ಕಿಶೋರ ಯಕ್ಷ ದಶಮಾನ ಸಂಭ್ರಮಕ್ಕೆ ಚಾಲನೆ
Team Udayavani, Dec 3, 2017, 12:58 PM IST
ಉಡುಪಿ: ಉಡುಪಿ ಯಕ್ಷ ಶಿಕ್ಷಣ ಟ್ರಸ್ಟ್, ಶ್ರೀಕೃಷ್ಣಮಠ ಪರ್ಯಾಯ ಪೇಜಾವರ ಮಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶನಿವಾರ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಕಿಶೋರ ಯಕ್ಷ ಸಂಭ್ರಮದ ದಶಮಾನೋತ್ಸವ ಸಮಾರಂಭಕ್ಕೆ ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಚಾಲನೆ ನೀಡಿದರು.
ಸ್ಥಾಪಕ ಟ್ರಸ್ಟಿ ಹಾಗೂ ಮಾಜಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಯಕ್ಷ ಶಿಕ್ಷಣ ಟ್ರಸ್ಟ್ ವತಿಯಿಂದ ಪ್ರೌಢಶಾಲಾ ಮಕ್ಕಳಿಗೆ ಕಲಿಸುತ್ತಿರುವ “ಕಿಶೋರ ಯಕ್ಷ ಸಂಭ್ರಮ’ ಯಕ್ಷಗಾನ ತರಬೇತಿ ಕಾರ್ಯಕ್ರಮವನ್ನು ಜಿಲ್ಲೆಗೆ ವಿಸ್ತರಿಸುವ ಚಿಂತನೆ ಇದೆ. 2007ರಲ್ಲಿ ಯಕ್ಷಗಾನ ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಿಶೋರ ಯಕ್ಷ ಕಾರ್ಯಕ್ರಮ ಪ್ರಾರಂಭಿಸಲಾಗಿತ್ತು. ಇದು ಇಂದು ಯಶಸ್ವಿಯಾಗಿದೆ ಎಂದರು.
ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು. ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್, ಮೇಳಗಳ ಸಂಚಾಲಕ ಪಿ. ಕಿಶನ್ ಹೆಗ್ಡೆ, ಕರ್ಣಾಟಕ ಬ್ಯಾಂಕ್‌ನ ಎಜಿಎಂ ವಿದ್ಯಾಲಕ್ಷ್ಮೀ, ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಗಂಗಾಧರ ರಾವ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಮುರಲಿ ಕಡೆಕಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೆ.ಎಸ್. ಸುಬ್ರಹ್ಮಣ್ಯ ಬಾಸ್ರಿ ವಂದಿಸಿದರು. ಸಭಾಕಾರ್ಯಕ್ರಮದ ಬಳಿಕ ನಿಟ್ಟೂರು ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ “ಶ್ವೇತಕುಮಾರ ಚರಿತೆ’ ಯಕ್ಷಗಾನ ಪ್ರದರ್ಶನಗೊಂಡಿತು. ಇಂದಿನಿಂದ ಡಿ. 16ರ ವರೆಗೆ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಾಗೂ ಡಿ. 17ರಿಂದ 24ರ ವರೆಗೆ ಬ್ರಹ್ಮಾವರದಲ್ಲಿ ಒಟ್ಟು 42 ಪ್ರೌಢಶಾಲೆಗಳ 43 ಯಕ್ಷಗಾನ ಪ್ರಸಂಗಗಳ ಪ್ರದರ್ಶನ ನಡೆಯಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.