ಜ್ಯೋತಿಷದ ಮಹತ್ವ ವಿಶ್ವಕ್ಕೆ ತಿಳಿಯಲಿ: ಡಾ| ವೀರೇಂದ್ರ ಹೆಗ್ಗಡೆ
Team Udayavani, Jul 4, 2019, 9:58 AM IST
ಉಡುಪಿ: ಜ್ಯೋತಿಷ ಶಾಸ್ತ್ರಕ್ಕೆ ಉಡುಪಿ ಮೂಲ ಕೇಂದ್ರ. ಇತ್ತೀಚಿನ ದಿನಗಳಲ್ಲಿ ಜ್ಯೋತಿಷ ಶಾಸ್ತ್ರದ ಬಗ್ಗೆ ನಂಬಿಕೆ ಅಪಾರವಾಗಿದೆ. ವಿದೇಶೀಯರೂ ಬೇರೆ ಬೇರೆ ಧರ್ಮದ ಜ್ಯೋತಿಷವನ್ನು ಅಧ್ಯಯನ ಮಾಡುತ್ತಿದ್ದಾರೆ. ಜ್ಯೋತಿಷದ ಮಹತ್ವ ವಿಶ್ವಕ್ಕೆ ತಿಳಿಯಬೇಕು. ಜ್ಯೋತಿಷ ವಿದ್ವಾಂಸರು ಇನ್ನಷ್ಟು ಹೆಚ್ಚಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬುಧವಾರ ಶ್ರೀ ಮಧ್ವಸಿದ್ಧಾಂತ ಪ್ರಬೋಧಕ ಸಂಸ್ಕೃತಿ ಸಂಶೋಧನ ಕೇಂದ್ರ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಜಂಟಿಯಾಗಿ ಆಯೋಜಿಸಿರುವ “ಜೌತಿಷ ವಿಶ್ವಕೋಶ’ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ದೇಶಕ್ಕೆ ಆಂಗ್ಲರ ಪ್ರವೇಶ ಆದ ಅನಂತರ ಭಾರತದ ಸಂಸ್ಕೃತಿ ನಾಶವಾಯಿತು. ಜ್ಞಾನಸಂಪತ್ತು ಕರಗುತ್ತಾ ಹೋಯಿತು. ಆವಾಗ ಪಾಶ್ಚಾತ್ಯ ಎಂಬ ಕಲ್ಪನೆ ಮೂಡಿತು. ಆದರೆ ಇದರ ಆಘಾತವನ್ನು ತಡೆಕೊಳ್ಳುವ ಶಕ್ತಿ ಇರಲಿಲ್ಲ. ಕಳೆದ 50 ವರ್ಷಗಳಲ್ಲಿ ಭಾರತೀಯ ಪರಂಪರೆ ವಿಶ್ವಮಾನ್ಯವಾಗುತ್ತಿದೆ. ಇದಕ್ಕೆಲ್ಲ ಕಾರಣ ಮಠಗಳಲ್ಲಿರುವ ಮೂಲ ಜ್ಞಾನ
ವನ್ನು ಸಂರಕ್ಷಿಸಿರುವುದು ಹಾಗೂ ಪೂಜ್ಯರು ಭಾರತೀಯ ವಿದ್ವತ್ ಅನ್ನು ಬೇರೆ ಬೇರೆ ದೇಶಗಳಿಗೆ ತೆರಳಿ ಪರಿಚಯಿಸಿದ್ದು. ಭಾರತೀಯ ವಿದ್ವಾಂಸರು ಸಾವಿರಾರು ವರ್ಷಗಳ ಹಿಂದೆಯೇ ಜ್ಯೋತಿಷ ಶಾಸ್ತ್ರದ ಬಗ್ಗೆ ತಿಳಿದುಕೊಂಡಿದ್ದರು ಎಂದರು.
ಇದೇ ಸಂದರ್ಭದಲ್ಲಿ ಜ್ಯೋತಿಷಿ ಸೋಪಾನದ 3ನೇ ಆವೃತ್ತಿಯ ಲೋಕಾರ್ಪಣೆ ನಡೆಯಿತು. ತಪ್ಪು, ಒಪ್ಪುಗಳ ಬೆಳಕು ಚೆಲ್ಲುವ ಮಾರ್ಗ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿ, ಜನ್ಮಾಂತರದಲ್ಲಿ ನಡೆದಿರುವ ತಪ್ಪು, ಒಪ್ಪುಗಳ ಬಗ್ಗೆ ಬೆಳಕು ಚೆಲ್ಲುವ ಮಾರ್ಗ ಜ್ಯೋತಿಷ ಶಾಸ್ತ್ರ. ಇಂದು ಇದು ಅತೀ ಹೆಚ್ಚು ಮಹತ್ವ ಪಡೆದು ಕೊಂಡಿದೆ. ಗ್ರಹಣಗಳ ಬಗ್ಗೆ ಮೊದಲೇ ತಿಳಿದು ಕೊಳ್ಳುವ ಶಕ್ತಿ ಜ್ಯೋತಿಷ ಶಾಸ್ತ್ರದಲ್ಲಿದೆ ಎಂದರು.
ಮಹತ್ತರ ಕೊಡುಗೆ
ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಮಾತನಾಡಿ, ವೇದಾಂತ ಶಾಸ್ತ್ರಕ್ಕೆ ಮಧ್ವಾಚಾರ್ಯರ ಕೊಡುಗೆ ಮಹತ್ತರ. ಜ್ಯೋತಿಷ ಶಾಸ್ತ್ರದ ಅಧ್ಯಯನದಿಂದ ಹಲವು ವಿಚಾರಗಳನ್ನು ತಿಳಿಯಲು ಸಾಧ್ಯ ಎಂದರು.
ಪರಿಹಾರ ಒದಗಿಸುವ ಶಕ್ತಿ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಮಾತನಾಡಿ, ಜನರ ಕಷ್ಟಗಳಿಗೆ ಪರಿಹಾರ ಒದಗಿಸುವ ಶಕ್ತಿ ಜ್ಯೋತಿಷ ಶಾಸ್ತ್ರಕ್ಕಿದೆ. 5 ವರ್ಷಗಳ ಹಿಂದೆ ಜೌತಿಷ ವಿಶ್ವಕೋಶದ ಸಂಕಲ್ಪ ಮಾಡಿದ್ದು, ಹೆಗ್ಗಡೆಯವರು ಇದಕ್ಕೆ ಪೂರ್ಣ ಸಹಕಾರ ನೀಡಿದ್ದಾರೆ ಎಂದರು.
ಸಮ್ಮಾನ
ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಸಿದ್ಧಪಡಿಸಲಾದ ಪ್ರಥಮ ಜ್ಯೋತಿಷ ವಿಶ್ವಕೋಶ ಅನಾವರಣ ಸಂದರ್ಭದಲ್ಲಿ ಯೋಜನೆಗೆ ಆರ್ಥಿಕ ನೆರವು ನೀಡಿದ ಧರ್ಮಸ್ಥಳ ಧರ್ಮಾಧಿಕಾರಿ ಪರ್ಯಾಯ ಪಲಿಮಾರು ಶ್ರೀಗಳು “ಜ್ಯೋತಿಷಾರವಿಂದಭಾಸ್ಕರ’ ಉಪಾಧಿಯೊಂದಿಗೆ ಗೌರವಿಸಿದರು.
ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಜೌತಿಷ ವಿಭಾಗಾಧ್ಯಕ್ಷ ಪ್ರೊ| ಎಸ್. ಶ್ರೀನಿವಾಸ ಅಡಿಗ, ವೇದಾಂತ ವಿಭಾಗದ ಅಧ್ಯಕ್ಷ ಸಗ್ರಿ ರಾಘವೇಂದ್ರ ಆಚಾರ್ಯ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಯಶೋವರ್ಮ, ಮಠದ ದಿವಾನ ವೇದವ್ಯಾಸ ತಂತ್ರಿ, ಆಡಳಿತ ಮಂಡಳಿ ಕಾರ್ಯದರ್ಶಿ ರತ್ನಕುಮಾರ್, ಸಂಸ್ಕೃತ ಕೇಂದ್ರದ ನಿರ್ದೇಶಕ ಕಡಂದಲೆ ಗಣಪತಿ ಭಟ್ ಉಪಸ್ಥಿತರಿದ್ದರು.
ಜ್ಯೋತಿಷ ವಿಶ್ವಕೋಶದಲ್ಲಿ…
5 ವರ್ಷ ಕಾಲಾವಧಿಯಲ್ಲಿ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಸಿದ್ಧಪಡಿಸಲಾದ ಬೃಹತ್ ಕೋಶ 9 ಸಂಪುಟಗಳಲ್ಲಿ 3,500 ಪುಟಗಳಲ್ಲಿ ಮೂಡಿಬಂದಿದೆ. ಜ್ಯೋತಿಷಕ್ಕೆ ಸಂಬಂಧಿಸಿದ 60 ಸಾವಿರ ಪದಗಳನ್ನು ವಿವಿಧ ಕೋನಗಳಿಂದ ವಿಶ್ಲೇಷಿಸಲಾಗಿದೆ. ಶ್ಲೋಕಗಳ ಆಧಾರ ನೀಡಲಾಗಿದೆ. ಈ ವಿಶ್ವಕೋಶ ಸಂಸ್ಕೃತ ಭಾಷೆಯಲ್ಲಿದ್ದು, ಅದರ ಡಿಜಿಟಲ್ ಆವೃತ್ತಿಯನ್ನೂ ಸಿದ್ಧಪಡಿಸಲಾಗಿದೆ.
– ವಿದ್ವಾನ್ ಸಾಲಿಗ್ರಾಮ ಶ್ರೀನಿವಾಸ ಅಡಿಗ, ಜ್ಯೋತಿಷ ವಿಶ್ವಕೋಶ ಸಂಪಾದಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.