ಕಾರ್ಕಳ: ಬಸ್ಸು ಹತ್ತುತ್ತಿದ್ದಾಗ ಆಯತಪ್ಪಿ ಬಿದ್ದು ವ್ಯಕ್ತಿ ಸಾವು
Team Udayavani, Dec 5, 2022, 4:08 PM IST
ಕಾರ್ಕಳ: ಬಸ್ಸು ಹತ್ತುತ್ತಿರುವಾಗ ರಸ್ತೆಗೆ ಬಿದ್ದು ಬಸ್ಸಿನ ಹಿಂದಿನ ಚಕ್ರ ಹರಿದು ಗಂಭೀರ ಗಾಯಗೊಂಡು ವ್ಯಕ್ತಿಯೋರ್ವರು ಮೃತ ಪಟ್ಟ ಘಟನೆ ಡಿ.4 ರಾತ್ರಿ ಹಿರ್ಗಾನದಲ್ಲಿ ನಡೆದಿದೆ.
ಕಾರ್ಕಳ ಕಡೆಯಿಂದ ಹೆಬ್ರಿ ಕಡೆಗೆ ತೆರಳುತಿದ್ದ ಖಾಸಗಿ ಬಸ್ಸಿಗೆ ಹಿರ್ಗಾನ ಬಸ್‌ಸ್ಟಾಂಡ್ ಬಳಿ ಕೃಷ್ಣ ನಾಯಕ್ (70) ಎಂಬವರು ಬಸ್ಸು ಹತ್ತುವ ಪ್ರಯತ್ನದಲ್ಲಿದ್ದ ವೇಳೆ ಬಸ್ಸಿನ ನಿರ್ವಾಹಕ ಸೂಚನೆಯಂತೆ ಚಾಲಕ ಬಸ್ಸು ಮುಂದಕ್ಕೆ ಚಲಿಸಿದ್ದಾನೆ. ಈ ವೇಳೆ ಕೃಷ್ಣ ನಾಯಕ್ ಬಸ್ಸಿನ ಬಾಗಿಲಿನಿಂದ ಹಿಡಿತ ತಪ್ಪಿ ಡಾಂಬಾರು ರಸ್ತೆಗೆ ಬಿದ್ದಿದ್ದು, ಬಸ್ಸಿನ ಹಿಂಬದಿ ಚಕ್ರ ಅವರ ಎಡಕಾಲಿನ ಮೇಲೆ ಹರಿದಿದೆ.
ಎಡಕಾಲಿಗೆ ತೀವ್ರ ಸ್ವರೂಪ ಗಾಯವಾಗಿದ್ದು, ಸ್ಥಳಿಯರಾದ ಶಶಿಕಾಂತ್ ನಾಯಕ್ ಮತ್ತು ಶಿವಾನಂದರ ಎಂಬುವವರು ಗಾಯಾಳುವನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಪರೀಕ್ಷಿಸಿದಾಗ ಗಾಯಾಳು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.