ಕಾಪು ಬೀಚ್‌ನಲ್ಲಿ ಸ್ಕೂಬಾ ಡೈವಿಂಗ್‌ಗೆ ಚಾಲನೆ
Team Udayavani, Nov 13, 2017, 2:08 PM IST
ಕಾಪು: ಸಮುದ್ರದಾಳದಲ್ಲಿನ ಜೀವವೈವಿಧ್ಯ ಹಾಗೂ ಸೌಂದರ್ಯ ವೀಕ್ಷಿಸುವ ನಿಟ್ಟಿನಲ್ಲಿ ಪ್ರಾರಂಭಿಸಲಾದ ಸ್ಕೂಬಾ ಡೈವಿಂಗ್ ಜಲ ಸಾಹಸ ಕ್ರೀಡೆಗೆ ಕಾಪು ಸಮುದ್ರ ತೀರದಲ್ಲಿ ಚಾಲನೆ ರವಿವಾರ ನೀಡಲಾಗಿದೆ.
ಉಡುಪಿ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಸಾಹಸಪ್ರಿಯರಿಗೆ, ಪ್ರವಾಸಿಗಳಿಗೆ ಸ್ಕೂಬಾ ಡೈವಿಂಗ್‌ಗೆ ಅವಕಾಶ ಒದಗಿಸಲಾಗುತ್ತಿದೆ.
ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಅವರು, ಕಾಪು ಕಡಲ ತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದವರು ಹೇಳಿದರು.
ಸ್ಕೂಬಾ ಡೈವಿಂಗ್ ಆಕರ್ಷಣೆಯ ಕೇಂದ್ರವಾಗಲಿದ್ದು ವಿದೇಶಿ ಪ್ರವಾಸಿಗ ರನ್ನು ಆಕರ್ಷಿಸುವ ದೃಷ್ಟಿಯಿಂದಲೂ ವಿವಿಧ ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು.
ರಾಜ್ಯದ 2ನೇ ಸ್ಕೂಬಾ ಡೈವಿಂಗ್ ಕೇಂದ್ರ ಕಾರವಾರದ ನೇತ್ರಾಣಿ ದ್ವೀಪ ಹೊರತು ಪಡಿಸಿ ಇದೀಗ ಕಾಪುವಿನಲ್ಲಿ ಸ್ಕೂಬಾ ಡೈವಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ.
ಇದರಿಂದ ಪ್ರವಾಸಿಗರು ಸಮುದ್ರದಾಳದಲ್ಲಿರುವ ಹವಳದ ದಿಬ್ಬಗಳು, ಆಕರ್ಷಕಮೀನುಗಳು ಹಾಗೂ ವೈವಿಧ್ಯಮಯ ಜೀವರಾಶಿಯನ್ನು ವೀಕ್ಷಿಸಬಹುದು. ಸ್ಕೂಬಾ ಡೈವಿಂಗ್ ನಡೆಸಲು ವೆಸ್ಟ್ ಕೋ ಅಡ್ವೆಂಚರ್ ಕಂಪೆನಿ ಗುತ್ತಿಗೆ ಪಡೆದಿದ್ದು, ಈ ಕಂಪೆನಿ ಗೋವಾ, ಮುಂಬಯಿ ಮತ್ತು ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ನಡೆಸುತ್ತಿದೆ.
10 ವರ್ಷ ಮೇಲ್ಪಟ್ಟವರಿಗೆ ಅವಕಾಶ 10 ವರ್ಷ ಮೇಲ್ಪಟ್ಟ ಎಲ್ಲರೂ ಸ್ಕೂಬಾ ಡೈವಿಂಗ್ ನಡೆಸಬಹುದಾಗಿದ್ದು, ನುರಿತ ತರಬೇತುದಾರರು ಲಭ್ಯವಿದ್ದಾರೆ. ಡೈವಿಂಗ್ ಮಾಡಲು ಅಗತ್ಯವಿರುವ 35 ಲಕ್ಷ ರೂ. ವೆಚ್ಚದ ಜೀವ ರಕ್ಷಕ ಉಪಕರಣ ಗಳು ಲಭ್ಯವಿದ್ದು, ಪ್ರಾರಂಭಿಕ ಶುಲ್ಕವಾಗಿ ಒಬ್ಬರಿಗೆ 3,500 ರೂ. ನಿಗಡಿಪಡಿಸಲಾಗಿದೆ.
ಕಾರವಾರದ ನೇತ್ರಾಣಿ ದ್ವೀಪದಲ್ಲಿ 6,000 ರೂ. ದರವಿದ್ದು, ಮುಂಗಡ ಬುಕ್ಕಿಂಗ್‌ಗೆ ಮೊಬೈಲ್ ಸಂಖ್ಯೆ: 7057066669 ಸಂಪರ್ಕಿಸಬಹುದು ಎಂದು ವೆಸ್ಟ್ ಕೋ ಅಡ್ವೆಂಚರ್‌ನ ವ್ಯವಸ್ಥಾಪಕ ಪವನ್ ಶೌರಿ ಅವರು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಕಾಪು ಪುರಸಭೆಯ ಅಧ್ಯಕ್ಷೆ ಸೌಮ್ಯಾ ಎಸ್., ಮುಖ್ಯಾಧಿಕಾರಿ ರಾಯಪ್ಪ, ಕಾಪು ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಯತೀಶ್ ಬೈಕಂಪಾಡಿ, ಮನೋಹರ್ ಶೆಟ್ಟಿ, ಗೌರವ ಶೇಣವ, ನಾಗೇಶ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಬಿ.ಆರ್. ಅವರು ಸ್ವಾಗತಿಸಿ, ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.