ಕೋವಿಡ್ 2ನೇ ಅಲೆ ತಡೆಗೆ ಹಲವು ಕ್ರಮ: ಡಿಸಿ
Team Udayavani, Dec 1, 2020, 11:54 AM IST
ಉಡುಪಿ, ನ. 30: ಕೋವಿಡ್ ಎರಡನೇ ಅಲೆ ಜಿಲ್ಲೆಯಲ್ಲಿಯೂ ಆರಂಭ ವಾಗಬಹುದು. ಹೀಗಾಗಿ ಎಲ್ಲರೂ ಗರಿಷ್ಠ ಎಚ್ಚರಿಕೆ ವಹಿಸಬೇಕು. ಸರಕಾರದ ಮಾರ್ಗಸೂಚಿ ಪಾಲಿಸದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.
ಎರಡನೇ ಅಲೆ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾಡಳಿತವು ತಜ್ಞರು, ಅಧಿಕಾರಿಗಳ ಜತೆ ಸಭೆ ನಡೆಸಿದೆ. ಕೋವಿಡ್ ನಿರ್ಮೂಲನೆಯಾಗಿದೆ ಎಂದು ಭಾವಿಸುವಂತಿಲ್ಲ. ಆದ್ದರಿಂದ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಎಲ್ಲ ತಹಶೀಲ್ದಾರ್, ಇಒಗಳಿಗೆ ಸೂಚನೆ ನೀಡಿದ್ದೇನೆ ಎಂದು ಡಿಸಿ ತಿಳಿಸಿದರು.
ಲೈಸೆನ್ಸ್ ರದ್ದು: ಎಚ್ಚರಿಕೆ
ಈಗ ರಥೋತ್ಸವಗಳು, ಕೋಲ, ಕಂಬಳ, ಯಕ್ಷಗಾನ ಇತ್ಯಾದಿ ಆರಂಭವಾಗುತ್ತಿವೆ. ಮದುವೆ, ರಾಜಕೀಯ, ಸಾಮಾಜಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಯಾವುದೇ ಕಾರ್ಯಕ್ರಮ ಮಾಡಿದರೂ ಶಿಷ್ಟಾಚಾರ ಪಾಲನೆಯಾಗಬೇಕು. ಒಂದು ವೇಳೆ ಪಾಸಿಟಿವ್ ಪ್ರಕರಣ ಕಂಡು ಬಂದರೆ ಸಿಡಿ ನೋಡಿ ಪ್ರಾಥಮಿಕ ಸಂಪರ್ಕದವರನ್ನು ಐಸೊಲೇಶನ್‌ಗೆ ಒಳಪಡಿಸುತ್ತೇವೆ. ಅಂಗಡಿಗಳಲ್ಲಿ ಮಾಸ್ಕ್ ಧರಿಸದೆ ಹೋದರೆ ಅಂತಹವರ ಲೈಸೆನ್ಸ್ ಅನ್ನು ತಾತ್ಕಾಲಿಕವಾಗಿ ರದ್ದುಗೊಳಿಸಬೇಕು. ಹೀಗೆ ಕ್ರಮ ಕೈಗೊಳ್ಳದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಸಿದರು.
ಕಾಲೇಜುಗಳ ಪರಿಶೀಲನೆ :
ಕಾಲೇಜುಗಳು ಆರಂಭವಾಗುವ ಕುರಿತು ಪ್ರಾಂಶುಪಾಲರ ಸಭೆ ಕರೆದು ನಿಯಮಾವಳಿಗಳ ಕುರಿತು ವಿವರಿಸಿದ್ದೇವೆ. ವಾರಕ್ಕೆರಡು ಬಾರಿ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಸೂಚಿಸಿದ್ದೇನೆ ಎಂದರು.
ಮಾದರಿಯಾಗಿ :
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಡಿಸಿಯವರು, ರಾಜಕೀಯ ಕಾರ್ಯಕ್ರಮದಲ್ಲಿ ನಿಯಮ ಪಾಲನೆಯಾಗಬೇಕು. ಸಂಘಟಕರು ಇತರರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಸಹಾಯಕ ಕಮಿಷನರ್ ರಾಜು, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ, ಜಿ.ಪಂ. ಉಪಕಾರ್ಯದರ್ಶಿ ಕಿರಣ್ ಪಡ್ನೇಕರ್ ಉಪಸ್ಥಿತರಿದ್ದರು.
ಕೇರಳದಲ್ಲಿ ಅಪಾಯ- ಮುನ್ನೆಚ್ಚರಿಕೆ ಅಗತ್ಯ :
ಪಾಸಿಟಿವ್ ಪ್ರಕರಣಗಳಲ್ಲಿ ರೋಗ ಲಕ್ಷಣವಿರುವ ಪ್ರಮಾಣ ಶೇ.9 ಇದೆ. ಐಸಿಯು ಬಳಸುತ್ತಿರುವವರು ಕೇವಲ ಮೂರು ಮಂದಿ. 87 ಐಸಿಯು ಬೆಡ್ ಖಾಲಿ ಇದೆ. ನ. 29ರಂದು 43 ಮಂದಿ ಆಸ್ಪತ್ರೆಯಲ್ಲಿಯೂ, 176 ಮಂದಿ ಹೋಮ್ ಐಸೊಲೇಶನ್‌ನಲ್ಲಿಯೂ ಇದ್ದರು. ಇದರರ್ಥ ಗಂಭೀರವಲ್ಲದ ಪ್ರಕರಣಗಳು ಹೆಚ್ಚಿಗೆ ಇವೆ. ಕೇರಳದಲ್ಲಿ 2ನೇ ಹಂತದ ಅಲೆ ಹೆಚ್ಚಿಗೆ ಆಗುತ್ತಿದೆ. ಹೀಗಾಗಿ ಎಚ್ಚರಿಕೆ ವಹಿಸಬೇಕಾಗಿದೆ. – ಡಾ| ಪ್ರಶಾಂತ ಭಟ್ ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ, ಉಡುಪಿ.
ಕೋವಿಡ್ ತಡೆಗೆ ಕ್ರಮಗಳು :
- ಮಾಸ್ಕ್ ಧರಿಸದವರಿಂದ ದಂಡ ಸಂಗ್ರಹ
- ದಂಡ ವಿಧಿಸದ ಅಧಿಕಾರಿಗಳ ವಿರುದ್ಧ ಕ್ರಮ,
- ಅನುಮತಿ ಪಡೆಯದ ಕಾರ್ಯ ಕ್ರಮಗಳಿದ್ದರೆ ಅದಕ್ಕೆ ಸಂಬಂಧಪಟ್ಟವರ ವಿರುದ್ಧ ಪ್ರಕರಣ,
- ಅನುಮತಿ ಪಡೆದು 200 ಜನರಿಗಿಂತ ಹೆಚ್ಚಿಗೆ ಸೇರಿದರೆ ಅವರ ವಿರುದ್ಧವೂ ಪ್ರಕರಣ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.