‘ಕೇರಳ ಸ್ಟೋರಿ’ಯಂತೆ ಉಡುಪಿ ಸಹಿತ ‘ಕರ್ನಾಟಕ ಸ್ಟೋರಿ’ಗೆ ಸ್ಕೆಚ್ ಹಾಕಲು ಬಿಡೆವು; ಕುಯಿಲಾಡಿ
ವಿಡಿಯೋ ಚಿತ್ರೀಕರಣ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹ
Team Udayavani, Jul 26, 2023, 10:29 AM IST
ಉಡುಪಿ: ಜಿಹಾದಿ ಮಾನಸಿಕತೆಯ ಕೆಲವು ವಿದ್ಯಾರ್ಥಿನಿಯರು ಉಡುಪಿಯ ಕಾಲೇಜಿನಲ್ಲಿ ನಡೆದ ಗಂಭೀರ ಪ್ರಕರಣದಲ್ಲಿ ಭಾಗಿಯಾಗಿದ್ದು, ಶಿಕ್ಷಣ ಮತ್ತು ಸಾಂಸ್ಕೃತಿಕ ನಗರಿ ಉಡುಪಿಯ ಖ್ಯಾತಿಗೆ ಮಸಿ ಬಳಿಯುವ ಪ್ರಯತ್ನದ ಮೂಲಕ ‘ಕೇರಳ ಸ್ಟೋರಿ’ಯಂತೆ ಉಡುಪಿ ಸಹಿತ ‘ಕರ್ನಾಟಕ ಸ್ಟೋರಿ’ಗೆ ಸ್ಕೆಚ್ ಹಾಕಲು ಎಂದಿಗೂ ಅವಕಾಶ ನೀಡಲಾರೆವು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಶಿಕ್ಷಣ ಸಂಸ್ಥೆಯ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಕುಯಿಲಾಡಿ ಈಗಾಗಲೇ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಈ ಸಂಬಂಧವಾಗಿ ಮೂವರು ವಿದ್ಯಾರ್ಥಿನಿಯರನ್ನು ಅಮಾನತು ಮಾಡಿರುವುದಾಗಿ ತಿಳಿಸಿದ್ದು, ಇದರಿಂದ ಪ್ರಕರಣದ ನಿಖರತೆ ಸಾಬೀತಾಗಿದೆ. ಶಿಕ್ಷಣ ಸಂಸ್ಥೆಯ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋಗಳನ್ನು ಚಿತ್ರೀಕರಿಸಿ ಅವುಗಳನ್ನು ಸಮಾಜಘಾತುಕ ಶಕ್ತಿಗಳಿಗೆ ನೀಡುವ ಕುಕೃತ್ಯದ ಯೋಜನೆಯ ಮೂಲಕ ಅವರ ಭವಿಷ್ಯವನ್ನು ಹಾಳುಗೆಡಹಲು ರೂಪಿಸಿರುವ ಈ ಹುನ್ನಾರ ಅತ್ಯಂತ ಖಂಡನೀಯ ಎಂದರು.
ರಾಜ್ಯ ಸರಕಾರ ಪೊಲೀಸರ ಮೇಲೆ ಒತ್ತಡ ಹೇರಿ ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿರುವ ಬಗ್ಗೆ ಗುಮಾನಿ ಇದೆ. ಮೂರು ಮಂದಿ ತಪ್ಪಿತಸ್ಥ ವಿದ್ಯಾರ್ಥಿನಿಯರು ತಮ್ಮ ಮೊಬೈಲ್ ಗಳಲ್ಲಿ ಚಿತ್ರೀಕರಿಸಿಕೊಂಡಿದ್ದ ವೀಡಿಯೋಗಳನ್ನು ಡಿಲೀಟ್ ಮಾಡಲಾಗಿದೆ ಹಾಗೂ ಈ ಪ್ರಕರಣದಲ್ಲಿ ಇಬ್ಬರು ಯುವಕರು ಕೂಡಾ ಶಾಮೀಲಾಗಿದ್ದಾರೆ ಎಂಬ ವಿಚಾರವನ್ನು ಸಂತ್ರಸ್ತ ವಿದ್ಯಾರ್ಥಿನಿಯರು ಬಹಿರಂಗಪಡಿಸಿರುವುದಾಗಿ ತಿಳಿದುಬಂದಿದೆ. ಇದರ ಬಗ್ಗೆ ಪೊಲೀಸ್ ಇಲಾಖೆ ತನಿಖೆಯ ದಾರಿ ತಪ್ಪಿಸುವ ಅಥವಾ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸಿದರೆ ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಪ್ರಕರಣದ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ವಿದ್ಯಾರ್ಥಿಗಳೊಂದಿಗೆ ಸೇರಿ ನ್ಯಾಯಕ್ಕಾಗಿ ತೀವ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆಯ ಸಂದೇಶವನ್ನು ನೀಡಿದರು.
ರಾಜ್ಯ ಸರಕಾರ ಮತ್ತು ಗೃಹ ಇಲಾಖೆ ಈ ಪ್ರಕರಣವನ್ನು ಲಘುವಾಗಿ ಪರಿಗಣಿಸಬಾರದು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಈ ಪ್ರಕರಣವನ್ನು ಹಳ್ಳ ಹಿಡಿಸುವ ಪ್ರಯತ್ನ ಮಾಡಿದಲ್ಲಿ ಅದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಅಡಿಕೆ ತೋಟಕ್ಕೆ ಹೋಗಿದ್ದ ವೃದ್ಧೆ ನಾಪತ್ತೆ; ಹಳ್ಳದಲ್ಲಿ ಕೊಚ್ಚಿಹೋಗಿರುವ ಶಂಕೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.