ದುರ್ಗಮ ಹಾದಿಯಲ್ಲಿ ಸಂಚಾರ ದುಸ್ತರ
ಮಾರ್ಡಿ ಶಾಲೆ- ಗುಡ್ಡೆಗಣಪತಿ ದೇವಸ್ಥಾನ ಸಂಪರ್ಕ ರಸ್ತೆ ; 1.5 ಮಣ್ಣಿನ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟಕರ
Team Udayavani, Aug 28, 2021, 6:09 AM IST
ಮಳೆಗಾಲದಲ್ಲಿ ಪಡಿತರ ತರಲು, ಪೇಟೆಯಿಂದ ಅಗತ್ಯದ ವಸ್ತುಗಳನ್ನು, ಕೃಷಿ ಸಲಕರಣೆಗಳನ್ನೆಲ್ಲ ತರಲು ಇಲ್ಲಿನ ಜನರಿಗೆ ಬಹಳಷ್ಟು ಸಮಸ್ಯೆ ಯಾಗುತ್ತಿದೆ. ಇನ್ನು ಗ್ಯಾಸ್ ಸಿಲಿಂಡರ್‌ಗಳನ್ನೆಲ್ಲ ಬೈಕ್‌ನಲ್ಲಿ ಅಥವಾ ದೂರದಿಂದ ತಲೆ ಮೇಲೆ ಹೊತ್ತು ತರಬೇಕಾದ ಸ್ಥಿತಿ ಇಲ್ಲಿನವರದು.
ನೇರಳಕಟ್ಟೆ: ಈ ಮಾರ್ಗದಲ್ಲಿ ಬೇಸಗೆಯಲ್ಲಿಯೇ ಸಂಚರಿಸುವುದು ಕಷ್ಟ. ಇನ್ನೂ ಮಳೆಗಾಲ ಆರಂಭವಾದ ಮೇಲಂತೂ ಈ ರಸ್ತೆಯಲ್ಲಿ ಹೋಗುವುದು ಸಾಹಸವೇ ಸರಿ. ಇದು ಆಜ್ರಿ ಗ್ರಾ.ಪಂ. ವ್ಯಾಪ್ತಿಯ ಕೊಡ್ಲಾಡಿ ಗ್ರಾಮದ ಮಾರ್ಡಿ ಶಾಲೆ ಬಳಿಯಿಂದ ಗುಡ್ಡೆ ಗಣಪತಿ ದೇವಸ್ಥಾನದ ಕಡೆಗೆ ಸಂಪರ್ಕ ಕಲ್ಪಿಸುವ ದುರ್ಗಮ ಹಾದಿಯ ಬಗೆಗಿನ ಚಿತ್ರಣ.
ಕೊಡ್ಲಾಡಿ ಗ್ರಾಮದ ಮಾರ್ಡಿಯಿಂದ ಮೂಡುಬಗೆ ಕಡೆಗೆ ಸಂಚರಿಸುವ ಮುಖ್ಯ ರಸ್ತೆಯಿಂದ ಮಾರ್ಡಿ ಶಾಲೆ ಬಳಿಯ ಕ್ರಾಸ್‌ನಿಂದ ಗುಡ್ಡೆಗಣಪತಿ ದೇವಸ್ಥಾನದ ಕಡೆಗೆ ಸಂಪರ್ಕಿಸುವ ಮಣ್ಣಿನ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಸಂಚಾರ ದುಸ್ತರವಾಗಿದೆ.
1.5 ಕಿ.ಮೀ. ದುರ್ಗಮ ರಸ್ತೆ
ಮಾರ್ಡಿ ಶಾಲೆಯ ಬಳಿಯಿಂದ ಗುಡ್ಡೆ ಗಣಪತಿಯವರೆಗೆ ಸುಮಾರು 1.5 ಕಿ.ಮೀ. ಉದ್ದದ ರಸ್ತೆ ಇದಾಗಿದ್ದು, ಆರಂಭದಿಂದ ಕೊನೆಯವರೆಗೂ ದುರ್ಗಮವಾಗಿಯೇ ಇದೆ. ಮಳೆಗಾಲದಲ್ಲಿ ನೀರೆಲ್ಲ ರಸ್ತೆಯಲ್ಲಿಯೇ ಹರಿದು ಮಧ್ಯೆ ಅಲ್ಲಲ್ಲಿ ಹೊಂಡ ಸೃಷ್ಟಿಯಾಗಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಈ ಪ್ರದೇಶದಲ್ಲಿ 15ಕ್ಕೂ ಹೆಚ್ಚು ಮನೆಗಳಿದ್ದು, ಸುಮಾರು 70ರಿಂದ 80 ಮಂದಿ ನೆಲೆಸಿದ್ದಾರೆ. ಇವರೆಲ್ಲ ಇದೇ ಮಾರ್ಗವನ್ನು ಆಶ್ರಯಿಸಿದ್ದಾರೆ.
ಮಳೆಗಾಲದ ಸಂಕಷ್ಟ
ಈ ಊರಿನವರಿಗೆ ಮಳೆಗಾಲ ಬಂತೆಂದರೆ ಸಾಕು ಸಮಸ್ಯೆಗಳ ಸರಮಾಲೆಯೇ ಶುರುವಾಗುತ್ತದೆ. ಬೇಸಗೆಯಲ್ಲಿ ಹೇಗೋ ಕಷ್ಟಪಟ್ಟು ತಮ್ಮ – ತಮ್ಮ ವಾಹನಗಳಲ್ಲಿ ಸಂಚರಿಸುತ್ತಿದ್ದರೂ, ಮಳೆಗಾಲದಲ್ಲಂತೂ ಈ ರಸ್ತೆ ಯಲ್ಲಿ ನಾಲ್ಕು ಚಕ್ರದ ವಾಹನ ಬಿಡಿ, ಬೈಕ್ ಸಹ ಕಷ್ಟಪಟ್ಟು ಸಂಚರಿಸುವ ದುಸ್ಥಿತಿ ಇದೆ.
ಇತರ ಸಮಸ್ಯೆಗಳೇನು?
– ಮಳೆಗಾಲದಲ್ಲಿ ರಸ್ತೆಯ ಸಮಸ್ಯೆಯಾದರೆ, ಈ ಊರಿನವರಿಗೆ ಬೇಸಗೆಯಲ್ಲಿ ಕುಡಿಯುವ ನೀರಿಗೆ ಬರ ಎದುರಾಗುತ್ತದೆ.
– ಹದಗೆಟ್ಟ ರಸ್ತೆಯಿಂದಾಗಿ ಯಾರಿಗಾದರೂ ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಲು, ಪಡಿತರ, ಇನ್ನಿತರ ಸಾಮಗ್ರಿ ತರಲು ಬಹಳಷ್ಟು ಸಮಸ್ಯೆ ಅನುಭವಿಸುವಂತಾಗಿದೆ.
ಅನೇಕ ಸಲ ಮನವಿ
ಮಾರ್ಡಿ ಶಾಲೆ – ಗುಡ್ಡೆಗಣಪತಿ ದೇವಸ್ಥಾನವನ್ನು ಸಂಪರ್ಕಿಸುವ ರಸ್ತೆಯ ಅಭಿವೃದ್ಧಿ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟ ಶಾಸಕರು, ಇನ್ನಿತರ ಹಲವಾರು ಜನಪ್ರತಿನಿಧಿಗಳು, ಸ್ಥಳೀಯ ಪಂಚಾಯತ್, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರುತ್ತಾರೆ ಸ್ಥಳೀಯರು.
ಭರವಸೆ ಈಡೇರಿಲ್ಲ
ನಮ್ಮ ಈ ರಸ್ತೆಯ ಅಭಿವೃದ್ಧಿ ಬಗ್ಗೆ ಸಂಬಂಧಪಟ್ಟ ಎಲ್ಲರಿಗೂ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಈವರೆಗೆ ಯಾವ ಪ್ರಯೋಜನವೂ ಆಗಿಲ್ಲ. ಮಾಡಿ ಕೊಡುತ್ತೇವೆ ಅನ್ನುತ್ತಾರೆ. ಕಳೆದ 2 ವರ್ಷಗಳಿಂದ ಅನೇಕ ಮನವಿ ಸಲ್ಲಿಸಿದ್ದೇವೆ. ಮಳೆಗಾಲದಲ್ಲಂತೂ ಈ ನಮ್ಮ ಊರಿನವರ ಪಾಡು ಯಾರಿಗೂ ಹೇಳತೀರದಾಗಿದೆ. ಈ ಬಾರಿಯಾದರೂ ಈ ರಸ್ತೆಯ ಅಭಿವೃದ್ಧಿಯಾಗಲಿ.
– ಸಚ್ಚೀಂದ್ರ ಶೆಟ್ಟಿ, ಸ್ಥಳೀಯರು
ಶಾಸಕರಿಂದ ಭರವಸೆ
ಈ ಮಾರ್ಡಿ ಶಾಲೆಯ ಬಳಿಯಿಂದ ಗುಡ್ಡೆಗಣಪತಿ ದೇವಸ್ಥಾನದವರೆಗಿನ 1.5 ಕಿ.ಮೀ. ದೂರದ ರಸ್ತೆ ಅಭಿವೃದ್ಧಿ ಬಗ್ಗೆ ಈಗಾಗಲೇ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟರನ್ನು ಕರೆದುಕೊಂಡು ಬಂದು ಪರಿಶೀಲನೆ ನಡೆಸಲಾಗಿದೆ. ಅವರು ಸಹ ಮುಂದಿನ ಕ್ರಿಯಾ ಯೋಜನೆಯಲ್ಲಿ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ.
– ಅಶೋಕ್ ಕುಲಾಲ್, ಅಧ್ಯಕ್ಷರು ಆಜ್ರಿ ಗ್ರಾ.ಪಂ.
– ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.