Malpe: ಚಿನ್ನವನ್ನು ಕರಗಿಸಿ ವಂಚನೆ; ಪ್ರಕರಣ ದಾಖಲು
Team Udayavani, Sep 4, 2024, 11:35 PM IST
ಮಲ್ಪೆ: ಚಿನ್ನದ ಕೈ ಬಳೆಯ ಹೊಳಪನ್ನು ಹೆಚ್ಚಿಸುವುದಾಗಿ ಹೇಳಿ ವೃದ್ಧೆಗೆ ವಂಚಿಸಿದ ಘಟನೆ ಮಲ್ಪೆ ಬೈಲಕರೆ ಸಮೀಪದ ಮನೆಯೊಂದರಲ್ಲಿ ನಡೆದಿದೆ.
ಬೈಲಕರೆಯ ಕಲ್ಯಾಣಿ ಜತ್ತನ್ ಮನೆಯಲ್ಲಿ ಈ ಘಟನೆ ನಡೆದಿದೆ. ಪುರುಷರು ಮನೆಯಲ್ಲಿ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಬ್ಯಾಗ್ ಹಾಕಿಕೊಂಡು ಬಂದಿದ್ದ ಯುವಕ ತಾನು ಪ್ರತಿಷ್ಠಿತ ಗೋಲ್ಡ್ ಸಂಸ್ಥೆಯಿಂದ ಬಂದಿದ್ದು, ಬೆಳ್ಳಿ-ಬಂಗಾರ ಸಹಿತ ಹಲವು ವಸ್ತುಗಳನ್ನು ಸ್ವಚ್ಛಗೊಳಿಸಿ ಹೊಳಪು ನೀಡುವ ಪೌಡರ್ ಮಾರಾಟ ಮಾಡುವುದಾಗಿ ಕಲ್ಯಾಣಿ ಅವರಲ್ಲಿ ಹೇಳಿ ನಂಬಿಸಿದ್ದ. ಪಾಲಿಶ್ ಮಾಡುವ ಮಾದರಿ ತೋರಿಸುವುದಾಗಿ ಮೊದಲಿಗೆ ತುಳಸಿಕಟ್ಟೆಯಲ್ಲಿದ್ದ ದೀಪದ ಸ್ಟಾಂಡಿಗೆ ಪುಡಿಯೊಂದನ್ನು ತಿಕ್ಕಿ ಅದನ್ನು ಶುಭ್ರ ಮಾಡಿ ತೋರಿಸಿದ್ದಾನೆ.
ಬಳಿಕ ಆತ ಮಹಿಳೆಯ ಕೈಯಲ್ಲಿದ್ದ 3 ಪವನಿನ 2 ಚಿನ್ನದ ಬಳೆಗಳನ್ನು ನೋಡಿ ಹೊಳಪು ಮಾಡಿಕೊಡುವ ಬಗ್ಗೆ ನಯವಾದ ಮಾತುಗಳಿಂದ ನಂಬಿಸಿದ್ದಾನೆ. ಆತ ದ್ರಾವಣವಿದ್ದ ಪಾತ್ರೆಯೊಂದರಲ್ಲಿ ಚಿನ್ನವನ್ನು ಹಾಕಿ ಬೆಂಕಿಯಲ್ಲಿ ಕಾಯಿಸಿದ್ದಾನೆ. ಜತೆಗೆ ಮಹಿಳೆಯ ಕತ್ತಿನಲ್ಲಿದ್ದ ಸರವನ್ನು ಹೊಳಪು ಮಾಡಿಕೊಡುವುದಾಗಿ ಹೇಳಿದ. ಆದರೆ ಮಹಿಳೆ ಅದಕ್ಕೆ ಒಪ್ಪಲಿಲ್ಲ. ಬಳೆಯನ್ನು ಅನಂತರ ಪೇಪರ್‌ನಲ್ಲಿ ಕಟ್ಟಿ, 15 ನಿಮಿಷ ಬಿಟ್ಟು ತೆಗೆಯಲು ಹೇಳಿ ಮಹಿಳೆಯ ಕೈಗಿತ್ತ. ಇದಕ್ಕೆ ಶುಲ್ಕ ಇಲ್ಲ. ಇದು ನಮ್ಮ ಗೋಲ್ಡ್ ಸಂಸ್ಥೆಯ ಉಚಿತ ಕೊಡುಗೆ ಎಂದು ಹೇಳಿ ಆತ ಅಲ್ಲಿಂದ ಕಾಲ್ಕಿತ್ತಿದ್ದ. ಅನಂತರ ಕಲ್ಯಾಣಿ ಜತ್ತನ್ ಅವರು ಚಿನ್ನದ ಬಳೆಯನ್ನು ಬಿಡಿಸಿ ತೆಗೆದಾಗ ಕೆಲವು ಕಡೆ ಕರಗಿದ ಹಾಗೆ ಇತ್ತು. ತತ್‌ಕ್ಷಣ ಅವರು ತನ್ನ ಮಗ ಅರುಣ್ ಜತ್ತನ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದರು. ವಂಚಕ ಚಿನ್ನದಂಶವನ್ನು ದ್ರವ ಮಾದರಿಯಲ್ಲಿ ಸಂಗ್ರಹಿಸಿ ಪಡೆದು ಪರಾರಿಯಾಗಿದ್ದ. ಮನೆಮಂದಿ ಪರಿಸರದವರೊಂದಿಗೆ ಸೇರಿ ಹುಡುಕಾಟ ನಡೆಸಿದರೂ ವಂಚಕನ ಸುಳಿವು ಸಿಕ್ಕಿಲ್ಲ.
ಚಿನ್ನದ ಸರ ಸೆಳೆದು ಪರಾರಿ
ಮಣಿಪಾಲ: ಮಣಿಪಾಲದ ಕಮಲಾ ಅವರು ಸಗ್ರಿನೋಳೆ ತಿರುಮಲ ಕೋಳಿ ಫಾರಂನ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಓರ್ವ ವ್ಯಕ್ತಿ ಅವರ ಕುತ್ತಿಗೆಗೆ ಕೈ ಹಾಕಿ 16 ಗ್ರಾಂ ತೂಕದ ಚಿನ್ನದ ಚೈನ್ ಅನ್ನು ಎಳೆದು ಸುಲಿಗೆ ಮಾಡಿಕೊಂಡು ಹೋಗಿದ್ದಾನೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.