ಉದ್ಘಾಟನೆ ಮುನ್ನವೇ ಕುಸಿದ ಮದ್ಮಾಲ್ ಕೆರೆ ತಡೆಗೋಡೆ
Team Udayavani, Jun 20, 2018, 2:45 AM IST
ಉಡುಪಿ: ಹಾವಂಜೆ ಗ್ರಾಮದ ಕೀಳಂಜೆಯಲ್ಲಿರುವ ಮದ್ಮಾಲ್ ಕೆರೆಗೆ ಕಟ್ಟಲಾದ ತಡೆಗೋಡೆ ಅವರಣ ಉದ್ಘಾಟನೆ ಮುನ್ನವೇ ಕುಸಿದಿದ್ದು, ಸ್ಥಳಿಯ ಕೃಷಿಕರಲ್ಲಿ ಅತಂಕ ಮೂಡಿಸಿದೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ರ ಪ್ರಯತ್ನದಿಂದ ಸಣ್ಣ ನೀರಾವರಿ ಇಲಾಖೆಯಿಂದ ಅಂದಾಜು ವೆಚ್ಚ 40 ಲ.ರೂ.ಗಳಲ್ಲಿ ಈ ಕೆರೆಯನ್ನು ಪುನಶ್ಚೇತನಗೊಳಿಸಿ ತಡೆಗೋಡೆ ನಿರ್ಮಿಸಲಾಗಿತ್ತು. ಈ ಕೆರೆಯಲ್ಲಿ ಮೂರ್‍ನಾಲ್ಕು ಊರಿಗೂ ನೀರುಣಿಸುವಷ್ಟು ನೀರಿದ್ದು, ಕೆರೆ ಕಾಮಗಾರಿಯಿಂದ ಕೆರೆಯ ಸುತ್ತಮುತ್ತ ಗದ್ದೆಯಂತಾಗಿ, ಕಿರು ಸೇತುವೆಗೆ ಹಾನಿಯುಂಟಾಗಿದೆ. ಕೃಷಿಕರಿಗೆ ಜಾನುವಾರುಗಳನ್ನು ಪಕ್ಕದ ಗದ್ದೆಗೆ ತೆಗೆದುಕೊಂಡು ಹೋಗಲು ತೊಂದರೆಯಾಗಿದೆ. ಕೆರೆ ಪಕ್ಕದಲ್ಲಿ ದೊಡ್ಡದಾದ ನೀರು ಹರಿಯುವ ತೋಡಿದ್ದು ಅದಕ್ಕೆ ಯಾವುದೇ ಕಾಯಕಲ್ಪ ಮಾಡಿಲ್ಲ.
ಇದೀಗ ಈ ಕೆರೆ ಆಪಾಯದ ಅಂಚಿನಲ್ಲಿರುವ ಕೆರೆಯ 2ನೇ ಹಂತ ಕಾಮಗಾರಿಯ ಮೇ ಅಂತ್ಯದಲ್ಲಿ ಮುಗಿಸಲಾಗಿತ್ತು. ಕಾಮಗಾರಿಯ ಗುಣಮಟ್ಟದ ಕಾಮಗಾರಿ ನಡೆಯಲಿಲ್ಲ ಎಂದು ದೂರಲಾಗಿದೆ. ಕೆರೆಗೆ ಬಳಸಿದ ಸಾಮಗ್ರಿಗಳು ಗುಣಮಟ್ಟ ರಹಿತವಾಗಿದಲ್ಲಿ ಪುನಃ ರಚಿಸಬೇಕು, ಕೆರೆಯ ಸುತ್ತಲೂ ಕುಡಿಯುವ ನೀರಿನ ಟ್ಯಾಂಕರ್ ಸಂಚರಿಸುವಂತೆ ಮಾಡಬೇಕು, ಸ್ಥಳೀಯ ಕೃಷಿಕರಿಗೆ ಹೂಳೆತ್ತಿದ ಮಣ್ಣಿನಿಂದ ಕೃಷಿ ಚಟುವಟಿಕೆಗೆ ತೊಂದರೆಯಾಗದಂತೆ, ಕೆರೆಯ ಸುತ್ತಲೂ ತಂತಿ ಬೇಲಿ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.