ಮಣಿಪಾಲ: ಕರಾವಳಿ ಜಿಲ್ಲೆಗಳ ಐವರು ಸಾಧಕರಿಗೆ ಹೊಸ ವರ್ಷದ ಪ್ರಶಸ್ತಿ
Team Udayavani, Jan 10, 2020, 8:15 AM IST
ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಸಿಂಡಿಕೇಟ್ ಬ್ಯಾಂಕ್ ಹಾಗೂ ಮಣಿಪಾಲ ಮೀಡಿಯ ನೆಟ್‌ವರ್ಕ್ ಲಿ.ಗಳ ಜಂಟಿ ಆಶ್ರಯದಲ್ಲಿ ಹೊಸವರ್ಷದ ಶುಭಾವಸರದಲ್ಲಿ ಜನವರಿ 11ರಂದು ಕರಾವಳಿ ಜಿಲ್ಲೆಗಳ ಐವರು ಸಾಧಕರಿಗೆ ಹೊಸ ವರ್ಷದ ಪ್ರಶಸ್ತಿ ಪ್ರದಾನವಾಗಲಿದೆ. ಈ ಸಾಧಕರ ಕಿರು ಪರಿಚಯ ಇಲ್ಲಿದೆ.
ನಿವೃತ್ತ ರಾಜ್ಯಪಾಲ ಉಡುಪಿಯ ಪಿ.ಬಿ. ಆಚಾರ್ಯ
2014ರಿಂದ 2019ರ ಅವಧಿಯಲ್ಲಿ ನಾಗಾಲ್ಯಾಂಡಿನ ರಾಜ್ಯಪಾಲರಾಗಿದ್ದ ಪದ್ಮನಾಭ ಬಾಲಕೃಷ್ಣ ಆಚಾರ್ಯರು ಉಡುಪಿಯ ಹೆಮ್ಮೆ. ಉಡುಪಿ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಮಾಧ್ಯಮಿಕ ಶಿಕ್ಷಣ, ಎಂಜಿಎಂ ಕಾಲೇಜಿನ ಆರಂಭಿಕ ವರ್ಷದಲ್ಲಿ ಕಾಲೇಜು ವಿದ್ಯಾಭ್ಯಾಸ. ಮುಂಬಯಿಯಲ್ಲಿ ರಾತ್ರಿ ಪಾಳಿಯಲ್ಲಿ ಬಟ್ಟೆ ಗಿರಣಿಯಲ್ಲಿ ಕೆಲಸ ಮಾಡಿ ಹಗಲು ಓದಿ ಬಿ.ಕಾಂ. ಆನರ್ ಪದವಿ, ಬಳಿಕ ಮುಂಬಯಿ ವಿ.ವಿ.ಯಿಂದ ಎಲ್‌ಎಲ್‌ಬಿ ಪದವಿ ಪಡೆದರು.
ಬಾಲ್ಯದಿಂದಲೇ ಆರ್‌ಎಸ್‌ಎಸ್ ಸಂಪರ್ಕದಲ್ಲಿದ್ದ ಆಚಾರ್ಯರು 1948ರಲ್ಲಿ 16ನೇ ವರ್ಷದಲ್ಲೇ ವೆಲ್ಲೂರಿನಲ್ಲಿ ಜೈಲು ವಾಸ ಅನುಭವಿಸಿದರು. ದಿ| ಟಿ.ಆರ್.ಎ. ಪೈಗಳ ಕೆನರಾ ಮ್ಯೂಚುವಲ್ ಇನ್ಶೂರೆನ್ಸ್ ಕಂಪೆನಿಯಲ್ಲಿ ಕಾರಕೂನರಾಗಿ ವೃತ್ತಿ ಜೀವನ ಆರಂಭ. 1975ರ ತುರ್ತುಪರಿಸ್ಥಿತಿಯಲ್ಲಿ ಭೂಗತರಾಗಿ ಸಂಘದ ಕಾರ್ಯನಿರ್ವಹಿಸಿದರು. ಬಳಿಕ ಭಾರತದ ರಾಷ್ಟ್ರೀಯ ಫೆಲೋಶಿಪ್ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾದರು.
ಅವರು ರಾಜ್ಯಪಾಲರಾಗಿದ್ದ ಅವಧಿಯಲ್ಲಿ ದೇಶದ ವಿವಿಧ ಭಾಗಗಳ 3,500 ಜನರು ಕೊಹಿಮಾದ ರಾಜಭವನವನ್ನು ಸಂದರ್ಶಿಸಿದರು. 2015ರಲ್ಲಿ ಆರಂಭಗೊಂಡ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಯೋಜನೆಗೆ ರಾಷ್ಟ್ರೀಯ ರಾಯಭಾರಿಯಾಗಿ ಪದ್ಮನಾಭ ಬಾಲಕೃಷ್ಣ ಆಚಾರ್ಯ ಅವರನ್ನು ನೇಮಕ ಮಾಡಲಾಗಿತ್ತು.
ಬ್ಯಾಂಕಿಂಗ್ ಮುತ್ಸದ್ದಿ ಕೆ.ಆರ್. ಕಾಮತ್
ಬ್ಯಾಂಕಿಂಗ್ ಕ್ಷೇತ್ರದ ತಾರಾಗಣ ದಲ್ಲಿರುವ ಕೆ.ಆರ್. ಕಾಮತ್ 1955 ರಲ್ಲಿ ಕಾಸರಗೋಡಿನಲ್ಲಿ ಮಧ್ಯಮ ವರ್ಗದ ವ್ಯಾಪಾರಿ ಕುಟುಂಬದಲ್ಲಿ ಜನಿಸಿದರು. ಕಾಲೇಜು ಶಿಕ್ಷಣವನ್ನು ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನಲ್ಲಿ ಮುಗಿಸಿ 1976ರಲ್ಲಿ ರ್‍ಯಾಂಕ್‌ನೊಂದಿಗೆ ಬಿ.ಕಾಂ. ಪದವಿ ಪಡೆದರು. 1994ರಲ್ಲಿ ಸಿಎ ಪದವಿ ಪಡೆದರು.
1977ರಲ್ಲಿ ಕಾರ್ಪೊರೇಶನ್ ಬ್ಯಾಂಕಿನಲ್ಲಿ ಜೂನಿಯರ್ ಆಫೀಸರ್ ಹುದ್ದೆಗೆ ನೇಮಕಗೊಂಡರು. 2002ರಲ್ಲಿ ಬ್ಯಾಂಕಿನ ಮುಖ್ಯ ಕಚೇರಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ನಿಯುಕ್ತಿ ಗೊಂಡು 2006ರ ವರೆಗೆ ಸೇವೆ ಸಲ್ಲಿಸಿದರು.
2006ರಲ್ಲಿ ಅವರ ಪ್ರತಿಭೆಯನ್ನು ಗಮನಿಸಿದ ಸರಕಾರವು ಬ್ಯಾಂಕ್ ಆಫ್ ಬರೋಡಾದ ಆಡಳಿತ ನಿರ್ದೇಶಕರಾಗಿ ನೇಮಿಸಿತು. 2008ರಲ್ಲಿ ಅಲಹಾಬಾದ್ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆ, 2009 – 2014ರ ಅವಧಿಯಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದರು. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಗೂ ಅವರು ನಿರ್ದೇಶನ ನೀಡಿದರು. ಬ್ಯಾಂಕಿಂಗ್ ಉದ್ಯೋಗಿಗಳ ನೇಮಕ ಸಂಸ್ಥೆ ಮುಂತಾದ ಸಂಸ್ಥೆಗಳ ಉನ್ನತ ಸಲಹಾ ಸಮಿತಿ ಗಳಲ್ಲೂ ಸದಸ್ಯರಾಗಿದ್ದರು. 2011ರಲ್ಲಿ ಅತ್ಯುತ್ತಮ ಬ್ಯಾಂಕರ್ ಪ್ರಶಸ್ತಿಯನ್ನು ಪಡೆದರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಜೀವಮಾನದ ಪ್ರಶಸ್ತಿಯನ್ನು 2013-14ರಲ್ಲಿ ಗಳಿಸಿದರು.
ಸಹಕಾರಿ ನೇತಾರ ಎ.ಜಿ. ಕೊಡ್ಗಿ
ಎ. ಗೋಪಾಲಕೃಷ್ಣ ಕೊಡ್ಗಿ ಅವರು ಕುಂದಾಪುರ ತಾಲೂಕಿನ ಅಮಾಸೆಬೈಲಿನಲ್ಲಿ 1929ರಲ್ಲಿ ಜಮೀನಾರ ಕುಟುಂಬ ದಲ್ಲಿ ಜನಿಸಿದರು. ಬಾಲ್ಯದಲ್ಲೇ ಸಹಕಾರ ತಣ್ತೀಗಳನ್ನು ಮೈಗೂಡಿಸಿ ಕೊಂಡಿದ್ದರು. ಕಾನೂನು ಪದವೀಧರ ನಾದ ಮೇಲೆ 1 ವರ್ಷ ಖ್ಯಾತ ವಕೀಲ, ಬಳಿಕ ಕರ್ನಾಟಕ ಹೈಕೋರ್ಟಿನ ಚೀಫ್ ಜಸ್ಟಿಸ್ ಆದ ನಿಟ್ಟೂರು ಶ್ರೀನಿವಾಸರಾಯರ ಕೈಕೆಳಗೆ ವಕೀಲರಾಗಿ ಅನುಭವ ಪಡೆದರು. ಆದರೆ ತಂದೆಯ ಆಸೆಯಂತೆ ಊರಿಗೆ ಮರಳಿ ಕೃಷಿ ಕ್ಷೇತ್ರದ ಮುಂದಾಳುವಾದರು. ಶಂಕರನಾರಾಯಣ, ಕುಂದಾಪುರಗಳ ಕೃಷಿಕರ ಸಹಕಾರಿ ಬ್ಯಾಂಕುಗಳ ಅಧ್ಯಕ್ಷರಾಗಿ 10 ವರ್ಷ, ಕುಂದಾಪುರ ತಾಲೂಕಿನ ಕೃಷಿಕರ ಮಾರುಕಟ್ಟೆ ಸಹಕಾರಿ ಸಂಘದ ಅಧ್ಯಕ್ಷ, ಇನ್ನಿತರ ಅನೇಕ ಸಹಕಾರ ಸಂಸ್ಥೆಗಳ ನಿರ್ದೇಶಕ, ಸದಸ್ಯರಾಗಿ ಶ್ರಮವಿಲ್ಲದೆ ದುಡಿದರು.
ರಾಜಕೀಯ ಕ್ಷೇತ್ರದಲ್ಲೂ ಪಳಗಿರುವ ಅವರು ಕುಂದಾಪುರದ ತಾಲೂಕು ಅಭಿವೃದ್ಧಿ ಕೇಂದ್ರದ ಸದಸ್ಯ, ನಿರ್ದೇಶಕರಾಗಿದ್ದರು. 1987-1991ರಲ್ಲಿ ಮಂಗಳೂರು ಜಿಲ್ಲಾ ಪರಿಷತ್ತಿನ ಸದಸ್ಯರಾಗಿ ದ್ದರು. 1972ರಿಂದ 1983ರ ವರೆಗೆ ಶಾಸಕನಾಗಿದ್ದರು. 2006- 2008ರಲ್ಲಿ ರಾಜ್ಯ ಆರ್ಥಿಕ ಸಲಹಾ ಸಮಿತಿ ಹಾಗೂ 2009 – 2013ರಲ್ಲಿ ಇಂಪ್ಲಿಮೆಂಟೇಶನ್ ಟಾಸ್ಕ್ಫೋರ್ಸಿನ ಅಧ್ಯಕ್ಷರಾಗಿ ದ್ದರು. ಅಮಾಸೆಬೈಲ್ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 1993ರ ತನಕ ಕಾಂಗ್ರೆಸ್‌ನ ಸಕ್ರಿಯ ಸದಸ್ಯರಾಗಿದ್ದರು. 1993ರಲ್ಲಿ ಬಿಜೆಪಿ ಸೇರಿ ಪ್ರಮುಖ ನಾಯಕರಾದರು.
ದೈತ್ಯ ಸಾಧನೆಗಳ ಧೀಮಂತ ಡಾ| ಮೋಹನ ಆಳ್ವ
ಡಾ| ಟಿ. ಮಾಧವ ಪೈ ಅವರನ್ನು ಆದರ್ಶವಾಗಿಟುಕೊಂಡು ಪೈ ಅವರು ಮಣಿಪಾಲವನ್ನು ವಿಶ್ವಖ್ಯಾತಿಯ ಶಿಕ್ಷಣ ಕ್ಷೇತ್ರವನ್ನಾಗಿಸಿದಂತೆ ಆಳ್ವಾಸ್ ಫೌಂಡೇಶನ್ ಮೂಲಕ ಮೂಡುಬಿದಿರೆಯಲ್ಲಿ ಶಿಕ್ಷಣ ಸಾಮ್ರಾಜ್ಯವನ್ನು ಕಟ್ಟಿದ ಡಾ| ಮೋಹನ ಆಳ್ವರ ಯಶೋಗಾಥೆ ಅಚ್ಚರಿ ಹುಟ್ಟಿಸುವಂಥದು.
1952ರಲ್ಲಿ ಮಿಜಾರಿನಲ್ಲಿ ಮೋಹಳ ಆಳ್ವರ ಜನನ. ಹೈಸ್ಕೂಲು ಶಿಕ್ಷಣದ ಬಳಿಕ ಉಡುಪಿಯ ಆಯುರ್ವೇದ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದರು. ಧರ್ಮಸ್ಥಳದ ಡಾ| ವೀರೇಂದ್ರ ಹೆಗ್ಗಡೆಯವರಿಂದ ಸೇವಾ ಕ್ಷೇತ್ರದಲ್ಲಿ ತೊಡಗುವಂತೆ ಪ್ರೇರಣೆ ಪಡೆದರು. ಶಿಕ್ಷಣ ಕ್ಷೇತ್ರದಲ್ಲಿ ಮಹತ್ಸಾಧನೆ ಮಾಡಿದ ನಿಟ್ಟೆ ಕುಟುಂಬವೂ ಸ್ಫೂರ್ತಿ ನೀಡಿತು.
ಒಂದೊಂದೇ ಉಚ್ಚ ಶಿಕ್ಷಣ ಸಂಸ್ಥೆಗಳನ್ನು ಕಾಣುತ್ತ ಮೂಡುಬಿದಿರೆ ಇಂದು ಬೃಹತ್ ಶಿಕ್ಷಣ ಸಂಕೀರ್ಣವಾಗಿ ಬೆಳೆದಿದೆ. ಇಲ್ಲಿನ ವಿವಿಧ ಸಂಸ್ಥೆಗಳಲ್ಲಿ ಸುಮಾರು 24,000 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಹೊರೆಯಾಗದ ರೀತಿಯ ಶುಲ್ಕ ಇಲ್ಲಿನ ವೈಶಿಷ್ಟ್ಯ. ಇವಿಷ್ಟೇ ಅಲ್ಲದೆ ಆಳ್ವಾಸ್ ನುಡಿಸಿರಿ ಮತ್ತು ಆಳ್ವಾಸ್ ವಿರಾಸತ್‌ಗಳು ಡಾ| ಆಳ್ವ ಅವರ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಏರಿಸಿವೆ.
ಮಂಗಳೂರು ವಿ.ವಿ.ಯಿಂದ ಗೌರವ ಡಾಕ್ಟರೇಟ್, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, 2005ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಬಸವಶ್ರೀ ಸಹಿತ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಪ್ರಣಾಳಶಿಶು ತಂತ್ರ ವಿಜ್ಞಾನಿ ಡಾ| ಪ್ರತಾಪ ಕುಮಾರ್
ಮಕ್ಕಳಾಗದ ಅನೇಕ ದಂಪತಿಗಳಿಗೆ ಅವರದೇ ವಂಶದ ಕುಡಿಗಳು ಮಕ್ಕ ಳಾಗಿ ದೊರೆಯುವಂತೆ ಆಧುನಿಕ ಪ್ರಸವ ತಂತ್ರಜ್ಞಾನವನ್ನು ಬಳಸಿ ಅಂತಹ ದಂಪತಿಗಳ ಮುಖದಲ್ಲಿ ಮಂದಹಾಸ ಮೂಡಿಸಿದ ತಜ್ಞ ವೈದ್ಯರು ಮಣಿಪಾಲದ ಕೆಎಂಸಿಯ ಖ್ಯಾತ ಪ್ರಸೂತಿ ತಜ್ಞ ಡಾ| ಪ್ರತಾಪ ಕುಮಾರ್.
ಕರಾವಳಿ ಜಿಲ್ಲೆಯವರೇ ಅಗಿರುವ ಅವರು 1954ರಲ್ಲಿ ಮಂಗಳೂರಿನಲ್ಲಿ ಜನಿಸಿದರು. ಶಾಲಾಭ್ಯಾಸ ಹಾಗೂ ವೈದ್ಯ ಶಿಕ್ಷಣ ಮಣಿಪಾಲ, ಮಂಗಳೂರುಗಳಲ್ಲಾಯಿತು. 1976ರಲ್ಲಿ ಎಂಬಿಬಿಎಸ್ ಮುಗಿಸಿ 1981ರಲ್ಲಿ ಎಂಡಿ ಪದವಿ ಪಡೆದರು. 1996ರಿಂದ 2010ರ ವರೆಗೆ ಕೆಎಂಸಿ ಮಣಿಪಾಲದ ಹೆರಿಗೆ ತಂತ್ರ ಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದರು. ಪ್ರಸ್ತುತ ಪ್ರಣಾಳ ಶಿಶು ತಂತ್ರಜ್ಞಾನ ವಿಭಾಗದ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇನ್-ವಿಟ್ರೊ ಫರ್ಟಿಲೈಸೇಶನ್ ಎಂಬ ಆಧುನಿಕ ತಂತ್ರಜ್ಞಾನದ ಮೂಲಕ ಅವರ ಪರಿವೀಕ್ಷಣೆಯಲ್ಲಿ 5,000ಕ್ಕೂ ಹೆಚ್ಚಿನ ಸಂಖ್ಯೆಯ ಪ್ರಣಾಳ ಶಿಶುಗಳು ಜನಿಸಿದ್ದಲ್ಲದೆ ಆರೋಗ್ಯಪೂರ್ಣವಾಗಿ ಬೆಳೆದು ಬಂದುದು ಅವರ ಸಿದ್ಧಿ, ಅವರ ಪ್ರಸಿದ್ಧಿಗೆ ಸಾಕ್ಷಿ. ಈ ತಜ್ಞತೆಯ ನೆಲೆಯಲ್ಲಿ ಅವರು ಅನೇಕ ರಾಷ್ಟ್ರೀಯ ಅಂತಾರಾಷ್ಟ್ರೀಯ ಸಲಹಾ ಸಮಿತಿಗಳಲ್ಲಿ ಸಕ್ರಿಯ ಸದಸ್ಯರಾಗಿದ್ದಾರೆ. ಅನೇಕ ಆಸ್ಪತ್ರೆಗಳ ಮೌಲ್ಯಮಾಪನದ ಸಮಿತಿಗಳಲ್ಲೂ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. 300ಕ್ಕೂ ಮಿಕ್ಕಿದ ಸಂಶೋಧನ ಪ್ರಬಂಧಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ
ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್ ಮುದ್ರಣ ಭರಾಟೆ; ಕ್ಯಾಲೆಂಡರ್-ತೂಗು ಪಂಚಾಂಗಗಳಿಗೆ ಖ್ಯಾತಿ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Mangaluru: ಅಪಾರ್ಟ್‌ಮೆಂಟ್, ಮಾಲ್‌ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.