿ ಬಿದ್ದ ಕಸವನ್ನೂ ಹೆಕ್ಕಿ ತರುತ್ತಾರೆ!
ಒಳ್ಳೆಯ ಸ್ಪಂದನೆ
ನಾನು ಈ ಹಿಂದೆ ಶಿಕ್ಷಕನಾಗಿದ್ದ ಶಾಲೆಯಲ್ಲಿ ಇಂತಹದ್ದೊಂದು ಪ್ರಯತ್ನವನ್ನು ನಡೆಸಿದ್ದೆ. ಈಗ ಇಲ್ಲಿಗೆ ಬಂದು ಅದನ್ನು ಮುಂದುವರಿಸಿ ದ್ದೇನೆ. ಸಹಶಿಕ್ಷಕರು, ಮಕ್ಕಳು, ಪೋಷಕರಿಂದ ಒಳ್ಳೆಯ ಸ್ಪಂದನೆ ದೊರಕಿದೆ. ಇದರಿಂದ ಮನೆ ಹಾಗೂ ಶಾಲಾ ವಾತಾವರಣ ಶುಚಿತ್ವದಿಂದಿರಲು ಸಹಕಾರಿಯಾಗಿದೆ.
*ಚಂದ್ರಶೇಖರ ಭಟ್, ಮುಖ್ಯ ಶಿಕ್ಷಕರು
ಮನೆ ಪರಿಸರ ಸ್ವಚ್ಛ
ನಾವೆಲ್ಲರೂ ಖುಷಿಯಿಂದ, ಉತ್ಸಾಹದಿಂದ ಕಸ ತರುತ್ತೇವೆ. ಇದರಿಂದ ಮನೆ, ಮನೆ ಸುತ್ತಮುತ್ತ ಸ್ವಚ್ಛವಾಗುತ್ತದೆ. ಮನೆಯಲ್ಲಿ ಅಮ್ಮ ಅಪ್ಪ ಕೂಡ ನಮಗೆ ಸಹಕಾರ ಮಾಡುತ್ತಾರೆ.
ಸನ್ವಿತಾ, ವಿದ್ಯಾರ್ಥಿ ನಾಯಕಿ
*ಬಾಲಕೃಷ್ಣ ಭೀಮಗುಳಿ
You seem to have an Ad Blocker on.
To continue reading, please turn it off or whitelist Udayavani.