ಕಾರ್ಕಳ ಸಾರ್ವಜನಿಕ ತಾ| ಆಸ್ಪತ್ರೆ ಉದ್ಘಾಟನೆಗೆ ಸಜ್ಜು
Team Udayavani, Feb 13, 2019, 1:00 AM IST
ಕಾರ್ಕಳ: ಸುಸಜ್ಜಿತ ಕಟ್ಟಡ, ಸ್ವತ್ಛ ಆವರಣ, ಆಧುನಿಕ ಸೌಲಭ್ಯಗಳೊಂದಿಗೆ ಕಾರ್ಕಳದಲ್ಲಿ ಸಾರ್ವಜನಿಕ ತಾಲೂಕು ಆಸ್ಪತ್ರೆ ಸಿದ್ಧಗೊಂಡಿದ್ದು, ಲೋಕಾರ್ಪಣೆಗೆ ಕ್ಷಣಗಣನೆಯಲ್ಲಿದೆ. ಈ ಮೂಲಕ ತಾಲೂಕಿನ ಜನತೆಯ ಆರೋಗ್ಯ ಸುಧಾರಣೆಯಲ್ಲಿ ಆಸ್ಪತ್ರೆ ಮಹತ್ವದ ಪಾತ್ರ ನಿರ್ವಹಿಸಲಿದೆ. ಎಲ್ಲ ಪರಿಕರ ಗಳು ಅಳವಡಿಸಿದ ತತ್‌ಕ್ಷಣವೇ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸುವ ಇರಾದೆಯಲ್ಲಿರುವ ಶಾಸಕರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ಸುಂದರ ಬೃಹತ್ ಕಟ್ಟಡ
2017ರ ಫೆಬ್ರವರಿಯಲ್ಲಿ ನೂತನ ಆಸ್ಪತ್ರೆ ಕಟ್ಟಡಕ್ಕೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಶಿಲಾನ್ಯಾಸ ನೆರವೇರಿಸಿದ್ದರು. ಎರಡು ವರ್ಷಗಳಲ್ಲೆ ಆಸ್ಪತ್ರೆ ಗುತ್ತಿಗೆ ಪಡೆದ ಸ್ಟಾರ್ ಬಿಲ್ಡರ್ ಆ್ಯಂಡ್ ಡೆವಲಪರ್ ಬೆಂಗಳೂರು ಕಂಪೆನಿಯು ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಿದೆ.
8.7 ಕೋಟಿ ರೂ. ವೆಚ್ಚದಲ್ಲಿ 3,294 ಚದರಡಿ ವಿಸ್ತೀರ್ಣದೊಂದಿಗೆ 100 ಬೆಡ್ ಸಾಮರ್ಥ್ಯವಿರುವ ಒಂದು ಅಂತಸ್ತಿನ ಕಟ್ಟಡ ತಲೆ ಎತ್ತಿ ನಿಂತಿದೆ. ನಬಾರ್ಡ್ ಯೋಜನೆಯಿಂದ 6 ಕೋಟಿ ರೂ., ಕೆಎಲ್‌ಎಡಿಎಸ್‌ನಿಂದ 2.7 ಕೋಟಿ ರೂ. ಅನುದಾನ ಕಟ್ಟಡ ಕಾಮಗಾರಿಗೆ ದೊರೆತಿದೆ. ಕಾಮಗಾರಿಯ ಕೊನೆಯ ಹಂತವಾದ ಪೇಂಟಿಂಗ್, ವಿದ್ಯುತ್ ಪರಿಕರ ಜೋಡಣೆ, ಕಾಂಪೌಂಡ್ ರಚನೆ ಕಾರ್ಯವೂ ಈಗಾಗಲೇ ಮುಗಿದಿದೆ.
ಏನಿದೆ ವಿಶೇಷತೆ ?
ಸಿ.ಆರ್.ಎಂ., ಡಯಾಲಿಸಿಸ್ ಘಟಕ, ಆಧುನಿಕ ರೀತಿಯ ಐಸಿಯು, ಎಕ್ಸ್‌ರೇ, ಮೇಜರ್ ಒಟಿ, ಐಒಟಿ, ಎಸ್‌ಎನ್‌ಸಿಯು ಘಟಕ, ಆಯುಷ್ ವಿಂಗ್, ಹೊಸ ಆಸ್ಪತ್ರೆ ಕಟ್ಟಡದೊಂದಿಗೆ ಎಲುಬು ಮತ್ತು ಕೀಲು ಚಿಕಿತ್ಸೆ ಸಂದರ್ಭ ಬಳಸುವ ಸಿಆರ್‌ಎಂ ಯಂತ್ರ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಿಗಾಗಿ ಡಯಾಲಿಸಿಸ್ ಘಟಕ, ಆಧುನಿಕ ರೀತಿಯ ಐಸಿಯು ಘಟಕ, ಮೇಜರ್ ಆಪರೇಷನ್ ಥಿಯೇಟರ್, ಕಣ್ಣು ಆಪರೇಷನ್ ಥಿಯೇಟರ್ (ಐಒಟಿ), ನವಜಾತ ಶಿಶುಗಳ ತುರ್ತು ಚಿಕಿತ್ಸೆಗಾಗಿ ಎಸ್‌ಎನ್‌ಸಿಯು ಪಾಲನಾ ಕೇಂದ್ರ ಸ್ಥಾಪನೆಯಾಗುತ್ತಿದೆ. ಆಯುರ್ವೇದೀಯ ಔಷಧಿ ನೀಡುವ ನಿಟ್ಟಿನಲ್ಲಿ ಆಯುಷ್ ವಿಂಗ್ ತೆರೆಯಲಾಗುತ್ತಿದೆ.
63.5 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನಾ ಜನರೇಟರ್ ಕೂಡ ಅಳವಡಿಸಲಾಗುತ್ತಿದ್ದು, ವಿದ್ಯುತ್ ಸಮಸ್ಯೆ ತಲೆದೋರದಂತೆ ಮಾಡಲಾಗಿದೆ. ಉಳಿದಂತೆ ಕ್ಯಾಂಟೀನ್, ಫೂÅಟ್ಸ್ ಸ್ಟಾಲ್, ಮಿಲ್ಕ್ ಬೂತ್ ಕೇಂದ್ರ ನಿರ್ಮಾಣಗೊಂಡಿದೆ. ವಾಹನ ಪಾರ್ಕಿಂಗ್ ಗಾಗಿ ವಿಶಾಲವಾದ ಜಾಗಕ್ಕೆ ಇಂಟರ್‌ಲಾಕ್ ಅಳವಡಿಸಲಾಗಿದೆ.
ಕೊರತೆ
ಬಹುತೇಕ ಎಲ್ಲ ವಿಭಾಗದ ತಜ್ಞ ವೈದ್ಯರುಗಳು ಆಸ್ಪತ್ರೆಯಲ್ಲಿದ್ದಾಗ್ಯೂ ಫಿಸಿಶಿಯನ್ (ವೈದ್ಯಕೀಯ ತಜ್ಞ), ರೇಡಿಯಾಲಜಿಸ್ಟ್ ಪರಿಣತ ವೈದ್ಯರು ಇಲ್ಲಿಲ್ಲ. ಹೊಸ ಆಸ್ಪತ್ರೆ ಉದ್ಘಾಟನೆ ವೇಳೆ ಈ ಹುದ್ದೆಯನ್ನು ಸರಕಾರ ಭರ್ತಿ ಮಾಡಬೇಕಾಗಿದೆ.
ಸದ್ಬಳಕೆಯಾಗಲಿ
ಬಡ ಹಾಗೂ ಮಧ್ಯಮ ವರ್ಗದ ಜನತೆಯ ಆರೋಗ್ಯ ಸೇವೆಯನ್ನೇ ಪ್ರಮುಖ ಧ್ಯೇಯವಾಗಿ ಟ್ಟುಕೊಂಡು ನಿರ್ಮಾಣವಾಗುತ್ತಿರುವ ಈ ಆಸ್ಪತ್ರೆಯಲ್ಲಿ ವೈದ್ಯರ ಸೇವೆ ನಿರಂತರವಾಗಿ ದೊರೆಯಲಿ, ಸಾರ್ವಜನಿಕರು ಆಸ್ಪತ್ರೆಯನ್ನು ಸದ್ಬಳಕೆ ಮಾಡಿಕೊಳ್ಳುವಂತಾಗಲಿ.
ಸ್ಪೆಷಲ್ ರೂಮ್ಸ್
ಖಾಸಗಿ ಆಸ್ಪತ್ರೆಯ ಮಾದರಿಯಲ್ಲಿಯೇ 4 ಸಿಂಗಲ್ ಸ್ಪೆಷಲ್ ರೂಂ, 3 ಡಬ್ಬಲ್ ಸ್ಪೆಷಲ್ ರೂಂ, 6 ಬೆಡ್‌ನ 9 ಮಹಿಳಾ ಹಾಗೂ ಪುರುಷರ ವಾರ್ಡ್ ಸೇರಿದಂತೆ 10 ಬೆಡ್ ಸಾಮರ್ಥ್ಯ ಹೊಂದಿರುವ ವಿಶಾಲವಾದ ವಾರ್ಡ್ ಒಳಗೊಂಡಿದೆ.
ಹಳೆಯ ಆ್ಯಂಬುಲೆನ್ಸ್
ಆಸ್ಪತ್ರೆಗೆ ಅಗತ್ಯವಾಗಿ ಬೇಕಾಗಿರುವ ಆ್ಯಂಬುಲೆನ್ಸ್ ಸೇವೆ ಸದ್ಯ ಸಮರ್ಪಕವಾಗಿ ದೊರೆಯುತ್ತಿಲ್ಲ. ಇರುವ ಆ್ಯಂಬುಲನ್ಸ್ ವಾಹನ 11 ವರ್ಷಗಳ ಹಳೆಯದಾದ ಕಾರಣ ಪದೇ ಪದೇ ಕೆಡುತ್ತಿದೆ ಎನ್ನಲಾಗುತ್ತಿದೆ.
ಕನಸಿನ ಕೂಸು
ನೂತನ ಸಾರ್ವಜನಿಕ ಆಸ್ಪತ್ರೆ ನನ್ನ ಕನಸಿನ ಕೂಸು. ಹೀಗಾಗಿ ಪ್ರತಿ ತಿಂಗಳು ಒಂದೆರಡು ಬಾರಿ ಆಸ್ಪತ್ರೆಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸುತ್ತಿದ್ದೇನೆ. ಆಸ್ಪತ್ರೆಗೆ ಬೇಕಾದ ಎಲ್ಲ ಯಂತ್ರೋಪಕರಣ ಅಳವಡಿಸಿದ ಬಳಿಕ, ಸಕಲ ಸೌಕರ್ಯದೊಂದಿಗೆ ಲೋಕಾರ್ಪಣೆ ಮಾಡಲಾಗುವುದು. ಅನಂತರ ಆಸ್ಪತ್ರೆಗೆ ಬಂದ ರೋಗಿಗಳಿಗೆ ಯಾವುದೇ ರೀತಿಯ ಕೊರತೆ ಎದುರಾಗಬಾರದು.
- ವಿ. ಸುನಿಲ್ ಕುಮಾರ್, ಶಾಸಕರು, ಕಾರ್ಕಳ
– ರಾಮಚಂದ್ರ ಬರೆಪ್ಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.