ಸಿಬಂದಿಗಳಿಲ್ಲದೆ ನಲುಗಿದ ಕಾರ್ಕಳ ಪುರಸಭೆ
21 ಹುದ್ದೆಗಳಲ್ಲಿ ಸಿಬಂದಿ ಇಲ್ಲ , 18 ಪೌರ ಕಾರ್ಮಿಕರ ಕೊರತೆ,ಸ್ವಚ್ಛತೆ, ಸೇವೆ, ಅಭಿವೃದ್ಧಿಗೆ ಹಿನ್ನಡೆ
Team Udayavani, Feb 20, 2021, 3:20 AM IST
ಕಾರ್ಕಳ: ಪುರಸಭೆ ವ್ಯಾಪ್ತಿಯಲ್ಲಿ ಪರಿಸರ ಸ್ವತ್ಛತೆ ಅತೀ ಮುಖ್ಯವಾಗಿದೆ. ಆದರೆ ಪುರಸಭೆ ಕಚೇರಿಯ ಸಿಬಂದಿ ಕೊರತೆ ಪಟ್ಟಿಯಲ್ಲಿ ಪೌರ ಕಾರ್ಮಿಕರದು ಸಿಂಹಪಾಲಿದೆ. ಇತರ ಸಿಬಂದಿ ಕೊರತೆಯಿದ್ದು ಸಮಸ್ಯೆಗಳಾಗುತ್ತಿವೆ.
ಪುರಸಭೆ ಕಾರ್ಯಾಲಯಕ್ಕೆ ಮಂಜೂರಾಗಿ ಇರುವ ಹುದ್ದೆ ಪ್ರಮಾಣ ಹೆಚ್ಚಿದ್ದರೂ ಮಂಜೂರುಗೊಂಡ ಹುದ್ದೆಗಳ ಪೈಕಿ ಪ್ರಮುಖ ವಿಭಾಗದ ಹುದ್ದೆಗಳು ಖಾಲಿ ಇವೆ. ಪೌರ ಕಾರ್ಮಿಕರ ಹುದ್ದೆಗಳೂ ಖಾಲಿ ಇವೆ. ಇನ್ನು ಕೆಲವು ಹುದ್ದೆ ಗಳಲ್ಲಿ ದಿನಗೂಲಿ, ಹೊರಗುತ್ತಿಗೆ, ಸಹಿತ ತಾತ್ಕಾಲಿಕ ನೆಲೆಯಲ್ಲಿ ನೇಮಕವಾದ ಸಿಬಂದಿ ಕರ್ತವ್ಯದಲ್ಲಿ ಇದ್ದಾರೆ. ಇನ್ನು 21 ಹುದ್ದೆಗಳಲ್ಲಿ ಸಿಬಂದಿ ಇಲ್ಲ .
ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಕೆಲಸಗಳು ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ ಎನ್ನುವ ದೂರು ಸಾರ್ವಜನಿಕರಿಂದ ಇವೆ. ಇದಕ್ಕೆ ಸಿಬಂದಿ ಕೊರತೆ ಮೂಲ ಕಾರಣವಾಗಿದ್ದು, ತೆರವಾದ ಸ್ಥಾನಗಳಿಗೆ ಮರು ನೇಮಕ ಆಗಿಲ್ಲ. ಸಾರ್ವಜನಿಕ ಸೇವೆಗಳು ಮಂದಗತಿಯಲ್ಲಿ ನಡೆಯುತ್ತಿವೆ. ಸಾರ್ವಜನಿಕರು ವಿವಿಧ ಸೇವೆಗಳನ್ನು ಮಾಡಿಸಿಕೊಳ್ಳಲು ನಿತ್ಯ ಪುರಸಭೆ ಕಚೇರಿಗೆ ಆಗಮಿಸುತ್ತಿದ್ದು, ಸಿಬಂದಿ ಕೊರತೆಗಳಿರುವ ಕಾರಣ ಸಮಯಕ್ಕೆ ತಕ್ಕಂತೆ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಆಗುತ್ತಿಲ್ಲ. ಸಮಯ ವ್ಯರ್ಥವಾಗುತ್ತಿದೆ. ಆಡಳಿತಕ್ಕೂ ದೊಡ್ಡ ಸವಾಲಾಗಿ ಉಳಿದಿದೆ.
ಖಾಲಿ ಹುದ್ದೆಗಳು :
ಮುಖ್ಯಾಧಿಕಾರಿ ಹುದ್ದೆ ಭರ್ತಿಯಾಗಿವೆ. ಪರಿಸರ ಅಭಿಯಂತರ ಹುದ್ದೆಯಲ್ಲಿ ಇದ್ದವರು ವಾರದ ಹಿಂದೆಯಷ್ಟೇ ಸಾಗರ ಕಚೇರಿಗೆ ವರ್ಗಾವಣೆಗೊಂಡಿದ್ದು, ಹುದ್ದೆ ಖಾಲಿಯಿದೆ. ಪ್ರಥಮ ದರ್ಜೆ ಸಹಾಯಕ ಹುದ್ದೆ 2 ಕೂಡ ಖಾಲಿಯಿದೆ. ಸ್ಟೆನೋಗ್ರಾಫರ್ ಹುದ್ದೆ, ಜೂನಿಯರ್ ಪ್ರೋಗ್ರಾಮ್ ಆಫೀಸರ್, ಪ್ರಥಮ ದರ್ಜೆ ಕಂದಾಯ ನಿರೀಕ್ಷಕ, ನೀರು ಸರಬರಾಜು ಅಪರೇಟರ್ 4 ಹುದ್ದೆ, ಕಂಪ್ಯೂಟರ್ ಡಾಟಾ ಎಂಟ್ರಿ, ಜೂನಿಯರ್ ಆರೋಗ್ಯ ಇನ್ಸ್‌ಪೆಕ್ಟರ್ 2 ಹುದ್ದೆ, ದ್ವಿತೀಯ ದರ್ಜೆ ಸಹಾಯಕ 3, ಬಿಲ್ ಕಲೆಕ್ಟರ್, ಚಾಲಕ 2 ಹುದ್ದೆ, ಸಹಾಯಕ ನೀರು ಸರಬರಾಜು ಅಪರೇಟರ್ 4 ಹುದ್ದೆ, ಸ್ಯಾನಿಟರಿ ಸೂಪರ್‌ವೈಸರ್ 2, ಸೀನಿಯರ್ ವಾಲ್‌ಮೆನ್ 2 ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ.
ಆದಾಯವೂ ಇದೆ :
ಪುರಸಭೆ ಆಡಳಿತದಲ್ಲಿ ಉತ್ತಮ ಆದಾಯದ ಮೂಲಗಳಿವೆ. ಕಟ್ಟಡ, ಅಂಗಡಿ ಕೊಠಡಿಗಳ ಬಾಡಿಗೆ, ನೀರು, ಮನೆ ತೆರಿಗೆ ಹೀಗೆ ವಿವಿಧ ಮೂಲಗಳಿಂದ ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ಆದಾಯ ಪುರಸಭೆ ಬೊಕ್ಕಸಕ್ಕೆ ಹರಿದು ಬರುತ್ತಿವೆ.
ಸರಕಾರಕ್ಕೆ ಒತ್ತಡ ತನ್ನಿ :
ಪುರಸಭೆ ವ್ಯಾಪ್ತಿಯಲ್ಲಿ ಸರಕಾರದ ವಿವಿಧ ಹಣಕಾಸು ಯೋಜನೆಗೆ ಸಂಬಂಧಿಸಿ ಯೋಜನೆಗಳು ಕಾರ್ಯಗತವಾಗಿದ್ದರೂ ಅಭಿಯಂತರ ಹುದ್ದೆಗಳ ಸಹಿತ ಪ್ರಮುಖ ಹುದ್ದೆಗಳು ತೆರವಾಗಿರುವ ಕಾರಣ ಎಸ್ಟಿಮೇಟ್ ಮಾಡಿಸಲಾಗುತ್ತಿಲ್ಲ. ವಿವಿಧ ಕೆಲಸ ಕಾರ್ಯಗಳನ್ನು ಕ್ಲಪ್ತ ಸಮಯದಲ್ಲಿ ನೆರವೇರಿಸಲೂ ತೊಂದರೆಯಾಗುತ್ತಿದೆ. ತೆರಿಗೆ ಮತ್ತಿತರ ಸಂಪನ್ಮೂಲ ಸಂಗ್ರಹಕ್ಕೂ ತೊಡಕಾಗಿವೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಿ ಶಾಸಕರ ಗಮನ ಸೆಳೆದು ಸರಕಾರಿ ಮಟ್ಟದಲ್ಲಿ ಸಿಬಂದಿ ನೇಮಕ ಆಗುವಂತೆ ಕ್ರಮ ವಹಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಉತ್ಸಾಹಕ್ಕೂ ತಣ್ಣೀರು :
ಪುರಸಭೆಯಲ್ಲಿ ಹಿಂದಿನ ಎರಡು ವರ್ಷಗಳ ಕಾಲ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗದೆ ಆಡಳಿತ ಸಮಿತಿ ಇರಲಿಲ್ಲ. ಸಮಿತಿ ರಚನೆಯಾದ ನನೆಗುದಿಗೆ ಬಿದ್ದಿದ್ದ ಹಲವು ಯೋಜನೆಗಳಿಗೆ ವೇಗ ನೀಡಬೇಕಿದ್ದರೆ ಮೂಲ ಕಚೇರಿಯಲ್ಲಿ ಸಿಬಂದಿಗಳಿಲ್ಲದೆ ಕೆಲಸ ಕಾರ್ಯಗಳಿಗೆ ತೊಡಕಾಗುತ್ತಿದೆ. ನಿರೀಕ್ಷೆಯ ವೇಗ ನೀಡುವುದಕ್ಕೂ ಸಮಸ್ಯೆಯಾಗುತ್ತಿದೆ. ಚುನಾಯಿತ ಆಡಳಿತ ಉತ್ಸಾಹಕ್ಕೂ ಸಿಬಂದಿ ಕೊರತೆ ತಣ್ಣೀರು ಎರಚಿದೆ.
ಪೌರ ಕಾರ್ಮಿಕರದ್ದೇ ಹೆಚ್ಚು ಕೊರತೆ :
ನಗರದಲ್ಲಿ ದಿನದಿಂದ ದಿನಕ್ಕೆ ತ್ಯಾಜ್ಯ ಹೆಚ್ಚುತ್ತಿದ್ದು, ಇದರ ವಿಲೇವಾರಿ ಸಮಸ್ಯೆಯೇ ಆಡಳಿತಕ್ಕೆ ಸವಾಲಾಗಿದೆ. ಇದರ ಸಮರ್ಪಕ ನಿರ್ವಹಣೆಗೆ ಅಗತ್ಯವಾಗಿ ಬೇಕಾಗಿರುವುದು ಪೌರ ಕಾರ್ಮಿಕರು. ದುರಾದೃಷ್ಟ ಎಂದರೆ ಪುರಸಭೆ ವ್ಯಾಪ್ತಿಯಲ್ಲಿ 38 ಪೌರ ಕಾರ್ಮಿಕರು ಇರಬೇಕಿದ್ದು, 18 ಪೌರ ಕಾರ್ಮಿಕರ ಕೊರತೆಯಿದೆ. ಈಗಿರುವುದು ಕೇವಲ 20 ಮಂದಿ ಮಾತ್ರ. ಇಷ್ಟು ಮಂದಿ ಬಳಸಿಕೊಂಡು ಪುರಸಭೆ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ತ್ಯಾಜ್ಯ ನಿರ್ವಹಣೆ ನಡೆಸುವುದು ಆಡಳಿತಕ್ಕೆ ತ್ರಾಸದಾಯಕವೇ ಆಗಿದೆ.
ಕಚೇರಿಯಲ್ಲಿ ಸಿಬಂದಿ ಕೊರತೆಯಿಂದ ಗಂಭೀರ ಸ್ವರೂಪದ ಸಮಸ್ಯೆಗಳಾಗುತ್ತಿವೆ. ನೇಮಕಾತಿಗೆ ಸಂಬಂಧಿಸಿ ಮೇಲಾಧಿಕಾರಿಗಳಿಗೆ ವಾರದ ಹಿಂದೆಯಷ್ಟೆ ಮನವಿ ಮಾಡಿದ್ದೇವೆ. –ರೇಖಾ ಜೆ. ಶೆಟ್ಟಿ , ಮುಖ್ಯಾಧಿಕಾರಿ , ಪುರಸಭೆ ಕಾರ್ಕಳ
ಒಟ್ಟು ಮಂಜೂರುಗೊಂಡ ಹುದ್ದೆ 100
ಭರ್ತಿಯಾಗಿರುವುದು 34
ಹುದ್ದೆ ಭರ್ತಿಯಾಗಿರಬೇಕಿರುವುದು 66
ದಿನಕೂಲಿ ನೌಕರರು 24
ಹೊರಗುತ್ತಿಗೆ 21
ಭರ್ತಿ ಬಾಕಿಯಿರುವುದು 21
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.