Malpe ಹಲವರ ಖಾತೆಯಿಂದ ಲಕ್ಷಾಂತರ ರೂಪಾಯಿ ವರ್ಗಾವಣೆ!
ಮಲ್ಪೆಯಲ್ಲೂ ಬಯೋಮೆಟ್ರಿಕ್, ಆಧಾರ್ ವಂಚನೆ ಪ್ರಕರಣ ಬೆಳಕಿಗೆ
Team Udayavani, Oct 31, 2023, 12:15 AM IST
ಮಲ್ಪೆ: ಬಯೋಮೆಟ್ರಿಕ್ ಮತ್ತು ಆಧಾರ್ ಮಾಹಿತಿಯನ್ನು ಕದ್ದು ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಂ (ಎಇಪಿಎಸ್) ಮೂಲಕ ಬ್ಯಾಂಕ್ ಖಾತೆಯಿಂದ ಹಣ ದೋಚಿರುವ ಪ್ರಕರಣ ಈಗಾಗಲೇ ಮಂಗಳೂರಿನಲ್ಲಿ ವರದಿಯಾಗಿರುವ ಬೆನ್ನಲ್ಲೇ ವಾರದ ಹಿಂದೆ ಮಲ್ಪೆಯಲ್ಲೂ ಹಲವು ಮಂದಿಯ ಖಾತೆಯಿಂದ ಹಣ ವರ್ಗಾವಣೆ ಯಾಗಿರುವ ವಿಷಯ ಈಗ ಬೆಳಕಿಗೆ ಬಂದಿದೆ.
ಜಾಗ ಖರೀದಿ ಸಂದರ್ಭ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಬಯೋಮೆಟ್ರಿಕ್ ಮತ್ತು ಆಧಾರ್ ಮಾಹಿತಿ ನೀಡಿದವರಿಗೆ ಈ ಸಮಸ್ಯೆ ಎದುರಾಗಿದೆ ಎನ್ನಲಾಗುತ್ತಿದೆ. ಕೆಲವು ದಿನಗಳ ಹಿಂದೆ ಮಲ್ಪೆಯ ರಮೇಶ್ ಮೆಂಡನ್ ಅವರ ಖಾತೆಯಿಂದ 10 ಸಾವಿರ ರೂ. ವರ್ಗವಣೆಯಾದ ಬಗ್ಗೆ ಅವರ ಮೊಬೈಲಿಗೆ ಸಂದೇಶ ಬಂದಿತ್ತು. ಈ ಬಗ್ಗೆ ಸಂಬಂಧಪಟ್ಟ ಬ್ಯಾಂಕಿನಲ್ಲಿ ವಿಚಾರಿಸಿದಾಗ ಅವರ ಬೆರಳು ಮುದ್ರೆ ಬಳಸಿ ಖಾತೆಯಿಂದ ಹಣ ಡ್ರಾ ಮಾಡಲಾಗಿದೆ ಎಂದು ಮ್ಯಾನೇಜರ್ ಮಾಹಿತಿ ನೀಡಿದ್ದಾರೆ ಎಂದು ಅವರು ಉದಯವಾಣಿಗೆ ತಿಳಿಸಿದರು.
ಇದೇ ರೀತಿ ಮಲ್ಪೆ ಹನುಮಾನ್ ನಗರದ ಧನಂಜಯ ಕಾಂಚನ್ ಅವರ ಪತ್ನಿ ಜಯಂತಿ ಅವರ ಖಾತೆಯಿಂದಲೂ ಹಣ ವರ್ಗಾವಣೆಯಾಗಿದೆ. ಅ. 19ರಂದು ಖಾತೆಯಲ್ಲಿ 24 ಸಾವಿರ ಇದ್ದು, ಸಂಜೆ 7 ಗಂಟೆ ವೇಳೆಗೆ 5 ಸಾವಿರ ರೂ. ಕಡಿತಗೊಂಡಿತ್ತು. ಮರುದಿನ ಬ್ಯಾಂಕ್ ಸ್ಟೇಟ್‌ಮೆಂಟ್ ಪರಿಶೀಲಿಸಿದಾಗ ಹಣ ವರ್ಗಾವಣೆಯಾಗಿರುವುದು ಖಚಿತವಾಯಿತು. ತತ್‌ಕ್ಷಣವೇ 1 ಸಾವಿರ ರೂ.ಗಳನ್ನು ಮಾತ್ರ ಆ ಖಾತೆಯಲ್ಲಿ ಉಳಿಸಿ ಉಳಿದ 18 ಸಾವಿರವನ್ನು ಅನ್ಯ ಖಾತೆಗೆ ವರ್ಗಾಯಿಸಿದರು. ಸ್ವಲ್ಪ ಹೊತ್ತಿನ ಬಳಿಕ ಅಲ್ಲಿ ಉಳಿಸಿದ್ದ 1 ಸಾವಿರವೂ ವರ್ಗಾವಣೆಗೊಂಡು ಬ್ಯಾಲೆನ್ಸ್ ಮೊತ್ತ ಶೂನ್ಯ ಎಂದು ತೋರಿಸುತ್ತಿತ್ತು. 1 ಸಾವಿರ ಕಡಿತಕ್ಕೆ ಯಾವುದೇ ಸಂದೇಶ ಕೂಡ ಬಂದಿಲ್ಲ ಎನ್ನುತ್ತಾರೆ ಧನಂಜಯ್.
ಇದೇ ವೇಳೆ ಪಾವಂಜಿಗುಡ್ಡೆಯ ದಿವಾಕರ್, ಹರೀಶ್ ಮತ್ತು ಇನ್ನೂ ಕೆಲವು ಮಂದಿಯ ಖಾತೆಯಿಂದಲೂ ಹಣ ಕಡಿತವಾಗಿರುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಅವರೆಲ್ಲ ಸಂಬಂಧಪಟ್ಟ ಬ್ಯಾಂಕ್, ಪೊಲೀಸ್ ಠಾಣೆ, ಉಡುಪಿ ಸೈಬರ್ ಕ್ರೈಮ್ ವಿಭಾಗಕ್ಕೂ ದೂರು ನೀಡಿದ್ದಾರೆ.
ಎಲ್ಲ ಕಡೆ ಬಯೋಮೆಟ್ರಿಕ್ ಬಳಸದಿರಿ
ಎಇಪಿಎಸ್‌ನಲ್ಲಿ ಭಾರೀ ವಂಚನೆಯಾಗುತ್ತಿರುವ ಘಟನೆ ದೇಶಾದ್ಯಂತ ವರದಿಯಾಗುತ್ತಿದೆ. ಸೈಬರ್ ವಂಚಕರು ಬಳಕೆದಾರರ ಆಧಾರ ದತ್ತಾಂಶಗಳನ್ನು ಸರಕಾರಿ ವೆಬ್‌ಸೈಟ್‌ಗಳಿಂದ ಅಥವಾ ಇತರ ಮೂಲಗಳಿಂದ ಸಂಗ್ರಹಿಸಿ ಅದನ್ನು ಎಟಿಎಂ ಮೂಲಕ ಹಣ ವಿದ್‌ಡ್ರಾ ಅಥವಾ ವರ್ಗಾವಣೆ ಮಾಡುತ್ತಿದ್ದಾರೆ. ಯಾವುದೇ ರೀತಿಯ ಪಾಸ್‌ವರ್ಡ್ ಅಥವಾ ಒಟಿಪಿಯ ಅಗತ್ಯವಿಲ್ಲದೆ ವಂಚಕರು ಹಣ ವರ್ಗಾಯಿಸಿ ವಂಚಿಸುತ್ತಿದ್ದಾರೆ. ಸಾರ್ವಜನಿಕರು ಎಲ್ಲ ಕಡೆ ಬಯೋಮೆಟ್ರಿಕ್ ಬಳಸಿ ಹಣ ಪಡೆಯಲು ಮುಂದಾಗಬಾರದು. ಈ ಬಗ್ಗೆ ಎಚ್ಚರದಿಂದ ವ್ಯವಹರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಪಾಂಡುರಂಗ ಮಲ್ಪೆ ಸಲಹೆ ನೀಡುತ್ತಾರೆ.
ಯೋಧರ ಹೆಸರು ದುರ್ಬಳಕೆ: ತಿಂಡಿ ಪಾರ್ಸೆಲ್ ನೆಪದಲ್ಲಿ ಹಣ ದೋಚಲು ಯತ್ನ!
ಸುರತ್ಕಲ್: “ಒಂದು ವಾರ ಕಾಲ ನಮ್ಮ ಕ್ಯಾಂಪ್‌ಗೆ ತಿಂಡಿ ಪಾರ್ಸೆಲ್ ಮಾಡಿ; ಹಣವನ್ನು ಮುಂಗಡವಾಗಿ ಈಗಲೇ ಹಾಕುತ್ತೇನೆ. ನಿಮ್ಮ ಬ್ಯಾಂಕ್ ಹೆಸರು, ಅಕೌಂಟ್ ನಂಬರ್ ಕೊಡಿ’ ಎಂದು ಹೇಳಿ ವ್ಯಕ್ತಿಯೊಬ್ಬ ವಂಚಿಸಲು ಯತ್ನಿಸಿದ ಘಟನೆ ಸುರತ್ಕಲ್‌ನಲ್ಲಿ ನಡೆದಿದೆ.
ನಾನು ಮಿಲಿಟರಿ ಮೆಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಬೇಕಿದ್ದರೆ ನನ್ನ ಗುರುತು ಪತ್ರ ಕಳಿಸುತ್ತೇನೆ ಎಂದು ಹೇಳಿ ಸಂದೀಪ್ ರಾವತ್ ಹೆಸರಿನ ನಕಲಿ ಗುರುತುಪತ್ರ, ಪಾನ್ ಕಾರ್ಡ್‌ಗಳನ್ನು ಕಳಿಸಿ ನಂಬಿಸಲು ಹೊರಟ ವ್ಯಕ್ತಿಯೊಬ್ಬ ವ್ಯವಹಾರ ಕುದುರಿಸಲು ಯತ್ನಿಸಿದ್ದ. ಬಳಿಕ ಕೆಫೆ ಮಾಲಕರಲ್ಲಿ ಅವರ ಯೂನಿಯನ್ ಬ್ಯಾಂಕ್ ಎಟಿಎಂ ಕಾರ್ಡ್ ವಿವರಗಳನ್ನು ಕಳಿಸುವಂತೆ ಹೇಳಿದ್ದ. ಅವರು ಸ್ಪಂದಿಸದಿದ್ದಾಗ ಪದೇ ಪದೆ ಕರೆ ಮಾಡಿದ್ದರಿಂದ ಅನುಮಾನಗೊಂಡ ಮಾಲಕರು ಹಣವಿರದ ಬ್ಯಾಂಕ್ ಖಾತೆಯ ವಿವರ ನೀಡಿದ್ದರು. ಅಕೌಂಟ್‌ನಲ್ಲಿ ಹಣವಿಲ್ಲದ್ದ ಕಾರಣ ವಂಚಕನೇ ಬೇಸ್ತುಬಿದ್ದಿದ್ದು, ಕರೆ ಮಾಡುವುದನ್ನು ನಿಲ್ಲಿಸಿದ್ದ. ಬಳಿಕ ಈ ಕಡೆಯಿಂದ ಕರೆ ಮಾಡಿದರೂ ಕರೆ ಹೋಗುತ್ತಿಲ್ಲ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವ ಕೆಫೆ ಮಾಲಕರು, ಆನ್‌ಲೈನ್ ವಂಚಕರ ಹಾವಳಿಯ ಬಗ್ಗೆ ಜನರು ಜಾಗೃತರಾಗಿರಬೇಕು. ಯಾವುದೇ ಕಾರಣಕ್ಕೂ ಬ್ಯಾಂಕ್ ಖಾತೆ ವಿವರ, ಎಟಿಎಂ, ಪಿನ್ ಮತ್ತಿತರ ಸೂಕ್ಷ್ಮ ಮಾಹಿತಿ ನೀಡಬಾರದು ಎಂದು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.