ಕುಂದಾಪುರ: 42 ಕೋ.ರೂ. ಒಳಚರಂಡಿಗೆ !
ನೀರು ಸೇರಲು ಬಾವಿಗಳೇ ಇಲ್ಲ ; ದೂರಾಲೋಚನೆಯೇ ಇಲ್ಲದ ಯೋಜನೆ
Team Udayavani, Dec 9, 2019, 5:37 AM IST
ಸಾಂದರ್ಭಿಕ ಚಿತ್ರ.
ಕುಂದಾಪುರ: ಪುರಸಭೆ ವ್ಯಾಪ್ತಿಯಲ್ಲಿ 42 ಕೋ.ರೂ.ಗಳಲ್ಲಿ ಆರಂಭಿಸಿದ ಒಳಚರಂಡಿ ಯೋಜನೆ ಕಾಮಗಾರಿ ಸ್ಥಗಿತವಾಗಿದೆ. ಚರಂಡಿ ನೀರು ಹರಿಸಿ ಶುಚಿ ಮಾಡಲು ಬಾವಿಗಳಿಲ್ಲದ ಕಾರಣ ಕಾಮಗಾರಿ ನಿಲ್ಲಿಸಲಾಗಿದ್ದು, ಅನುಮತಿಗಾಗಿ ಕಾಯಲಾಗುತ್ತಿದೆ. ಭೂ ಸ್ವಾಧೀನವೂ ನಡೆದಿಲ್ಲ. ಯೋಜನೆ ಕಾರ್ಯಾರಂಭಿಸುವ ಮುನ್ನವೇ ಮಾಡಬೇಕಿದ್ದ ನಿರಾಕ್ಷೇಪಣ ಪತ್ರ, ಭೂಸ್ವಾಧೀನಗಳನ್ನು ಮುಕ್ಕಾಲಂಶ ವಾದ ಬಳಿಕ ನಿರೀಕ್ಷಿಸಲಾಗುತ್ತಿದ್ದು, ಇಲಾಖೆ ನಗೆಪಾಟಲಿಗೆ ಈಡಾಗಿದೆ.
42 ಕೋ.ರೂ.ಗಳ ಯೋಜನೆ
ಒಳಚರಂಡಿಗೆ 87 ಕೋ.ರೂ.ಗಳ ವಿಸ್ತೃತ ಯೋಜನ ವರದಿ ಸಿದ್ಧಗೊಂಡಾಗ ನರ್ಮ್ ಯೋಜನೆ ತಿರಸ್ಕರಿಸಿತು. ಅನಂತರ 48 ಕೋ.ರೂ.ಗಳ ಯೋಜನೆ ರೂಪಿಸಿ ಅದು ಕೆಯುಡಬ್ಲ್ಯುಎಸ್‌ಡಿಬಿ ವತಿಯಿಂದ ಮಂಜೂರಾಯಿತು. ಕೇಂದ್ರ ಸರಕಾರ ಶೇ.80 ಪಾಲುದಾರಿಕೆಯಲ್ಲಿ 37.89 ಕೋ.ರೂ., ರಾಜ್ಯ ಸರಕಾರ ಶೇ.10ರಷ್ಟು 5.51 ಕೋ. ರೂ., ಸ್ಥಳೀಯಾಡಳಿತ ಸಂಸ್ಥೆಯ ಪಾಲಾಗಿ 4.73 ಕೋ.ರೂ. ಎಂದು ಒಟ್ಟು 48.14 ಕೋ.ರೂ. ಮಂಜೂರಾಗಿತ್ತು. ಪಿ.ಸಿ. ಸ್ನೇಹಲ್ ಕನ್‌ಸ್ಟ್ರಕ್ಷನ್ ಕಂಪೆನಿಯು ಟೆಂಡರ್‌ನಲ್ಲಿ 42.11 ಕೋ.ರೂ.ಗೆ ಗುತ್ತಿಗೆ ಪಡೆಯಿತು. ಕೇಂದ್ರದ ಯುಪಿಎ ಸರಕಾರ ಕೊಡಬೇಕಿದ್ದ ಅನುದಾನದ ಅರ್ಧಾಂಶ 19 ಕೋ.ರೂ.ಗಳನ್ನು ನೀಡಿತ್ತು. ಅನಂತರ ಬಂದ ಎನ್‌ಡಿಎ ಅದನ್ನು ಪರಿಷ್ಕರಿಸಿ ಕೇಂದ್ರದ ಪಾಲು 23.68 ಕೋ.ರೂ. ಮಾತ್ರ ಎಂದು 2016ರ ಜುಲೈಯಲ್ಲಿ ಬದಲಾಯಿಸಿ, ಇನ್ನುಳಿದ 5.44 ಕೋ.ರೂ.ಗಳನ್ನು ನೀಡುವುದಾಗಿ ಹೇಳಿತ್ತು. ಕಂಪೆನಿಗೆ 38 ಕೋ.ರೂ. ಬಿಡುಗಡೆಯಾಗಿದೆ.
ಬಾವಿಗಿಲ್ಲ ನಿರಾಕ್ಷೇಪಣೆ
ನಗರದ ವಿವಿಧೆಡೆ ಸಂಗ್ರಹವಾದ ಕೊಳಚೆ ನೀರು ಹರಿದು ಸೇರಲು ಒಟ್ಟು ಐದು ಕಡೆ ಬಾವಿಗಳ ತ್ಯಾಜ್ಯ ಜಲ ಸಂಸ್ಕರಣ ಘಟಕಗಳ ರಚನೆಯಾಗಬೇಕು. ಸಂಗಂ ಬಳಿ, ಮದ್ದುಗುಡ್ಡೆ, ವಿಠಲವಾಡಿ, ಕಡ್ಗಿಮನಿ ರಸ್ತೆ, ಹುಂಚಾರಬೆಟ್ಟು ಬಳಿ ತ್ಯಾಜ್ಯ ನೀರು ಸೇರುವ ಬಾವಿ, ಸಂಸ್ಕರಣ ಘಟಕಗಳಾಗಬೇಕಿದ್ದು, ಇವಕ್ಕೆ ಸಿಆರ್‌ಝಡ್‌ನಿಂದ ನಿರಾಕ್ಷೇಪಣೆ ಪತ್ರ ಅಗತ್ಯವಿದೆ. ಅದಕ್ಕಾಗಿ 7 ಲಕ್ಷ ರೂ.ಗಳನ್ನು ಸಿಆರ್‌ಝಡ್ ಇಲಾಖೆಗೆ ನೀಡಿಯಾಗಿದೆ. ಆದರೆ ಅನುಮತಿ ದೊರೆಯುವುದು ಕಷ್ಟ ಎಂಬ ಮಾತು ಕೇಳಿ ಬರುತ್ತಿದೆ. ಯೋಜನೆಯ ರೂಪುರೇಷೆ ತಯಾರಿ ಸಂದರ್ಭ, ಮಂಜೂರಾತಿ ಸಂದರ್ಭವೇ ನಿರಾಕ್ಷೇಪಣೆ ಸಿದ್ಧಪಡಿಸಿ ಇಟ್ಟುಕೊಳ್ಳಬೇಕಿತ್ತು. ಬದಲಾಗಿ ಕಾಮಗಾರಿ ಆರಂಭವಾಗಿ 3 ವರ್ಷಗಳ ಅನಂತರ, ಶೇ.80ರಷ್ಟು ಕೆಲಸ ಪೂರ್ಣವಾದ ಬಳಿಕ ನೀರನ್ನೆಲ್ಲಿ ಬಿಡುವುದೆಂಬ ಪ್ರಶ್ನೆ ಉದ್ಭವಿಸಿ ಅನುಮತಿಗೆ ಕಾಯಲಾಗುತ್ತಿದೆ.
ವಿರೋಧ
ಮೆಸ್ಕಾಂ ಹಿಂಬದಿ ಹುಂಚಾರುಬೆಟ್ಟು ಬಳಿ ತ್ಯಾಜ್ಯ ಬಾವಿ ಮತ್ತು ಸಂಸ್ಕರಣ ಘಟಕ ನಿರ್ಮಾಣಕ್ಕೆ ಸ್ಥಳೀಯರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅನೇಕ ಪ್ರತಿಭಟನೆಗಳು ನಡೆದಿವೆ. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು 2 ಕೋ.ರೂ.ಗಳನ್ನು ತಮ್ಮ ಅನುದಾನದಲ್ಲಿ ಮೀಸಲಿರಿಸಿದ್ದು, ಬದಲಿ ಜಾಗದಲ್ಲಿ ತ್ಯಾಜ್ಯ ಬಾವಿ ನಿರ್ಮಿಸಿ ಅಷ್ಟು ದೂರದವರೆಗೆ ಯುಜಿಡಿ ಪೈಪ್‌ಲೈನ್ ನಿರ್ಮಾಣವನ್ನು ಶಾಸಕರ ಅನುದಾನದ ಮೂಲಕ ನಡೆಸುವಂತೆ ಸೂಚಿಸಿದ್ದಾರೆ.
ಮಂಜೂರು
2008ರಲ್ಲಿ ಪುರಸಭೆ ಅಧ್ಯಕ್ಷರಾಗಿದ್ದ ಮೋಹನ ದಾಸ ಶೆಣೈ, ಮಾಜಿ ಶಾಸಕ ಎ.ಜಿ. ಕೊಡ್ಗಿ ಮೂಲಕ ಪುರಸಭೆಗೆ ವಿಶೇಷ ಅನುದಾನಕ್ಕಾಗಿ ಡಾ| ವಿ.ಎಸ್. ಆಚಾರ್ಯರಲ್ಲಿ ಮನವಿ ಮಾಡಿದ್ದರು. ಡಾ| ಆಚಾರ್ಯರ ಸೂಚನೆಯಂತೆ ಒಳಚರಂಡಿಯ ಯೋಜನೆ ರೂಪಿಸಲು 50 ಸಾವಿರ ರೂ.ಗಳ ಡಿಡಿ ನೀಡಲಾಗಿತ್ತು. ಭೂಸ್ವಾಧೀನಕ್ಕೆ 9 ಕೋ.ರೂ.ಗಳ ಅಗತ್ಯವಿದ್ದಾಗ ಪುರಸಭೆಯಲ್ಲಿ ಅಷ್ಟು ಹಣ ಇಲ್ಲದೆ; 2 ಕೋ.ರೂ.ಗಳನ್ನು ಸರಕಾರ ಎಸಿಯವರಿಗೆ ಬಿಡುಗಡೆ ಮಾಡಿ, ಬಳಿಕ 6 ಕೋ.ರೂ.ಗಳ ವಿಶೇಷ ಅನುದಾನವನ್ನೂ ನೀಡಲಾಗಿತ್ತು. ಈ ಹಣವನ್ನೆಲ್ಲ ಕಾಂಕ್ರೀಟ್ ರಸ್ತೆ ಮಾಡಲು ಉಪಯೋಗಿಸಲಾಯಿತು!
ಯೋಜನೆಯ ರೂಪ
ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್ ಗಳಿದ್ದು, 39 ಕಿ.ಮೀ. ಒಳಚರಂಡಿ ನಿರ್ಮಿಸ ಬೇಕಿತ್ತು. ಈವರೆಗೆ 29 ಕಿ.ಮೀ.ನಷ್ಟು ಕಾಮಗಾರಿ ನಡೆದಿದೆ. 1,450 ಮ್ಯಾನ್‌ಹೋಲ್‌ಗಳ ಪೈಕಿ 1 ಸಾವಿರ ಮಾತ್ರ ಪೂರ್ಣವಾಗಿವೆ. 7 ಎಕರೆಯಷ್ಟು ಭೂಸ್ವಾಧೀನ ಆಗಬೇಕಿದ್ದುದು ವಿರೋಧ, ಪ್ರತಿಭಟನೆಯ ಬಳಿಕ 1.1 ಎಕರೆ ಮಾತ್ರ ಅನಿವಾರ್ಯವಾಗಿದೆ. ಈ ಪ್ರಕ್ರಿಯೆಗಾಗಿ ಪುರಸಭೆಯಿಂದ ಸಂದಾಯವಾಗಬೇಕಿದ್ದ ಮೊತ್ತವನ್ನು ಕೂಡ ಭೂಸ್ವಾಧೀನಾಧಿಕಾರಿಗೆ ಪಾವತಿಸಲಾಗಿದೆ. ಆದರೆ ಭೂಸ್ವಾಧೀನ ಪ್ರಕ್ರಿಯೆ ನಡೆದೇ ಇಲ್ಲ.
ಅನುಮತಿಗೆ ಕಾಯಲಾಗುತ್ತಿದೆ
ತ್ಯಾಜ್ಯ ಜಲ ಸಂಸ್ಕರಣೆ ಬಾವಿ ಗಳ ನಿರ್ಮಾಣಕ್ಕೆ ಸಿಆರ್‌ಝಡ್ ನಿಂದ ಅನುಮತಿಗಾಗಿ ಹಣ ಪಾವತಿಸಿ ಕಾಯ ಲಾಗುತ್ತಿದೆ. ಅಲ್ಲಿವರೆಗೆ ಕೆಲಸವನ್ನು ಕಂಪೆನಿ ಸ್ಥಗಿತಗೊಳಿಸಿದೆ.
– ಗೋಪಾಲಕೃಷ್ಣ ಶೆಟ್ಟಿ
ಮುಖ್ಯಾಧಿಕಾರಿ, ಪುರಸಭೆ
ರಸ್ತೆಗಳಿಗೆ ಹಾನಿ
ನಗರದೆಲ್ಲೆಡೆ ಹೊಸದಾಗಿ ಕಾಂಕ್ರೀಟ್, ಡಾಮರು ರಸ್ತೆಗಳು, ಇಂಟರ್‌ಲಾಕ್ ಅಳವಡಿಸಿದ ರಸ್ತೆಗಳಲ್ಲೇ ಯುಜಿಡಿ ಪೈಪ್‌ಲೈನ್ ಹೋಗಿದೆ. ಇವುಗಳನ್ನು ಅಲ್ಲಲ್ಲಿ ತೇಪೆ ಹಾಕಿ ಮರುನಿರ್ಮಾಣ ಮಾಡಲಾಗಿದೆಯಾದರೂ ಅದರ ಮೂಲಸೌಂದರ್ಯ ಕಳೆದುಹೋಗಿದೆ.
-ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಎಎನ್‌ಎಫ್‌ಗೆ ಸಿಗದ ನಕ್ಸಲರು ಸಿಎಂಗೆ ಸಿಕ್ಕಿದ್ದು ಹೇಗೆ?: ಶಾಸಕ ಸುನೀಲ್ ಕುಮಾರ್
Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
ICC ಚಾಂಪಿಯನ್ಸ್ ಟ್ರೋಫಿ ಪಾಕ್ ಕ್ರೀಡಾಂಗಣಗಳೇ ಸಜ್ಜಾಗಿಲ್ಲ !
ವಿದ್ಯುತ್ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.