“ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ’
ಶ್ರೀ ರಾಘವೇಂದ್ರ ಸ್ವಾಮಿಗಳ ಬದುಕು-ಸಂದೇಶ
Team Udayavani, Mar 2, 2020, 5:32 AM IST
ತಮಿಳುನಾಡಿನ ಚಿದಂಬರ ಕ್ಷೇತ್ರ ಸಮೀಪದ ಭುವನಗಿರಿಯಲ್ಲಿ 1595ರಲ್ಲಿ ಜನಿಸಿದ ಶ್ರೀ ರಾಘವೇಂದ್ರಸ್ವಾಮಿಗಳು (ಪೂರ್ವಾಶ್ರಮದ ಹೆಸರು ವೆಂಕಟನಾಥ) 76 ವರ್ಷಗಳ ಕಾಲ ಇಹಲೋಕದಲ್ಲಿದ್ದು ಇಚ್ಛಾಮರಣಿಯಂತೆ 1671ರಲ್ಲಿ ಸಶರೀರವಾಗಿ ವೃಂದಾ ವನವನ್ನು ಪ್ರವೇಶಿಸಿದರು. ಅವರು ಜನಿಸಿ ಈಗ 425 ವರ್ಷಗಳಾಗಿವೆ, ಅವರು ಭೌತಿಕ ಶರೀರದಲ್ಲಿ ಕೊನೆಯದಾಗಿ ಕಾಣಿಸಿಕೊಂಡು 349 ವರ್ಷಗಳಾಗಿವೆ.
“ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ| ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ||’ ಈ ಧ್ಯಾನ ಶ್ಲೋಕದಲ್ಲಿ ಅವರ ಆದ್ಯತೆ ಸತ್ಯ ಮತ್ತು ಧರ್ಮಕ್ಕೆ ಎನ್ನುವುದು ಕಂಡುಬರುತ್ತದೆ. ಎಲ್ಲ ಧರ್ಮೀಯರಿಗೂ ಅನುಗ್ರಹ ಮಾಡಿದ ಯತಿಗಳು ಎಂಬುದಕ್ಕೆ ರಾಯರ ಕಾಲಾನಂತರ ಮಂತ್ರಾಲಯಕ್ಕೆ ಬಂದ ಬ್ರಿಟಿಷ್ ಅಧಿಕಾರಿ ಥಾಮಸ್ ಮನ್ರೊàವಿಗೂ ದರ್ಶನ ಮತ್ತು ಮಂತ್ರಾಕ್ಷತೆ ಕೊಟ್ಟ ಘಟನೆ (1800 -1807), ಅವರ ತಪಃಪ್ರಭಾವಕ್ಕೆ ಒಳಗಾದ ಅದೋನಿಯ ಮಾಂಡಲಿಕ ಸಿದ್ಧಿಮಸೂದ್ ಖಾನ್ ವೃಂದಾವನ ನಿರ್ಮಾಣಕ್ಕೆ ಸ್ಥಳವನ್ನು ಕೊಟ್ಟದ್ದು, ವೃಂದಾವನದ ಮೇಲೆ ವಿವಿಧ ಭಗವದ್ರೂಪಗಳ ಜತೆ ಮೀನಾರ್ ಕೆತ್ತನೆ ಇರುವುದು ಕೆಲವು ಉದಾಹರಣೆಯಾಗಬಹುದು.
ತಂಜಾವೂರಿನಲ್ಲಿ ಬರಗಾಲವಿದ್ದಾಗ ಯಜ್ಞವನ್ನು ಮಾಡಿ ಮಳೆ ತರಿಸಿದ್ದು, ನಾಶಿಕದಲ್ಲಿ ವಾಸುದೇವ ಪಂತ್ ಅವರ ಸೋದರಳಿಯ ಸುರೇಂದ್ರನಿಗೆ ಬಾಯಿ ಬಿದ್ದು ಹೋಗಿದ್ದಾಗ ಮತ್ತೆ ಹಾಡುವಂತಾದುದು, ಗದುಗಿನ ವೆಂಕಟರಾಯ ದೇಸಾಯಿ, ಸವಣೂರು ನವಾಬನ ಪುತ್ರ ಸತ್ತಾಗ ಬದುಕಿಸಿದ್ದು ಜೀವನಚರಿತ್ರೆಯಲ್ಲಿ ಕಾಣಸಿಗುತ್ತದೆ.
ರಾಘವೇಂದ್ರಸ್ವಾಮಿಗಳು ವೈಕುಂಠದ ಭಗವಂತನ ಸೇವಾ ಕಿಂಕರನಾದ ಶಂಕುಕರ್ಣನ ಅವತಾರ, ಶಂಕುಕರ್ಣ ಪ್ರಹ್ಲಾದನಾಗಿ, ಬಾಹ್ಲಿàಕರಾಜನಾಗಿ, ವ್ಯಾಸರಾಜರಾಗಿ, ರಾಘ ವೇಂದ್ರಸ್ವಾಮಿಗಳಾಗಿ ಅವತರಿಸಿದರು ಎಂಬ ನಂಬಿಕೆ ಇದೆ.
ಶ್ರೀ ರಾಘವೇಂದ್ರಸ್ವಾಮಿಗಳು ಶ್ರೀಮನ್ಮಧ್ವಾಚಾರ್ಯರ ಶಿಷ್ಯರಾದ ಶ್ರೀ ಪದ್ಮನಾಭತೀರ್ಥರ ಪರಂಪರೆಯಲ್ಲಿ ಬಂದ ಕುಂಭಕೋಣ ಮಠದ ಶ್ರೀವಿಜಯೀಂದ್ರತೀರ್ಥರ ಪ್ರಶಿಷ್ಯರಾದರು. ಶ್ರೀ ವಿಜಯೀಂದ್ರತೀರ್ಥರು ಶ್ರೀಕಾಶೀ ಮಠ ಸಂಸ್ಥಾನದ ಪ್ರವರ್ತಕರು. ಶ್ರೀ ವಿಜಯೀಂದ್ರತೀರ್ಥರ ಶಿಷ್ಯ ಶ್ರೀ ಸುಧೀಂದ್ರತೀರ್ಥರು ವೆಂಕಟನಾಥರಿಗೆ ಶ್ರೀ ರಾಘವೇಂದ್ರತೀರ್ಥರೆಂದು ನಾಮಕರಣ ಮಾಡಿ 1621, ದುರ್ಮತಿ ಸಂವತ್ಸರ ಪಾಲ್ಗುಣ ಶುದ್ಧ ಬಿದಿಗೆಯಂದು ಶಿಷ್ಯರಾಗಿ ಸ್ವೀಕರಿಸಿದರು. ಮಧ್ವಾಚಾರ್ಯರ ಬಳಿಕ ಪರಂಪರೆಯಲ್ಲಿ 16ನೆಯ ಯತಿಗಳು ಇವರು.
ಪೂರ್ವಾಶ್ರಮದಲ್ಲಿಯೇ ವಿದ್ವತ್‌ಸಿದ್ಧಿ ವೆಂಕಟನಾಥರಾಗಿರುವಾಗಲೇ ಇವರು ಅಣ್ಣ ಗುರುರಾಜಾಚಾರ್ಯರಲ್ಲಿ, ಅನಂತರ ಭಾವ ಲಕ್ಷ್ಮೀನರ ಸಿಂಹಾಚಾರ್ಯರಲ್ಲಿ ಶಾಸ್ತ್ರಾಧ್ಯಯನ ನಡೆಸಿದ್ದರು. ವೆಂಕಟ ನಾಥರು “ಮಧ್ವವಿಜಯ’ ಗ್ರಂಥಕರ್ತ ನಾರಾಯಣ ಪಂಡಿತಾ ಚಾರ್ಯರ “ಪ್ರಮೇಯ ನವಮಾಲಿಕಾ’ ಗ್ರಂಥಕ್ಕೆ ವ್ಯಾಖ್ಯಾನ ರಚಿಸಿದರು. ಇದು ಅವರ ಚೊಚ್ಚಲ ಕೃತಿ. ಪಾಂಡಿತ್ಯವನ್ನು ಕುಂಭಕೋಣದಲ್ಲಿ ನಡೆದ ವಿದ್ವತ್ಸಭೆಯಲ್ಲಿ ಗಮನಿಸಿದ ಗುರುಗಳು “ಮಹಾಭಾಷ್ಯಾಚಾರ್ಯ’ ಬಿರುದು ನೀಡಿದ್ದರು.
40 ಕೃತಿಗಳ ಕರ್ತ
ಸ್ವಾಮಿಗಳಾದ ಬಳಿಕ ಮಧ್ವಾಚಾರ್ಯರ, ವೇದವ್ಯಾಸರ ಬ್ರಹ್ಮಸೂತ್ರಗಳು, ಉಪನಿಷತ್ತುಗಳು, ಭಗವದ್ಗೀತಾ ಪ್ರಸ್ಥಾನಕ್ಕೆ ಭಾಷ್ಯ ರಚನೆ ಹೀಗೆ ಒಟ್ಟು ಸುಮಾರು 40 ಕೃತಿಗಳನ್ನು ರಚಿಸಿದರು. ಸಮಗ್ರ ಮೀಮಾಂಸಾಗ್ರಂಥಕ್ಕೆ ಸಂಬಂಧಿಸಿ”ಭಾಟ್ಟ ಸಂಗ್ರಹ’ ಗ್ರಂಥಕ್ಕೆ ಮಧುರೆಯ ರಾಜ ಮೆರವಣಿಗೆ ಮಾಡಿಸಿದ್ದ. ವಿಜಾಪುರ ಸಮೀಪದ ಕೃಷ್ಣಾ ನದೀ ತೀರದ ಚಾತುರ್ಮಾಸ್ಯ ವ್ರತಾಚರಣೆಯ ಕಾಲದಲ್ಲಿ ಜಯತೀರ್ಥರ “ತಣ್ತೀಪ್ರಕಾಶಿಕಾ’ ಟೀಕೆಗೆ “ಭಾವದೀಪ’ ಎಂಬ ವ್ಯಾಖ್ಯಾನವನ್ನು ರಚಿಸಿದರು.
ಕರ್ನಾಟಕ ಕರಾವಳಿ ಸಂಚಾರ
ಅವರ ಸಂಚಾರ ಕ್ರಮದಲ್ಲಿ ಕಾಸರಗೋಡಿನ ವಿಷ್ಣುಮಂಗಲ ಕ್ಷೇತ್ರ, ಸುಬ್ರಹ್ಮಣ್ಯ ಮತ್ತು ಉಡುಪಿ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿದ್ದರು. ಇದು ಸುಮಾರು 1660ರ ದಶಕ. ಅವರಿಗೆ ಸುಮಾರು 60ರ ವಯಸ್ಸಿನಲ್ಲಿ ಎಂದು ಅಂದಾಜಿಸಬಹುದಾಗಿದೆ. ಉಡುಪಿಯಲ್ಲಿ ಚಂದ್ರಿಕಾ ಪ್ರಕಾಶ, ತಂತ್ರದೀಪಿಕಾ, ನ್ಯಾಯಮುಕ್ತಾವಳಿ ಎಂಬ ಮೂರು ಕೃತಿಗಳನ್ನು ರಚಿಸಿ ಕೃಷ್ಣನಿಗೆ ಸಮರ್ಪಿಸಿದರು. ಚಂದ್ರಿಕಾ ಕೃತಿಯನ್ನು ಹತ್ತು ಬಾರಿ ಪಾಠ ಮಾಡಿ ಮಂಗಲೋತ್ಸವ ನಡೆಸಿದರು. ಉಡುಪಿ ಮೊಕ್ಕಾಂ ನೆನಪಿಗಾಗಿ ಉಡುಪಿ ಕೃಷ್ಣನ ಚಿನ್ನದ ಪ್ರತಿಮೆಯೊಂದನ್ನು ತಾವೇ ತಯಾರಿಸಿ ಪೂಜಿಸಿ ಕೊಂಡೊಯ್ದರು. “ಇಂದು ಎನಗೆ ಗೋವಿಂದ….’ ಎಂಬ ದಾಸರ ಹಾಡನ್ನು ರಚಿಸಿದ್ದೂ ಉಡುಪಿಯಲ್ಲಿ ಎಂಬ ಐತಿಹ್ಯವಿದೆ.
ಮಂತ್ರಾಲಯದಲ್ಲಿ ಏಕೆ ನೆಲೆನಿಂತರು?
ಶ್ರೀ ರಾಘವೇಂದ್ರ ಸ್ವಾಮಿಗಳು ಕೊನೆಯ ಕಾಲ ಘಟ್ಟದಲ್ಲಿ ಅದೋನಿಗೆ ಬಂದರು. ಅದೋನಿ ಮಾಂಡಲಿಕನಾಗಿ ಸಿದ್ಧಿಮಸೂದ್ ಖಾನ್, ದಿವಾನ್ ಆಗಿ ವೆಂಕೋಬ ಯಾನೆ ವೆಂಕಣ್ಣ ನೋಡಿಕೊಳ್ಳುತ್ತಿದ್ದ. ವೆಂಕಣ್ಣ ಹಿಂದೆ ಶತದಡ್ಡನಾಗಿ ರಾಯರಿಂದಲೇ ಅನುಗ್ರಹೀತನಾಗಿ ಈ ಪಟ್ಟವನ್ನೇರಿದ್ದ. ರಾಯರು ಮಂತ್ರಾಲಯ ಗ್ರಾಮವನ್ನು ರಾಜನಲ್ಲಿ ಕೇಳಿದರು. ಅದಕ್ಕೆ ಕಾರಣವೆಂದರೆ ಪ್ರಹ್ಲಾದರಾಜರಾಗಿದ್ದಾಗ ಮಾಡಿದ ಯಜ್ಞದ ಸ್ಥಳ, ರಾಮಲಕ್ಷ್ಮಣರು ಸೀತಾಮಾತೆ ಕಣ್ಮರೆಯಾದಾಗ ಹುಡುಕಾಡಿ ಬಂದಾಗ ತಂಗಿದ ಸ್ಥಳ, ಪಾಂಡವರು ಓಡಾಡಿದ ಸ್ಥಳ, ಪರಂಪರೆಯಲ್ಲಿ ಇವರಿಗಿಂತ
ಹಿಂದಿನ ಶ್ರೀ ವಿಬುಧೇಂದ್ರತೀರ್ಥ ಶ್ರೀಪಾದರು ಸ್ಥಳದ ಮಹತ್ವ ನೋಡಿ ಜಪತಪ ಮಾಡಿದ ಸ್ಥಳವಾಗಿತ್ತು.
ಇದೇ ಸ್ಥಳದಲ್ಲಿ ರಾಯರು ವೃಂದಾವನದಲ್ಲಿ ಪ್ರವೇಶ ಮಾಡಿದರು.
ರಾಘವೇಂದ್ರ ಸ್ವಾಮಿಗಳ ಕೊನೆಯ ಸಂದೇಶ
ರಾಘವೇಂದ್ರ ಸ್ವಾಮಿಗಳು ತಾವು ವೃಂದಾವನ ಪ್ರವೇಶಿಸುವ ದಿನವನ್ನು ನಿಗದಿಪಡಿಸಿ ಪೂಜೆಗಳೆಲ್ಲ ವನ್ನೂ ಮಾಡಿ ಅನಂತರ ತಮ್ಮ ನಿರ್ದೇಶನದಂತೆ ನಿರ್ಮಿತವಾದ 6ಗಿ6 ಅಡಿ ಸುತ್ತಳತೆಯ ವೃಂದಾವನ ಗುಹೆಯನ್ನು ಪ್ರವೇಶಿಸಿದರು.
ಜೀವನವೂ ತತ್ತ್ವಬೋಧಕ
ನಾವು ಪ್ರತಿಪಾದಿಸಿದ ಪವಿತ್ರ ಸಿದ್ಧಾಂತವನ್ನು ಅರುಹಿದ ಮೂಲಗುರು ಶ್ರೀಮಧ್ವಾಚಾರ್ಯರು ಹನುಮಂತನಾಗಿ ರಾಮನನ್ನೂ ಭೀಮನಾಗಿ ಶ್ರೀಕೃಷ್ಣನನ್ನೂ ಸೇವಿಸಿದ ವಾಯುದೇವರು ಮಧ್ವಾಚಾರ್ಯರಾಗಿ ವೇದವ್ಯಾಸರ ಸೇವೆಗೆಂದು ಪ್ರಸಾರ ಮಾಡಿದರು. ಅವರ ಗ್ರಂಥಗಳಂತೆ ಅವರ ಜೀವನವೂ ತಣ್ತೀಬೋಧಕವಾಗಿದೆ.
ಗ್ರಂಥಗಳಲ್ಲಿ ನಮ್ಮ ಸನ್ನಿಧಾನ
ನಾವು ಇನ್ನು ತೆರಳುತ್ತೇವೆ. ನಮ್ಮನ್ನು ನಿಮ್ಮಲ್ಲಿಗೆ ಕಳುಹಿಸಿದ ಭಗವಂತನೇ ನಮ್ಮನ್ನು ತನ್ನ ಬಳಿಗೆ ಕರೆದಿದ್ದಾನೆ. ಆತ ನಮಗೆ ಕೊಟ್ಟ ಕೆಲಸ ಮುಗಿದಿದೆ. ಅವರು ಕಳುಹಿಸಿದಾಗ ಬರುವುದು, ಕರೆದಾಗ ಹೋಗುವುದು ಎಲ್ಲರಿಗೂ ಕಡ್ಡಾಯ. ನೀವು ಯಾರೂ ದುಃಖೀಸಬೇಕಾಗಿಲ್ಲ. ನಾವು ನಿಮ್ಮ ಎದುರು ಇಲ್ಲದಿದ್ದರೂ ನಮ್ಮ ಗ್ರಂಥಗಳು ಇರುತ್ತವೆ. ನಮ್ಮ ಸನ್ನಿಧಾನ ವೃಂದಾವನದಲ್ಲಿರುವುದಕ್ಕಿಂತ ಗ್ರಂಥಗಳಲ್ಲಿಯೇ ಹೆಚ್ಚಾಗಿ ಇರುತ್ತವೆ. ಯಥಾಶಕ್ತಿ ಶಾಸ್ತ್ರ ಶ್ರವಣ, ಅಧ್ಯಯನ, ಸಂರಕ್ಷಣ, ಪ್ರಸರಣಗಳೇ ನಮಗೆ ನೀವು ಸಲ್ಲಿಸಬಹುದಾದ ಶ್ರೇಷ್ಠ ಸೇವೆ.
ಲೋಕಚಿಂತೆಗೆ ಶಾಸ್ತ್ರ ಚಿಂತನೆ ಪರಿಹಾರ
ಶಾಸ್ತ್ರಗಳ ಸಾರವನ್ನು ತಿಳಿದು ಬದುಕಬೇಕೆಂದೇ ಭಗವಂತನು ಇಂತಹ ಅಮೂಲ್ಯಜನ್ಮವನ್ನು ಎಲ್ಲರಿಗೂ ದಯಪಾಲಿಸಿದ್ದಾನೆ. ಎಲ್ಲ ಬಗೆಯ ಲೋಕಚಿಂತೆಗೂ ಶಾಸ್ತ್ರಚಿಂತನೆಯೇ ಶಾಶ್ವತ ಪರಿಹಾರ. ತಣ್ತೀಚಿಂತನೆಯೇ ಆತ್ಮವಿಕಾಸದ ಏಕೈಕ ಮಾರ್ಗ. ಆದರೆ ಎಂದಿಗೂ ವ್ಯಕ್ತಿದ್ವೇಷ ತರವಲ್ಲ. ಹರಿಗುರುಗಳ ದಯೆಯೊಂದಿಗೆ ಶ್ರದ್ಧೆ, ಪ್ರಯತ್ನ ಹೊಂದಿದ ಜನಕ್ಕೆ ಮಾತ್ರ ತಣ್ತೀ ಜ್ಞಾನ ಮಾರ್ಗ ಕಠಿನವಾದರೂ ದುರ್ಗಮವೇನಲ್ಲ.
ಸದಾಚಾರವಿಲ್ಲದೆ ಸದ್ವಿಚಾರವಿಲ್ಲ
ಜೀವನದಲ್ಲಿ ಇತರರಿಗೆ ಅನ್ಯಾಯವಾಗದಂತೆ, ನೋವಾಗದಂತೆ ಎಚ್ಚರವಹಿಸಬೇಕು. ಸದಾಚಾರವಿಲ್ಲದೆ ಸದ್ವಿಚಾರ ಸಿದ್ಧಿಯಾಗದು. ಹೀಗಾಗಿ ನಮಗೆ ದೇವರು ಒದಗಿಸಿದ ಕರ್ಮಗಳನ್ನು ಫಲಾಪೇಕ್ಷೆ ಇಲ್ಲದೆ ಕೃಷ್ಣಾರ್ಪಣ ಬುದ್ಧಿಯಿಂದ ಮಾಡಬೇಕು. ಉಪವಾಸವ್ರತಾದಿಗಳು ಸದಾಚಾರದ ಇನ್ನೊಂದು ಮುಖ. ಪ್ರತಿಯೊಬ್ಬರೂ ಏಕಾದಶಿ ಮತ್ತು ಕೃಷ್ಣಾಷ್ಟಮೀ ಉಪವಾಸವ್ರತಗಳನ್ನು ನಡೆಸಬೇಕು.
ಪವಾಡಕ್ಕಿಂತ ತತ್ತ್ವ ಜ್ಞಾನ ಮಿಗಿಲು
ಶಾಸ್ತ್ರಗಳನ್ನು ಬಿಟ್ಟು ಬರೀ ಪವಾಡಗಳಿಂದಲೇ ತಮ್ಮನ್ನು ಗುರುಗಳೆಂದೂ, ದೇವರೆಂದೂ ಕರೆದುಕೊಳ್ಳುವ ಜನಗಳಿಂದ ಸದಾ ದೂರ ಇರಬೇಕು. ನಾವೂ ಪವಾಡಗಳನ್ನು ತೋರಿಸಿದ್ದೇವೆ. ಮಧ್ವಾಚಾರ್ಯರೂ ತೋರಿದ್ದಾರೆ. ಆದರೆ ಇದರ ಹಿಂದೆ ಯೋಗಸಿದ್ಧಿ, ಶಾಸ್ತ್ರದ ತಳಹದಿ ಇದೆ ಎಂಬುದನ್ನು ಮರೆಯಕೂಡದು. ಇವುಗಳನ್ನು ತೋರಿಸಿದ್ದು ಭಗವಂತನ ಮಹಿಮೆ ಎಷ್ಟು ದೊಡ್ಡದು, ಅವನ ಅನುಗ್ರಹಕ್ಕೆ ಪಾತ್ರರಾದರೆ ನಮ್ಮ ವ್ಯಕ್ತಿತ್ವಕ್ಕೆ ಎಂತಹ ಸಾಮರ್ಥ್ಯ ಬರುತ್ತದೆ ಎಂದು ತೋರಿಸಲು ಮಾತ್ರ. ಯಾವುದೇ ಪವಾಡಕ್ಕಿಂತಲೂ ತಣ್ತೀಜ್ಞಾನ ಮಿಗಿಲು. ಅದಿಲ್ಲದೆ ಯಾವ ಪವಾಡವೂ ನಡೆಯುವುದಿಲ್ಲ. ತಣ್ತೀಜ್ಞಾನವಿಲ್ಲದವರು ತೋರುವ ಪವಾಡ ವಾಮಾಚಾರ.
ಸಮರ್ಪಣ ಭಾವನೆ ಅಧ್ಯಾತ್ಮ
ಉತ್ತಮರಲ್ಲಿ ಭಕ್ತಿ, ಸಮಾನರಲ್ಲಿ ಸ್ನೇಹಭಾವ, ಕಿರಿಯರಲ್ಲಿ ವಾತ್ಸಲ್ಯ ಇವು ಜೀವನದ ಶ್ರೇಷ್ಠ ಮೌಲ್ಯಗಳು. ನಿಮ್ಮ ಬಳಿ ಯಾರಾದರೂ ಕಷ್ಟದಲ್ಲಿ ಬಂದರೆ ಬರಿ ಕೈಯಿಂದ ಕಳುಹಿಸಬೇಡಿ. ಜೀವನದ ಒಳ್ಳೆಯತನವನ್ನು ಅಧ್ಯಾತ್ಮ ಬೇಡವೆನ್ನುವುದಿಲ್ಲ. ಆದರೆ ಎಲ್ಲದಕ್ಕೂ ಭಗವಂತನೇ ಕೇಂದ್ರ ಎನ್ನುವುದನ್ನು ಮರೆಯಕೂಡದು. ನಮಗಾಗಿ ಲೋಕವಲ್ಲ, ಲೋಕ, ಲೋಕೇಶ್ವರನಿಗಾಗಿ ನಾವು ಎಂಬ ಸಮರ್ಪಣ ಭಾವನೆಯೇ ಅಧ್ಯಾತ್ಮ.
ನಿಜಭಕ್ತಿ-ಮೂಢಭಕ್ತಿ
ಸಜ್ಜನರಿಗೆ ಹಿತವಾಗುವ ಸಮಾಜಸೇವೆಯನ್ನೂ ಸಹ ಭಗವಂತನ ಪೂಜೆ ಎಂದೇ ತಿಳಿಯಬೇಕು. ಒಟ್ಟಾರೆ ನಮ್ಮ ಜೀವನ ಒಂದು ಯಜ್ಞವಾಗಬೇಕು. ನಮ್ಮ ಪ್ರತಿ ಕರ್ಮವೂ ಭಗವಂತನ ಪೂಜೆ. ಭಗವಂತನಲ್ಲಿ ಭಕ್ತಿ ಇರಬೇಕು. ಅಂತಹ ಭಕ್ತಿ ಮೂಢಭಕ್ತಿಯಲ್ಲ. ಮೌಡ್ಯದಿಂದ ಕೂಡಿದ ಭಕ್ತಿ ಮಾತ್ರ ಮೂಢಭಕ್ತಿ. ಭಗವಂತನ ಹಿರಿಮೆಯನ್ನು ಆತ್ಮಪೂರ್ವಕ ಒಪ್ಪಿ ಗೌರವಿಸುವುದು ನಿಜವಾದ ಭಕ್ತಿ.
-ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.