ಪೊಲೀಸ್ ಠಾಣೆ ಕಾಮಗಾರಿ ನಡೆದರೂ ಉದ್ಘಾಟನೆ ಭಾಗ್ಯವಿಲ್ಲ
ಕಟ್ಟಡದ ವಿನ್ಯಾಸ, ಮೂಲಸೌಕರ್ಯ ಕುರಿತು ಅಪಸ್ವರ
Team Udayavani, Mar 2, 2020, 5:14 AM IST
ಕೋಟ: ಕೋಟ ಪೊಲೀಸ್ ಠಾಣೆಗೆ 75 ಲ.ರೂ. ವೆಚ್ಚದಲ್ಲಿ ಸುವ್ಯವಸ್ಥಿತ ನೂತನ ಕಟ್ಟಡ ನಿರ್ಮಾಣಗೊಂಡಿದ್ದು ಕಾಮಗಾರಿ ಮುಗಿದು ಎರಡು ತಿಂಗಳು ಕಳೆದರೂ ಉದ್ಘಾಟನೆ ಭಾಗ್ಯ ಬಂದಿಲ್ಲ. ಕಟ್ಟಡದ ವಿನ್ಯಾಸದಲ್ಲಿನ ದೋಷ ಹಾಗೂ ಮೂಲಸೌಕರ್ಯದ ಕೊರತೆಯ ಕಾರಣಕ್ಕೆ ಪೊಲೀಸ್ ಇಲಾಖೆ ಕಟ್ಟಡವನ್ನು ಪಡೆದಿಲ್ಲ, ಹಾಗೂ ಇದೇ ಕಾರಣಕ್ಕೆ ಉದ್ಘಾಟನೆ ವಿಳಂಬವಾಗುತ್ತಿದೆ ಎನ್ನಲಾಗಿದೆ.
ಅಪಸ್ವರ
ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ಠಾಣೆಯ ಮುಖ್ಯದ್ವಾರವನ್ನು ದೊಡ್ಡದಾಗಿ ನಿರ್ಮಿಸಲಾಗುತ್ತದೆ. ಆದರೆ ಇಲ್ಲಿ ಮುಖ್ಯದ್ವಾರ ಕಿರಿದಾಗಿದೆ ಹಾಗೂ ಹಿಂಬದಿ ಬಾಗಿಲುಗಳು ಸರಿಯಾದ ದಿಕ್ಕಿನಲ್ಲಿ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎನ್ನುವ ಅಪಸ್ವರಗಳು ಆರಂಭದಿಂದ ಕೇಳಿ ಬಂದಿತ್ತು. ಇದನ್ನೆಲ್ಲ ಪರಿಗಣಿಸದೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಹೀಗಾಗಿ ಇದೀಗ ಕಟ್ಟಡ ಹಸ್ತಾಂತರಕ್ಕೆ ಹಿಂದೇಟು ಹಾಕಲಾಗುತ್ತಿದೆ ಎನ್ನಲಾಗಿದೆ.
ಟೆಂಡರ್‌ನಲ್ಲಿರುವಂತೆ
ಕಾಮಗಾರಿ
ಕಾಮಗಾರಿಯ ಬಗ್ಗೆ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಕರ್ನಾಟಕ ಪೊಲೀಸ್ ವಸತಿ ಹಾಗೂ ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ಮಂಗಳೂರು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ಪ್ರಶ್ನಿಸಿದಾಗ, ಕೋಟ ಪೊಲೀಸ್ ಠಾಣೆಗೆ ಗ್ರೇಡ್ 3 ಕಟ್ಟಡ ಮಂಜೂರಾಗಿತ್ತು. ಹೀಗಾಗಿ ಗ್ರೇಡ್ 3ರ ನಿಯಮಾನುಸಾರ ಕಟ್ಟಡವನ್ನು ನಿರ್ಮಿಸಲಾಗಿದೆ. ಹೋಲೋಬ್ಲಾಕ್, ಎಂಸ್ಯಾಂಡ್ ಬಳಸಲಾಗಿದೆ, ಮುಖ್ಯದ್ವಾರ ಕಿರಿದಾಗಿದೆ ಎನ್ನುವ ದೂರಿದೆ. ಆದರೆ ಇಲ್ಲಿ ಬಳಸಿರುವುದು ಸಾಲಿಡ್ ಬ್ಲಾಕ್ ಮತ್ತು ಎಂಸ್ಯಾಂಡ್ ಬಳಕೆಗೆ ಸರಕಾರವೇ ಅನುಮತಿ ನೀಡಿದೆ.
ಯಾವುದೇ ದೋಷವಿಲ್ಲ
ಮುಖ್ಯದ್ವಾರವನ್ನು ಟೆಂಡರ್‌ನಲ್ಲಿರುವಂತೆ ನಿರ್ಮಿಸಲಾಗಿದೆ. ಕಟ್ಟಡದ ಗುಣಮಟ್ಟದಲ್ಲಿ ಯಾವುದೇ ದೋಷವಿಲ್ಲ. ಕುಡಿಯುವ ನೀರಿಗಾಗಿ ನಿರ್ಮಿಸಿದ ಕೊಳವೆ ಬಾವಿಯಲ್ಲಿ ನೀರು ಬಂದಿಲ್ಲ ಹೀಗಾಗಿ ಬೇರೆ ವ್ಯವಸ್ಥೆ ಮಾಡಲಾಗುತ್ತಿದೆ. ಯೋಜನೆಗೆ ಒಮ್ಮೆ ನೀಲನಕ್ಷೆ ಸಿದ್ಧವಾದ ಮೇಲೆ ನಿಗಮದ ಅನುಮತಿ ಇಲ್ಲದೆ ಕೆಳಹಂತದಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲ. ಸಣ್ಣ-ಪುಟ್ಟ ಸಮಸ್ಯೆಗಳನ್ನು ಸರಿಪಡಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ಹೊಸ ಕಟ್ಟಡಕ್ಕೆ ಸಾಕಷ್ಟು ಹೋರಾಟ
ಕೋಟದ ಈಗಿರುವ ಠಾಣೆಯ ಹಳೆಯ ಕಟ್ಟಡ 1996ರಲ್ಲಿ ನಿರ್ಮಾಣಗೊಂಡಿದ್ದು, ಪ್ರಸ್ತುತ ಸಂಪೂರ್ಣ ಶಿಥಿಲವಾಗಿ ಮಳೆಗಾಲದಲ್ಲಿ ಎಲ್ಲಾ ಕಡೆ ನೀರು ಸೋರುತ್ತಿತ್ತು. ಹಾಗೂ ಕೊಠಡಿಗಳು ಅತ್ಯಂತ ಕಿರಿದಾಗಿದ್ದು ಕಾರ್ಯನಿರ್ವಹಣೆಗೆ ಕಷ್ಟವಾಗುತ್ತಿದೆ. ಮಹಿಳಾ ಸಿಬಂದಿಗಳಿಗೆ ಪ್ರತ್ಯೇಕ ಶೌಚಾಲಯ ಮುಂತಾದ ವ್ಯವಸ್ಥೆ ಇಲ್ಲ. ಹೀಗಾಗಿ ಹೊಸ ಕಟ್ಟಡ ನಿರ್ಮಿಸುವಂತೆ ಸ್ಥಳೀಯರು 2015ರಲ್ಲಿ ಮನವಿ ಸಲ್ಲಿಸಿದ್ದರು. 2017ರಲ್ಲಿ ರಾಜ್ಯದ ವಿವಿಧ ಠಾಣೆಯ ಕಟ್ಟಡಗಳು ಮಂಜೂರಾಗುವ ಸಂದರ್ಭ ಈ ಕಾಮಗಾರಿಗೆ ಅನುಮೋದನೆ ದೊರೆತರೂ ಕಾಮಗಾರಿ ನಡೆದಿರಲಿಲ್ಲ. ಹೀಗಾಗಿ ಮತ್ತೆ ಹೋರಾಟ ನಡೆಸಿದ್ದರ ಫಲವಾಗಿ 2019 ಮಾಚ್‌ನಲ್ಲಿ ಹೊಸ ಕಟ್ಟಡದ ಕಾಮಗಾರಿ ಆರಂಭವಾಗಿತ್ತು.ಕಟ್ಟಡ ಉದ್ಘಾಟನೆಗೊಳ್ಳುವುದು ಎರಡು-ಮೂರು ತಿಂಗಳು ವಿಳಂಬವಾದಲ್ಲಿ ಈ ಬಾರಿ ಮಳೆಗಾಲದಲ್ಲೂ ಸಮಸ್ಯೆ ಮತ್ತೆ ಮುಂದುವರಿಯಲಿದೆ.
ಸಣ್ಣ ಮಾರ್ಪಾಡು ಇದೆ
ಕಟ್ಟಡದ ವಿನ್ಯಾಸದಲ್ಲಿ ದೋಷವಿದೆ ಎನ್ನುವ ಕುರಿತು ಆರಂಭದಲ್ಲಿ ಯಾವುದೇ ಲಿಖೀತ ದೂರು ಬಂದಿರಲಿಲ್ಲ. ಸಣ್ಣ-ಪುಟ್ಟ ಸಮಸ್ಯೆ ಇರುವ ಕುರಿತು ಮನವಿ ಬಂದಿದ್ದು ಸರಿಪಡಿಸುವ ಭರವಸೆ ನೀಡಿದ್ದೇವೆ. ಕೊಳವೆಬಾವಿ ವಿಫಲವಾದ್ದರಿಂದ ಇದೀಗ ತಾತ್ಕಾಲಿಕ ವ್ಯವಸ್ಥೆ ಮಾಡುತ್ತಿದ್ದು ಶಾಶ್ವತ ಬಾವಿ ನಿರ್ಮಾಣಕ್ಕೆ ಮನವಿ ಮಾಡಲಾಗಿದೆ.
-ಸಂತೋಷ್ ಕುಮಾರ್,
ಕೆ.ಪಿ.ಎಚ್.ಎಫ್.ಡಿ. ಎ.ಇ.ಇ.
ಶೀಘ್ರ ಉದ್ಘಾಟನೆ ನಡೆಯಲಿದೆ
ನಾನು ಅಧಿಕಾರ ವಹಿಸಿಕೊಂಡ ಮೇಲೆ ಈ ಕುರಿತು ಯಾವುದೇ ಅಧಿಕೃತ ದೂರು ಬಂದಿಲ್ಲ. ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ತಿಳಿಸಿದ್ದು ಅದನ್ನು ಸರಿಪಡಿಸುವಂತೆ ತಿಳಿಸಿದ್ದೇನೆ. ಕಟ್ಟಡ ಶೀಘ್ರ ಉದ್ಘಾಟನೆ ನಡೆಯಲಿದೆ.
-ಎನ್.ವಿಷ್ಣುವರ್ಧನ್,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.