Malpe: ಇಂದಿನಿಂದ ಮಲ್ಪೆ ಸೈಂಟ್ ಮೇರೀಸ್ ದ್ವೀಪಯಾನ
Team Udayavani, Sep 15, 2024, 6:29 AM IST
ಮಲ್ಪೆ: ಪ್ರವಾಸಿಗರ ಆಕರ್ಷಣೆಯ ತಾಣವಾಗಿರುವ ಮಲ್ಪೆ ಸೈಂಟ್ ಮೇರೀಸ್ ದ್ವೀಪಕ್ಕೆ ಮಳೆಗಾಲದಲ್ಲಿ 4 ತಿಂಗಳ ಕಾಲ ಹೇರಲಾಗಿದ್ದ ಪ್ರವೇಶ ನಿರ್ಬಂಧ ಅವಧಿ ತೆರವಾಗಿದ್ದು, ಸೆ. 15ರಿಂದ ಮತ್ತೆ ದ್ವೀಪ ಯಾನ ಆರಂಭಗೊಳ್ಳುತ್ತಿದೆ. ದಡದಿಂದ 4-5 ಕಿ.ಮೀ. ದೂರದಲ್ಲಿರುವ ದ್ವೀಪಕ್ಕೆ ಮಳೆಗಾಲದಲ್ಲಿ ತೆರಳುವುದು ಅಪಾಯಕಾರಿ ಎಂದು ಪ್ರತಿವರ್ಷ ಮೇ 15ರಿಂದ ಸೆ. 14ರ ವರೆಗೆ ಇಲ್ಲಿನ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರುತ್ತದೆ.
ಮಲ್ಪೆ ಬೀಚ್ ಮತ್ತು ಮೀನುಗಾರಿಕೆ ಬಂದರಿನ ಪಶ್ಚಿಮ ಭಾಗದಲ್ಲಿ ದ್ವೀಪಕ್ಕೆ ದೊಡ್ಡ ಪ್ರವಾಸಿ ಬೋಟ್‌ನ ವ್ಯವಸ್ಥೆ ಇದೆ. ಮಲ್ಪೆ ಬೀಚ್‌ನಿಂದ ದ್ವೀಪಕ್ಕೆ ಹೋಗಲು ಪ್ರವಾಸಿ ಸ್ಪೀಡ್ ಬೋಟುಗಳೂ ಇವೆ.
ಸ್ವಚ್ಛತಾ ಕಾರ್ಯ:
ನಾಲ್ಕೈದು ತಿಂಗಳು ಸ್ತಬ್ಧವಾಗಿದ್ದ ದ್ವೀಪದಲ್ಲಿ ಗಿಡಗಂಟಿಗಳು ಎತ್ತರಕ್ಕೆ ಬೆಳೆದು ನಿಂತಿದ್ದು, ಅದನ್ನು ತೆರವುಗೊಳಿಸುವ ಕೆಲಸ ನಡೆಸಲಾಗುತ್ತಿದೆ. ದ್ವೀಪದ ಸುತ್ತಲೂ ತ್ಯಾಜ್ಯಗಳು ಸಂಗ್ರಹವಾಗಿದ್ದು, 12 ಕಟ್ಟಿಂಗ್ ಮೆಶಿನ್ ಮೂಲಕ ರವಿವಾರದಿಂದ ಸ್ವಚ್ಛತಾ ಕೆಲಸ ಮಾಡಲಾಗುವುದು ಎಂದು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಾಂಡುರಂಗ ಮಲ್ಪೆ ತಿಳಿಸಿದ್ದಾರೆ.
ಆಧುನಿಕ ಸೌಕರ್ಯ, ರಕ್ಷಣ ಸಲಕರಣೆ:
ಸೀವಾಕ್ ಬಳಿಯಿಂದ ಹೊರಡುವ ನಮ್ಮ ದೊಡ್ಡ ಪ್ರವಾಸಿ ಬೋಟಿನಲ್ಲಿ ಕನಿಷ್ಠ 30 ಮಂದಿ ಬೇಕು. ಬೆಳಗ್ಗೆ 10.30 ಮತ್ತು ಅಪರಾಹ್ನ 3.30ಕ್ಕೆ ರೆಗ್ಯುಲರ್ ಟ್ರಿಪ್ ಇರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರಿದ್ದಲ್ಲಿ ಬೆಳಗ್ಗೆ 8.30ರಿಂದ ಸಂಜೆ 5-30ರ ವರೆಗೆ ನಿರಂತರ ಯಾನದ ವ್ಯವಸ್ಥೆ ಇರುತ್ತದೆ. ನಮ್ಮ ನಾಲ್ಕೂ ಬೋಟಿನಲ್ಲಿ ಆಧುನಿಕ ಸೌಕರ್ಯದೊಂದಿಗೆ, ಲೈಫ್‌ಜಾಕೆಟ್, ಲೈಫ್‌ಬಾಯ್, ಪ್ರಥಮ ಚಿಕಿತ್ಸೆ ವ್ಯವಸ್ಥೆ, ನುರಿತ ಈಜುಗಾರರ ರಕ್ಷಣ ತಂಡವಿದೆ. – ಗಣೇಶ್ ಅಮೀನ್ ಮಲ್ಪೆ(ಟೂರಿಸ್ಟ್ ಬೋಟ್‌ನ ವ್ಯವಸ್ಥಾಪಕರು)
ಬೋಟ್‌ಗಳ ಪರಿಶೀಲನೆ:
ಯಾನಕ್ಕೆ ಸಿದ್ಧವಾಗಿರುವ ಸೀವಾಕ್ ಬಳಿಯ ನಾಲ್ಕೂ ದೊಡ್ಡ ಬೋಟುಗಳನ್ನು ಪರಿಶೀಲಿಸಲಾಗಿದೆ. ವಾತಾವರಣ, ನೀರಿನ ಒತ್ತಡವನ್ನು ನೋಡಿಕೊಂಡು ಯಾನ ಆರಂಭಿಸಲು ತಿಳಿಸಲಾಗಿದೆ. ಬೀಚ್ ಬಳಿ ಇರುವ ಸ್ಪೀಡ್ ಬೋಟ್ ಯಾನದ ಪರಿಶೀಲನೆ ಇನ್ನಷ್ಟೆ ನಡೆಯಬೇಕಾಗಿದೆ.-ರಾಯಪ್ಪ, ಪೌರಾಯುಕ್ತರು, ಉಡುಪಿ ನಗರಸಭೆ ಕಾರ್ಯದರ್ಶಿ, ಮಲ್ಪೆ ಅಭಿವೃದ್ಧಿ ಸಮಿತಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.