ಮಹಾನುಭಾವರ ಸಂದೇಶ ಕೆಲಸ ಮುಂದೆ, ಹೆಸರು ಹಿಂದೆ!
Team Udayavani, Jan 18, 2018, 2:26 PM IST
ಶ್ರೀಕೃಷ್ಣಮಠದ ಪರ್ಯಾಯೋತ್ಸವದ ಸಂದರ್ಭ ಒಬ್ಬರು ಸ್ವಾಮಿಗಳು ನಿರ್ಗಮನ ಪೀಠಾಧೀಶರಾಗಿ, ಒಬ್ಬರು ಸ್ವಾಮಿಗಳು ಆಗಮನ ಪೀಠಾಧೀಶರಾಗಿರುತ್ತಾರೆ. ಈಗಿನ ನಿರ್ಗಮನ ಪೀಠಾಧೀಶರಾದ ಪೇಜಾವರ ಮಠದ 32ನೆಯ ಶ್ರೀವಿಶ್ವೇಶತೀರ್ಥ ಶ್ರೀಪಾದರ ಪರಂಪರೆಯಲ್ಲಿ ಆರನೆಯವರಾದ ಶ್ರೀವಿಜಯಧ್ವಜತೀರ್ಥರು ಮತ್ತು ಈಗಿನ ಆಗಮನ ಪೀಠಾಧೀಶರಾದ ಶ್ರೀಪಲಿಮಾರು ಮಠದ 30ನೆಯ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಪರಂಪರೆಯಲ್ಲಿ ಆರನೆಯವರಾದ ಶ್ರೀರಾಜರಾಜೇಶ್ವರಯತಿಗಳ ಕಾರ್ಯವೈಖರಿ ಒಂದೇ ತೆರನಾಗಿರುವುದು ಕಂಡುಬರುತ್ತದೆ.
ಶ್ರೀವಿಜಯಧ್ವಜತೀರ್ಥರು ಸಮಗ್ರ ಭಾಗವತಕ್ಕೆ “ಪದರತ್ನಾವಲೀ’ ಎಂಬ ಟಿಪ್ಪಣಿ ಬರೆದವರು. ಮಂಗಳೂರಿನಿಂದ ಕಾಸರಗೋಡಿಗೆ ಹೋಗುವ ಮಧ್ಯದಲ್ಲಿ ಸಿಗುವ ತಲಪಾಡಿ ಸಮೀಪದ ಕಣ್ವತೀರ್ಥ ಮಠದ ಆವರಣದಲ್ಲಿ ಇವರ ವೃಂದಾವನವಿದೆ. ತಲಪಾಡಿಯಿಂದ ಸ್ವಲ್ಪ ಮುಂದೆ ಹೋದಾಗ ರಾ.ಹೆದ್ದಾರಿಯ ಬಲ ದಿಕ್ಕಿನಲ್ಲಿರುವ ಸ್ವಾಗತ ಕಮಾನಿನಲ್ಲಿ ಕೈ ಎತ್ತಿದ ಯತಿಯೊಬ್ಬರ ವಿಗ್ರಹವನ್ನು ರಚಿಸಿದ್ದು ವಿಜಯಧ್ವಜರನ್ನೇ ಸಂಕೇತಿಸಿ.
ಇವರ ವೃಂದಾವನ ಸಮೀಪ ಇರುವ ಅಶ್ವತ್ಥ ಮರದ ಎಲೆಗಳು ಪಟಪಟ ಸದ್ದು ಮಾಡುತ್ತಿತ್ತಂತೆ. ಇವರು ಭಾಗವತ ಪಾಠ ಮಾಡುವಾಗ ಆ ಸುದ್ದಿ ಕಿರಿಕಿರಿ ಆಯಿತು. ಸದ್ದನ್ನು ನಿಲ್ಲಿಸಲು ಕೈಸನ್ನೆಯಿಂದ ಸೂಚಿಸಿದರು ಎನ್ನುತ್ತಾರೆ. ಅದೇ ಮರ ಇದೇ ಎನ್ನುವುದು ಅದರ ಗಾತ್ರದಿಂದಲೇ ಹೇಳಬಹುದು. ಇವರ “ಪದರತ್ನಾವಲೀ’ ಎಷ್ಟು ಪ್ರಸಿದ್ಧವೆಂದರೆ ಭಾಗವತ ಗ್ರಂಥದ ಬಗೆಗೆ ಎಲ್ಲಿಯೇ ಶೈಕ್ಷಣಿಕ ಮಟ್ಟದ ಚರ್ಚೆಯಾಗಲಿ ಅಲ್ಲಿ ವಿಜಯಧ್ವಜರ (ವಿಜಯಧ್ವಜೀಯ) ಹೆಸರು ಉಲ್ಲೇಖ ಬರುತ್ತದೆ. ಅಲ್ಲಿ ಎಷ್ಟು ವಿವರಣೆಗಳನ್ನು ಕೊಡುತ್ತಾರೆಂದರೆ ಎಲ್ಲಿಯಾದರೂ ಸ್ನಾನ ಎಂದು ಉಲ್ಲೇಖ ಬಂದರೆ ಎಷ್ಟು ಬಗೆಯ ಸ್ನಾನಗಳಿವೆ, ಮಹತ್ವವೇನು ಎಂಬಿತ್ಯಾದಿ ಸಮಗ್ರ ವಿವರಗಳನ್ನು ಕೊಟ್ಟಿದ್ದಾರೆ. ಉತ್ತರ ಭಾರತದಲ್ಲಿ ಜಾತಿ, ಮತಪಂಥಗಳ ಬೌಂಡರಿಗಳಿಲ್ಲದೆ ಇದು ಸ್ವೀಕೃತವಾಗಿರುವುದು ಗ್ರಂಥದ ಗುಣಮಟ್ಟದಿಂದ. ಆದರೆ ವಿಜಯಧ್ವಜರು ಯಾರು? ಎಲ್ಲಿಯವರು? ಹಿನ್ನೆಲೆ ಏನು ಇದ್ಯಾವುದೂ ಅಲ್ಲಿ ಉಲ್ಲೇಖೀಸುವವರಿಗೆ ಗೊತ್ತಿರುವುದಿಲ್ಲ.
ಶ್ರೀಪಲಿಮಾರು ಮಠದ ಆರನೆಯ ಯತಿ ಶ್ರೀರಾಜರಾಜೇಶ್ವರ ಯತಿಗಳ “ಮಂಗಲಾಷ್ಟಕ’ವೂ ಇದೇ ರೀತಿ ದಕ್ಷಿಣದಿಂದ ಹಿಡಿದು ಉತ್ತರ ಭಾರತದವರೆಗೆ ಪಠಿಸುತ್ತಾರೆ. ಕೇವಲ ಎಂಟು ಶ್ಲೋಕಗಳಲ್ಲಿ ಇವರು ಗಿರಿ ಪರ್ವತ, ನದಿ, ದೇವದೇವತೆಗಳು, ನಕ್ಷತ್ರ, ರಾಶಿ, ಗ್ರಹ, ಆಯನ, ಸಂವತ್ಸರ ಹೀಗೆ ಇಡೀ ವೈಶ್ವಿಕ ವ್ಯವಸ್ಥೆಯನ್ನು ಹಿಡಿದಿರಿಸಿದ್ದಾರೆ. ಒಂದರ್ಥದಲ್ಲಿ ಇದು ಮೋಸ್ಟ್ ಸೆಕ್ಯುಲರ್. ಆದ್ದರಿಂದಲೇ ಇದು ಸರ್ವಮಾನ್ಯವಾಗಿದೆ. ಇದನ್ನು ಪಠಿಸುವವರಿಗೆ ಮಾತ್ರ ರಾಜರಾಜೇಶ್ವರರು ಯಾರೆಂದು ತಿಳಿದಿಲ್ಲ. ಇವರ ವೃಂದಾವನ ಪಡುಬಿದ್ರಿ ಬಳಿಯ ಪಲಿಮಾರು ಮೂಲಮಠದಲ್ಲಿದೆ. ಇವರ ಪರಂಪರೆಯಲ್ಲಿ ಕಾಣಸಿಗುವ ಮೊದಲ ವೃಂದಾವನವಿದು.
ಇವರಿಬ್ಬರ ಕೆಲಸ ಮಾತ್ರದಿಂದಾಗಿ ಇವರು ಪ್ರಸಿದ್ಧರಾಗಿದ್ದಾರೆ. ಇಂತಹ ವ್ಯಕ್ತಿಗಳು ಮಾನವ ಕುಲಕ್ಕೆ ಕೊಡುವ ಸಂದೇಶ ಇದು: “ನಮ್ಮ ಕೆಲಸ ದೀರ್ಘಕಾಲ ಬದುಕಬೇಕು, ಆ ಕೆಲಸದ ಮೂಲಕ ವ್ಯಕ್ತಿಯ ಹೆಸರು ಬರಬೇಕಷ್ಟೆ., ಕೆಲಸ ಮುಂದೆ, ಹೆಸರು ಹಿಂದೆ’.
ಸಮಕಾಲೀನರಿಬ್ಬರು ಅಜರಾಮರ!
ಶ್ರೀವಿಜಯಧ್ವಜರು ಮತ್ತು ಶ್ರೀರಾಜರಾಜೇಶ್ವರಯತಿಗಳ ಕಾಲಮಾನವನ್ನು ಹೀಗೆ ಅಂದಾಜಿಸಬಹುದು. ವಿಜಯಧ್ವಜರ ಕಾಲ 1361-1438 ಎಂಬ ಊಹೆ ಇದೆ. 1434-1448ರ ಅವಧಿ ಪೀಠಾಧಿಪತಿಯಾಗಿದ್ದರು ಎಂಬ ಮಾತಿದೆ. ರಾಜರಾಜೇಶ್ವರಯತಿಗಳ ಜನನ ಕಾಲ 1380 ಎಂದು ಅಂದಾಜಿಸಲಾಗಿದೆ. ಇವರ ಹೆಸರು ಉಲ್ಲೇಖವಿರುವ ಕಾಂತಾವರದ ಶಾಸನದ ಕಾಲ 1433. ಇವರಿಬ್ಬರೂ ಪರಂಪರೆಯಲ್ಲಿ ಆರನೆಯವರಾದ ಕಾರಣ ಮತ್ತು ವಿವಿಧ ಕಾಲಘಟ್ಟಗಳನ್ನು ಅವಲೋಕಿಸಿದಾಗ ಸಮಕಾಲೀನರು ಎನ್ನುವುದು ಖಚಿತವಾಗುತ್ತದೆ. ಇವರಿಬ್ಬರ ಅವಧಿಯೂ ಶ್ರೀಕೃಷ್ಣಮಠದಲ್ಲಿ ಎರಡು ವರ್ಷಗಳ ಪರ್ಯಾಯ ಆರಂಭವಾಗುವುದಕ್ಕೆ ಮುಂಚಿತವಾದದ್ದು. ಏಕೆಂದರೆ 1522ರಲ್ಲಿ ಎರಡು ವರ್ಷಗಳ ಪರ್ಯಾಯ ಆರಂಭಗೊಂಡದ್ದು. ಇವರಿಬ್ಬರ ಕೆಲಸದಿಂದಾಗಿ ಹೆಸರು ಅಜರಾಮರವಾಗಿದೆ. ಸಂದೇಶವೆಂದರೆ ಮೌಲ್ಯಯುತ ಕೆಲಸವಿಲ್ಲದೆ ಪದನಿಮಿತ್ತವಾಗಿ ಹೆಸರು ಬಂದರೂ ಅದು ಕ್ಷಣಿಕ, ಕೆಲಸ ಮೌಲ್ಯಯುತವಾಗಿದ್ದರೆ ಹೆಸರು ಎಂದೆಂದಿಗೂ ಊರ್ಜಿತ.
ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ
Bengaluru: ಕೆರೆ ಒತ್ತುವರಿ ಮಾಡಿದ್ದ ಮೂವರಿಗೆ 1ವರ್ಷ ಜೈಲು
Actor Darshan: 6 ತಿಂಗಳ ಬಳಿಕ ದರ್ಶನ್ ಭೇಟಿ: ಪವಿತ್ರಾ ಭಾವುಕ
Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.