Nandikuru: ಎಂ 11 ಬಯೋ ಡೀಸೆಲ್ ಘಟಕ ಸಮಸ್ಯೆ ಶೀಘ್ರ ಪರಿಹಾರಕ್ಕೆ ಪ.ನಿ.ಮಂಡಳಿ ಆದೇಶ
ನಂದಿಕೂರು ಎಸ್‌ಇಝಡ್ ಕೈಗಾರಿಕಾ ವಲಯ
Team Udayavani, Oct 29, 2024, 11:59 PM IST
ಪಡುಬಿದ್ರಿ: ನಂದಿಕೂರು ಎಸ್‌ಇಝಡ್ ಕೈಗಾರಿಕಾ ವಲಯದಲ್ಲಿ ಕಾರ್ಯಾಚರಿಸುತ್ತಿರುವ ಎಂ 11 ಬಯೋ ಡೀಸಿಲ್ ಉತ್ಪಾದನಾ ಘಟಕದಿಂದ ಆಗುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಪರಿಹಾರವನ್ನು ರೂಪಿಸಿ, ಅನುಷ್ಟಾನಿಸಲು ರಾಜ್ಯ ಪರಿಸರ ನಿಯಂತ್ರಣ ಮಂಡಳಿಯ ಚೇರ್‌ವೆುನ್ ಡಾ| ಶಾಂತ್ ಎ. ತಿಮ್ಮಯ್ಯನಿರ್ದಿಷ್ಟ ಗಡುವನ್ನು ನೀಡಿ ಆದೇಶಿಸಿದ್ದಾರೆ.
ಅವರು, ಘಟಕದ ಸುತ್ತಲಿನ ಗ್ರಾಮಗಳ ಸಾರ್ವಜನಿಕರು ಎಂ 11ನಿಂದ ಹಾನಿಕಾರಕ ದುರ್ವಾಸನೆಯುಕ್ತ ಗಾಳಿ ಹಾಗೂ ಕುಡಿಯುವ ಬಾವಿ ನೀರು ಕಲುಷಿತವಾಗಿರುವ ಬಗ್ಗೆ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಅ. 29ರಂದು ಇಲಾಖಾಧಿಕಾರಿಗಳೊಂದಿಗೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿದರು.
ಸುಮಾರು 4ತಾಸುಗಳ ಕಾಲ ಸುದೀರ್ಘ ಅವಧಿಯಲ್ಲಿ ಘಟಕವನ್ನು ಅಮೂಲಾಗ್ರ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಭಾಗವಹಿಸಿದ ಬಳಿಕ ಅವರು ನಂದಿಕೂರು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಭೇಟಿ ನೀಡಿ, ಸಾರ್ವಜನಿಕ ಅಹವಾಲು ಸ್ವೀಕರಿಸಿದರು.
ಇಲ್ಲಿನ ಸಮಸ್ಯೆಯ ದೂರಿನನ್ವಯ ಸ್ಥಳ ಪರಿಶೀಲನೆಗೆ ಬಂದಿದ್ದೇನೆ. ಈಗಾಗಲೇ ಘಟಕದಲ್ಲಿ ಸಮಸ್ಯೆ ಇರುವುದನ್ನು ಕಂಡು ಅವರ ರಿಫೈನರಿ ಘಟಕವನ್ನು ಮುಚ್ಚಲಾಗಿದೆ. ಬಯೋಡೀಸಿಲ್ ಘಟಕ ಉತ್ಪಾದನೆ ನಡೆಸುತ್ತಿದೆ. ರಿಫೈನರಿ ಘಟಕ ಪುನರಾರಂಭಿಸಲು ಆಧುನಿಕ ಕ್ಲೋಸ್‌ಡ್ ತಂತ್ರಜ್ಞಾನ ಬಳಸಬೇಕು. ಯಾವುದೇ ಕಾರಣಕ್ಕೂ ದುರ್ವಾಸನೆ ಹೊರಸೂಸಬಾರದು.
ಕರಾವಳಿ ಭಾಗದಲ್ಲಿ ಅಧಿಕ ಮಳೆಯಿಂದ ಹರಿಯುವ ನೀರು ದೂರ ಸಾಗಿ ಹೋಗುತ್ತದೆ. ಎಂ 11 ಘಟಕದಲ್ಲಿ ಆಯಿಲ್ ಉತ್ಪಾದನೆ ಮಾಡುವ ಕಾರಣ ಘಟಕದಿಂದ ಒಂದಿನಿತೂ ಅರ್ಥಾತ್ ಬಿಂದು ರೂಪದಲ್ಲೂ ಹೊರಹೋಗಬಾರದು. ಅಂತಹ ತಂತ್ರಜ್ಞಾನವನ್ನು ತಕ್ಷಣ ಅಳವಡಿಸಬೇಕು. ನಿಗದಿತ ಸಮಯದೊಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಕಾನೂನು ಪ್ರಕಾರ ಘಟಕದ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು.
ಮುಂದೆ ದುರ್ವಾಸನೆ ಕಂಡುಬಂದಲ್ಲಿ ನೋಯ್ಡಾದಲ್ಲಿರುವ ದುರ್ವಾಸನೆ ಪರಿಶೀಲನಾ ಸಂಸ್ಥೆಯನ್ನು ಕರೆಸಿ ಪರಿಶೀಲನೆ ನಡೆಸಲಾಗುವುದು ಎಂದೂ ಡಾ| ಶಾಂತ್ ತಿಮ್ಮಯ್ಯ ಹೇಳಿದರು.
ಸ್ಥಳೀಯ ವಾಸಿ ಜ್ಯೋತಿ ನಾಗರಾಜ ರಾವ್ ಎಂಬವರು ಘಟಕದಿಂದ ತಮಗಾದ ಗಂಭೀರ ಸಮಸ್ಯೆಯ ಬಗ್ಗೆ ವಿವರಿಸಿದರು. ಹಿರಿಯರಾದ ಲಕ್ಷ್ಮಣ ಶೆಟ್ಟಿ ಅರಂತಡೆ ಸ್ಥಳೀಯ ಪ್ರಮುಖ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಮನಗಾಣಿಸಿದರು.
ಎಂ 11 ಘಟಕದಿಂದ ಸುತ್ತಲ ಗ್ರಾಮಗಳಲ್ಲಿ ಕಂಡುಬಂದಿರುವ ಗಂಭೀರ ಸಮಸ್ಯೆಗಳ ಬಗ್ಗೆ ಡಾ| ಶಾಂತ್ ಎ. ತಿಮ್ಮಯ್ಯ ಅವರಿಗೆ ಸಾರ್ವಜನಿಕ ಮನವಿ ಸಲ್ಲಿಸಿ ಶೀಘ್ರ ಪರಿಹಾರಕ್ಕೆ ವಿನಂತಿಸಲಾಯಿತು. ಇದೇ ಘಟಕದಲ್ಲಿ ಬಾಯ್ಲರ್ ಉರಿಸಲು ನಿತ್ಯ ಟನ್ನುಗಟ್ಟಲೆ ಕಟ್ಟಿಗೆಗಳನ್ನು ಉರಿಸಲಾಗುತ್ತಿದೆ. ಕಾನೂನುಬಾಹಿರವಾಗಿ ಮರಗಳನ್ನು ಕಡಿದು ತರಲಾಗುತ್ತಿದ್ದು, ಪರಿಸರ ನಾಶವಾಗುತ್ತಿದೆ ಎಂದು ನಾಗೇಶ್ ಭಟ್ ಆರೋಪಿಸಿ ಕ್ರಮಕ್ಕೆ ಆಗ್ರಹಿಸಿದರು.
ಪರಿಸರ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ವಿಜಯಾ ಹೆಗ್ಡೆ, ಉಡುಪಿ ಇಒ ಕೀರ್ತಿಕುಮಾರ್, ಮಂಗಳೂರು ಇಒ ಲಕ್ಷಿ$¾àಕಾಂತ್, ಶ್ರೀ ದೇವಳದ ಆಡಳಿತ ಮೊಕ್ತೇಸರ ವೇ| ಮೂ| ಮಧ್ವರಾಯ ಭಟ್, ಹೋರಾಟ ಸಮಿತಿಯ ಪ್ರಮುಖರಾದ ದಿನೇಶ್ ಕೋಟ್ಯಾನ್ ಪಲಿಮಾರು, ನವೀನ್‌ಚಂದ್ರ ಸುವರ್ಣ ಅಡ್ವೆ, ಪ್ರೇಮಾನಂದ ಕಲ್ಮಾಡಿ, ಸಂದೀಪ್ ಪಲಿಮಾರು, ಚಂದ್ರಹಾಸ ಇನ್ನ, ಶಂಕರ್ ಶೆಟ್ಟಿ ಅಡ್ವೆ ಸನ್ನೋಣಿ, ಸಂದೇಶ್ ಶೆಟ್ಟಿ ಪಡುಬಿದ್ರಿ, ರಶ್ಮಿ ಪಲಿಮಾರು, ಮಹೇಶ್ ಶೆಟ್ಟಿ, ರಮಾನಾಥ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.