ಮಲ್ಪೆ ; ಅಗ್ನಿ ಅವಘಡವಾದರೆ ಕಾರ್ಯಾಚರಣೆ ನಡೆಸಲು ದಾರಿ ಇಲ್ಲ !
Team Udayavani, Nov 17, 2023, 3:03 PM IST
ಮಲ್ಪೆ : ಸೋಮವಾರ ಗಂಗೊಳ್ಳಿಯಲ್ಲಿ ಲಂಗರು ಹಾಕಿದ್ದ ಬೋಟ್ ಗಳ ನಡುವೆ ಅಚಾನಕ್ ಸಂಭವಿಸಿದ ಅಗ್ನಿ ಅವಘಡಕ್ಕೆ ಮೀನುಗಾರಿಕೆ ವಲಯವನ್ನೇ ತಲ್ಲಣಗೊಳಿಸಿದ್ದು ಮಲ್ಪೆ ಬಂದರು ಸಹಿತ ರಾಜ್ಯದ ಇತರ ಬಂದರುಗಳಿಗೂ ಒಂದು ಎಚ್ಚರಿಕೆಯ ಕರೆಗಂಟೆಯಾಗಿದೆ.
ಇಂತಹ ಅವಘಡವೊಂದು ಸಂಭವಿಸಿದ್ದರೆ ಅದಕ್ಕೆ ಚಿಕ್ಕದೊಂದು ಅಜಾಗರೂಕತೆಯೇ ಕಾರಣವಾಗಿರುತ್ತದೆ. 42 ವರ್ಷಗಳ ಹಿಂದೆ ಮತ್ತು ಬಳಿಕ 20 ವರ್ಷಗಳ ಅನಂತರ ಮಲ್ಪೆಯಲ್ಲಿ 2 ಪ್ರಮುಖ ಅಗ್ನಿ ಅವಘಡ ಗಳು ನಡೆದು ಮೀನುಗಾರರ ಬದುಕನ್ನೇ
ಕಸಿದುಕೊಂಡಿತ್ತು. ಏಷ್ಯದ ಅತೀ ದೊಡ್ಡ ಸರ್ವ ಋತು ಮೀನುಗಾರಿಕೆ ಬಂದರು ಎಂದೆನಿಸಿದ ಮಲ್ಪೆಯಲ್ಲಿ 2,500ಕ್ಕೂ ಅಧಿಕ ಬೋಟ್‌ಗಳಿವೆ. ಆದರೆ ಬಂದರಿನಲ್ಲಿ ಅದಕ್ಕೆ ಪೂರಕವಾದ ಯಾವುದೇ ವ್ಯವಸ್ಥೆಗಳು, ಮುಂಜಾಗೃತ ಕ್ರಮಗಳು ಮಾತ್ರ ಶೂನ್ಯವಾಗಿದೆ.
ಸಂಬಂಧಪಟ್ಟ ಇಲಾಖೆಗಳು ಈ ಬಗ್ಗೆ ಯಾವುದೇ ತಲೆಕೆಡಿಸಿಕೊಳ್ಳದೆ ನಿರ್ಲಕ್ಷ್ಯ ತೋರಿದರೆ ಮತ್ತು ಮೀನುಗಾರರೂ ನಿಯಮ
ಗಳನ್ನು ಗಾಳಿಗೆ ತೂರಿಬಿಟ್ಟು, ದುರಂತಗಳಿಗೆ ಎಡೆಮಾಡಿಕೊಡುತ್ತಿದ್ದಾರೆ ಎನ್ನಲಾಗುತ್ತಿದೆ.
ಅಗ್ನಿ ಶಾಮಕ ವಾಹನ ಸಾಗಲು ವ್ಯವಸ್ಥಿತ ದಾರಿ ಇಲ್ಲ
ಪ್ರಸ್ತುತ ಇರುವ ಮಲ್ಪೆ ಬಂದರಿನಲ್ಲಿ 2,500 ಬೋಟ್‌ಗಳು ಇವೆ. ಆದರೆ ಈಗಿರುವ ಬಂದರಿನಲ್ಲಿ ತಂಗಲು 1,000 ಬೋಟ್‌ಗಳಿಗೆ ಮಾತ್ರ ಅವಕಾಶ ಇದೆ. ಇನ್ನುಳಿದ 1,500 ಬೋಟ್‌ಗಳಿಗೆ ಜಾಗ ಇಲ್ಲದೆ ಒಂದರ ಹಿಂದೆ ಒಂದರಂತೆ ಇಲ್ಲವೆ ಹೊಳೆಯಲ್ಲಿ ಲಂಗರು ಹಾಕುವ ಅನಿವಾರ್ಯತೆ ಇದೆ. ಆದರೆ ಇಷ್ಟು ಸಂಖ್ಯೆಯಲ್ಲಿ ಬೋಟ್‌ಗಳು ಇದ್ದರೂ ಮುಖ್ಯವಾಗಿ ಇಲ್ಲಿ ಯಾವುದೇ ಮುಂಜಾಗ್ರತ ಕ್ರಮ ಕೈಗೊಂಡಿಲ್ಲ. ಬಂದರಿನಲ್ಲಿ ಮೂರು ಹಂತದ ಬಂದರು ಜೆಟ್ಟಿಗಳು ಇದ್ದರೂ ಎಲ್ಲವೂ ಅವ್ಯವಸ್ಥಿತವಾಗಿದೆ.
ದಾರಿ ಮಧ್ಯೆ ಅಲ್ಲಲ್ಲಿ ಅಂಗಡಿಗಳು, ಬಾಕ್ಸ್‌ಗಳು, ಬಲೆ, ದೋಣಿ, ಇನ್ನಿತರ ಪರಿಕರಗಳು, ಸಿಕ್ಕ ಸಿಕ್ಕಲ್ಲಿ ವಾಹನಗಳ ಪಾರ್ಕಿಂಗ್ ಇದರಿಂದಾಗಿ ಯಾವುದೇ ಸಂಭವನೀಯ ಅವಘಡಗಳು ಉಂಟಾದರೆ ಅಗ್ನಿಶಾಮಕ ವಾಹನಗಳಿಗೆ ಮುಂದೆ ಸಾಗಲು ಸೂಕ್ತ ದಾರಿ ಸಿಗದೆ ದೊಡ್ಡ ಅನಾಹುತಗಳಿಗೆ ಕಾರಣವಾಗುತ್ತದೆ. ಈಗಿರುವ ಬಂದರಿನ 1-2 ದಕ್ಕೆಯಲ್ಲಿ ಮೀನುಗಾರಿಕೆಗೆ ತೆರಳದ ಬಹಳಷ್ಟು ಬೋಟ್‌ಗಳನ್ನು ಲಂಗರು ಹಾಕಲಾಗಿದ್ದು ಇದರಿಂದ ಮೀನುಗಾರಿಕೆ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಇದು ಅಗ್ನಿ ಅವಘಡಗಳು ಸಂಭವಿಸಿದರೆ ದೊಡ್ಡ ದುರಂತಕ್ಕೂ ಕಾರಣವಾಗುತ್ತದೆ ಎಂದು ಮೀನುಗಾರರು ತಿಳಿಸುತ್ತಾರೆ.
ಮುಂಜಾಗ್ರತ ಕ್ರಮ ಅನಿವಾರ್ಯ
ಮೀನುಗಾರಿಕೆ ಬಂದರಿನ ಸುರಕ್ಷೆಯ ನಿಟ್ಟಿನಲ್ಲಿ ಜಿಲ್ಲಾಡಳಿತ ಇಂತಹ ಅವಘಡ ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವ ಅನಿವಾರ್ಯತೆ ಇದೆ. ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ಶಾಸಕರು, ಮೀನುಗಾರ ಮುಖಂಡರು, ಮೀನುಗಾರಿಕೆ ಇಲಾಖೆ, ಕರಾವಳಿ
ಕಾವಲು ಪೊಲೀಸರ ಸಭೆ ಕರೆದು ಸಮಾಲೋಚನೆ ನಡೆಸಿ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಎಂದು ಮೀನುಗಾರ ಮುಖಂಡರು ಆಗ್ರಹ.
ಮಲ್ಪೆಬಂದರಿನಲ್ಲಿನಡೆದ 2 ಪ್ರಮುಖ ದುರಂತಗಳು
*1979 ಜು. 9ರಂದು ಮಲ್ಪೆ ಬಂದರಿನಲ್ಲಿ ದೊಡ್ಡ ಮಟ್ಟದ ಬೆಂಕಿ ಅವಘಡ ಸಂಭವಿಸಿತ್ತು. ಈ ವೇಳೆ ಒಟ್ಟು 250 ಸಣ್ಣ ಗಾತ್ರದ ಫಿಶಿಂಗ್ ಮತ್ತು ಪರ್ಸೀನ್ ಬೋಟ್‌ಗಳಿದ್ದು ಶೇ. 80 ಬೋಟ್ ಗಳು ಬೆಂಕಿಗಾಹುತಿಯಾಗಿವೆ.
ಮಾತ್ರವಲ್ಲದೆ 4 ಬೋಟ್ ತಯಾರಿಕಾ ಘಟಕಗಳು, ಗ್ಯಾರೇಜ್ ಗಳು, ಹಲವಾರು ಶೆಡ್‌ಗಳು ಸುಟ್ಟು ಹೋಗಿದ್ದು ಬಹುತೇಕ ಎಲ್ಲ ಮೀನುಗಾರರ ಬದುಕನ್ನು ನುಚ್ಚು ನೂರು ಮಾಡಿತ್ತು. ಆ ಕಾಲದಲ್ಲಿ ಮಳೆಗಾಲದ ನಿಷೇಧಿತ ಅವಧಿಯಲ್ಲಿ ಬೋಟ್‌ಗಳನ್ನು ಮೇಲಕ್ಕೆ ಎಳೆದು ಸಾಲಾಗಿ ಒಂದಕ್ಕೊಂದು ತಾಗಿಕೊಂಡು ಮಡಲಿನ ಸೋಗೆಯಿಂದ ಸಂಪೂರ್ಣವಾಗಿ ಮುಚ್ಚಿಡಲಾಗುತ್ತಿತ್ತು.
*1999 ಜು. 9ರಂದು ಮತ್ತೊಂದು ಬೆಂಕಿ ಅವಘಡ ಸಂಭವಿಸಿತ್ತು. ಇದರಲ್ಲಿ ಸುಮಾರು 80 ಬೋಟ್‌ಗಳು ಸುಟ್ಟು ಹೋಗಿದ್ದು ಸಾಲ ಮಾಡಿ ಬೋಟ್ ಖರೀದಿಸಿ ಮೀನುಗಾರಿಕೆಯಿಂದಲೇ ಜೀವನ ನಡೆಸುತ್ತಿದ್ದ ಮಾಲಕರು, ಅದನ್ನು ನಂಬಿಕೊಂಡಿದ್ದ ಸಾವಿರಾರು ಮೀನುಗಾರರ ಬದುಕನ್ನು ಅತಂತ್ರಗೊಳಿಸಿತ್ತು. ಆ ವೇಳೆ ಸ್ವಲ್ಪ ದೊಡ್ಡಗಾತ್ರದ (ಲೈಲ್ಯಾಂಡ್)ಮೀನುಗಾರಿಕೆ ಇದ್ದಿದ್ದು, ಸುಮಾರು 900ದಷ್ಟು ಬೋಟ್‌ಗಳು ಮೀನುಗಾರಿಕೆಯಲ್ಲಿ ತೊಡಗಿದ್ದವು. ಮೊದಲ ಅಗ್ನಿ ದುರಂತ ಉಂಟಾಗಿ 20 ವರ್ಷ ಪೂರೈಸಿದ ದಿನದಂದೇ 2ನೇ ದುರಂತ ನಡೆದಿತ್ತು. 2019ರಲ್ಲಿ ಮತ್ತೆ ಆ ದುರಂತ ಪುನರಾವರ್ತ ಆಗುತ್ತದೋ ಎಂಬ ಆತಂಕ ಮೀನುಗಾರರನ್ನು ಕಾಡಿತ್ತೆನ್ನಲಾಗಿದೆ.
ಹಲವು ಬಾರಿ ಪ್ರಸ್ತಾವ ಮಲ್ಪೆ ಬಂದರಿನಲ್ಲಿ ದಕ್ಕೆ ಮೀನುಗಾರಿಕಾ ಸಲಕರಣೆಗಳು ದಾರಿ ಮಧ್ಯೆ ಇರುವುದರಿಂದ ಅವಘಡ ಸಂಭವಿಸಿದರೆ ಅಗ್ನಿ ಶಾಮಕ ದಳದ ವಾಹನ ಸಂಚಾರ ಕಷ್ಟಸಾಧ್ಯ. ಮೀನುಗಾರ ಮುಖಂಡರು ಮತ್ತು ಇತರ ಇಲಾಖೆಯ
ಸಹಕಾರದಲ್ಲಿ ನಡೆದ ಸಭೆಯಲ್ಲಿ ಹಲವು ಬಾರಿ ಪ್ರಸ್ತಾವಿಸಲಾಗಿದೆ. ತೆರವುಗಳಿಸಲಾಗುವ ನಿರ್ಧಾರವನ್ನು ಕೈಗೊಂಡಿದ್ದರು. ಆದರೆ ಇದುವರೆಗೂ ಯಥಾಸ್ಥಿತಿಯಲ್ಲಿದೆ.
ಮಹಮ್ಮದ್ ಶಫಿ, ಸಹಾಯಕ ಅಗ್ನಿಶಾಮಕ ಅಧಿಕಾರಿ
*ನಟರಾಜ್ ಮಲ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.