ಹಿರಿಯಣ್ಣನ ಹಿರಿಮೆಯಲ್ಲಿ ಸಾಗುತ್ತಿದೆ ಹೊಸ ಸಾಧನೆಯತ್ತ
ಮಂದಾರ್ತಿ ಹಾಲು ಉತ್ಪಾದಕರ ಸಹಕಾರ ಸಂಘ
Team Udayavani, Feb 9, 2020, 5:05 AM IST
ತನ್ನ ಪ್ರದೇಶದಲ್ಲಿ ಹೈನುಗಾರಿಕೆ ಚಳವಳಿಯ ಮುಂಚೂಣಿಕಾರನಾಗಿ ಗುರುತಿಸಿಕೊಂಡಿರುವುದು ಮಂದಾರ್ತಿ ಹಾಲು ಉತ್ಪಾದಕರ ಸಂಘ. ಗ್ರಾಮೀಣ ಅಭಿವೃದ್ಧಿಯ ಯಶೋಗಾಥೆಯಲ್ಲಿ ಪ್ರಮುಖ ಅಧ್ಯಾಯವಾಗಿ ಈ ಸಂಘದ ಸಾಧನೆ ಗುರುತಿಸಲ್ಪಟ್ಟಿರುವುದು ಸ್ಪಷ್ಟ.
ಬ್ರಹ್ಮಾವರ: ಹಾಲು ಉತ್ಪಾದನೆಯನ್ನು ಪ್ರೋತ್ಸಾಹಿಸಲು ತೊಡಗಿಕೊಂಡ ಮಂದಾರ್ತಿ ಸಂಘ ಬ್ರಹ್ಮಾವರ ಗ್ರಾಮೀಣ ಭಾಗದಲ್ಲಿ ಹಿರಿಯಣ್ಣನ ಗೌರವಕ್ಕೆ ಭಾಜನವಾಗಿದೆ.
ಕೆನರಾ ಮಿಲ್ಕ್ ಯೂನಿಯನ್ ಜತೆಯಲ್ಲೇ ಪ್ರಾರಂಭಗೊಂಡ ವರ್ಷದಿಂದಲೇ ಹಾಲು ಪೂರೈಸಿದ ಹೆಗ್ಗಳಿಕೆ ಮಂದಾರ್ತಿ ಹಾಲು ಉತ್ಪಾದಕರ ಸಂಘದ್ದು. 1974ರ ನ. 2ರಂದು ಉದ್ಘಾಟನೆಗೊಂಡಿತು. ಈ ಭಾಗದ ಹಿರಿಯ ಸಂಘ. ಯೂನಿಯನ್ ಸ್ಥಾಪಕರಾದ ದಿ| ಟಿ.ಎ. ಪೈ ಅವರ ಪ್ರೇರಣೆಯಿಂದ ದಿ| ಕೆ.ಎಂ. ಉಡುಪರ ಸಾರಥ್ಯದಲ್ಲಿ ಈ ಸಂಘ ಪ್ರಾರಂಭ ಗೊಂಡಿತು. ಎಸ್. ನರಸಿಂಹ ನಾಯಕ್ ಸ್ಥಾಪಕ ಅಧ್ಯಕ್ಷರು. ಸಿ. ಶಂಭು ಶೆಟ್ಟಿ ಸ್ಥಾಪಕ ಕಾರ್ಯದರ್ಶಿ ಗಳು. ಮೊದಲು ಹೆಗ್ಗುಂಜೆ, ಕಾಡೂರು, ನಡೂರು ಗ್ರಾಮದ ಏಕೈಕ ಸಂಘ ಇದಾಗಿತ್ತು. ಈಗ ಈ ವ್ಯಾಪ್ತಿಯಲ್ಲಿ 7 ಸಂಘಗಳಿವೆ.
ಪರಿವರ್ತನೆ
ದೇಶೀ ಹಸುಗಳು ಹಾಗೂ ಎಮ್ಮೆಗಳ ಸಾಕಣೆಗೆ ಸೀಮಿತವಾಗಿದ್ದ ರೈತರು ಈ ಸಂಘದಿಂದಾಗಿ ಸುಧಾರಿತ ತಳಿಗಳ ನಿರ್ವಹಣೆಗೆ ಮನಸ್ಸು ಮಾಡಿದರು. ಮನೆ ಬಳಕೆಗೆ ಮಾತ್ರವಿದ್ದ ಹೈನುಗಾರಿಕೆ ವಾಣಿಜ್ಯ ರೂಪ ಪಡೆಯಿತು. ಗ್ರಾಮೀಣ ಭಾಗದಲ್ಲಿ ಸ್ವಾವಲಂಬನೆಯ ಪ್ರಮುಖ ಶಕ್ತಿಯಾಗಿ ಮಾರ್ಪಟ್ಟಿತು.
ಏರುಗತಿ
ಆರಂಭದ ವರ್ಷ 150 ಮಂದಿ ಸದಸ್ಯರಿದ್ದು, 160 ಲೀ. ಹಾಲು ಪೂರೈಸುತ್ತಿದ್ದರು. ಈಗಲೂ ಸದಸ್ಯರ ಸಂಖ್ಯೆಯಲ್ಲಿ ಅಷ್ಟೇ ಇದ್ದರೂ, ಪೂರೈಸುವ ಹಾಲಿನ ಪ್ರಮಾಣ 800 ಲೀ. ಗೆ ಏರಿಕೆಯಾಗಿದೆ.
1980ರಿಂದಲೇ ಕೃತಕ ಗರ್ಭಧಾರಣೆ ಕೇಂದ್ರವಾಗಿರುವುದರಿಂದ ತಳಿ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹೈನುಗಾರರಿಗೆ ನಿರಂತರ ತರಬೇತಿ, ಸರಕಾರದ ಸವಲತ್ತುಗಳ ವಿತರಣೆಯಲ್ಲಿ ಸಹಕರಿಸುತ್ತಿದೆ. ಭಾರತೀಯ ವಿಕಾಸ ಟ್ರಸ್ಟ್‌ನ ಯೋಜನೆ, ಸೌಲಭ್ಯಗಳನ್ನು ಗ್ರಾಮೀಣ ಭಾಗದ ಜನರಿಗೆ ಮುಟ್ಟಿಸುವಲ್ಲಿ ದಿ| ಕೆ.ಎಂ. ಉಡುಪರ ಮಾರ್ಗದರ್ಶನದಲ್ಲಿ ಸಾಕಷ್ಟು ಶ್ರಮ ವಹಿಸಿದೆ. ಕೆನರಾ ಮಿಲ್ಕ್ ಯೂನಿಯನ್ ನಿರ್ದೇಶಕರು, ದ.ಕ. ಹಾಲು ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಎಚ್. ವಿಠಲ್ ಶೆಟ್ಟಿ ಅವರು 36 ವರ್ಷಗಳಿಂದ ಸಂಘದ ಅಧ್ಯಕ್ಷರಾಗಿ ಮುನ್ನಡೆಸುತ್ತಿದ್ದಾರೆ. 29 ವರ್ಷ ಕಾರ್ಯದರ್ಶಿಯಾಗಿ, ಸಂಘದಲ್ಲಿ ಒಟ್ಟು 44 ವರ್ಷ ಸೇವೆ ಸಲ್ಲಿಸಿದ್ದ ಎಚ್. ಜಯಶೀಲ ಶೆಟ್ಟಿ ಅವರು ಪ್ರಸ್ತುತ ಸಂಘದ ಗೌರವ ಸಲಹೆಗಾರರು. ಎಂ. ರಮೇಶ್ ದೇವಾಡಿಗ ಕಾರ್ಯದರ್ಶಿಯಾಗಿದ್ದಾರೆ.
ಹಿಮ್ಮುಖ ಕಂಡಿಲ್ಲ
46 ವರ್ಷಗಳ ಇತಿಹಾಸದ ಸಂಘ ಅಭಿವೃದ್ಧಿಯಲ್ಲಿ ಹಿಮ್ಮುಖ ಕಂಡಿಲ್ಲ. ಕೆನರಾ ಮಿಲ್ಕ್ ಯೂನಿಯನ್ ಆಡಳಿತದಲ್ಲಿ ಸ್ವಂತ ಕಟ್ಟಡ ಹೊಂದಿದ ಪ್ರಥಮ ಸಂಘವೆನ್ನುವ ಹಿರಿಮೆ ಇದರದ್ದು. 1986 ರಲ್ಲಿ ದ.ಕ. ಜಿಲ್ಲಾ ಹಾಲು ಒಕ್ಕೂಟಕ್ಕೆ ಸೇರಿತು. 2007ರಲ್ಲಿ 3 ಸಾವಿರ ಲೀ.ನ ಬಿ.ಎಂ.ಸಿ. ಕೇಂದ್ರವಾಗಿ 2018ರಲ್ಲಿ 5 ಸಾವಿರ ಲೀ.ಗೆ ಮೇಲ್ದರ್ಜೆ ಗೊಂಡಿತು. ಹಾಲು ಖರೀದಿಯಷ್ಟೇ ಅಲ್ಲದೇ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಯನ್ನೂ ಹೊಂದಿದೆ.
ಪ್ರಶಸ್ತಿಗಳ ಸರಮಾಲೆ
ಸಂಘಕ್ಕೆ ಈಗಾಗಲೇ 3 ಬಾರಿ ಉತ್ತಮ ಸಂಘ ಪ್ರಶಸ್ತಿ, ಎರಡು ಬಾರಿ ಉತ್ತಮ ಬಿ.ಎಂ.ಸಿ. ಪ್ರಶಸ್ತಿ ದೊರೆತಿದೆ. ಒಕ್ಕೂಟದ ರಜತ ಮಹೋತ್ಸವದಲ್ಲಿ ಉತ್ತಮ ಅಧ್ಯಕ್ಷ, ಕಾರ್ಯದರ್ಶಿ, ಸಂಘ ಪ್ರಶಸ್ತಿಯನ್ನು ಪಡೆದಿದೆ. ದ.ಕ. ಕೇಂದ್ರ ಸಹಕಾರಿ ಬ್ಯಾಂಕ್‌ನಿಂದಲೂ ಉತ್ತಮ ಸಂಘ ಪ್ರಶಸ್ತಿಯಿಂದ ಗುರುತಿಸಿಕೊಂಡಿದೆ.
ಕೃಷಿ, ತೋಟಗಾರಿಕೆಗೆ ಹೈನುಗಾರಿಕೆ ಪೂರಕ ಎನ್ನುವುದು ಸ್ವತಃ ಅನುಭವದಿಂದ ಕಂಡುಕೊಂಡಿದ್ದೇನೆ. ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿ ಸೊಸೈಟಿಯಿಂದ ಹೈನುಗಾರರಿಗೆ ಮಾಹಿತಿ, ಸೌಲಭ್ಯ ನೀಡುವುದೇ ನಮ್ಮ ಮುಖ್ಯ ಉದ್ದೇಶ.
– ಎಚ್. ವಿಠಲ್ ಶೆಟ್ಟಿ , ಅಧ್ಯಕ್ಷರು, ಮಂದಾರ್ತಿ ಹಾಲು ಉತ್ಪಾದಕರ ಸಂಘ
ಅಧ್ಯಕ್ಷರು
ಎಸ್. ನರಸಿಂಹ ನಾಯಕ್, ಎಚ್. ಶ್ರೀನಿವಾಸ ಶೆಟ್ಟಿ, ಬಿ. ಜಯರಾಮ ರೈ, ಕೆ. ಶಂಭುಶಂಕರ ರಾವ್, ಎಚ್. ವಿಠಲ್ ಶೆಟ್ಟಿ
ಕಾರ್ಯದರ್ಶಿಗಳು
ಸಿ. ಶಂಭು ಶೆಟ್ಟಿ, ಎಂ. ರಾಮ ಶೆಟ್ಟಿ, ಎಚ್. ಜಯಶೀಲ ಶೆಟ್ಟಿ, ಎಂ. ರಮೇಶ್ ದೇವಾಡಿಗ
- ಪ್ರವೀಣ್ ಮುದ್ದೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.