ಪ್ರಕೃತಿ ರಕ್ಷಣೆ, ನಿಷ್ಕಾಮಕರ್ಮ: ಉಡುಪಿಯಲ್ಲಿ ಅಮ್ಮನ
Team Udayavani, Feb 26, 2017, 10:44 AM IST
ಉಡುಪಿ: ಪ್ರಕೃತಿ ರಕ್ಷಣೆ, ವಿವೇಕ ಯುತ ಬುದ್ಧಿ, ನಿಷ್ಕಾಮಕರ್ಮವನ್ನು ಅನುಷ್ಠಾನಕ್ಕೆ ತರಲು ಶ್ರೀಮಾತಾ ಅಮೃತಾನಂದಮಯೀ ದೇವಿ ಕರೆ ನೀಡಿದರು. ಶನಿವಾರ ಉಡುಪಿ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆದ ಬೃಹತ್ “ಅಮೃತವೈಭವ’ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಸಸಿಗಳಿಗೂ ಪೂರ್ಣಾಯುಷ್ಯ
ನಮ್ಮ ಹಿರಿಯರು ಪ್ರಕೃತಿಯೊಂದಿಗೆ, ಪ್ರಕೃತಿಯನ್ನು ಅವಲಂಬಿಸಿ ಬದುಕುತ್ತಿದ್ದರೂ ಪ್ರಕೃತಿಯನ್ನು ಹಾಳುಗೆಡಹಲಿಲ್ಲ. ಜೇನು ಪಡೆಯಬೇಕಾದರೆ ಜೇನುಹುಳುಗಳನ್ನು ಓಡಿಸಿ ಪಡೆಯುತ್ತಿದ್ದರು. ಅವರಿಗೆ ಜೇನುಹುಳದ ಅಗತ್ಯ ಗೊತ್ತಿತ್ತು. ಹಾಗೆಯೇ ಎಲ್ಲ ಜೀವಿಗಳೂ ಪ್ರಕೃತಿಯ ಅವಿಭಾಜ್ಯ ಅಂಗ. ಆದರೆ ಈಗ ನಾವು ಮನುಷ್ಯರು ಸಹಿತ ಎಲ್ಲ ಜೀವಿಗಳನ್ನು ನಾಶಪಡಿಸುತ್ತಿದ್ದೇವೆ. ಸಸ್ಯರಾಶಿಗಳನ್ನು ಪೂರ್ಣ ಕಾಲ ಬದುಕಲು ಬಿಡಬೇಕು. ಸಸ್ಯಗಳ ಎಲೆಗಳು ಪೂರ್ಣ ಬದುಕಿದರೆ ಉತ್ತಮ ಹವಾಮಾನ ನಮಗೆ ಸಿಗುತ್ತದೆ. ಅವಶ್ಯವಿದ್ದಷ್ಟು ಮಾತ್ರ ಪ್ರಕೃತಿಯನ್ನು ಬಳಸಬೇಕು. ಪ್ರತಿಯೊಂದು ಅಣುವೂ ಈಶ್ವರನೇ ಎಂಬ ಮೂಲ ಸಿದ್ಧಾಂತ ನಮ್ಮದು. ಮನುಷ್ಯನ ಅತಿಯಾದ ಆಸೆಯಿಂದಾಗಿ ಜಾಗತಿಕ ತಾಪಮಾನದಂತಹ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಅಮೃತಾನಂದ ಮಯೀ ಕಳವಳ ವ್ಯಕ್ತ ಪಡಿಸಿದರು.
ಸಂಸ್ಕಾರ-ಮೌಲ್ಯದ ಪ್ರತಿಪಾದನೆ
ಇಂದಿನ ಶಿಕ್ಷಣ ಪದ್ಧತಿಯಲ್ಲಿ ಬುದ್ಧಿಗೆ ಹೆಚ್ಚು ಮಹತ್ವ ಕೊಡುತ್ತಿದ್ದೇವೆ. ಮರಳು ಮತ್ತು ಸಕ್ಕರೆಯನ್ನು ಮಿಶ್ರ ಮಾಡಿದರೆ ಬೇರ್ಪಡಿಸಲು ಕಲಿತವರಿಗೆ ಬರುವುದಿಲ್ಲ. ಆದರೆ ಇರುವೆ ಸಕ್ಕರೆಯನ್ನು ಬೇರ್ಪಡಿಸುತ್ತದೆ. ಮಕ್ಕಳು ಹಣ, ಕೀರ್ತಿಯನ್ನು ಪಡೆಯಬೇಕೆಂಬ ಇರಾದೆ ಇರುತ್ತದೆ ವಿನಾ ಭವಿಷ್ಯ ಜೀವನದಲ್ಲಿ ಬೇಕಾದ ಮೌಲ್ಯಗಳು ಇರಬೇಕೆಂದು ಕಾಣುವುದಿಲ್ಲ. ಬುದ್ಧಿಯೊಂದಿಗೆ ವಿವೇಕ ಬೇಕು. ಮಕ್ಕಳಿಗೆ ಸಂಸ್ಕಾರವನ್ನು ತಾಯಂದಿರು ಕೊಡಬೇಕು. ರಾಮಾಯಣ, ಮಹಾಭಾರತವೇ ಮೊದಲಾದ ಕಥೆಗಳನ್ನು ಹೇಳಬೇಕು. ಇಂತಹ ಕಥೆಗಳಿಂದ ಆಹಾರವೂ ಶುದ್ಧವಾಗುತ್ತದೆ, ಬಾಂಧವ್ಯ ವೃದ್ಧಿಯಾಗುತ್ತದೆ. ಬಾಲ್ಯದಲ್ಲಿ ಸಂಗ್ರಹಿಸಿದ ಶಕ್ತಿ-ದೌರ್ಬಲ್ಯಗಳೇ ಮುಂದೆ ಜೀವನದಲ್ಲಿ ರೂಪುಗೊಳ್ಳುತ್ತವೆ ಎನ್ನುವುದನ್ನು ನೆನಪಿನಲ್ಲಿಡಬೇಕು ಎಂದರು.
ಕೃತಜ್ಞತೆಯಿಂದ ಸಂತೋಷ
ಸಹನೆ, ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಬೇಕು. ಬದಲಾವಣೆಗಳು ಜೀವನದಲ್ಲಿ ಸಹಜ, ಇದು ಸೃಷ್ಟಿಯ ನಿಯಮ. ಆದರೆ ಅನುಭವವನ್ನು ಸಿಹಿ ಅಥವಾ ಕಹಿಯಾಗಿ ಮಾಡಿಕೊಳ್ಳುವವರು ನಾವೇ. ಮನಸ್ಸನ್ನು ನಿಯಂತ್ರಿಸದೆ ಹೋದರೆ ದುಃಖ ದುಮ್ಮಾನಗಳು ಕಾಡುತ್ತಲೇ ಇರುತ್ತವೆ. ಕೃತಜ್ಞತೆಯೇ ಸಂತೋಷಕ್ಕೆ ಬುನಾದಿ. ಸಂತೋಷ ಇರುವಾಗ ಕೃತಜ್ಞತೆ ಬರುತ್ತದೆಂದಿಲ್ಲ. ಆದರೆ ಕೃತಜ್ಞತೆ ಬಂದಾಗ ಸಂತೋಷ ಬಂದೇ ಬರುತ್ತದೆ ಅಮ್ಮ ಹೇಳಿದರು.
ಜಗತ್ತಿನ ಅಮ್ಮ
14 ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದೆವು. ಈಗ ಅಮ್ಮ ಉಡುಪಿಗೆ ಬರುವಂತಾಯಿತು. “ವಸುಧೈವ ಕುಟುಂಬಕಮ್’ ಎಂಬ ಧ್ಯೇಯದಂತೆ ಜಗತ್ತಿನ ಅಮ್ಮ ಆಗಿರುವ ಅಮೃತಾನಂದಮಯಿ ಅವರು ಶ್ರೀ ಪೇಜಾವರ ಶ್ರೀಗಳ 5ನೇ ಪರ್ಯಾಯ ಕಾಲ, ಉಡುಪಿ ಜಿಲ್ಲೆಯ ವಿಂಶತಿ ಉತ್ಸವ, ನನ್ನ ಸಚಿವ ಅವಧಿಯಲ್ಲಿ ಬಂದಿರುವುದು, ನಮ್ಮ ಮನೆಯಲ್ಲಿಯೇ ಉಳಕೊಂಡಿರುವುದು ನನಗೆ ಅತೀವ ಸಂತಸ ತಂದಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ರಾಯಭಾರಿ
ವಿವಿಧ ರಾಷ್ಟ್ರಗಳಲ್ಲಿ ಭಾರತದ ಆಧ್ಯಾತ್ಮಿಕ ರಾಯಭಾರಿಯಂತಿರುವ ಅಮ್ಮನವರು ಪುರಾಣಗಳಲ್ಲಿ ಬರುವ ಜ್ಞಾನಿ ನಾರಿಯರಂತೆ ಕಂಡುಬರುತ್ತಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ನುಡಿದರು.
ಮಣಿಪಾಲ-ಮಾತಾ ಸಹಭಾಗಿತ್ವ
ಅಮೃತಾನಂದಮಯೀ ಅವರೊಂದಿಗೆ ಚರ್ಚಿಸಿದ್ದೇನೆ. ಮುಂದಿನ ದಿನಗಳಲ್ಲಿ ಮಣಿಪಾಲ ವಿ.ವಿ. ಮತ್ತು ಮಾತಾ ಅಮೃತಾನಂದಮಯೀ ಸಂಸ್ಥೆ ಸೇರಿ ಬಡವರ ಕಲ್ಯಾಣಕ್ಕಾಗಿ ಕಾರ್ಯಯೋಜನೆಗಳನ್ನು ರೂಪಿಸಲಾಗುವುದು. ಇದಕ್ಕೆ ಅಮ್ಮನ ಆಶೀರ್ವಾದ ಸಿಕ್ಕಿದೆ ಎಂದು ಮಣಿಪಾಲ ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಹೇಳಿದರು.
ಶ್ರೀ ವಿಶ್ವಸಂತೋಷ ಗುರೂಜಿ, ಧಾರ್ಮಿಕ ದತ್ತಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ, ಶಾಸಕರಾದ ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ, ಉಡುಪಿ ಅಮೃತಾನಂದಮಯೀ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಧರ ಕಿನ್ನಿಮೂಲ್ಕಿ ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್ ಸ್ವಾಗತಿಸಿ, ಅಧ್ಯಕ್ಷ ಆನಂದ ಕುಂದರ್ ವಂದಿಸಿದರು. ಶಿವಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಬಳಿಕ ಸಾರ್ವಜನಿಕ ದರ್ಶನ ದೊರೆಯಿತು. ಸಾವಿರಾರು ಜನರು ಆಗಮಿಸಿದ್ದರು. ಸಾವಿರಾರು ಜನರಿಗೆ ಊಟದ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಯನ್ನು ಮಾಡಲಾಗಿತ್ತು.
ಜ್ಞಾನದ ಅಹಂಕಾರ, ಅಹಂಕಾರದ ಜ್ಞಾನ
ನಮಗೆ ನಮ್ಮ ಜ್ಞಾನದ ಬಗ್ಗೆ ಅಹಂಕಾರ ಇರುತ್ತದೆ. ಆದರೆ ಅಹಂಕಾರವಿರುವ ಬಗೆಗೆ ಜ್ಞಾನ ಇರುವುದಿಲ್ಲ. ಕಾಮ, ಕ್ರೋಧ, ಮತ್ಸರಾದಿಗಳು ಅಹಂಕಾರದಿಂದ ಬರುತ್ತವೆ. ನಮ್ಮೊಳಗೆ ಕೋಪಾಗ್ನಿ ಇದ್ದರೆ ಮನಸ್ಸಿನಲ್ಲಿ ಶಾಂತಿಯ ಪುಷ್ಪ ಅರಳುವುದಿಲ್ಲ.
ನಮ್ಮ ಕರ್ಮಕ್ಕೆ ದೇವರು ಹೊಣೆಯೆ?
ನಮ್ಮ ಕಷ್ಟ ನಷ್ಟಗಳಿಗೆ ದೇವರನ್ನು ಹೊಣೆಯಾಗಿ ಮಾಡುತ್ತೇವೆ. ವಿಮೆ ಮಾಡಿಸದೆ ವಾಹನ ಅಪಘಾತವಾಗಿ ನಷ್ಟವಾದರೆ ದೇವರನ್ನು ಹಳಿದರೆ ಏನು ಪ್ರಯೋಜನ? ಅದೇ ರೀತಿ ನಮ್ಮ ಕಷ್ಟನಷ್ಟಗಳಿಗೆ ನಮ್ಮ ಕರ್ಮವೇ ಕಾರಣ. ನಾವು ವರ್ತಮಾನದಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿದರೆ ಕರ್ಮದ ಕಾಠಿನ್ಯ ಕಡಿಮೆಯಾಗುತ್ತದೆ. ಕೆಟ್ಟ ಕೆಲಸಗಳೆಂದರೆ ಸಾಲದ ಹಾಗೆ. ಅದು ತೀರಿಸುವವರೆಗೆ ಮುಗಿಯುವುದಿಲ್ಲ.
ಮುಕ್ತಿಗೆ ಈಶ್ವರ ಶರಣಾಗತಿ ಮಾರ್ಗ
ಸಾವು ಎಂಬುದು ಕೊನೆಯ ಪೂರ್ಣವಿರಾಮವಲ್ಲ. ಒಂದು ವಾಕ್ಯದ ಬಳಿಕ ಪೂರ್ಣವಿರಾಮ ಕೊಟ್ಟರೂ ಮುಂದಿನ ವಾಕ್ಯ ಬರೆಯುವಂತೆ ಇದು. ನಮ್ಮನ್ನು ಮುನ್ನಡೆಸುವ ಕಾಣದ ಕೈಯಾದ ಈಶ್ವರನಿಗೆ ಶರಣಾಗುವುದೇ ಮುಕ್ತಿಗೆ ಇರುವ ಮಾರ್ಗ.
ಹೊರಗಿನ ಎಸಿ-ಒಳಗಿನ ಎಸಿ
ಶಿಕ್ಷಣ ಕೊಡುವ ಕೊಠಡಿಯನ್ನು ಹವಾನಿಯಂತ್ರಿತವಾಗಿ ಮಾಡಬಹುದು. ಆದರೆ ಆಂತರಿಕ ಶಿಕ್ಷಣ ಕೊಠಡಿಯಲ್ಲಿ ಹವಾನಿಯಂತ್ರಿತವಾಗಬೇಕಾದರೆ ಮೌಲ್ಯಯುತ ಸಂಸ್ಕಾರ ಬೇಕು. ಜೀವನಕ್ಕಾಗಿ ಮತ್ತು ಜೀವನೋಪಾಯಕ್ಕಾಗಿ ಎಂಬ ಎರಡು ಬಗೆಯ ಶಿಕ್ಷಣ ಇದೆ. ಈಗ ಎರಡನೆಯದೇ ಹೆಚ್ಚು ಕಾಣುತ್ತದೆ. ಲೋಕದ ಸ್ವಭಾವ, ಮನಸ್ಸಿನ ಸ್ವಭಾವ ಅರಿಯುವುದು, ವಿವಿಧ ಸಂದರ್ಭಗಳಲ್ಲಿ ಹೊಂದಾಣಿಕೆಯಿಂದ ಬದುಕುವುದು ಮೊದಲ ಮಾರ್ಗದಿಂದ ಸಾಧ್ಯ.
ಬೀದಿನಾಯಿಗಳ ಚರ್ಚೆ
ಬೀದಿನಾಯಿಗಳ ಬಗ್ಗೆ ಚರ್ಚೆಗಳು ನಡೆಯುತ್ತವೆ. ನಾಯಿಗಳಿಗಾದರೂ ಬುದ್ಧಿ ಇಲ್ಲ. ಆದರೆ ನಾವು ಬುದ್ಧಿ ಇರುವ ಮನುಷ್ಯರೂ ನಾಯಿಗಳಂತೆ ಕಚ್ಚಾಡುತ್ತಿದ್ದೇವಲ್ಲ? ಇದಕ್ಕೆ ಬುದ್ಧಿಯೊಂದಿಗೆ ವಿವೇಕ ಇಲ್ಲದಿರುವುದೇ ಕಾರಣ. ಇದರೊಂದಿಗೆ ಈಗ ಭಯೋತ್ಪಾದನೆ, ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣಗಳು ಮಿತಿಮೀರುತ್ತಿವೆ. ಇದಕ್ಕೆ ಪರಿಹಾರವಾಗಿ ಪ್ರೇಮ ನಮ್ಮೊಳಗೆ ಮೊದಲು ಹುಟ್ಟಬೇಕು. ಪ್ರೇಮವಿಲ್ಲದೆ ಇದ್ದರೆ ಕಾಮ, ಕ್ರೋಧದಂತಹ ವಿಕಾರಗಳೇ ಹೆಚ್ಚುತ್ತವೆ.
ಜಾಗತಿಕ ತಾಪ-ಮನಸ್ಸಿನ ತಾಪ
ಜಾಗತಿಕ ತಾಪಮಾನ, ಪ್ರಕೃತಿ ವಿಕೋಪವನ್ನು ಮುಂದಾಗಿ ತಿಳಿಸುವ ಜ್ಞಾನ ನಮ್ಮಲ್ಲಿದೆ. ಆದರೆ ಮನುಷ್ಯರ ಮನಸ್ಸಿನ ತಾಪ ಅಪಾಯದ ಮಟ್ಟ ಮೀರುತ್ತಿದೆ. ಆಂತರಿಕ ಹವಾಮಾನ ಬಹಳ ಕೆಟ್ಟಿದೆ. ಭವಿಷ್ಯದ ಸಮಸ್ಯೆಗಳಾದ ಜಾಗತಿಕ ತಾಪಮಾನ ಕುರಿತು ಚರ್ಚೆ, ವಿಚಾರ ಸಂಕಿರಣಗಳು ನಡೆದರೆ ವರ್ತಮಾನದ ಸಮಸ್ಯೆಗಳಾದ ಆಂತರಿಕ ತಾಪದ ಬಗ್ಗೆ ಚರ್ಚೆ ನಡೆಯುತ್ತಿಲ್ಲ. – ಅಮೃತಾನಂದಮಯೀ
ಮತಾಂತರ ಪರಿಹಾರವಲ್ಲ
ಎಲ್ಲ ಮತಧರ್ಮಗಳಲ್ಲಿಯೂ ರೋಗ, ಬಡತನ, ಕಷ್ಟ ನಷ್ಟ ಇರುವುದರಿಂದ ಮತಾಂತರ ಇವುಗಳಿಗೆ ಪರಿಹಾರವಲ್ಲ. ಸನಾತನ ಧರ್ಮಗಣಿತವಿದ್ದಂತೆ. ಅದನ್ನು ತಿಳಿಯಲು ಪರಿಶ್ರಮ ಬೇಕು. ಸೃಷ್ಟಿ-ಸೃಷ್ಟಿಕರ್ತನನ್ನು ಅರಿಯಬೇಕು. ಜ್ಞಾನವಿಲ್ಲದೆ ಕರ್ಮ ಮಾಡಿದರೆ ಪ್ರಯೋಜನವಿಲ್ಲ. ನಾವು ಹುಟ್ಟಿರುವುದಾದರೂ ಏತಕ್ಕೆ ಎಂಬ ಚಿಂತನೆ ಮೂಡಿ ನಿಷ್ಕಾಮಕರ್ಮ ನಡೆಸಬೇಕು. ಫಲ ಬಯಸಿ ಕೆಲಸ ಮಾಡಿದರೆ ಯಾವ ನೀಚ ಕೆಲಸ ಮಾಡಲೂ ಮನಸ್ಸು ಹಿಂಜರಿಯುವುದಿಲ್ಲ.
– ಅಮೃತಾನಂದಮಯೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.