ಕಾಪು ಪೇಟೆ: ಆತಂಕ ಮೂಡಿಸಿದ ಬಾವಲಿಗಳು !
Team Udayavani, May 26, 2018, 6:20 AM IST
ಕಾಪು: ಈಗಾಗಲೇ ಹನ್ನೊಂದು ಜನರನ್ನು ಬಲಿ ತೆಗೆದುಕೊಂಡಿರುವ ನಿಫಾ ವೈರಸ್ ಎಲ್ಲೆಡೆ ಸುದ್ದಿಯಲ್ಲಿದೆ. ನಿಫಾ ಹಿನ್ನೆಲೆಯಲ್ಲಿ ಅದನ್ನು ಹರಡುತ್ತಿರುವ ಬಾವಲಿಗಳ ಬಗ್ಗೆ ಜಾಗೃತಿ ವಹಿಸುವಂತೆ ಆರೋಗ್ಯ ಇಲಾಖೆ ಜನರಿಗೆ ಎಚ್ಚರಿಕೆ ನೀಡುತ್ತಿದೆ. ಈ ವಿಚಾರದಲ್ಲಿ ಕಾಪುವಿನ ಜನನಿಬಿಡ ಪ್ರದೇಶವೊಂದರಲ್ಲಿ ಸಾವಿರಾರು ಬಾವಲಿಗಳು ವಾಸವಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಕಾಪು ಶೆಣೈ ಬಿಲ್ಡಿಂಗ್‌ನ ದಿ| ವಿಶ್ವನಾಥ ಶೆಣೈ ಅವರ ಮನೆಯ ಹಿಂಭಾಗದಲ್ಲಿರುವ ದನದ ಕೊಟ್ಟಿಗೆಯಲ್ಲಿ ಸಾವಿರಾರು ಬಾವಲಿಗಳು ವಾಸವಿದ್ದು, ನಿಫಾ ವೈರಸ್ ಹಿನೆ°ಲೆಯಲ್ಲಿ ಭಾರೀ ಸುದ್ದಿ ಮಾಡಿದೆ. ಇವುಗಳಿಂದ ರೋಗ ಹರಡಬಹುದು ಎಂಬ ಭೀತಿ ಇಲ್ಲಿನವರನ್ನು ಕಾಡಿದೆ. ಬಾವಲಿಗಳು ಇರುವ ಬಗ್ಗೆ ಕಟ್ಟಡದಲ್ಲಿ ವಾಸವಿರುವ ಪೇಪರ್ ಏಜೆಂಟ್ ವೃತ್ತಿಯ ರಾಮಚಂದ್ರ ಅವರು ಕಾಪು ಪುರಸಭೆಗೆ ತೆರಳಿ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ಪುರಸಭೆಯ ಸ್ಥಳೀಯ ವಾರ್ಡ್ ಸದಸ್ಯ ಅನಿಲ್ ಕುಮಾರ್ ಅವರು ಈ ಸಂಬಂಧ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಪುರಸಭೆ ಮತ್ತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.
25 ವರ್ಷಗಳಿಂದ ವಾಸವಾಗಿರುವ ಬಾವಲಿಗಳು !
ರಾಮಚಂದ್ರ ಅವರು ಕಳೆದ 25-30 ವರ್ಷಗಳಿಂದ ಕಾಪುವಿನ ಶೆಣೈ ಬಿಲ್ಡಿಂಗ್‌ನಲ್ಲಿ ಬಾಡಿಗೆಗೆ ವಾಸ ವಾಗಿದ್ದಾರೆೆ. ಇಲ್ಲಿನ ಹಟ್ಟಿಯಲ್ಲಿ ಬಾವಲಿಗಳು ವಾಸವಾಗಿರುವುದನ್ನು ಅವರು ಹಿಂದಿನಿಂದಲೂ ಗಮನಿಸಿದ್ದಾರೆ. ಆದರೆ ನಿಫಾ ವೈರಸ್ ಮತ್ತು ಬಾವಲಿಗಳ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಆತಂಕವಾಗಿದೆ ಎಂದವರು ಹೇಳಿದ್ದಾರೆ. ಇನ್ನು, ಬಾವಲಿಗಳಿರುವ ಶೆಣೈ ಬಿಲ್ಡಿಂಗ್‌ವೊಂದರಲ್ಲೇ ಹಲವು ಮಂದಿ ಬಾಡಿಗೆಗೆ ವಾಸವಾಗಿದ್ದು, ಅದಕ್ಕೆ ತಾಗಿಕೊಂಡ ಪ್ರದೇಶದಲ್ಲಿರುವ ಮನೆ, ವಾಣಿಜ್ಯ ಸಂಕೀರ್ಣ ಸಹಿತ ಹಲವೆಡೆಗಳಲ್ಲಿ ಜನ ವಾಸವಿದ್ದಾರೆ.
ಪರಿಶೀಲಿಸಿ ಕ್ರಮ
ಶೆಣೈ ಬಿಲ್ಡಿಂಗ್‌ನಲ್ಲಿ ಬಾವಲಿಗಳು ಇರುವ ಬಗ್ಗೆ ಪುರಸಭಾ ಸದಸ್ಯ ಅನಿಲ್ ಕುಮಾರ್ ಮಾಹಿತಿ ನೀಡಿದ್ದು
ಜಿಲ್ಲಾಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಅವರು ಡಿಎಚ್‌ಒ ಅವರನ್ನು ಪರಿಶೀಲನೆಗಾಗಿ ಕಳುಹಿಸುವುದಾಗಿ ತಿಳಿಸಿದ್ದಾರೆ. ಆರೋಗ್ಯಾಧಿಕಾರಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು.
– ಶೀನ ನಾಯ್ಕ
ಪುರಸಭೆಯ ಮುಖ್ಯಾಧಿಕಾರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.