![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Apr 23, 2018, 6:00 AM IST
ಕಾಪು: ನಾನು ಅಧಿಕಾರಕ್ಕಾಗಿ ಬಿಜೆಪಿಗೆ ಸೇರಿದವನಲ್ಲ. ಹಣ ಮಾಡುವ ಉದ್ದೇಶದಿಂದಲೂ ರಾಜಕೀಯಕ್ಕೆ ಬಂದಿಲ್ಲ. ಅದು ನನಗೆ ಗಂಜಿ ಕೇಂದ್ರವೂ ಅಲ್ಲ. ಕಷ್ಟಪಟ್ಟು ಸಂಪಾದಿಸಿರುವ ಹಣದಲ್ಲಿ ಶೇ. 80ರಷ್ಟನ್ನು ಸಮಾಜ ಮತ್ತು ಸಮಾಜದ ಜನರಿಗಾಗಿ ನೀಡಿದ್ದೇನೆ. ನನ್ನ ವೈಯಕ್ತಿಕ ಹಣದ ಜತೆಗೆ ಸರಕಾರದ ಅನುದಾನವನ್ನೂ ಸೇರಿಸಿಕೊಂಡು ಕ್ಷೇತ್ರದ ಜನತೆಯ ಸೇವೆ ಮಾಡಬೇಕೆಂಬ ಹಂಬಲದೊಂದಿಗೆ ವರಿಷ್ಠರಲ್ಲಿ ಟಿಕೆಟ್‌ಗಾಗಿ ಬೇಡಿಕೆ ಸಲ್ಲಿಸಿದ್ದೆ, ಸಿಗದೆ ಇರುವುದು ನಿರಾಸೆ ಮೂಡಿಸಿದೆ ಎಂದು ಬಿಜೆಪಿ ಕಾಪು ಕ್ಷೇತ್ರದ ಆಕಾಂಕ್ಷಿ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.
ಕಳತ್ತೂರು-ಗುರ್ಮೆಯಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜಕೀಯದಲ್ಲಿ ಯೋಗ ಮತ್ತು ಯೋಗ್ಯತೆ ಎರಡೂ ಇದ್ದವನಿಗೆ ಮಾತ್ರ ಮೆಟ್ಟಿಲನ್ನೇರಲು ಸಾಧ್ಯವಿದೆ. ಪಕ್ಷ ಅವಕಾಶ ನೀಡಿಲ್ಲವೆಂಬ ಕಾರಣಕ್ಕೆ ಬೆನ್ನು ಹಾಕಿ ಓಡಿ ಹೋಗುವ ವ್ಯಕ್ತಿ ನಾನಲ್ಲ. ಟಿಕೆಟ್ ನಿರಾಕರಿಸಿದ್ದರೂ ಪಕ್ಷ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಅಧಿಕಾರವಿಲ್ಲದೆಯೂ ಜನರೊಂದಿಗೆ ಹೇಗೆ ಇರಲು ಸಾಧ್ಯ ಎನ್ನುವುದನ್ನು ನನ್ನ 35 ವರ್ಷದ ಸಾರ್ವಜನಿಕ ಜೀವನದಲ್ಲಿ ಅರಿತುಕೊಂಡಿದ್ದೇನೆ. ಅಭಿಮಾನಿಗಳು ಈ ಬಗ್ಗೆ ನಿರಾಶರಾಗಬಾರದು. ಎಂದಿನಂತೆಯೇ ನಿಮ್ಮೊಂದಿಗಿರುತ್ತೇನೆ ಎಂದರು.
ಕಾರ್ಯಕರ್ತರಿಂದ ಹಲವು ಅಭಿಪ್ರಾಯ: ಪಕ್ಷೇತರರಾಗಿ ಕಣಕ್ಕಿಳಿಯಬೇಕು, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪಕ್ಷ ಮತ್ತು ಹುದ್ದೆಗಳಿಗೆ ರಾಜೀನಾಮೆ ನೀಡಿ ನಿಮ್ಮೊಂದಿಗೆ ಬರುತ್ತೇವೆ ಎಂಬಿತ್ಯಾದಿ ಬೇಡಿಕೆಗಳು ಕಾರ್ಯ ಕರ್ತರು ಮತ್ತು ಅಭಿ ಮಾನಿ ಗಳಿಂದ ಕೇಳಿಬಂತು. ಆದರೆ ಎಲ್ಲವನ್ನೂ ಶಾಂತಿಯಿಂದ ಆಲಿಸಿದ ಅವರು ಕಾರ್ಯಕರ್ತ ರ್ಯಾರೂ ಆ ಬಗ್ಗೆ ಯೋಚಿಸಬಾರದು ಎಂಬ ಸಲಹೆ ನೀಡಿದರು.
ಉಡುಪಿ ಜಿ.ಪಂ. ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ಶಿಲ್ಪಾ ಸುವರ್ಣ, ಪ್ರಮುಖರಾದ ಕುರ್ಕಾಲು ದಿನಕರ ಶೆಟ್ಟಿ, ಪಯ್ನಾರು ಶಿವರಾಮ ಶೆಟ್ಟಿ, ಉಮೇಶ್ ಶೆಟ್ಟಿ ಕಳತ್ತೂರು, ಮಿಥುನ್ ಹೆಗ್ಡೆ, ರಂಜನ್ ಹೆಗ್ಡೆ, ಸಹನಾ ತಂತ್ರಿ, ಪ್ರವೀಣ್ ಪೂಜಾರಿ, ಸುರೇಶ್ ಶೇರ್ವೆಗಾರ್, ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು, ವಿಜಯ ಕರ್ಕೇರ, ಅರುಣ್ ಶೆಟ್ಟಿ ಪಾದೂರು, ಜಿಯಾನಂದ ಹೆಗಡೆ, ಸುಧಾಕರ ಶೆಟ್ಟಿ, ಅನಿಲ್ ಕುಮಾರ್, ಜಗದೀಶ್ ಅರಸ, ಬಬಿತಾ ಅರಸ್ ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.