“ನಾವು ಕೊಟ್ಟ ಲೊಕೇಷನ್‌ನಲ್ಲೇ ಪತ್ತೆಯಾಯಿತು’
Team Udayavani, May 6, 2019, 6:16 AM IST
ಉಡುಪಿ: “ಸುವರ್ಣ ತ್ರಿಭುಜ ದೋಣಿ ಸಂಚರಿಸಿದ್ದ ಲೊಕೇಷನ್ ಬಗ್ಗೆ ನಮ್ಮಲ್ಲಿ ಮಾಹಿತಿ ಇತ್ತು. ಅದನ್ನು ಐಎನ್‌ಎಸ್ ನಿರೀಕ್ಷಕ್
ನಲ್ಲಿದ್ದ ತಜ್ಞರಿಗೆ ನೀಡಿದೆವು. ಅದ ರಿಂದಾಗಿ ಸುವರ್ಣ ತ್ರಿಭುಜದ ಅವ ಶೇಷ ಪತ್ತೆಹಚ್ಚಲು ಸಾಧ್ಯವಾಗಿದೆ…’
ಅವಘಡಕ್ಕೀಡಾದ ಸುವರ್ಣ ತ್ರಿಭುಜ ಪತ್ತೆ ಕಾರ್ಯಾಚರಣೆಯನ್ನು ಮಲ್ಪೆ ಮೀನುಗಾರರ ತಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ ವಿವರಿಸುವುದು ಹೀಗೆ. ನಾಪತ್ತೆಯಾದ ಮೀನುಗಾರರ ಮನೆಯವರು, ನಿವೃತ್ತ ಮರ್ಚಂಟ್ ನೇವಿ ಕ್ಯಾಪ್ಟನ್ ಜಯಪ್ರಕಾಶ್ ಮೆಂಡನ್ ಜತೆಗೆ ಐಎನ್‌ಎಸ್ ನಿರೀಕ್ಷಕ್ ಹಡಗಿನ ಮೂಲಕ ನಡೆದ ಪತ್ತೆ ಕಾರ್ಯಾ ಚರಣೆಯಲ್ಲಿ ಮುಖ್ಯ ಪಾತ್ರ ವಹಿಸಿ ದವರು ರವಿರಾಜ್ ಸುವರ್ಣ. ಅವರು ಕಾರ್ಯಾಚರಣೆಯನ್ನು ವಿವರಿಸಿರುವುದು ಹೀಗೆ:
“ನಮ್ಮನ್ನೂ ಕರೆದೊಯ್ಯಿರಿ’
ಬೋಟ್ ನಾಪತ್ತೆಯಾಗಿ 4 ತಿಂಗಳಾಯಿತು. ನಮಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ನೌಕಾಪಡೆಯ ವರಿಗೆ ಲೊಕೇಷನ್ ಸಿಗಲಿಲ್ಲ. ನಾವು ಮೀನುಗಾರರು. ನಮಗೆ ಮೀನುಗಾರಿಕೆ ಬೋಟ್‌ಗಳು ಚಲಿಸುವ ದಾರಿಯ ಮಾಹಿತಿ ಇರುತ್ತದೆ. ಹೀಗಾಗಿ ನಮ್ಮನ್ನು 10 ಜನರನ್ನು ಕರೆದು ಕೊಂಡು ಹೋಗಲು ನಾನೇ ಹಲವು ಬಾರಿ ಹೇಳಿದ್ದೆ. ಅನಂತರ ರಕ್ಷಣಾ ಸಚಿವೆಗೂ ಮನವಿ ಮಾಡಿದೆವು. ಅವರು ನೌಕಾಪಡೆ ಅಧಿಕಾರಿಗಳಿಗೆ ತಿಳಿಸಿ ನಮ್ಮನ್ನು ಕರೆದು ಕೊಂಡು ಹೋಗಲು ಸೂಚಿಸಿದರು.
“ರಾತ್ರಿ 2ಕ್ಕೆ ಶಿಪ್ ಹತ್ತಿದೆವು’
ಎ.28ರ ಬೆಳಗ್ಗೆ 2 ಗಂಟೆಗೆ ನಾವು ಇಲ್ಲಿಂದ ಹೊರಟೆವು. ಎ.19ರಂದು ಮಧ್ಯರಾತ್ರಿ 2 ಗಂಟೆಗೆ ಐಎನ್‌ಎಸ್ ನಿರೀಕ್ಷಕ್ ಹಡಗು ಏರಿದೆವು. ಮುಂಜಾನೆ 6 ಗಂಟೆಗೆ ಮಹಾರಾಷ್ಟ್ರದ ರತ್ನಗಿರಿಗಿಂತ ಸುಮಾರು 16 ಡಿಗ್ರಿ ಈಚೆಗೆ ಸರ್ವೆ ಆರಂಭಿಸಿದೆವು. ಆಗ ಏನೂ ಸಿಗಲಿಲ್ಲ. ನಮಗೆ, ಮೀನುಗಾರರಿಗೆ ನಮ್ಮದೇ ಆದ ಸಮುದ್ರ ಮಾಹಿತಿ ಇರುತ್ತದೆ. ಜತೆಗೆ ಸುವರ್ಣ ತ್ರಿಭುಜ ಬೋಟ್ ಹೋದ ಲೊಕೇಷನ್ ಕೂಡ ನಮ್ಮ ಬಳಿ ಇತ್ತು. ಅದರ ಅನುಸಾರ ಗೋವಾದಿಂದ ಮಾಲ್ವಣ್‌ವರೆಗೆ ಅದೇ ಲೊಕೇಷನ್‌ನಲ್ಲಿ ಹುಡುಕಿದೆವು. ನೌಕಾಪಡೆಯವರು ಸೋನಾರ್ ಉಪಕರಣದ ಮೂಲಕ ಲಭಿಸಿದ ಸಮುದ್ರದಾಳದ ಮಾಹಿತಿಯನ್ನು ನಮಗೆ ನೀಡುತ್ತಿದ್ದರು. ನಾವು ಅವಘಡ ನಡೆದಿರಬಹುದಾದ ಎರಡು ಸಂಭಾವ್ಯ ಸ್ಥಾನಗಳನ್ನು ಕೊಟ್ಟಿದ್ದೆವು. ಅಲ್ಲಿ ಸರ್ವೆ ಮಾಡುವುದಕ್ಕೆ ಸುಮಾರು ಏಳು ಗಂಟೆ ಸಮಯ ಬೇಕು. ಹುಡುಕುತ್ತಾ ಹೋಗುವಾಗ ಒಂದು ಟ್ರ್ಯಾಕ್‌ನಲ್ಲಿ ಸೋನಾರ್ ಉಪಕರಣ ಸಮುದ್ರದಾಳದಿಂದ ಎಕೋ ಬಂದುದನ್ನು ತೋರಿಸಿತು. ಅದು ಫಾಲ್ಸ್ ಎಕೋ ಆಗಿರಬಹುದು ಎಂದು ಹೇಳಿದರು. ಆದರೂ ನಾವು ಪ್ರಯತ್ನ ಬಿಡಲಿಲ್ಲ. ಹಾಗಾಗಿ ಮತ್ತೆ ಮುಂದುವರಿಸಿದರು.
“ಕೆಮರಾ ಕಳುಹಿಸಿದರು’
7ನೇ ಟ್ರ್ಯಾಕ್‌ನಲ್ಲಿ ಮತ್ತೆ ಮತ್ತೆ ಸರ್ವೇ ನಡೆಸಿದರು. ಎಕೊ ಬಂದ ಲೊಕೇಷನ್‌ನ್ನು ಗುರುತಿಸಿ ಕೆಮರಾಕ್ಕೆ ಲೈಟ್ ಅಳವಡಿಸಿ ಸಮುದ್ರದಾಳಕ್ಕೆ ಕಳುಹಿಸಲಾಯಿತು. ಅದು ಒಂದು ಸುತ್ತು ಬರುವಾಗ ಮುಳುಗಡೆಯಾದ ಬೋಟ್‌ನ ಮಾಸ್ಟರ್ ಕಂಬ ಕಾಣಿಸಿತು. ನೌಕಾಪಡೆಯವರು ಇದು ಮಾಮೂಲಿ ಎಂದರು. ನಾವು ಮತ್ತೆ ಒತ್ತಾಯಿಸಿದೆವು. ಕ್ಯಾ| ಮೆಂಡನ್ ಜಿಪಿಎಸ್ ನೋಡಲು ಹೋದರು, ನಾನು ಸೋನಾರ್ ಪರದೆ ಮುಂದೆ ಕುಳಿತೆ. ಮತ್ತೆ ಒಂದು ಸುತ್ತು ಬರು ವಾಗ ಪಲ್ಟಿಯಾದ ಸ್ಥಿತಿಯಲ್ಲಿ ಬೋಟ್ ಕಾಣಿಸಿತು. ಆಗ ನಾವು “ಇದು ನಮ್ಮದೇ ಬೋಟ್ ಸಾರ್’ ಎಂದೆವು.
“ಬೋಟ್ ಮೇಲೆ ಬಲೆ ಇತ್ತು’
ಇನ್ನೊಮ್ಮೆ ಕೆಮರಾ ಕೆಳಗೆ ಇಳಿಸಿ ದರು. ಆದರೆ ಬೋಟ್‌ನ ಮೇಲೆ ಬಲೆ ಆವರಿಸಿತ್ತು. ಕೆಮರಾ ಅದಕ್ಕೆ ಸಿಕ್ಕಿ ಹಾಕಿಕೊಂಡಿತು. ಬಳಿಕ ಅವರು ಅಲ್ಲಿಯೇ ನಮ್ಮ ಜತೆ ಸಭೆ ನಡೆಸಿ, ಇಷ್ಟು ಪ್ರೂಫ್ ಸಾಕಾ ಎಂದು ಕೇಳಿದರು. ಆಗ ಶಾಸಕರು, “ಪ್ಲೀಸ್ ಸರ್… ಆ ಬೋಟ್ ನಮ್ಮದು ಹೌದಾ ಅಲ್ವಾ ಎಂಬುದು ಖಚಿತವಾಗಬೇಕು’ ಎಂದು ಮನವಿ ಮಾಡಿದರು.
“ಮುಳುಗಿ ಪತ್ತೆ’
ಶಾಸಕರ ಮನವಿ ಮನ್ನಿಸಿದ ನೌಕಾ ಪಡೆಯವರು ಅನಂತರ ಡೈವ್ ಮಾಡಿ ಮುಳುಗಿರುವ ಬೋಟ್‌ನ ಫೋಟೊ ತೆಗೆದು ತೋರಿಸಲು ನಿರ್ಧರಿಸಿದರು. ಮುಳುಗುವುದಕ್ಕೆ ಮುನ್ನ ಡೈವರ್‌ಗಳು ಮೆಷಿನ್‌ನ ಒಳಗೆ ಏಳು ಗಂಟೆ ಒಳಗೆ ಕುಳಿತು ಫಿಟ್‌ನೆಸ್ ಪರೀಕ್ಷೆ ಆಗಬೇಕು. ಹಾಗೆ ಮಾಡಿ ಅನಂತರ ಡೈವ್ ಮಾಡಿದರು. ಆದರೆ ನಮ್ಮ ಗ್ರಹಚಾರಕ್ಕೆ 2 ಗಂಟೆಯ ಒಳಗೆ ಆಗುವ ಆ ಕೆಲಸಕ್ಕೆ 2 ದಿನ ತಗಲಿತು. ಯಾಕೆಂದರೆ ಒಮ್ಮೆ ಡೈವ್ ಮಾಡಿದಾಗ ನೀರಿನಾಳದಲ್ಲಿ ಮಷಿನ್ ಓಪನ್ ಆಗಲಿಲ್ಲ. ಎರಡನೇ ಬಾರಿ ನೀರಿಗಿಳಿದಾಗ ನೀರಿನ ಒತ್ತಡ ಹೆಚ್ಚು ಇತ್ತು. ಮೂರನೇ ಬಾರಿಗೆ ಡೈವ್ ಮಾಡಿ, ಬೋಟಿನ ಫೋಟೋ ತೆಗೆದುಕೊಂಡು ಬಂದರು. ಕೆಮರಾ ದಲ್ಲಿ ತೋರಿಸಿದರು. ಅದು ಇರುವ ಮೆಮೊರಿ ಕೊಟ್ಟರು. ಆಗ ಮುಳುಗಿ ರುವುದು ಸುವರ್ಣ ತ್ರಿಭುಜ ಬೋಟ್ ಎಂಬುದು ಖಚಿತವಾಯಿತು.
“ಪರಿಹಾರದ ಕಡೆ ಗಮನ’
ನನ್ನ ಪ್ರಕಾರ ಬೋಟ್ ಆ್ಯಕ್ಸಿಡೆಂಟ್ ಆಗಿಯೇ ಮುಳುಗಿದೆ. ಮುಳುಗಿ ರುವ ಆಳ, ಅಡ್ಡ ಬಿದ್ದಿರುವ ರೀತಿ ನೋಡಿದರೆ ಜೀವಂತ ಇರಲು ಅಸಾಧ್ಯ. ಇನ್ನೇನಿದ್ದರೂ ಪರಿಹಾರದ ಕಡೆಗೆ ಗಮನ ಕೊಡಬೇಕು. ನಾಪತ್ತೆ ಯಾದವರ ಮನೆಯವರೂ ಕಾರ್ಯಾ ಚರಣೆ ಸಂದರ್ಭ ಇದ್ದರು. ಅವರಿಗೂ ತಮ್ಮವರು ಬಚಾವಾಗಿರುವ ಸಾಧ್ಯತೆ ಇಲ್ಲ ಎಂಬುದು ಮನವರಿಕೆ ಆಗಿದೆ. ರಾತ್ರಿ ಹೊತ್ತು ಮಲಗಿದ್ದ ಸಮಯ ದಲ್ಲಿ ಢಿಕ್ಕಿ ಸಂಭವಿಸಿದ್ದರೆ ಬದುಕುವ ಚಾನ್ಸ್ ಕಡಿಮೆ. ಹೇಗೆ ಅಪಘಾತ ವಾಗಿದೆ, ಯಾವ ಹಡಗು ಎಂಬುದು ಗೊತ್ತಾಗಬೇಕು. ಐಎನ್‌ಎಸ್ ಕೊಚ್ಚಿಯೇ ಎಂದು ಹೇಳು ವುದಿಲ್ಲ, ಅದು ಇರಬಹುದು ಎಂಬುದು ಅನುಮಾನ. ಅದಕ್ಕಾಗಿ ರಕ್ಷಣಾ ಸಚಿವೆ ಬಳಿ ಕೇಳಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ.
“ನಾವೇ ಒತ್ತಾಯಿಸಿದ್ದು’
ಶಾಸಕರು ರಾಜಕೀಯ ಮಾಡಿಲ್ಲ. ಕಾರ್ಯಾಚರಣೆಗೆ ಹೋಗುವ ಮೊದಲು ಮಲ್ಪೆಯಲ್ಲಿ ಮೀಟಿಂಗ್ ಮಾಡುವಾಗ ಅವರು ನನ್ನ ಬಳಿ ಕೂತಿದ್ದರು. ಆಗ ನಾನು, “ಸರ್ ನೀವು ಬನ್ನಿ… ಅದು ದೊಡ್ಡ ಬೋಟ್- ಹಡಗು. ನೀವು ಬಂದರೆ ಒಳ್ಳೆಯದಾಗುತ್ತದೆ ಎಂದಿದ್ದೆ. ಅದಕ್ಕೆ ಅವರು, “ಸಮುದ್ರಕ್ಕೆ ಹೋಗಿ ಅಭ್ಯಾಸ ಇಲ್ಲ’ ಎಂದರು. ಇಲ್ಲ ಸಾರ್ ಏನೂ ಆಗುವುದಿಲ್ಲ ಎಂದು ನಾವು ಒತ್ತಾಯಿಸಿ ಕರೆದುಕೊಂಡು ಹೋದದ್ದು ವಿನಾ ರಾಜಕೀಯ ಮಾಡಿ ಎಂದಲ್ಲ. ನಮಗೆ ಎಷ್ಟು ಅನುಭವ ಇದ್ದರೂ ನೌಕಾ ಪಡೆಯ ತಜ್ಞರ ಬಳಿ ಮಾತನಾಡುವಷ್ಟು ನಾಲೇಜ್ ಇಲ್ಲ, ಅದು ಶಾಸಕರಲ್ಲಿದೆ. ಅವರು ಪ್ರಶರ್ ಹಾಕಿದ್ದಾರೆ. ಅವರಿಂದಾಗಿ ಈ ಕಾರ್ಯ ಸಕ್ಸಸ್ ಆಯಿತು.
ಇದೇ ಪ್ರಥಮ
ನೌಕಾಪಡೆಯ ಹಡಗುಗಳೊಳಕ್ಕೆ ಸಾಮಾನ್ಯವಾಗಿ ನಾಗರಿಕರಿಗೆ ಪ್ರವೇಶ ಇರುವುದಿಲ್ಲ. ಆದರೆ ಇದೇ ಪ್ರಥಮ ಬಾರಿಗೆ ನೌಕಾಪಡೆ ನಡೆಸಿದ ಬೋಟ್ ಶೋಧ ಕಾರ್ಯಾಚರಣೆಯಲ್ಲಿ ಐಎನ್‌ಎಸ್ ನಿರೀಕ್ಷಕ್ ಹಡಗಿನೊಳಕ್ಕೆ ಉಡುಪಿ ಶಾಸಕರು, ದುರಂತಕ್ಕೀಡಾದ ಬೋಟ್‌ನಲ್ಲಿದ್ದವರ ಸಂಬಂಧಿಕರು ಮತ್ತು ರವಿರಾಜ್ ಸುವರ್ಣ, ಕ್ಯಾ| ಮೆಂಡನ್ ಸಹಿತ ನಾಗರಿಕರನ್ನು ಹತ್ತಿಸಿಕೊಳ್ಳಲಾಗಿತ್ತು. ನೌಕಾಪಡೆಯ ಹಡಗೊಂದು ದೋಣಿ ಅವಘಡಕ್ಕೆ ಸಂಬಂಧಿಸಿ ಶೋಧ ನಡೆಸಿದ್ದು ಕೂಡ ಇದೇ ಮೊದಲು.
ಧ್ವನಿ ಕಳುಹಿಸಿ ಪ್ರತಿಧ್ವನಿ ಪಡೆಯುವ ಸೋನಾರ್
ಸೋನಾರ್ ಸಮುದ್ರದಾಳಕ್ಕೆ ಧ್ವನಿ ತರಂಗಗಳನ್ನು ರವಾನಿಸಿ, ಮರಳಿದ ಪ್ರತಿಧ್ವನಿಯನ್ನು ವಿಶ್ಲೇಷಿಸಿ ಅಲ್ಲಿರುವುದೇನು ಎಂಬುದನ್ನು ತೋರಿಸಿಕೊಡುವ ಸಾಧನ. ಐಎನ್‌ಎಸ್ ನಿರೀಕ್ಷಕ್‌ನ ಸಿಬಂದಿ ಸಮುದ್ರದಲ್ಲಿ ಕ್ಯಾ| ಜಯಪ್ರಕಾಶ್ ಮೆಂಡನ್ ಮತ್ತು ರವಿರಾಜ್ ಸುವರ್ಣ ಅವರು ತೋರಿಸಿಕೊಟ್ಟ ಲೊಕೇಷನ್ ಆಧರಿಸಿ ಸುತ್ತಮುತ್ತಲನ್ನು ತಲಾ 400 ಮೀ. ಅಗಲದ 7 ಟ್ರ್ಯಾಕ್‌ಗಳಾಗಿ ವಿಭಜಿಸಿ ಪ್ರತೀ ಟ್ರ್ಯಾಕನ್ನೂ ಏಳು ತಾಸುಗಳ ಕಾಲ ಸೋನಾರ್ ಮೂಲಕ ಸರ್ವೇ ಮಾಡಿದರು. ಮೂರನೇ ದಿನ ಎರಡನೇ ಟ್ರ್ಯಾಕ್‌ನಲ್ಲಿ ಸೋನಾರ್ ಕಳುಹಿಸಿದ ಧ್ವನಿ ತರಂಗಕ್ಕೆ ಪ್ರತಿಧ್ವನಿ ಲಭಿಸಿತ್ತು. ಅಲ್ಲಿ ಮತ್ತಷ್ಟು ಕೂಲಂಕಷವಾಗಿ ಸರ್ವೆ ನಡೆಸಲಾಯಿತು.
ಒತ್ತಡಕ್ಕೆ ಹೊಂದಿಕೊಳ್ಳಲು ತಾಲೀಮು
ಸಮುದ್ರದಾಳಕ್ಕೆ ಡೈವ್ ಮಾಡುವುದು ಸುಲಭವಲ್ಲ. ಅಲ್ಲಿ ಅತೀವ ಒತ್ತಡವಿರುತ್ತದೆ. ಆಳಕ್ಕೆ ಹೋದಂತೆ ಅದು ಹೆಚ್ಚುತ್ತ ಹೋಗುತ್ತದೆ. ಈ ಒತ್ತಡವನ್ನು ಪಿಎಸ್‌ಐ (ಪೌಂಡ್ಸ್ ಪರ್ ಸ್ಕ್ವೇರ್ ಇಂಚ್) ಮಾನಕಗಳಲ್ಲಿ ಅಳೆಯುತ್ತಾರೆ. ಸಮುದ್ರದಲ್ಲಿ ಪ್ರತೀ 33 ಅಡಿ ಆಳಕ್ಕೆ ಇಳಿದಂತೆ 14.5 ಪಿಎಸ್‌ಐ ಒತ್ತಡ ಹೆಚ್ಚುತ್ತದೆ. ಇದರಿಂದ ಮುಳುಗಿದವರ ರಕ್ತದಲ್ಲಿ ಗಾಳಿ ಗುಳ್ಳೆ ಉಂಟಾಗುವುದೇ ಮೊದಲಾದ ತೊಂದರೆಗಳಾಗುತ್ತವೆ. ಇದಕ್ಕೆ ಎಷ್ಟೇ ತರಬೇತಿ ಇದ್ದರೂ ಆ ಕ್ಷಣದಲ್ಲಿ ತಾಲೀಮು ಅಗತ್ಯ. ನೌಕಾ ಪಡೆಯ ಮುಳುಗುತಜ್ಞರು ಏಳು ಗಂಟೆ ಬಾಕ್ಸ್‌ನಲ್ಲಿ ಕುಳಿತು ನಡೆಸಿದ್ದು ಇದೇ ತಾಲೀಮು.
ಮುಂಬಯಿಯಿಂದ ಮಾಹಿತಿ ಬರಬೇಕು
ಸುವರ್ಣ ತ್ರಿಭುಜ ಬೋಟ್‌ನ ಅವಶೇಷ ಪತ್ತೆಯಾಗಿರುವ ಕುರಿತು ವರದಿಯನ್ನು ಕಾರವಾರ ನೌಕಾನೆಲೆಯವರಿಂದ ಕೇಳಿದ್ದೇವೆ. ಮುಂಬಯಿಯ ಪ್ರಾದೇಶಿಕ ಕಚೇರಿಯಿಂದ ಮಾಹಿತಿ ಬರಬೇಕಾಗಿದ್ದು, ಅನಂತರ ಮಾಹಿತಿ ಒದಗಿಸಲಾಗುವುದು ಎಂದು ಕಾರವಾರ ನೌಕಾನೆಲೆಯವರು ತಿಳಿಸಿದ್ದಾರೆ
-ನಿಶಾ ಜೇಮ್ಸ್ , ಎಸ್‌ಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.