ಅನಾಥವಾದ ಮಣಿಪಾಲ ರಸ್ತೆ…
Team Udayavani, Jul 21, 2017, 7:10 AM IST
– ಆಸ್ಟ್ರೋ ಮೋಹನ್
ಮಣಿಪಾಲ: ಅರಿಯದೆ ನಡೆದ ಪ್ರಮಾದಕ್ಕೆ ಕ್ಷಮೆ ಇದೆ. ಆದರೆ ಪ್ರತಿ ಬಾರಿಯೂ ಮಾಡಿದ ತಪ್ಪನ್ನೇ ಪುನರಾವರ್ತಿಸಿದರೆ ಅದಕ್ಕೆ ಯಾರೂ ಕ್ಷಮೆ ನೀಡಲಾರರು. ಅಂತಾರಾಷ್ಟ್ರೀಯ ವಿದ್ಯಾಸಂಸ್ಥೆ, ಬ್ಯಾಂಕಿಂಗ್, ಮುದ್ರಣ ಘಟಕಗಳನ್ನು ಹೊಂದಿರುವ ಮಣಿಪಾಲ ಮಾತ್ರ ರಸ್ತೆ ಸಂಪರ್ಕದಲ್ಲಿ ಸೋತು ಹೋಗಿದೆ.ಹೊಂಡ ಗುಂಡಿಗಳ ರಸ್ತೆಯಲ್ಲಿ ಸಂಚಾರ ಶಾಪವಾಗಿ ಪರಿಣಮಿಸಿದೆ. ಮಳೆಗಾಲ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಿದರೆ, ಮಣಿಪಾಲ ನಿವಾಸಿಗಳಿಗೆ ಮಾತ್ರ ಸಿಂಹ ಸ್ವಪ್ನವಾಗಿ ಕಾಡುತ್ತಿದೆ.
ಕಳೆದ 7-8 ವರ್ಷಗಳಲ್ಲಿ ಮಣಿಪಾಲದ ಟೈಗರ್ ಸರ್ಕಲ್ ಮತ್ತು ಪ್ರಧಾನ ಅಂಚೆ ಕಚೇರಿ ಪರಿಸರದಲ್ಲಿ ಹೊಂಡಗಳು ನಿರ್ಮಾಣ ವಾಗುವುದು ಖಚಿತ. ಅದಕ್ಕೆ ಪೂರಕವೆಂಬಂತೆ ಜನರ ಕಣ್ಣೀರು ಒರೆಸುವ ತಂತ್ರವಾಗಿ ಒಂದಷ್ಟು ಹೊಂಡ ತುಂಬಿಸುವ ಪ್ರಹಸನ ಪ್ರತಿ ವರ್ಷ ನಡೆಯುತ್ತಲೇ ಇದೆ. ದುರಸ್ತಿ ಮಾಡಿದ ಎರಡೇ ದಿನದಲ್ಲಿ ಮತ್ತೆ ಅದೇ ಗಾತ್ರದ ಹೊಂಡಗಳು ಪ್ರತ್ಯಕ್ಷವಾದರೂ ಸಂಬಂಧ ಪಟ್ಟ ಇಲಾಖೆ ಜನ ನಂಬುವ ಸಮಜಾಯಿಷಿಯನ್ನು ನೀಡಿ ಕೈತೊಳೆದುಕೊಳ್ಳುತ್ತಿದೆ. ಈ ಮಧ್ಯ ಗುತ್ತಿಗೆದಾರರು ಮಾತ್ರ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿ ಕೊಳ್ಳುತ್ತಿದ್ದಾರೆ.
ಈ ಎರಡು ಪ್ರದೇಶದಲ್ಲಿ ತೀವ್ರವಾದ ಮಣ್ಣಿನ ಕುಸಿತ ಉಂಟಾಗುತ್ತಿದೆ. ಮೇಲಿನ ಪದರಿನಲ್ಲಿ ಎಷ್ಟೇ ಜಲ್ಲಿ ತುಂಬಿಸಿ, ಡಾಮರು ಹಾಕಿದರೂ ಅದು ಪ್ರತಿ ಮಳೆಗಾಲದಲ್ಲಿ ಜಗ್ಗುತ್ತಾ ಹೋಗುತ್ತದೆ ಎಂದು ಎಂಐಟಿಯ ಸಿವಿಲ್ ವಿಭಾಗದ ಪ್ರಾಧ್ಯಾಪಕರು ಹೇಳುತ್ತಾರೆ. ಆದರೆ ಈ ವಿಷಯ ಮಾತ್ರ ನಮ್ಮ ಇಂಜಿನಿಯರ್‌ಗಳಿಗೆ ಅರ್ಥವಾಗದೇ ಇರುವುದು ಭಾರಿ ವಿಶೇಷ.
ಅನಾಥ ರಸ್ತೆ
ಮಲ್ಪೆ ಮಣಿಪಾಲ ರಸ್ತೆಯು ಮಲ್ಪೆ- ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಿ ಎರಡು ವರ್ಷಗಳು ಕಳೆದಿವೆ. ಹಾಗಾಗಿ ಇದರ ನಿರ್ವಹಣೆ ಈಗ ರಾಜ್ಯ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಡಿಪಿಆರ್ ಕಳುಹಿಸಲಾಗಿದೆ. ಹಾಗಾಗಿ ಪ್ರಸಕ್ತ ರಸ್ತೆ ನಿರ್ವಹಣೆ ಅನಾಥವಾಗಿದೆ. ಇವರಿಬ್ಬರ ಗಲಾಟೆಯಲ್ಲಿ ಇದೀಗ ಮಣಿಪಾಲ ರಸ್ತೆ ಮಾತ್ರ ಅನಾಥವಾಗಿದೆ. ನಿರ್ವಹಣೆ ಯಾರು ಮಾಡಬೇಕೆಂದು ಇಲಾಖೆ ಮಾತ್ರವಲ್ಲ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರತ್ತ ಕೈ ತೋರಿಸುತ್ತಾ ಇದ್ದಾರೆ. ಈ ಮುಸುಕಿನೊಳಗಿನ ಗುದ್ದು ಮಾತ್ರ ಸಾಮಾನ್ಯ ನಾಗರಿಕರ ಮೇಲೆ ಪರಿಣಾಮ ಬೀರುತ್ತಿರುವುದು ಅತ್ಯಂತ ಶೋಚನೀಯ.
ಅಧ್ಯಯನ ಯಾಕಿಲ್ಲ!
ಪ್ರತಿ ವರ್ಷ ಮಳೆಗಾಲದಲ್ಲಿ ಟೈಗರ್ ವೃತ್ತ ಮತ್ತು ಪ್ರಧಾನ ಅಂಚೆ ಕಚೇರಿ ಎದುರೇ ಏಕೆ ಹೊಂಡಗಳು ನಿರ್ಮಾಣವಾಗುತ್ತವೆ ಎಂಬುದಕ್ಕೆ ಇದುವರೆಗೂ ಯಾವುದೇ ಅಧ್ಯಯನ ವಾದಂತಿಲ್ಲ. ಜಲ್ಲಿ ಹುಡಿ ತುಂಬಿಸಿ ಉಪಶಮನ ಮಾಡುವದರಲ್ಲಿ ನಮ್ಮ ಎಂಜಿನಿಯರ್‌ಗಳು ಬ್ಯುಸಿಯಾದಂತೆ ಕಾಣುತ್ತಿದೆ ಎಂದು ಸ್ಥಳೀಯರು ವ್ಯಂಗ್ಯವಾಡುತ್ತಿದ್ದಾರೆ.