“ಕಟ್ಟದಪ್ಪ ಪ್ರಿಯ’ ಪಡುಬಿದ್ರಿ ಗಣಪತಿಗೆ ವಿಶೇಷ ಅಪ್ಪ ಸೇವೆ
Team Udayavani, Jul 31, 2018, 6:00 AM IST
ಪಡುಬಿದ್ರಿ: ಸೀಮೆಗೊಡೆಯನಾಗಿ ಶ್ರೀ ಮಹಾಲಿಂಗೇಶ್ವರ ಹಾಗೂ ಕ್ಷಿಪ್ರ ಪ್ರಸಾದವನ್ನಿತ್ತು ಕಾಯುವ ಜಗತ್ಪ್ರಸಿದ್ಧ ಶ್ರೀ ಮಹಾಗಣಪತಿಯ ಪುಣ್ಯ ಕ್ಷೇತ್ರವಾಗಿ ಪಡುಬಿದ್ರಿಯು ಮೆರೆದಿದೆ. ಇಲ್ಲಿ ಮಹೇಶ್ವರನು ಪ್ರಧಾನ ದೇವರಾಗಿದ್ದು ಉಪಸ್ಥಾನ ಅಧಿಪತಿಯಾಗಿ ವಿನಾಯಕನಿರುವನು. ಪಡುಬಿದ್ರಿ ಗಣಪತಿಯು “ಕಟ್ಟದಪ್ಪ’ (ಕಟಾಹಾಪೂಪ) ಪ್ರಿಯನಾಗಿದ್ದು ಆ. 4ರಂದು ಇಲ್ಲಿ ಸಾರ್ವಜನಿಕ ಅಪ್ಪ ಸೇವೆಯು ನಡೆಯಲಿದೆ.
ಆಟಿ ತಿಂಗಳಲ್ಲಿ ರೈತಾಪಿ ವರ್ಗ ತಮ್ಮ ಕೃಷಿ ಕಾಯಕವನ್ನು ಮುಗಿಸಿ ಧಾರಾಕಾರವಾಗಿ ಸುರಿವ ಮಳೆಗೆ ಮನೆಯೊಳಗಿದ್ದೇ ತಾವು ಬಿತ್ತಿರುವ ಭತ್ತವು ಮುಂದೆ ಉತ್ತಮ ಫಸಲಾಗಲಿ ಎಂದು ಬೇಡಿಕೊಳ್ಳುವ ಕಾಲವಿದು. ಅವರು ಮಳೆಗಾಲದಲ್ಲಿ ನೀರ ತೋಡುಗಳಿಗೆ “ಕಟ್ಟ'(ಒಡ್ಡು)ಗಳನ್ನು ಕಟ್ಟಿಕೊಂಡು ಶ್ರಮವಹಿಸಿ ತಾವು ನೀರೊಡ್ಡುವ ಗದ್ದೆಗಳಿಂದ ಉತ್ತಮ ಫಲ ಬರಲಿ ಎಂದು ಗ್ರಾಮದ ದೈವ, ದೇವರುಗಳನ್ನು ಪ್ರಾರ್ಥಿಸುತ್ತಾರೆ. ಕೃಷಿ ಕಾಯಕಕ್ಕಾಗಿ ಕಟ್ಟಗಳನ್ನು ಕಟ್ಟಿದ ಬಳಿಕ ಈ ಒಡ್ಡುಗಳ ರಕ್ಷಣೆ ಮತ್ತು ಹೇರಳ ನೀರಾಶ್ರಯಕ್ಕಾಗಿ ಗ್ರಾಮ ದೇವರಿಗೆ ಸಮರ್ಪಿತಗೊಳ್ಳುವ ಅಪ್ಪ ಸೇವೆಗೆ “ಕಟ್ಟದಪ್ಪ’ವೆಂಬ ನಾಮಧೇಯವೂ ಪ್ರಚಲಿತವಿದೆ.
ಕಟಾಹದಲ್ಲಿನ ಅಪ್ಪ – ಕಟಾಹಾಪೂಪ
ಈ ಕಟ್ಟದಪ್ಪ ಸೇವೆಯ ದಿನ ರಾತ್ರಿ ಪೂಜೆಯ ಸಂದರ್ಭ ಊರ ಪ್ರಮುಖರ ಸಹಿತ ಕೃಷಿಕರೆಲ್ಲರೂ ದೇಗುಲದಲ್ಲಿ ಸೇರುತ್ತಾರೆ. ಸಾಮೂಹಿಕವಾಗಿ ಮಹಾಲಿಂಗೇಶ್ವರ ಹಾಗೂ ಪ್ರಧಾನವಾಗಿ ಮಹಾಗಣಪತಿಗೆ ಧನ ಧಾನ್ಯ ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಶ್ರೀ ದೇವರ ಸಮ ರ್ಪಣೆಗಾಗಿ ಬೆಳಿಗ್ಗಿನಿಂದಲೇ ಬಾಣಸಿಗರು ದೊಡ್ಡ, ದೊಡ್ಡ ಬಾಣಲೆಯಲ್ಲಿ ಕಾಯಿಸಿ ತಯಾರಿಸಿ ದೊಡ್ಡ ದೊಡ್ಡ ಕಟಾಹಗಳಲ್ಲಿ ಸಮರ್ಪಣೆಗಾಗಿ ಶ್ರೀ ದೇವರ ಮುಂದಿಡುವ ಅಪ್ಪಗಳನ್ನು “ಕಟಾಹಾಪೂಪ’ವೆಂದೂ ಕರೆಯಲಾಗುತ್ತದೆ.
“ಪೊಟ್ಟಪ್ಪ’ ಸೇವೆ ವಿಶೇಷ
ಈ ಸೇವೆಯಲ್ಲದೇ ಪಡುಬಿದ್ರಿ ಗಣಪತಿಗೆ ಪಂಚಕಜ್ಜಾಯ ಸೇವೆ ಅಚ್ಚುಮೆಚ್ಚು. ಬರೀ ತೆಂಗಿನಕಾಯಿ, ಅಕ್ಕಿ, ಉಪ್ಪುಗಳ ಮಿಶ್ರಣದಿಂದ ತಯಾರಿಸುವ “ಪೊಟ್ಟಪ್ಪ’ವೂ ಪಡುಬಿದ್ರಿ ಗಣಪನಿಗೆ ಸಂದಾಯವಾಗುವ ವಿಶೇಷ ಸೇವೆಯಾಗಿದೆ.
ದೇಶ, ವಿದೇಶಗಳಲ್ಲಿ ಪ್ರಸಿದ್ಧ
ಪಡುಬಿದ್ರಿ ಗಣಪತಿಯನ್ನು ಮನಸಾರೆ ಆರಾಧಿಸುವ ಉದ್ಯಮಪತಿಗಳಿಂದ ತೊಡಗಿ ರಾಜ್ಯ, ದೇಶ ವಿದೇಶಗಳಿಂದಲೂ ಈ ವಿಶೇಷ ಅಪ್ಪ ಸೇವೆಗಾಗಿ ಬೇಡಿಕೆಗಳಿರುತ್ತವೆ. ದಿನನಿತ್ಯದ ಅಪ್ಪ ಸೇವೆಯೂ ಇಲ್ಲಿ ನಡೆಯುತ್ತಲಿದ್ದರೂ ವರ್ಷಕೊಮ್ಮೆ ನಡೆವ ಈ ಕಟ್ಟದಪ್ಪ ಅಥವಾ ಕಟಾಹಾಪೂಪ ಸೇವೆಗೆ ವಿಶೇಷ ಮಹತ್ವವಿದೆ. ಸುಮಾರು 10,000 ಸೇವಾಕರ್ತರು ಈ ಸೇವೆಗಾಗಿ ಪ್ರತೀ ಬಾರಿಯೂ ಕಾದಿರುತ್ತಾರೆ.
ಕಟ್ಟದಪ್ಪ ತಯಾರಿ ಹೇಗೆ?
ಸಾರ್ವಜನಿಕ ಅಪ್ಪ ಸೇವೆಯಂದು ಈ ಬಾರಿ 80ಮುಡಿ ಅಕ್ಕಿಯ ಅಪ್ಪವು ಗಣಪತಿಗೆ ಸಮರ್ಪಿತವಾಗಲಿದೆ. ಈ ಅಕ್ಕಿಗೆ 180ಕೆಜಿ ಅರಳು, ಸುಮಾರು 700ಕೆಜಿಗಳಷ್ಟು ಬಾಳೆಹಣ್ಣು, ಸುಮಾರು 2000 ತೆಂಗಿನಕಾಯಿ, 10ಕೆಜಿ ಏಲಕ್ಕಿ, 2.5ಟನ್ ಬೆಲ್ಲದೊಂದಿಗೆ ಮಿಶ್ರಣವನ್ನು ತಯಾರಿಸಿಕೊಂಡು ಸುಮಾರು 50 ಡಬ್ಬಿ ಎಣ್ಣೆಯಿಂದ ಕಬ್ಬಿಣದ ಬಾಣಲೆಗಳಲ್ಲಿ ಅಪ್ಪಗಳನ್ನು ಬೆಳಿಗ್ಗಿಂದ ಸಾಯಂಕಾಲದ ಆರೇಳು ಗಂಟೆಯವರೆಗೂ ಕಾಯಿಸಿ ಸುಮಾರು 1.5ಲಕ್ಷಗಳಷ್ಟು ಅಪ್ಪಗಳನ್ನು ತಯಾರಿಸಲಾಗುತ್ತದೆ.
– ಆರಾಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.