ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಆಂ.ಮಾ. ವಿಭಾಗಕ್ಕೆ ಉತ್ತಮ ಪ್ರತಿಕ್ರಿಯೆ
Team Udayavani, May 27, 2019, 11:56 AM IST
ಅಜೆಕಾರು: ರಾಜ್ಯ ಸರಕಾರವು ಕಳೆದ ಬಜೆಟ್‌ನಲ್ಲಿ ರಾಜ್ಯಾದಾಧ್ಯಂತ 1,000 ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭ ಮಾಡುವ ಬಗ್ಗೆ ಘೋಷಿಸಿತ್ತು.
ಈ ಯೋಜನೆಗೆ ಕಾರ್ಕಳ ತಾಲೂಕಿನಿಂದ ಮುನಿಯಾಲು ಸರಕಾರಿ ಪ್ರಾಥಮಿಕ ಶಾಲೆಯು ಆಯ್ಕೆಗೊಂಡಿತ್ತು. ಇದೀಗ ಮುನಿಯಾಲುವಿನ ಸರಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ವಿಭಾಗ ಸೇರಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತನೆಗೊಂಡಿದೆ.
ಮುನಿಯಾಲು ಸರಕಾರಿ ಶಾಲೆಯಲ್ಲಿ ಪ್ರಾರಂಭಗೊಂಡಿರುವ ಎಲ್‌ಕೆಜಿ, ಯುಕೆಜಿ, ಒಂದನೇ ತರಗತಿಗೆ ಸ್ಥಳೀಯ ನಾಗರಿಕರು ಉತ್ಸಾಹದಿಂದಲೇ ಮಕ್ಕಳನ್ನು ದಾಖಲು ಮಾಡುತ್ತಿದ್ದು, ದಾಖಲೆಯ ಪ್ರಮಾಣದಲ್ಲಿ ದಾಖಲಾತಿ ಆಗುತ್ತಿದೆ.
ಸರಕಾರ ಎಲ್‌ಕೆಜಿ, ಯುಕೆಜಿ, ಒಂದನೇ ತರಗತಿಗೆ ತಲಾ ಮೂವತ್ತು ವಿದ್ಯಾರ್ಥಿಗಳನ್ನು ನಿಗದಿಪಡಿಸಿದ್ದು ಮುನಿಯಾಲು ಶಾಲೆಯಲ್ಲಿ ಈಗಾಗಲೇ ಈ ಪ್ರಮಾಣದಲ್ಲಿ ವಿದ್ಯಾರ್ಥಿಗಳ ದಾಖಲಾತಿ ನಡೆದಿದೆ.
ಶಿಕ್ಷಕರ ನೇಮಕ
ಆಂಗ್ಲ ಮಾಧ್ಯಮ ವಿಭಾಗಕ್ಕೆ ಈಗಾಗಲೇ ತರಬೇತಿ ಹೊಂದಿದ ಮೂವರು ಶಿಕ್ಷಕರ ಆಯ್ಕೆ ಪ್ರಕ್ರಿಯೆ ಅಚಿತಿಮ ಹಂತದಲ್ಲಿದ್ದು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಸಮಿತಿಯು ಸರಕಾರದ ನಿಯಮಾನುಸಾರ ಆಯ್ಕೆ ಮಾಡಲಿದೆ.
ಈಗಾಗಲೇ ಶಾಲೆಯಲ್ಲಿ 8 ಶಿಕ್ಷಕರಿದ್ದು, 1ರಿಂದ 7 ನೇ ತರಗತಿಯವರೆಗೆ ಕನ್ನಡ ಮಾಧ್ಯಮ ಮತ್ತು 6, 7ನೇ ತರಗತಿಯ ಆಂಗ್ಲ ಮಾಧ್ಯಮ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ ಆಂಗ್ಲ ಮಾಧ್ಯಮದ ಮೂರು ಹೆಚ್ಚುವರಿ ತರಗತಿಗಳು ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಮೂವರು ಶಿಕ್ಷಕರ ನೇಮಕಾತಿ ಗುತ್ತಿಗೆ ಆಧಾರದಲ್ಲಿ ನಡೆಯುತ್ತಿದೆ.
ದಾಖಲೆಯ ವಿದ್ಯಾರ್ಥಿಗಳು
ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದ್ದರು ಮುನಿಯಾಲು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ 240 ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದು, ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಇದೆ.
ವಿಶಾಲ ತರಗತಿ ಕೊಠಡಿಗಳು
ಶಾಲೆಯು ವಿಶಾಲವಾದ ತರಗತಿ ಕೊಠಡಿಗಳನ್ನು ಹೊಂದಿದ್ದು ಆಂಗ್ಲ ಮಾಧ್ಯಮ ಪ್ರಾರಂಭ ಮಾಡುವುದರಿಂದ ತರಗತಿ ಕೊಠಡಿಗಳ ಯಾವುದೇ ಸಮಸ್ಯೆ ಮುನಿಯಾಲು ಶಾಲೆಗೆ ಇಲ್ಲ. ಪ್ರತಿ ತರಗತಿಯಲ್ಲೂ 50ರಿಂದ 60 ಮಕ್ಕಳು ವಿದ್ಯಾಭ್ಯಾಸ ನಡೆಸಲು ಸಾಧ್ಯವಾಗುವಂತಿರುವ ಕೊಠಡಿಗಳನ್ನು ಒಳಗೊಂಡಿದೆ. ಈಗಾಗಲೇ ಸಮಿತಿ ಹಾಗೂ ಶಿಕ್ಷಕ ವೃಂದದವರು ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸಲು ಸೂಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪೂರ್ವ ತಯಾರಿಯನ್ನು ನಡೆಸಿದೆ. ಇದಕ್ಕೆ ಸ್ಥಳೀಯ ನಾಗರಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸೂಕ್ತ ಕ್ರಮ
ಮುನಿಯಾಲುವಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಾಥಮಿಕ ವಿಭಾಗದಲ್ಲಿ ಎಲ್‌ಕೆಜಿ, ಯುಕೆಜಿ ಸಹಿತ ಆಂಗ್ಲ ಮಾಧ್ಯಮ ವಿಭಾಗ ಪ್ರಾರಂಭಿಸಲು ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಕೆಲ ದಿನಗಳಲ್ಲಿಯೇ ಶಾಲೆ ಸಮಿತಿ ಸಭೆ ಕರೆದು ಸಮಿತಿಯ ನಿರ್ಣಯದಂತೆ ಮುಂದೆ ಸೂಕ್ತ ರೀತಿಯಲ್ಲಿ ಆಂಗ್ಲ ಮಾಧ್ಯಮ ವಿಭಾಗ ಪ್ರಾರಂಭ ಗೊಳ್ಳಲಿದೆ.
-ಬೇಬಿ ಶೆಟ್ಟಿ, ಪ್ರಾಂಶುಪಾಲರು, ಕರ್ನಾಟಕ ಪಬ್ಲಿಕ್ ಸ್ಕೂಲ್ ಮುನಿಯಾಲು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.