ಗುಂಡಿ ಮುಚ್ಚಿ ಸುರಕ್ಷತೆ ಕಲ್ಪಿಸುವಂತೆ ಜನಾಗ್ರಹ
ಕಟಪಾಡಿ : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಾಯ್ದೆರೆದಿದೆ ಮೃತ್ಯುಕೂಪ !
Team Udayavani, Oct 29, 2019, 5:14 AM IST
ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ತೇಕಲ್‌ತೋಟ ಪ್ರದೇಶದಲ್ಲಿ ಪ್ರಾಣಾಂತಿಕವಾಗಿ ಬಾಯ್ದೆರೆದಿರುವ ಗುಂಡಿಯನ್ನು ಮುಚ್ಚಿ ವಾಹನ ಮತ್ತು ಜನರ ಸಂಚಾರಕ್ಕೆ ಸುರಕ್ಷತೆಯನ್ನು ಕಲ್ಪಿಸುವಂತೆ ಪ್ರಜ್ಞಾವಂತ ನಾಗರಿಕರು, ನಿತ್ಯ ಸಂಚಾರಿಗಳು, ವಾಹನ ಸವಾರರು ಆಗ್ರಹಿಸಿದ್ದಾರೆ.
ಕಟಪಾಡಿಯ ಹಳೆ ಎಂಬಿಸಿ ರಸ್ತೆಯಿಂದ ಸಂಧಿಸುವ ಸ್ಥಳ ಮತ್ತು ಇಳಿಜಾರಿನಿಂದ ಕೂಡಿದ ಜಂಕ್ಷನ್ ಪ್ರದೇಶ ಇದಾಗಿದೆ. ಇಲ್ಲಿ ವಾಹಗಳು ತುಸು ಹೆಚ್ಚು ವೇಗದಲ್ಲಿ ಆಗುವ ಧಾವಂತದಲ್ಲಿ ಕೂಡಲೇ ಈ ಗುಂಡಿಯು ಚಾಲಕನ ಗಮನಕ್ಕೆ ಬಾರದೇ ಅಪಘಾತ ಸಂಭವಿಸುವ ಪ್ರಮೇಯವೇ ಹೆಚ್ಚಿದೆ. ಕಾಪು ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಸಂಚಾರಿಗಳನ್ನು ಎಚ್ಚರಿಸುವ ಪ್ರಯತ್ನ ನಡೆಸಿದ್ದಾರೆ. ಅರೆಬರೆಯಾಗಿ ಗುಂಡಿ ಮುಚ್ಚಲು ತುಂಬಿಸಿದ ಕಲ್ಲು, ಜಲ್ಲಿಗಳೂ ಮೇಲೆದ್ದು ಮತ್ತಷ್ಟು ಅಪಾಯಕಾರಿಯಾಗಿ ಕಂಡು ಬರುತ್ತಿದೆ.
ಅ.25ರಂದು ಇಲ್ಲಿ ನರ್ಸಿಂಗ್ ಕಾಲೇಜ್ ಬಸ್ಸೊಂದು ಗುಂಡಿಗೆ ಬಿದ್ದು ಚಾಲಕನ ನಿಯಂತ್ರಣ ಕಳೆದುಕೊಂಡು ಡಿವೈಡರ್ ಮೇಲೇರಿದ್ದು ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಇಲ್ಲಿ ಸಂಚರಿಸುವ ಹೆಚ್ಚಿನ ವಾಹನಗಳ ಟಯರ್ ಪಂಕ್ಚರ್ ಆಗಿ ನಿತ್ಯ ಹಿಡಿಶಾಪವನ್ನು ಹಾಕುತ್ತಾ ಸಾಗುತ್ತಿದ್ದಾರೆ. ಇಲ್ಲಿ ರಸ್ತೆ ದಾಟುವವರಂತೂ ಯಾವುದೇ ಸಂದರ್ಭದಲ್ಲಿ ವಾಹನವು ಗುಂಡಿಗೆ ಬಿದ್ದು ಮೈ ಮೇಲೆರಗಬಹುದೆಂಬ ಭಯದಿಂದಲೇ ಬಹು ಎಚ್ಚರಿಕೆಯಿಂದ ಸಾಗುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸುತ್ತಿದ್ದಾರೆ.
ಈ ಗುಂಡಿಯು ಮೃತ್ಯುಕೂಪವಾಗಿ ಪರಿಣಮಿಸ ಬಲ್ಲುದು ಎಂಬ ಜನಪರ ಕಾಳಜಿಯ ವರದಿಯನ್ನು ಉದಯವಾಣಿಯು (ಅ.12, ಅ.23)ವರದಿಯನ್ನು ಪ್ರಕಟಿಸಿತ್ತು. ಆದರೂ ಸಂಬಂಧಪಟ್ಟ ಇಲಾಖೆಯು ಬಾಯ್ದೆರೆದಿದ್ದ ಗುಂಡಿಗೆ ಸಮರ್ಪಕವಾಗಿ ಮೋಕ್ಷವನ್ನು ನೀಡಿಲ್ಲದ ಬಗ್ಗೆ ನಿತ್ಯ ಸಂಚಾರಿಗಳು ತಮ್ಮ ಅಸಹನೆಯನ್ನೂ ವ್ಯಕ್ತಪಡಿಸಿದ್ದು, ಅ.25ರ ಬಸ್ಸಿನ ಅವಘಡದ ಸಂದರ್ಭ ಹೆಚ್ಚು ಆಕ್ರೋಶವನ್ನು ಹೊರಗೆಡಹಿದ್ದರು. ಎಚ್ಚೆತ್ತುಕೊಳ್ಳದ ಇಲಾಖೆಯ ಬೇಜವಾಬ್ದಾರಿಯ ಬಗ್ಗೆ ಬಹಳಷ್ಟು ಆಕ್ರೋಶವನ್ನು ವ್ಯಕ್ತ ಪಡಿಸಿದ್ದರು.
ಪ್ರಮುಖ ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಮಳೆ ಗಾಳಿ ಎನ್ನದೇ ಸಮರೋಪಾದಿಯಲ್ಲಿ ಸಮರ್ಪಕ ನಿರ್ವಹಣೆಯನ್ನು ಮಾಡಬೇಕಾದ ಇಲಾಖೆಯು ಇನ್ನಷ್ಟು ಹೆಚ್ಚಿನ ಅಪಾಯ ಸಂಭವಿಸುವ ಮುನ್ನವೇ ಎಚ್ಚೆತ್ತು ತಮ್ಮ ಜವಾಬ್ದಾರಿಯನ್ನು ಅರಿತು ಸಂಚಾರಕ್ಕೆ ಸುರಕ್ಷತೆಯನ್ನು ಕಲ್ಪಿಸಬೇಕು. ಸಂಬಂಧಪಟ್ಟ ಇಲಾಖೆಯು ಬಾಯ್ದೆರೆದಿದ್ದ ಗುಂಡಿಯು ಪ್ರಾಣಾಂತಿಕ ಗುಂಡಿಯಾಗುವ ಮುನ್ನವೇ ಎಚ್ಚೆತ್ತು ಸಮರ್ಪಕ ಕ್ರಮತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ನವಯುಗ ಕಂಪೆನಿಯಿಂದ ಆಗಮಿಸಿದ್ದವರು ಸೋಮವಾರ ಸ್ಥಳ ಪರಿಶೀಲನೆಯನ್ನು ನಡೆಸಿರುತ್ತಾರೆ.
ಬೇಜವಾಬ್ದಾರಿ
ಹೆದ್ದಾರಿಯಲ್ಲಿ ಇಂತಹ ದುಃಸ್ಥಿತಿ ಇದು ನಮ್ಮ ದೌರ್ಭಾಗ್ಯ. ಎರಡೆರಡು ಬಾರಿ ಉದಯವಾಣಿ ಪತ್ರಿಕೆ ವರದಿಯ ಮೂಲಕ ಎಚ್ಚರಿಸಿದರೂ ಎಚ್ಚೆತ್ತುಕೊಳ್ಳದ ಇಲಾಖೆಯ ಬೇಜವಾಬ್ದಾರಿ ಎದ್ದು ಕಾಣುತ್ತಿದೆ .
-ಕಟಪಾಡಿ ಶಂಕರ ಪೂಜಾರಿ,
ಉಡುಪಿ ಜಿ.ಪಂ. ಮಾಜಿ ಅಧ್ಯಕ್ಷ
ಸುರಕ್ಷತೆ ಕೈಗೊಳ್ಳಲಾಗಿದೆ
ಸ್ಥಳವನ್ನು ಪರಿಶೀಲಿಸಲಾಗಿದೆ ಇಲ್ಲಿನ ಗುಂಡಿ ಸಹಿತ ಹೆದ್ದಾರಿಯ ಸಮರ್ಪಕ ನಿರ್ವಹಣೆಯನ್ನು ಶೀಘ್ರವೇ ಪ್ರಾರಂಭಿಸಲಾಗುತ್ತದೆ. ಮಳೆಯಿಂದಾಗಿ ಸ್ವಲ್ಪ ತೊಡಕುಂಟಾಗಿತ್ತು. ಈ ಭಾಗದಲ್ಲಿ ಕಂಡು ಬರುವ ಎಲ್ಲಾ ಹೊಂಡ, ಗುಂಡಿಗಳನ್ನು ಮುಚ್ಚುವ, ಸಮರ್ಪಕವಾಗಿ ನಿರ್ವಹಣೆಯ ಕಾಮಗಾರಿಯನ್ನು ಪೂರೈಸಿ ಸುರಕ್ಷತೆಯನ್ನು ಕೈಗೊಳ್ಳಲಾಗುತ್ತದೆ.
– ಶಿವಪ್ರಸಾದ್ ರೈ,
ನವಯುಗ ಕಂಪೆನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.