ವಾರದ ಸಂತೆ, ಸಂಚಾರ ಅಸ್ತವ್ಯಸ್ತ ಕಿರಿಕಿರಿಗೆ ಮುಕ್ತಿ ನೀಡಿದ ಪುರಸಭೆ
Team Udayavani, Aug 25, 2018, 12:11 PM IST
ಕಾಪು: ಪದೇ ಪದೇ ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿದ್ದ ಮತ್ತು ಜನರಿಗೆ ಅಪಘಾತದ ಭೀತಿಯನ್ನು ತಂದೊಡ್ಡುತ್ತಿದ್ದ ಕಾಪುವಿನ ವಾರದ ಸಂತೆ ಮತ್ತು ಟ್ರಾಫಿಕ್ ಜಾಮ್‌ನ ಸಮಸ್ಯೆ ಪರಿಹಾರಕ್ಕೆ ಪುರಸಭೆ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ.
ಕಾಪುವಿನರಾಷ್ಟ್ರೀಯ ಹೆದ್ದಾರಿ 66ರ ಬದಿಯ ಸರ್ವೀಸ್ ರಸ್ತೆಗೆ ತಾಗಿಕೊಂಡು ನಡೆಯುತ್ತಿದ್ದ ವಾರದ ಸಂತೆಯನ್ನು ಮಾರ್ಕೆಟ್‌ಗೆ ಸನಿಹದ ಖಾಸಗಿ ಪ್ರದೇಶಕ್ಕೆ ಸ್ಥಳಾಂತರಿಸುವ ಮೂಲಕ ಸರ್ವೀಸ್ ರಸ್ತೆಯ ಮೇಲಿನ ಸಂಚಾರದ ಒತ್ತಡವನ್ನು ಕಡಿಮೆಗೊಳಿಸುವ ಪ್ರಯತ್ನಕ್ಕೆ ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ರೂಪಿಸಿದ್ದು ಅದರಲ್ಲಿ ಯಶಸ್ಸನ್ನೂ ಸಾಧಿಸಿದ್ದಾರೆ.
ಸರ್ವೀಸ್ ರಸ್ತೆಗೆ ತಾಗಿಕೊಂಡು ನಡೆಯುತ್ತಿದ್ದ ವಾರದ ಸಂತೆಯಿಂದ ಸುಗಮ ಸಂಚಾರಕ್ಕೆ ತೊಡಕುಂಟಾಗುತ್ತಿತ್ತು. ಸಂತೆಗೆ ಬರುವ ಗ್ರಾಹಕರಿಗೆ ತಮ್ಮ ವಾಹನಗಳನ್ನು ನಿಲ್ಲಿಸಲು ಸೂಕ್ತ ಜಾಗದ ಕೊರತೆಯಿಂದಾಗಿ ಸರ್ವೀಸ್ ರಸ್ತೆಯಲ್ಲೇ ತಮ್ಮ ವಾಹನಗಳನ್ನು ನಿಲ್ಲಿಸಿ ಬರುವಂತಾಗಿದ್ದು, ಅದರಿಂದಾಗಿ ಪದೇ ಪದೇ ಸಂಚಾರ ಅಸ್ತವ್ಯಸ್ತಗೊಳ್ಳುತ್ತಿತ್ತು.
ಕಾಪು ವಾರದ ಸಂತೆಯ ದುಸ್ಥಿತಿ ಮತ್ತು ಇಲ್ಲಿನ ಟ್ರಾಫಿಕ್ ಕಿರಿಕಿರಿಯ ಬಗ್ಗೆ ಉದಯವಾಣಿಯಲ್ಲಿ ಕೂಡಾ
ಎರಡು ಬಾರಿ ಸಚಿತ್ರ ಲೇಖನದೊಂದಿಗೆ ವರದಿ ಪ್ರಕಟಿಸಲಾಗಿತ್ತು. ಇದೀಗ ಶುಕ್ರವಾರದ ವಾರದ ಸಂತೆಯನ್ನು ಪೊಲೀಸರ ಸಮ್ಮುಖದಲ್ಲಿ ಕೆಲವು ಸಮಯಗಳ ಹಿಂದೆ ನಡೆಸಲಾಗುತ್ತಿದ್ದ ಪ್ರದೇಶಕ್ಕೇ ಸ್ಥಳಾಂತರಿಸಲಾಗಿದ್ದು, ಎಲ್ಲಾ ಸಂತೆ ವ್ಯಾಪಾರಿಗಳಿಗೂ ಅಲ್ಲಿಯೇ ಅಂಗಡಿಗಳಿಗೆ ಜಾಗ ವಿಂಗಡಿಸಿಕೊಡಲಾಗಿದೆ. ಸಂತೆ ಯನ್ನು ಪಕ್ಕದ ಜಾಗಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆಗೆ ಪ್ರಾರಂಭದಲ್ಲಿ ವ್ಯಾಪಾರಿಗಳಿಂದ ಅಸಮಾಧಾನ ವ್ಯಕ್ತವಾದರೂ ಬಳಿಕ ಅಲ್ಲಿನ ವ್ಯವಸ್ಥೆಗೆ ಹೊಂದಿಕೊಳ್ಳುವುದು ಅನಿವಾರ್ಯವೆಂಬಂತಾಗಿದೆ.
ಕೆಸರಿನ ನಡುವಿನ ಸಂತೆಗೆ ಗ್ರಾಹಕರಿಂದ ಆಕ್ರೋಶ
ವಾರದ ಸಂತೆಯನ್ನು ಮಾರ್ಕೆಟ್ ಬಳಿಯ ಪ್ರದೇಶಕ್ಕೆ ಸ್ಥಳಾಂತರಿಸಿರುವುದು ಗ್ರಾಹಕರು ಮತ್ತು ವಾಹನ ಚಾಲಕರ ಹಿತಾಸಕ್ತಿಯಿಂದ ಸರಿ ಎಂಬುದಾಗಿ ಕಂಡರೂ ಸಂತೆ ನಡೆಯುವ ಪ್ರದೇಶದ ಬಗ್ಗೆ ಗಮನ ಹರಿಸಿದರೆ ಸಂತೆಗೆ ತೆರಳುವವರಿಗೆ ವಾಕರಿಕೆ ಬರುವಂತಾಗಿದೆ. ಸಂತೆಯ ಅಂಗಡಿ ಇರುವ ಪ್ರದೇಶದ ಸುತ್ತಲೂ ಕೆಸರು ಮತ್ತು ತ್ಯಾಜ್ಯದ ರಾಶಿಯಿದ್ದು, ವ್ಯಾಪಾರಿಗಳು ಅಲ್ಲೇ ತರಕಾರಿ – ವಸ್ತುಗಳನ್ನು ವಿಂಗಡಿಸಿ ಮಾರಾಟಕ್ಕೆ ಇಟ್ಟಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.
ವ್ಯಾಪಾರಿಗಳಿಂದಲೂ ಆಕ್ರೋಶ
ಕಾಪುವಿನ ವಾರದ ಸಂತೆಯಲ್ಲಿ ವ್ಯಾಪಾರಿಗಳು ಕೆಸರಿನ ನಡುವೆ ನಿಂತು ವ್ಯಾಪಾರ ನಡೆಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದು, ಈ ಬಗ್ಗೆ ವ್ಯಾಪಾರಿಗಳಿಂದಲೂ ಆಕ್ರೋಶ ವ್ಯಕ್ತವಾಗಿದೆ. ಕೆಸರುಮಯ ವಾತಾವರಣ ಒಂದೆಡೆಯಾದರೆ, ಅಲ್ಲೇ ಪಕ್ಕದಲ್ಲಿ ಕೋಳಿ – ಮಾಂಸದಂಗಡಿಯೂ ಇರುವುದರಿಂದ ವ್ಯಾಪಾರಕ್ಕೆ ತೊಂದರೆಯಾಗುತ್ತದೆ. ಪುರಸಭೆ ಮಣ್ಣು ಹಾಕಿ ವ್ಯವಸ್ಥೆಯನ್ನು ಸರಿಪಡಿಸಿದ ಬಳಿಕ ವಾರದ ಸಂತೆ
ಯನ್ನು ಇಲ್ಲಿಗೆ ಸ್ಥಳಾಂತರ ಮಾಡಬೇಕಿತ್ತು ಎಂಬ ಅಭಿಪ್ರಾಯ ವ್ಯಾಪಾರಸ್ಥರಿಂದ ವ್ಯಕ್ತವಾಗಿದೆ.
ಜನರ ಮನವಿಗೆ ಸ್ಪಂದನೆ
ಕಾಪುವಿನ ವಾರದ ಸಂತೆ ಮತ್ತು ಅದರಿಂದಾಗಿ ಉಂಟಾಗುತ್ತಿದ್ದ ತೊಂದರೆಗಳ ಬಗ್ಗೆ ಸಾರ್ವಜನಿಕರಿಂದ, ವಾಹನ ಸಂಚಾರಿಗಳಿಂದ ಪ್ರತೀ ವಾರವೂ ದೂರುಗಳು ಕೇಳಿ ಬರುತ್ತಿದ್ದವು. ಇಲ್ಲಿ ಅಪಘಾತದ ಭೀತಿಯೂ ಎದುರಾಗಿತ್ತು. ಈ ಬಗ್ಗೆ ಪುರಸಭೆ ಸದಸ್ಯರಿಂದಲೂ ಆಕ್ಷೇಪ ವ್ಯಕ್ತವಾಗಿದ್ದು, ಮಾಧ್ಯಮಗಳಲ್ಲೂ ವರದಿ ಪ್ರಕಟವಾಗಿತ್ತು. ಇದೀಗ ಸಮಸ್ಯೆ ಪರಿಹಾರಕ್ಕಾಗಿ ವಾರದ ಸಂತೆಯನ್ನು ಖಾಸಗಿ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಮಳೆಯ ಕಾರಣದಿಂದಾಗಿ ಕೆಸರುಮಯ ಸ್ಥಿತಿಯಿದ್ದು, ಅದನ್ನೂ ಕೂಡಾ ಜಲ್ಲಿ ಹುಡಿ ಮತ್ತು ಮಣ್ಣು ಹಾಕಿ ಸಮತಟ್ಟು ಮಾಡಿ ಕೊಡಲಾಗುವುದು.
– ರಾಯಪ್ಪ, ಮುಖ್ಯಾಧಿಕಾರಿ, ಕಾಪು ಪುರಸಭೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.