ಕಾಪು: ಮಲ್ಲಾರು,ಪಡುಗಳಲ್ಲಿ ನೀರಿನ ಸಮಸ್ಯೆ
Team Udayavani, Mar 31, 2018, 7:00 AM IST
ಕಾಪು: ಪ್ರತಿವರ್ಷದಂತೆ ಕಾಪು ಪುರಸಭೆ ವ್ಯಾಪ್ತಿಯ ಮಲ್ಲಾರು ಮತ್ತು ಪಡು ಗ್ರಾಮದ ಕೆಲವೆಡೆ ಈ ವರ್ಷವೂ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ.
ಸಮಸ್ಯೆಗಳು ಎಲ್ಲೆಲ್ಲಿ ?
ಮಲ್ಲಾರು ಗ್ರಾಮದ ಮಲ್ಲಾರು, ಕೊಂಬಗುಡ್ಡೆ, ರಾಣ್ಯಕೇರಿ, ಸ್ವಾಗತ ನಗರ, ಪಕೀರಣಕಟ್ಟೆ ಹಾಗೂ ಕಾಪು ಪಡು ಗ್ರಾಮದ ಮೂಳೂರು, ತೊಟ್ಟಂ, ಸುನ್ನಿ ಸೆಂಟರ್ ಮತ್ತು ಕಾಪು ಪಡು ಪ್ರದೇಶಗಳಲ್ಲಿ ನೀರಿನ ಸೆಲೆಗಳು ಬತ್ತಿ ಹೋಗಿ ತೀವ್ರ ನೀರಿನ ಸಮಸ್ಯೆ ಉಂಟಾಗಿದೆ.
ಮುಂಜಾಗ್ರತಾ ಕ್ರಮ
ಮಲ್ಲಾರು ಮತ್ತು ಸುತ್ತಲಿನ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಎದುರಿಸಲು 5 ಬೋರ್‌ವೆಲ್‌ಗಳನ್ನು ತೋಡಲಾಗಿದೆ. ಪಕೀರಣಕಟ್ಟೆ, ಎಸ್‌ಬಿಐ ಬ್ಯಾಂಕ್ ಬಳಿ, ದಂಡತೀರ್ಥ ಬಳಿಯ ಸರಕಾರಿ ಬಾವಿಯನ್ನು ಮತ್ತಷ್ಟು ಆಳಗೊಳಿಸುವ ಮೂಲಕ ನೀರಿನ ಹರಿವು ಹೆಚ್ಚಿಸಿಕೊಳ್ಳಲಾಗಿದೆ.
1,100 ಮನೆಗಳಿಗೆ ನೀರು
ಕಾಪು ಪುರಸಭೆಯ 6,448 ಮನೆಗಳಲ್ಲಿ 1,100 ಮನೆಗಳಿಗೆ ಪೈಪ್‌ಲೈನ್ ಮೂಲಕ ಪುರಸಭೆ ವತಿಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಉಳಿದಂತೆ ಶೇ. 70ಕ್ಕೂ ಅಧಿಕ ಮನೆಗಳು ತಮ್ಮದೇ ಸ್ವಂತ ಬಾವಿ/ ಕೊಳವೆ ಬಾವಿಯನ್ನು ಹೊಂದಿವೆ. ಕನಿಷ್ಠ 2ರಿಂದ 4 ಗಂಟೆಯ ಅವಧಿಯಲ್ಲಿ ಒಬ್ಬ ಸದಸ್ಯನಿಗೆ 135 ಲೀ.ನಂತೆ ಪ್ರತೀ ಮನೆಗೂ ಮೀಟರ್ ಹಾಕಿ ನೀರು ವಿತರಿಸ ಲಾಗುತ್ತದೆ. 2018ನೇ ಸಾಲಿನಲ್ಲಿ ನೀರಿನ ಸಂಪರ್ಕಕ್ಕಾಗಿ 100ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ.
ಟ್ಯಾಂಕರ್ ನೀರು ಪೂರೈಕೆಯಿಲ್ಲ
ಪುರಸಭೆ ವ್ಯಾಪ್ತಿಯಲ್ಲಿ ನೀರಿನ ಮೂಲ ವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಬೇಕಾದಷ್ಟು ನೀರಿನ ಸೌಲಭ್ಯ ಇರುವುದ ರಿಂದ ಅದನ್ನೇ ಪಂಪ್ ಮಾಡಿ ವಿತರಿಸ ಲಾಗುವುದು. ಟ್ಯಾಂಕರ್ ಮೂಲಕ ನೀರು ಪೂರೈಸುವ ಪ್ರಶ್ನೆಯೇ ಇಲ್ಲ ಎಂದು ಪುರಸಭೆಯ ಮುಖ್ಯಾಧಿಕಾರಿ ಹೇಳಿದ್ದಾರೆ.
ನೀರಿನ ಯೋಜನೆಗೆ ನೀಲ ನಕ್ಷೆ
ಪುರಸಭೆ ಮತ್ತು ಅದರ ಸುತ್ತಲ ಗ್ರಾಮಗಳಿಗೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ನೀರು ಪೂರೈಕೆಗೆ ನೀಲ ನಕಾಶೆ ಸಿದ್ಧಗೊಂಡಿದೆ. ಮಣಿಪುರ ಹೊಳೆಯಿಂದ ನೀರನ್ನು ಶುದ್ಧೀಕರಿಸಿ ಗ್ರಾಮಗಳಿಗೆ ವಿತರಿಸಿದಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ನೀರಿನ ಸಮಸ್ಯೆ ಪರಿಹಾರವಾಗಲಿದೆ. ಪುರಸಭಾ ವ್ಯಾಪ್ತಿಯ 66 ಕಿ. ಮೀ. ಪ್ರದೇಶದಲ್ಲೂ ಪೈಪ್‌ಲೈನ್ ಅಳವಡಿಸಿ ನೀರು ಪೂರೈಸಲು ಚಿಂತಿಸಲಾಗಿದೆಯಾದರೂ, ಯೋಜನೆ ಅನುಷ್ಠಾನ ಯಾವಾಗ ಎಂಬ ಪ್ರಶ್ನೆಯಿದೆ.
ಉಪ್ಪು ನೀರು ಸಮಸ್ಯೆ
ಲೈಟ್ ಹೌಸ್ ಬಳಿಯ ಪ್ರದೇಶ, ಸುಬ್ಬಯ್ಯ ತೋಟ, ಉಳಿಯಾರಗೋಳಿ ಗ್ರಾಮದ ಕೈಪುಂಜಾಲು ಬ್ಯಾರಿ ತೋಟ, ಮಲ್ಲಾರು ಸುಲ್ತಾನ್ ನಗರ, ಕಟ್ಟಮನೆ ಪರಿಸರ, ಪೊಲಿಪು ಕಡಲ ತೀರ ಹಾಗೂ ಮೂಳೂರಿನ ಕೆಲವು ಪ್ರದೇಶಗಳಲ್ಲಿ ಉಪ್ಪು ನೀರು ಸಮಸ್ಯೆಯಿದೆ. ಈ ಭಾಗದ ಪ್ರತಿ ಮನೆಗಳಲ್ಲೂ ಬಾವಿ ವ್ಯವಸ್ಥೆಯಿದ್ದರೂ ನೀರು ಬಳಕೆ ಮಾಡಲಾಗದೇ, ಪುರಸಭೆ ನೀರು ಪಡೆಯಲಾಗದೆ ಚಡಪಡಿಸುವಂತಾಗಿದೆ.
ನೀರಿನ ದುರ್ಬಳಕೆ ಮಾಡದಿರಿ
ನೀರಿನ ಮೂಲ ಬತ್ತುತ್ತಿರುವುದರಿಂದ ಸಾರ್ವಜನಿಕರಿಗೆ ನೀರು ಮಿತವಾಗಿ ಬಳಸಲು ವಿನಂತಿಸ ಲಾಗಿದೆ. ದುರ್ಬಳಕೆ ಮಾಡಿದರೆ, ಕಾನೂನು ಪ್ರಕಾರ ದಂಡ ವಿಧಿಸಿ ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು.
– ರಾಯಪ್ಪ, ಪುರಸಭೆ ಮುಖ್ಯಾಧಿಕಾರಿ
ಶುದ್ಧ ನೀರಿಲ್ಲ
ಪುರಸಭೆ ವ್ಯಾಪ್ತಿಯಲ್ಲಿ 7 ಕೆರೆಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಆದರೆ ಇವುಗಳಲ್ಲಿ ನಿಂತ ನೀರು ಇರುವುದರಿಂದ ಶುದ್ಧೀಕರಣವಾಗದೇ ಬಳಸುವುದು ಕಷ್ಟ. ಆದರೆ ಪುರಸಭೆಯ ಒಪ್ಪಿಗೆ ಪಡೆದು ಕೃಷಿ ಕೆಲಸಗಳಿಗೆ ಬಳಸಿಕೊಳ್ಳಲು ಅವಕಾಶವಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಾಗಿ ಬಳಸಿಕೊಳ್ಳಬಹುದೇ ಎಂಬ ಬಗ್ಗೆ ಪರಿಶೀಲನೆಗೆ ಕಳುಹಿಸಿಕೊಡಲಾಗಿದೆ ಎಂಧು ಪುರಸಭೆ ಎಂಜಿನಿಯರ್ ಪ್ರತಿಮಾ ತಿಳಿಸಿದ್ದಾರೆ.
– ರಾಕೇಶ್ ಕುಂಜೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.