ಚಡ್ಡಿ ಸುಡುವುದು ವಿಕೃತ ಮನಸ್ಸಿನ ಪರಾಕಾಷ್ಠೆ: ಶ್ರೀನಿವಾಸ ಪೂಜಾರಿ
Team Udayavani, Jun 11, 2022, 6:25 AM IST
ಕಾರ್ಕಳ: ಚಡ್ಡಿ ಸುಡುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಇದು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನ ವಿಕೃತ ಮನಸ್ಸಿನ ಪರಾಕಾಷ್ಠೆ ಎಂದು ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಿಟ್ಟೆ ಎಂಆರ್‌ಎಫ್ ಘಟಕ, ಶಬರಿ ಆಶ್ರಮದ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ ಬಳಿಕ ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಪತ್ರಕರ್ತರ ಜತೆ ಅವರು ಮಾತನಾಡಿದರು.
ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರು ರಾಷ್ಟ್ರಪ್ರೇಮ, ರಾಷ್ಟ್ರೀಯತೆ ಸೇವಾ ಭಾವನೆಯುಳ್ಳವರು, ಅವರೆಲ್ಲ ರಾಷ್ಟ್ರಕ್ಕಾಗಿ ಬದುಕು ಅರ್ಪಿಸಿದವರು. ಅಂಥ ದೇಶಪ್ರೇಮಿಗಳು ಧರಿಸುವ ಸಮವಸ್ತ್ರದ ಚಡ್ಡಿಗಳನ್ನು ಸುಡುವುದೆಂದರೆ ಸಿದ್ದರಾಮಯ್ಯರ ವಿಕೃತ ಮನಸ್ಸಿನ ಪರಾಕಾಷ್ಠೆಯಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.
ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಪುಸ್ತಕ ಪರಿಷ್ಕರಿಸಿ ತನ್ನ ಕೆಲಸ ಮುಗಿಸಿದೆ. ಆದ್ದರಿಂದ ಸಮಿತಿಯನ್ನು ಬರ್ಖಾಸ್ತುಗೊಳಿಸಲಾಗಿದೆ. ಸರಕಾರಗಳು ಬದಲಾದ ಸಂದರ್ಭ ಕೆಲವೊಮ್ಮೆ ಪಠ್ಯ ಪರಿಷ್ಕರಣೆ ಮಾಡಲಾಗುತ್ತದೆ. ಹೆಡೆYವಾರ್ ಅವರು ಆರೆಸ್ಸೆಸ್ ಮೂಲಕ ರಾಷ್ಟ್ರೀಯತೆ, ದೇಶ ಭಕ್ತಿಯನ್ನು ಬಿತ್ತಿದವರು. ಮುಂದಿನ ಜನಾಂಗಕ್ಕೆ ತಿಳಿಸುವ ಉದ್ದೇಶದಿಂದ ಅವರ ವಿಚಾರಧಾರೆಯನ್ನು ಪಠ್ಯದಲ್ಲಿ ಸೇರಿಸಿ, ರಾಷ್ಟ್ರೀಯತೆ ದೇಶಪ್ರೇಮವನ್ನು ಬಿತ್ತುವ ಕೆಲಸ ಮಾಡುತ್ತಿದೆ ಎಂದರು.
ಎಸ್‌ಡಿಪಿಐ ನಿಷೇಧ: ಚಿಂತನೆ
ಎಸ್‌ಡಿಪಿಐ ನಿಷೇಧಿಸುವ ಬಗ್ಗೆ ಸರಕಾರವು ಚಿಂತಿಸುತ್ತಿದೆ. ಕಾಲಾವಕಾಶ ಬೇಕಾಗುತ್ತದೆ. ಕೇಂದ್ರ ಸರಕಾರವು ಅದರ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತದೆ ಎಂದು ಸಚಿವರು ಹೇಳಿದರು.
ಹಿರಿಯ ನ್ಯಾಯವಾಧಿ ಎಂ.ಕೆ. ವಿಜಯಕುಮಾರ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಬಿಜೆಪಿ ಪ್ರ. ಕಾರ್ಯದರ್ಶಿ ನವೀನ್ ನಾಯಕ್, ಜಯರಾಂ ಸಾಲ್ಯಾನ್, ವಕ್ತಾರ ಹರೀಶ್ ಶೆಣೈ, ರೇಶ್ಮಾ ಉದಯ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಗೋಡ್ಸೆ ಹೆಸರು, ತನಿಖೆ ನಡೆಯುತ್ತಿದೆ
ಬೋಳ ಗ್ರಾ.ಪಂ. ರಸ್ತೆಗೆ ಗೋಡ್ಸೆ ನಾಮಫಲಕ ಹಾಕಿದ ವಿಚಾರದ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಘಟನೆಗೆ ಸಂಬಂಧಿಸಿ ಸರಕಾರ, ಗ್ರಾ.ಪಂ. ಕಡೆಯಿಂದ ಹಾಕಿದ್ದಲ್ಲ ಎಂದು ಶಾಸಕರೇ ಸ್ಪಷ್ಟಪಡಿಸಿದ್ದಾರೆ. ನಾಮಪಲಕವನ್ನು ಗ್ರಾ.ಪಂ. ಪೊಲೀಸ್ ಭದ್ರತೆಯಲ್ಲಿ ತೆರವುಗೊಳಿಸಿದೆ. ನಮ್ಮ ವ್ಯವಸ್ಥೆ ಜಿಲ್ಲಾಡಳಿತ, ಸರಕಾರದ ಮಟ್ಟಿಗೆ ಅದು ಮುಗಿದ ವಿಚಾರ. ದೂರು ದಾಖಲಾದ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.