ಕೋಡಿ ಮೀನುಗಾರಿಕಾ ಜೆಟ್ಟಿ ಕಾಮಗಾರಿ ಅಂತಿಮ ಹಂತಕ್ಕೆ
Team Udayavani, Jun 6, 2017, 4:14 PM IST
ಕುಂದಾಪುರ: ಕೋಡಿ ಹಾಗೂ ಪರಿಸರದ ಮೀನುಗಾರರ ಬಹುದಿನಗಳ ಬೇಡಿಕೆಯಾಗಿದ್ದ ಬೋಟುಗಳ ಇಳಿದಾಣಕ್ಕೆ ಪೂರಕವಾದ ಜೆಟ್ಟಿ ನಿರ್ಮಾಣ ಕಾಮಗಾರಿ ಬಹುತೇಕ ಅಂತಿಮ ಹಂತಕ್ಕೆ ತಲುಪಿದ್ದರೂ ಈ ಪ್ರದೇಶದಲ್ಲಿ ಸಾಕಷ್ಟು ಹೂಳು ತುಂಬಿರುವುದರಿಂದ ಬೋಟು ನಿಲ್ಲಿಸಲು ಅಸಾಧ್ಯವಾಗಿದ್ದು ಹೂಳೆತ್ತುವ ಕಾಮಗಾರಿ ಪೂರ್ಣಗೊಳ್ಳದೆ ಇಲ್ಲಿ ಬೋಟು ತಂಗಲು ಅಸಾಧ್ಯ ಎನ್ನಲಾಗಿದೆ.
4 ಕೋ. ರೂ. ವೆಚ್ಚದ ಕಾಮಗಾರಿ
ಪಂಚಗಂಗಾವಳಿ ನದಿ ಸಮುದ್ರ ಸೇರುವ ಸಂಗಮ ಸ್ಥಳ ಗಂಗೊಳ್ಳಿ ಅಳಿವೆ ಬಾಗಿಲಿಗೆ ಹೊಂದಿಕೊಂಡಂತೆ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ ಸುಮಾರು ರೂ. 4 ಕೋಟಿ ವೆಚ್ಚದಲ್ಲಿ ಕೋಡಿಯಲ್ಲಿ ಈ ಜೆಟ್ಟಿ ಕಾಮಗಾರಿ ನಡೆಯುತ್ತಿದ್ದು, ಜೆಟ್ಟಿಯ ಕಾಮಗಾರಿ ಅಂತಿಮ ಘಟ್ಟದಲ್ಲಿದೆ. ಈ ಜೆಟ್ಟಿ ಸುಮಾರು 60 ಮೀಟರ್ ಉದ್ದ, 22 ಫೆ„ಲ್ ಪಿಲ್ಲರ್‌ಗಳನ್ನು ಹೊಂದಿದೆ.
ಜೆಟ್ಟಿ ಪ್ರದೇಶದಲ್ಲಿ ಹೂಳು
ಸುಮಾರು 60 ಮೀಟರ್ ಉದ್ದದ ಜೆಟ್ಟಿ ಅಂತಿಮ ಹಂತಕ್ಕೆ ತಲುಪಿದ್ದರೂ ಈ ಭಾಗದ ನದಿಯಲ್ಲಿ ಸಾಕಷ್ಟು ಹೂಳು ತುಂಬಿರುವುದರಿಂದ ಬೋಟು ನಿಲ್ಲಿಸಲು ಅಸಾಧ್ಯವಾಗಿದೆ ಎನ್ನುವುದು ಸ್ಥಳೀಯ ಮೀನುಗಾರರ ಅಭಿಪ್ರಾಯ. ಇಲ್ಲಿಗೆ ಸಮೀಪದಲ್ಲಿ ಬ್ರೇಕ್ ವಾಟರ್ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ಹೂಳೆತ್ತಿದ ಮರಳು ದಡದಲ್ಲಿ ಸಂಗ್ರಹವಾಗಿರುತ್ತದೆ.
ಬೋಟು ತಂಗುದಾಣಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲಿನ ಮೀನುಗಾರರು ಸುಮಾರು 30 ಮೀನುಗಾರಿಕಾ ಬೋಟು ನಿಲ್ಲುವಂತೆ ಅನುಕೂಲವಾಗಲು ಸುಮಾರು 100 ಮೀಟರ್ ಉದ್ಧದ ಜೆಟ್ಟಿಯನ್ನು ನಿರ್ಮಿಸಲು ಬೇಡಿಕೆಯನ್ನು ಇಟ್ಟಿದ್ದರು. ಆದರೆ ಕೆಲವೊಂದು ತಾಂತ್ರಿಕ ತೊಂದರೆಗಳಿಂದ ಇಲಾಖೆ ಸುಮಾರು 50 ಮೀಟರ್ ಉದ್ದದ ಜೆಟ್ಟಿ ನಿರ್ಮಿಸಲು ಟೆಂಡರ್ ಕರೆದಿದ್ದರೂ ಮೀನುಗಾರರ ಬೇಡಿಕೆಯಂತೆ ಇನ್ನೂ ಹತ್ತು ಮೀಟರ್ ಹೆಚ್ಚಿಸಿ 60 ಮೀಟರ್ ಉದ್ದದ ಜೆಟ್ಟಿ ಕಾಮಗಾರಿ ಮುಂದುವರಿಸಿತ್ತು. ಈ ಜೆಟ್ಟಿಯಲ್ಲಿ ಪರಿಸರದ ಸುಮಾರು ಮೂವತ್ತು ಬೋಟುಗಳು ತಂಗುವ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಹಿಂದೆ ಕೋಡಿಯಿಂದ ಹಿಡಿದು ಕೋಟ, ಪಡುಕೆರೆ, ಬೀಜಾಡಿ, ಸಾಸ್ತಾನದ ತನಕದ ಮೀನುಗಾರರು ಗಂಗೊಳ್ಳಿ ಬಂದರಿನಲ್ಲಿ ಮೀನುಗಾರಿಕೆ ನಡೆಸಿ ಅಲ್ಲಿಯೇ ಬೋಟುಗಳನ್ನು ಲಂಗರು ಹಾಕಲು ಕಷ್ಟವಾಗುತ್ತಿತ್ತು. ಇದಕ್ಕೆ ಕೋಡಿಯಲ್ಲಿ ಜೆಟ್ಟಿಯೊಂದನ್ನು ನಿರ್ಮಾಣ ಮಾಡುವ ಮೂಲಕ ಪರಿಹಾರವನ್ನು ಕಂಡುಕೊಳ್ಳುವ ನೆಲೆಯಲ್ಲಿ ಮೀನು ಗಾರರು ಕೋಡಿಯಲ್ಲಿ ಬೋಟು ಇಳಿದಾಣ ನಿರ್ಮಿಸಬೇಕೆಂದು ಸರಕಾರಕ್ಕೆ ಹಲವಾರು ಬಾರಿ ಮನವಿಯನ್ನು ಮಾಡುತ್ತಲೇ ಬಂದಿದ್ದರು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮೀನುಗಾರರ ಬೇಡಿಕೆಗೆ ಸ್ಪಂದಿಸಿ ಸರಕಾರದ ಬಂದರು ಮತ್ತು ಒಳನಾಡು ಮೀನುಗಾರಿಕೆ ಇಲಾಖೆಯ ಮೂಲಕ ಕಾಮಗಾರಿಗೆ ವಿನಂತಿಸಿದ್ದರು. ಒಟ್ಟಾರೆ ಕೋಡಿ ಪರಿಸರದ ಮೀನುಗಾರರ ಬಹುಕಾಲದ ಬೇಡಿಕೆಯೊಂದು ಈಡೇರುತ್ತಿದೆ.
ಕೋಡಿ, ಕೋಟ, ಪಡುಕರೆ, ಬೀಜಾಡಿ, ಸಾಸ್ತಾನದ ತನಕದ ಮೀನುಗಾರರು ಗಂಗೊಳ್ಳಿ ಬಂದರಿನಲ್ಲಿ ಸ್ಥಳಾವಕಾಶ ಕಡಿಮೆ ಇರುವುದರಿಂದ ಕೋಡಿಯಲ್ಲಿ ಜೆಟ್ಟಿ ನಿರ್ಮಾಣಕ್ಕೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಲ್ಲಿ ಮನವಿ ಮಾಡಲಾಗಿತ್ತು. ಮೀನುಗಾರರ ಬೇಡಿಕೆಯನ್ನು ಸ್ಪಂದಿಸಿದ ಶಾಸಕರು ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ ಸುಮಾರು 4 ಕೋಟಿ ರೂ ವೆಚ್ಚದಲ್ಲಿ ಕೋಡಿಯಲ್ಲಿ 50 ಮೀಟರ್ ಉದ್ದದ ಜೆಟ್ಟಿ ನಿರ್ಮಾಣಕ್ಕೆ ಕಾಮಗಾರಿ ನಡೆಸಲಾಗಿತ್ತು. ಮೀನುಗಾರರ ಬೇಡಿಕೆಯ ಮೇರೆಗೆ ಇನ್ನೂ 10 ಮೀಟರ್ ಜೆಟ್ಟಿಯನ್ನು ವಿಸ್ತರಿಸಲಾಗಿದ್ದು, ಹೂಳೆತ್ತುವ ಕಾರ್ಯ ಹಾಗೂ ಕಾಮಗಾರಿಯ ಪೂರ್ಣಹಂತ ತಲುಪಿದ ಅನಂತರ ಈ ಜೆಟ್ಟಿ ಬೋಟುಗಳನ್ನು ಲಂಗರು ಹಾಕಲು ಸೂಕ್ತ ಪ್ರದೇಶವಾಗಲಿದೆ.
-ಮಂಜು ಬಿಲ್ಲವ, ಮೀನುಗಾರರ ಮುಖಂಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.