ತಾಂತ್ರಿಕ ವಿಂಗಡನೆಯಿಂದ 1.5 ಲಕ್ಷ ಒಟಿಸಿ ಬಾಕಿ
Team Udayavani, Feb 16, 2019, 12:30 AM IST
ಮಣಿಪಾಲ: ಉಡುಪಿ ತಾಲೂಕಿನ ಹೋಬಳಿಯಾಗಿದ್ದ ಕಾಪುವನ್ನು ಪ್ರತ್ಯೇಕ ತಾಲೂಕಾಗಿ ಪರಿವರ್ತಿಸಿದ್ದು ಹಂತ ಹಂತವಾಗಿ ಕಂದಾಯ ಇಲಾಖೆ ವ್ಯಾಪ್ತಿಯ ಸೇವೆಗಳು ಅನುಷ್ಠಾನವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಿಸುವ ತಂತ್ರಜ್ಞಾನವನ್ನು ಉಡುಪಿ ತಾಲೂಕಿನಿಂದ ಬೇರ್ಪಡಿಸಿ, ಕಾಪು ತಾಲೂಕಿಗೆ ಪ್ರತ್ಯೇಕವಾಗಿ ಸೃಜಿಸಿದ್ದು, ಒಟಿಸಿ ಮೂಲಕ ಫೀಲ್ಡ್ ಎನ್‌ಕ್ವಾಯರಿ, ಡಾಟಾ ಎಂಟ್ರಿ ಆಗಿ ಮುದ್ರಣಕ್ಕೆ ಸಿದ್ಧವಿರುವ ಸುಮಾರು 1.5 ಲಕ್ಷ ಜಾತಿ-ಆದಾಯ ಪ್ರಮಾಣ ಪತ್ರಗಳು ಬಾಕಿಯಾಗಿವೆ. ಇದರಿಂದಾಗಿ ಜನರು ಅಟಲ್‌ಜೀ ಕೇಂದ್ರಗಳಲ್ಲಿ ಮತ್ತು ಬಾಪೂಜಿ ಕೇಂದ್ರಗಳಲ್ಲಿ ನಿಮಿಷದೊಳಗೆ ಸಿಗುತ್ತಿದ್ದ ಪ್ರಮಾಣಪತ್ರಗಳನ್ನು ಪಡೆಯುವುದು ವಿಳಂಬವಾಗುತ್ತಿದೆ. ಜತೆಗೆ ಈ ಕೇಂದ್ರಗಳಲ್ಲಿ ಹೊಸ ಅರ್ಜಿಗಳನ್ನು ಸ್ವೀಕರಿಸುವ ಪ್ರಕ್ರಿಯೆಯೂ ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಿದೆ.
ಕಾಪು ತಾಲೂಕು ರಚನೆಯಾಗಿ ವರ್ಷವೇ ಕಳೆದಿದ್ದರೂ, ಉಡುಪಿ ತಹಶೀಲ್ದಾರರೇ ಕಾಪು ತಾಲೂಕಿನ ಜನನ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಸಹಿ ಹಾಕುವ ಅಧಿಕಾರವನ್ನು ಹೊಂದಿದ್ದರು. ಒಂದು ವಾರದ ಹಿಂದೆ ತಾಂತ್ರಿಕವಾಗಿ ಕಾಪು ತಾಲೂಕನ್ನು ಉಡುಪಿಯಿಂದ ಪ್ರತ್ಯೇಕಿಸಲಾಗಿದ್ದು, ಕಾಪು ತಹಶೀಲ್ದಾರರು ಹಾಗೂ ಉಪ ತಹಶೀಲ್ದಾರರು ಡಿಜಿಟಲ್ ಸಹಿ ಮಾಡಿ ಪ್ರತಿ ಒಟಿಸಿ ಪ್ರಮಾಣಪತ್ರಗಳನ್ನು ಆನ್‌ಲೈನ್‌ನಲ್ಲಿ ಮಾನ್ಯ ಮಾಡಬೇಕಿದೆ. ಈ ಪ್ರಕ್ರಿಯೆಗೆ ಇನ್ನಷ್ಟು ಸಮಯ ತೆಗೆದುಕೊಳ್ಳಬಹುದು.
ಪ್ರಕ್ರಿಯೆ ಹೇಗೆ?
ಈ ವರೆಗೆ ಉಡುಪಿ ತಾಲೂಕಿನ ಲಾಗಿನ್‌ನಲ್ಲಿದ್ದ ಕಾಪು ಹೋಬಳಿಯ ಒಟಿಸಿ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಕಾಪು ತಾಲೂಕಿಗೆ ವರ್ಗಾಯಿಸಲಾಗಿದೆ. ಇವುಗಳಿಗೆ ಹಿಂದಿದ್ದ ಉಡುಪಿ ತಹಶೀಲುದಾರರ ಡಿಜಿಟಲ್ ಸಹಿಯನ್ನು ಬದಲಿಸಿ ಕಾಪು ತಹಶೀಲುದಾರರು ಹಾಗೂ ಡೆಪ್ಯೂಟಿ ತಹಶೀಲುದಾರರು ಆನ್‌ಲೈನ್‌ನಲ್ಲಿ ಡಿಜಿಟಲ್ ಅನುಮೋದನೆ ನೀಡಬೇಕಿದೆ. ಪ್ರತಿ ಒಟಿಸಿಗೂ ಇದೇ ರೀತಿ ಮಾಡಬೇಕಿರುವುದರಿಂದ ದಿನಕ್ಕೆ ಗರಿಷ್ಠ 100ರಿಂದ 200 ಒಟಿಸಿ ಅನುಮೋದನೆ ಮಾಡಲಾಗುತ್ತಿದೆ. ಸುಮಾರು 1.5 ಲಕ್ಷ ಒಟಿಸಿ ಬಾಕಿ ಇದೆ. ಶೀಘ್ರ ಇವುಗಳನ್ನು ಪೂರ್ಣಗೊಳಿಸಲಾಗುವುದು ಎಂದು ಕಾಪು ಉಪ ತಹಶೀಲ್ದಾರ್ ಕಲ್ಲಮುರುಡಪ್ಪ
ಅವರು ತಿಳಿಸಿದ್ದಾರೆ.
ಆಫ್ಲೈನ್ ಇದ್ದರೆ ಶೀಘ್ರ
ಪ್ರತಿ ಒಟಿಸಿ ಪ್ರಮಾಣಪತ್ರವನ್ನು ಆನ್‌ಲೈನ್ ಮೂಲಕ ಡಿಜಿಟಲ್ ಸಹಿಯಿಂದ ತಹಶೀಲ್ದಾರ್, ಡಿಟಿ ಅನುಮೋದಿಸಬೇಕಿದ್ದು ಇದಕ್ಕೆ ಸಮಯ ತೆಗದುಕೊಳ್ಳುತ್ತದೆ. ಆಫ್ಲೈನ್ ಪ್ರಕ್ರಿಯೆಯಲ್ಲಿ ಇದನ್ನು ತ್ವರಿತವಾಗಿ ಮಾಡಬಹುದಾಗಿದೆ. ಆದರೆ ಆಫ್ಲೈನ್ ಪ್ರಕ್ರಿಯೆಗೆ ಪ್ರತ್ಯೇಕ ಡಾಟಾಬೇಸ್, ಸಾಫ್ಟ್ವೇರ್ ತಾಂತ್ರಿಕತೆಯಲ್ಲಿ ಬದಲಾವಣೆ ಮಾಡಬೇಕಿದೆ. ಆದರೆ ಇದರಿಂದ ತಾಂತ್ರಿಕ ಸಮಸ್ಯೆ ಎದುರಾಗುವ ಸಾಧ್ಯತೆಯೂ ಇದ್ದು ಈ ಬಗ್ಗೆ ಪರಿಶೀಲಿಸಬೇಕಿದೆ.
ಹೊಸ ಅರ್ಜಿ ಸ್ವೀಕರಿಸಲು ಸಮಸ್ಯೆ
ಪ್ರಸ್ತುತ ಸಾಫ್ಟ್ವೇರ್‌ನಲ್ಲಿ ಪರಿಷ್ಕರಣೆ ನಡೆಯುತ್ತಿರುವುದರಿಂದ ನಾಡಕಚೇರಿ ಹಾಗೂ ಗ್ರಾಪಂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಜಾತಿ-ಆದಾಯ ಪ್ರಮಾಣಪತ್ರಗಳ ಹೊಸ ಅರ್ಜಿಗಳನ್ನು ಸ್ವೀಕರಿಸುವುದು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ಮಾಡಿದ್ದು, ಒಂದೆರಡು ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯಲಿದೆ. ಬಾಪೂಜಿ ಸೇವಾ ಕೇಂದ್ರಗಳ ಲಾಗಿನ್ ಕೂಡಾ ಕಾಪುವಿಗೆ ಬದಲಿಸಲಾಗಿದೆ. ಒಟಿಸಿಯಲ್ಲಿ ಪ್ರಮಾಣಪತ್ರ ಸಿಗದಿರುವವರು ಹೊಸದಾಗಿ ಅರ್ಜಿ ಸಲ್ಲಿಸಲೂ ತಾಂತ್ರಿಕ ಸಮಸ್ಯೆ ಎದುರಾಗಿರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ.
ಶೀಘ್ರ ಲಭ್ಯವಾಗಲಿವೆ.
ಕಾಪುವಿಗೆ ಪ್ರತ್ಯೇಕ ಲಾಗಿನ್ ಸೃಜಿಸಿರುವುದರಿಂದ ಪ್ರತಿ ಒಟಿಸಿ ಜಾತಿ-ಆದಾಯ ಪ್ರಮಾಣಪತ್ರಕ್ಕೆ ಆನ್‌ಲೈನ್‌ನಲ್ಲಿ ಡಿಜಿಟಲ್ ಸಹಿ ಮಾಡುವುದು ಅನಿವಾರ್ಯ. ತೀವ್ರಗತಿಯಲ್ಲಿ ಪರಿಶೀಲನೆ ನಡೆಸಿ ಡಿಜಿಟಲ್ ಸಹಿ ಮಾಡಲಾಗುತ್ತಿದೆ. ಶೀಘ್ರ ಪ್ರಮಾಣಪತ್ರಗಳು ಲಭ್ಯವಾಗಲಿವೆ.
– ಪ್ರದೀಪ್ ಕುರ್ಡೇಕರ್,
ತಹಶೀಲ್ದಾರ್, ಕಾಪು, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.