ಕೋವಿಡ್ 19 ಆತಂಕ ಶೀಘ್ರ ಶಮನ :ಕಾಪು ಮಾರಿಯಮ್ಮ ದೇವಿ ಅಭಯ
Team Udayavani, Mar 25, 2020, 11:05 AM IST
ಕಾಪು : ಯಾರಿಗೂ ಅರಿವಿಲ್ಲದಂತೆ ಲೋಕಕ್ಕೆ ಅಂಟಿರುವ ಕೋವಿಡ್ 19 ಕಂಟಕವು ಶೀಘ್ರ ಶಮನಗೊಳ್ಳಲಿದೆ.
ಹೊಸ ಸಂವತ್ಸರ, ಪಕ್ಷಾರಂಭದ ನಂತರದಲ್ಲಿ ಸಂಪೂರ್ಣ ಹತೋಟಿಗೆ ಬರಲಿದೆ ಎಂಬ ಅಭಯವನ್ನು ಕಾಪು ಮಾರಿಯಮ್ಮ ದೇವಿ ಭಕ್ತಾಧಿಗಳಿಗೆ ನೀಡಿದ್ದು, ಅದರೊಂದಿಗೆ ಸರಕಾರದ ಎಚ್ಚರಿಕೆಗಳನ್ನು ಪಾಲಿಸಿಕೊಂಡು ಜಾಗರೂಕತೆಯಿಂದ ಇರುವಂತೆ ಎಚ್ಚರಿಕೆಯನ್ನೂ ನೀಡಿದ್ದಾಳೆ.
ಸುಗ್ಗಿ ಮಾರಿಪೂಜೆಯ ಪ್ರಯುಕ್ತ ಮಂಗಳವಾರ ರಾತ್ರಿ ಜರಗಿದ ದರ್ಶನದ ವೇಳೆ ಮಾರಿಯಮ್ಮ ದೇವಿ ದರ್ಶನಾವೇಶದಲ್ಲಿ ಅಭಯ ವಾಕ್ಯ ಪ್ರಧಾನಿಸಿದ್ದು, ಕೋವಿಡ್ 19 ಭಯದಿಂದ ಆತಂಕಿತರಾಗಿರುವ ಭಕ್ತಾಧಿಗಳಲ್ಲಿ ನಿರಾಳತೆಯನ್ನು ಮೂಡಿಸಿದೆ.
ವಿಶ್ವ ವ್ಯಾಪ್ತಿಯಾಗಿ ಹರಡಿರುವ ಮಾರಕ ಸೋಂಕಿನಿಂದ ಭಾಧಿತರಾಗಿರುವ ಮನುಕುಲವನ್ನು ಜಗನ್ಮಾತೆಯಾಗಿ ಸಲಹಿ ಕಾಪಾಡುತ್ತೇನೆ. ಈ ಬಗ್ಗೆ ಭಕ್ತಾಧಿಗಳು ಯಾವುದೇ ರೀತಿಯಲ್ಲೂ ಆತಂಕಿತರಾಗುವ ಅಗತ್ಯವಿಲ್ಲ. ಸಾನಿಧ್ಯದಲ್ಲಿ ಸನ್ನಿಹಿತಳಾಗಿ ಲೋಕಕ್ಕೆ ಬಂದಿರುವ ಕಂಟಕವನ್ನು ಉಪಶಮನ ಮಾಡುವೆ ಎಂದು ನುಡಿದಿದೆ.
ಪ್ರಜೆಗಳ ಸಲಹುವ ಸರಕಾರದ ನಿರ್ಧಾರದಂತೆ, ಭಕ್ತಾದಿಗಳ ಅನುಕೂಲಕ್ಕಾಗಿ ಸರಳತೆಯಿಂದ ನಡೆದಿರುವ ಕಾಲಾವಧಿ ಉತ್ಸವವನ್ನು ಭಂಡಾರಕ್ಕೆ ಸ್ವೀಕೃತ ಮಾಡಿಕೊಳ್ಳುತ್ತಾ, ಇಂದಿನ ವೈಭವದ ಸೇವೆಯನ್ನು ಮುಂದಿನ ದಿನಗಳಲ್ಲಿ ಭಕ್ತಾಧಿಗಳ ಮೂಲಕ ಪಡೆದುಕೊಳ್ಳುತ್ತೇನೆ. ಅಷ್ಟರವರೆಗೆ ಊರು, ಸೀಮೆ, ರಾಜ್ಯ, ರಾಷ್ಟವನ್ನು ಸಲಹಿ ಕಾಪಾಡುತ್ತೇನೆ. ಯಾರೂ ಭಯಭೀತರಾಗದಿರಿ ಎಂಬ ನುಡಿಯೊಂದಿಗೆ ಆಡಳಿತ ಮಂಡಳಿಗೆ ಪ್ರಸಾದ ನೀಡಿ, ಕಟ್ಟುಕಟ್ಟಳೆಯ ದರ್ಶನ ಮುಕ್ತಾಯಗೊಂಡಿತು.
ಕಾಪು ಶ್ರೀ ಹೊಸ ಮಾರಿಗುಡಿಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ರಮೇಶ್ ಹೆಗ್ಡೆ, ಮಾಜಿ ಸದಸ್ಯರಾದ ಜಗದೀಶ್ ಬಂಗೇರ, ಸುಧಾಮ ಶೆಟ್ಟಿ, ಚಂದ್ರಶೇಖರ ಅಮೀನ್, ಅರ್ಚಕ ವೇ.ಮೂ. ಶ್ರೀನಿವಾಸ ತಂತ್ರಿ, ಸಿಬಂದಿ – ನೌಕರ ವೃಂದದವರು ಉಪಸ್ಥಿತರಿದ್ದರು.
ಹಳೇ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಯಲ್ಲೂ ಕೊರೊನಾ ಭಯದಿಂದ ಭಕ್ತರೆಲ್ಲರೂ ಹೊರ ಬರುವಂತೆ ತಾಯಿಯ ಅನುಗ್ರಹ ದೊರಕಿದ್ದು, ಅದಕ್ಕೆ ಸಂಬಂಧಪಟ್ಟು ಆತಂಕಿತರಾದ, ನೀತಿ ನಿಯಮವಾಳಿಗಳ ಕಟ್ಟು ನಿಟ್ಟಿನ ಪಾಲನೆಗೆ ಮುಂದಾಗುವಂತೆ ಎಚ್ಚರಿಕೆಯೂ ದೊರಕಿದೆ.
ಹಳೇ ಮಾರಿಗುಡಿಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಸಾದ್ ಶೆಣೈ, ಮೂರನೇ ಮಾರಿಗುಡಿಯಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ಬಂಗೇರ, ಸಮಿತಿಯ ಸದಸ್ಯರು, ಅರ್ಚಕರು ಮತ್ತು ಸೀಮಿತ ಸಂಖ್ಯೆಯ ನೌಕರ ವರ್ಗದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.