ಬಸ್‌ಗಳ ಕೊರತೆ ವಿದ್ಯಾರ್ಥಿಗಳಿಗೆ ಸಂಕಷ್ಟ
Team Udayavani, Sep 7, 2021, 8:00 AM IST
ಅಜೆಕಾರು: ಲಾಕ್‌ಡೌನ್ ಸಂದರ್ಭ ಸಂಚಾರ ಸ್ಥಗಿತಗೊಳಿಸಿದ ಗ್ರಾಮೀಣ ಭಾಗದ ಬಹುತೇಕ ಖಾಸಗಿ ಬಸ್‌ಗಳು ಇನ್ನೂ ರಸ್ತೆಗಿಳಿದಿಲ್ಲ.
ಕೆಲವೊಂದು ಬಸ್‌ಗಳು ಕಳೆದ ಎರಡು ವರ್ಷಗಳಿಂದ ಸಂಚಾರವನ್ನೇ ಸ್ಥಗಿತಗೊಳಿಸಿರುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರು ಸಂಕಷ್ಟಪಡುವಂತಾಗಿದೆ.
ಸೆ.6ರಿಂದ 6ನೇ ತರಗತಿಯಿಂದ ಪಿಯುಸಿವರೆಗಿನ ಶಾಲಾ ಕಾಲೇಜುಗಳು ಪ್ರಾರಂಭವಾಗಿದ್ದು ಬಸ್‌ಗಳ ವಿರಳ ಸಂಚಾರದಿಂದ ವಿದ್ಯಾರ್ಥಿಗಳು ಸಂಕಷ್ಟ ಪಡುವಂತಾಗಿದೆ. ಪರವಾನಿಗೆ ಪಡೆದ ಬಸ್‌ಗಳು ಸಂಚಾರ ನಡೆಸದೆ ಕೆಲವು ಬಸ್‌ಗಳು ಮಾತ್ರ ಸಂಚಾರ ನಡೆಸುವುದರಿಂದ ಪ್ರಯಾಣಿಕರ ನಡುವೆ ಯಾವುದೇ ರೀತಿಯ ಅಂತರವಿಲ್ಲದೆ ಕೊರೊನಾ ಹರಡುವ ಭೀತಿಯು ವಿದ್ಯಾರ್ಥಿಗಳನ್ನು ಕಾಡುತ್ತಿದೆ.
ಕಾರ್ಕಳ -ಹೆಬ್ರಿ ರಾಜ್ಯ ಹೆದ್ದಾರಿಯಲ್ಲಿಯೇ ಬಸ್‌ಗಳು ಸಂಚಾರ ನಡೆಸುತ್ತಿಲ್ಲ ಇನ್ನೂ ಗ್ರಾಮೀಣ ಭಾಗದಲ್ಲಿ ಬಸ್ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆರ್ವಾಶೆ, ಅಜೆಕಾರು, ಕಾರ್ಕಳ ಮಾರ್ಗದ ಕೆಲವು ಬಸ್‌ಗಳು 2 ವರ್ಷಗಳಿಂದ ಸಂಚಾರ ನಡೆಸುತ್ತಿಲ್ಲ. ಹೆರ್ಮುಂಡೆ ಗ್ರಾಮಕ್ಕೆ ಬಸ್ ಸಂಚಾರವೇ ಇಲ್ಲದ ಸ್ಥಿತಿಯಾಗಿದೆ. ಬಸ್‌ಗಳ ಕೊರತೆಯಿಂದ ಕೆಲವು ವಿದ್ಯಾರ್ಥಿಗಳು ನಡೆದುಕೊಂಡು ಶಾಲೆಗೆ ತೆರಳಿದರು.
ಸರಕಾರಿ ಬಸ್‌ಗೆ ಮನವಿ:
ಅಜೆಕಾರು, ಕೆರ್ವಾಶೆ, ಮುನಿಯಾಲು, ಮುಟ್ಲುಪಾಡಿ, ವರಂಗ, ಮುದ್ರಾಡಿ, ಹೆಬ್ರಿ ಭಾಗದಲ್ಲಿ ಸರಕಾರಿ ಬಸ್ ಇಲ್ಲದೆ ಇರುವುದರಿಂದ ಜನ ಸಂಚಾರಕ್ಕೆ ಸಂಕಷ್ಟಪಡುವಂತಾಗಿದೆ. ಖಾಸಗಿ ಬಸ್ ಮಾಲಕರು ಜನರ ಸಮಸ್ಯೆಗೆ ಸ್ಪಂದಿಸುವುದಿಲ್ಲ. ಈ ನಿಟ್ಟಿನಲ್ಲಿ ಕಾರ್ಕಳ ಹೆಬ್ರಿ ನಡುವೆ ಸರಕಾರಿ ಬಸ್ ಸಂಚಾರ ಪ್ರಾರಂಭಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ. ಸರಕಾರಿ ಬಸ್ ಪ್ರಾರಂಭಿಸುವಂತೆ ಜನಾಂದೋಲನ ಪ್ರಾರಂಭ ಮಾಡಲಾಗುವುದು ಎಂದು ಹೇಳುತ್ತಿದ್ದಾರೆ.
ಹೆಬ್ರಿ –ಕಾರ್ಕಳ ಸಂಚಾರಕ್ಕೆ 1.30ಗಂಟೆ :
ಹೆಬ್ರಿ ಕಾರ್ಕಳ ನಡುವೆ ಸಂಚಾರ ನಡೆಸುವ ಬಸ್‌ಗಳು ಸುಮಾರು 1 ಗಂಟೆಗಳ ಅಂತರದಲ್ಲಿ ಈ ಹಿಂದೆ ಸಂಚಾರ ನಡೆಸುತ್ತಿದ್ದು ಆದರೆ ಈಗ ಕೆಲವು ಬಸ್‌ಗಳು ಸುಮಾರು ಒಂದೂವರೆ ಗಂಟೆಗೂ ಅಧಿಕ ಸಮಯ ತೆಗೆದುಕೊಳ್ಳುತ್ತಿರುವ ಬಗ್ಗೆ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪ್ರತೀ ಬಸ್‌ನಿಲ್ದಾಣದಲ್ಲಿ 10 ರಿಂದ 15 ನಿಮಿಷ ಬಸ್ ನಿಲ್ಲಿಸುವುದರಿಂದ ಸಂಚಾರ ವಿಳಂಬವಾಗುತ್ತಿದೆ ಎಂದು ಪ್ರಯಾಣಿಕರು ದೂರಿದ್ದಾರೆ.
ಶಿಕ್ಷಕರ ಸಮಸ್ಯೆ:
ಗ್ರಾಮೀಣ ಭಾಗದ ಶಾಲೆಗಳ ಶಿಕ್ಷಕರಿಗೆ ಸ್ವಂತ ವಾಹನ ಇದ್ದರಷ್ಟೇ ಶಾಲೆಗೆ ತೆರಳಬಹುದಾಗಿದೆ. ಇಲ್ಲದಿದ್ದರೆ ಸುಮಾರು 100-150 ರೂ. ಬಾಡಿಗೆ ನೀಡಿ ಆಟೋದಲ್ಲಿ ಪ್ರತಿದಿನ ಸಂಚಾರ ನಡೆಸಬೇಕಾಗಿದೆ.
ಸುಮಾರು 30ರೂ. ಇದ್ದ ಪ್ರಯಾಣದರ ಈಗ 36 ಅಥವಾ 37 ರೂ.ವರೆಗೂ ಹೆಚ್ಚಾಗಿದೆ. ಇದರಿಂದ ಬಸ್ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದರೂ ಸಹ ಬಸ್ ಮಾಲಕರಿಗೆ ನಷ್ಟ ಉಂಟಾಗಲು ಸಾಧ್ಯವಿಲ್ಲ. ಹಾಗಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಪರವಾನಿಗೆ ಪಡೆದ ಎಲ್ಲ ಬಸ್‌ಗಳು ಸಂಚಾರ ನಡೆಸಬೇಕು ಅಥವಾ ಬಸ್ ಓಡಿಸುವವರಿಗೆ ತಮ್ಮ ಪರವಾನಿಗೆ ಹಸ್ತಾಂತರಿಸಬೇಕು. ಅಲ್ಲದೆ ಈ ಗ್ರಾಮೀಣ ಭಾಗ ಸೇರಿದಂತೆ ಪ್ರತಿಯೊಂದು ಊರಿಗೂ ಸರಕಾರಿ ಬಸ್ ಸಂಚಾರ ಪ್ರಾರಂಭವಾಗಬೇಕು. ಎಂದು ಕೆರ್ವಾಶೆಯ ಪ್ರಭಾಕರ್ ಜೈನ್ ಹೇಳುತ್ತಾರೆ.
ಸಂಚಾರ ಸಂಕಷ್ಟ :
ಹೆಬ್ರಿ, ಕಾರ್ಕಳ ನಡುವೆ ಈ ಹಿಂದೆ ಪ್ರತೀ 15 ನಿಮಿಷಕ್ಕೊಂದು ಬಸ್‌ಗಳು ಸಂಚಾರ ನಡೆಸುತ್ತಿದ್ದರೆ ಲಾಕ್‌ಡೌನ್ ಮುಗಿದ ಬಳಿಕ ಬೆರಳೆಣಿಕೆಯ ಬಸ್‌ಗಳು ಮಾತ್ರ ಸಂಚಾರ ನಡೆಸುತ್ತಿವೆ. ಕೆಲವೇ ಕೆಲವು ಬಸ್‌ಗಳು ಓಡಾಟ ನಡೆಸುವುದರಿಂದ ಇರುವ ಬಸ್‌ಗಳಲ್ಲಿಯೇ ಸಂಚಾರ ನಡೆಸುವುದು ಪ್ರಯಾಣಿಕರಿಗೆ ಅನಿವಾರ್ಯವಾಗಿದ್ದು ಬಸ್‌ನ ಫುಟ್‌ಬೋರ್ಡ್‌ನಲ್ಲಿಯೇ ವಿದ್ಯಾರ್ಥಿಗಳು ನೇತಾಡಿಕೊಂಡು ಸಂಚಾರ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.ಶಾಲೆ ಪ್ರಾರಂಭವಾದ ಪ್ರಥಮ ದಿನ ವಿದ್ಯಾರ್ಥಿಗಳು ಸಂಚಾರಕ್ಕಾಗಿ ಸಾಹಸವನ್ನೇ ಪಡಬೇಕಾಗಿತ್ತು.
ಕೊರೊನಾ ಕಾರಣ ತರಗತಿಯಲ್ಲಿ ಒಂದು ಬೆಂಚಿನಲ್ಲಿ ಇಬ್ಬರೇ ವಿದ್ಯಾರ್ಥಿಗಳು ಕುಳಿತು ಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಆದರೆ ವಿರಳ ಬಸ್‌ಗಳಿಂದಾಗಿ ಬಸ್‌ನಲ್ಲಿ ನಿಲ್ಲಲು ಕೂಡ ಜಾಗ ಇಲ್ಲದಂತಾಗಿದೆ. ಇನ್ನು ಸಾಮಾಜಿಕ ಅಂತರ ಹೇಗೆ ಸಾಧ್ಯ. –ಕಾರ್ತಿಕ್ ಶೆಟ್ಟಿ ಕಾಡುಹೋಳೆ, ವಿದ್ಯಾರ್ಥಿ
ಉಡುಪಿ ಜಿಲ್ಲೆಯಲ್ಲಿ ಸುಮಾರು 674 ಬಸ್‌ಗಳು ಪರವಾನಿಗೆಯನ್ನು ಸರಂಡರ್ ಮಾಡಲಾಗಿದೆ. ಒಂದುವೇಳೆ ಪರವಾನಿಗೆ ಪಡೆದು ಬಸ್ ಸಂಚಾರ ನಿಲ್ಲಿಸಿ ಕಳ್ಳಾಟ ಮಾಡುತ್ತಿದ್ದರೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.–ಎ.ಪಿ.ಗಂಗಾಧರ್, ಪ್ರಾದೇಶಿಕ ಸಾರಿಗೆ ಆಯುಕ್ತರು, ಉಡುಪಿ
-ಜಗದೀಶ್ ಅಂಡಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.