ಮಟ್ಟು-ಕಟಪಾಡಿ : 1 ಕೋಟಿ ಅನುದಾನದ ರಸ್ತೆ ಅರೆಬರೆ ಕಾಮಗಾರಿ
ವಾಹನ ಸಂಚಾರಕ್ಕೆ ತೀವ್ರ ತೊಡಕು; ಸುರಕ್ಷಿತ ಸಂಚಾರಕ್ಕೆ ಅನುವು ಮಾಡಲು ಜನರ ಆಗ್ರಹ
Team Udayavani, Jan 12, 2020, 12:55 AM IST
ಕಟಪಾಡಿ: 1 ಕೋಟಿ ರೂ. ಅನುದಾನದ ಮಟ್ಟು-ಕಟಪಾಡಿ ಸಂಪರ್ಕದ ಪ್ರಮುಖ ರಸ್ತೆಯೊಂದು ಅರೆಬರೆ ಕಾಮಗಾರಿಯಿಂದಾಗಿ ಸಂಚಾರಿಗಳ ಪಾಲಿಗೆ ಪ್ರಯೋಜನವಿಲ್ಲದಾಗಿದೆ. ರಸ್ತೆ ವಿಸ್ತರೀಕರಣ ಕಾಮಗಾರಿಯನ್ನು ಕಳೆದ ಸುಮಾರು ಮೂರು ತಿಂಗಳ ಹಿಂದೆ ಆರಂಭಿಸಲಾಗಿದ್ದು, ರಸ್ತೆಯ ಪಾರ್ಶ್ವದಲ್ಲಿ ಕೆಲವೆಡೆ ಕಾಂಕ್ರೀಟ್ ಹಾಕಲಾಗಿದೆ. ಕೆಲವೆಡೆ ಜಲ್ಲಿ ತುಂಬಲಾಗಿದೆ. ಕೆಲವೆಡೆ ತೆಗೆದ ಹೊಂಡ ಹಾಗೆಯೇ ಉಳಿದಿದೆ. ಆದ್ದರಿಂದ ವಾಹನ ಸವಾರರು ಸಂಚರಿಸಲು ಕಷ್ಟ ಪಡಬೇಕಾದಂತಹ ಪರಿಸ್ಥಿತಿ ಇದೆ.
ಬಾಣಲೆಯಿಂದ ಬೆಂಕಿಗೆ
ಅರೆಬರೆ ಕಾಮಗಾರಿಯಿಂದಾಗಿ ಕತ್ತಲಾಗುತ್ತಿದ್ದಂತೆ ಈ ರಸ್ತೆಯಲ್ಲಿ ಸಂಚರಿಸುವುದು ಕಷ್ಟಕರವಾಗಿದೆ. ಹಲವು ವಾಹನ ಸವಾರರು ಅಪಘಾತಕ್ಕೀಡಾಗಿದ್ದಾರೆ. ಹೊಂಡ, ಗುಂಡಿಗಳಿಂದ ವಾಹನ ಚಲಾಯಿಸುವುದೇ ಸವಾಲಾಗಿದೆೆ. ಈ ಮೊದಲು ರಸ್ತೆ ಹಾಳಾದ್ದರಿಂದ ರಸ್ತೆ ವಿಸ್ತರಣೆ ಮತ್ತು ದುರಸ್ತಿಗೆ ಉದ್ದೇಶಿಸಲಾಗಿದ್ದು ಶಾಸಕರು ಗುದ್ದಲಿ ಪೂಜೆ ನೆರವೇರಿಸಿದ್ದರು. 1 ಕೋಟಿ ರೂ. ಅನುದಾನದಲ್ಲಿ ರಸ್ತೆ ಕಾಮಗಾರಿ ನಡೆಯುವುದಾಗಿ ಹೇಳಿದ್ದರು.
ಒನ್ ಟೈಮ್ ಡೆವಲಪ್‌ಮೆಂಟ್ ಯೋಜನೆಯಡಿ ತಾಂತ್ರಿಕ ಮಂಜೂರಾತಿ ಪಡೆದು ಒಂದು ಕೋಟಿ ರೂ. ವೆಚ್ಚದಲ್ಲಿ 0-1.4 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿ ಮಂಜೂರಾಗಿತ್ತು. ಕಚ್ಚಾ ಚರಂಡಿ ಸಹಿತ 400 ಮೀ.ನಷ್ಟು ಭಾಗ ಕಾಂಕ್ರೀಟ್, ಒಂದು ಕಿ.ಮೀ.ನಷ್ಟು ಡಾಮರೀಕರಣ ನಡೆಯಬೇಕಿತ್ತು. ಆದರೆ ಕೆಲವೆಡೆ ಕಾಮಗಾರಿಯು ಅರೆಬರೆಯಾಗಿ ಕೈಗೊಳ್ಳಲಾಗಿದೆ.
ವಾಹನ ನಿಬಿಡ ರಸ್ತೆ ಇದಾಗಿದ್ದು ಸಮಸ್ಯೆಗೆ ಕಾರಣವಾಗಿದೆ. ಕಾಮಗಾರಿಯನ್ನು ಸ್ಥಗಿತಗೊಳಿಸಿ ಸುಮಾರು ಎರಡು ತಿಂಗಳು ಕಳೆದಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ರಸ್ತೆಯ ಅಭಿವೃದ್ಧಿ ಕಾಮಗಾರಿ ತತ್‌ಕ್ಷಣ ಮುಗಿಸಿ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕಾದ ಅವಶ್ಯಕತೆ ಇದೆ ಎಂದು ಜನರು ಒತ್ತಾಯಿಸಿದ್ದಾರೆ.
ಸಂಚಾರ ದುಸ್ತರ
ಅರೆಬರೆ ಕಾಮಗಾರಿಯಿಂದಾಗಿ ವಾಹನ ಸಂಚಾರಕ್ಕೆ ಅವ್ಯವಸ್ಥೆ ಉಂಟಾಗಿದೆ. ಕತ್ತಲಾಗುತ್ತಿದ್ದಂತೆ ವಾಹನ ಸಂಚಾರ ದುಸ್ತ ರವಾಗುತ್ತಿದೆ. ಸಂಬಂಧಿತ ಅಧಿಕಾರಿಗಳು ಎಚ್ಚೆತ್ತು ಶೀಘ್ರದಲ್ಲಿಯೇ ಕಾಮಗಾರಿ ಪೂರೈಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ ಎಂದು ಸ್ಥಳೀಯರಾದ ಕಾರ್ತಿಕ್ ಅವರು ಅಭಿಪ್ರಾಯಿಸಿದ್ದಾರೆ.
ಶೀಘ್ರ ಕಾಮಗಾರಿ
ಐದೂವರೆ ಮೀಟರ್ ಅಗಲಗೊಳ್ಳಲಿರುವ ರಸ್ತೆಯ ಅಭಿವೃದ್ಧಿ ಕಾಮಗಾರಿ ಯೋಜನೆಯ ಅನುಷ್ಠಾನದ ಕೆಲಸ ಆರಂಭಗೊಂಡಿತ್ತು. ಅತಿಕ್ರಮಣ ಸ್ಥಳದ ತೆರವು ಕಾರ್ಯದಿಂದ ರಸ್ತೆಯ ವಿಸ್ತರೀಕರಣದಲ್ಲಿ ವಿಳಂಬ ಆಗಿದೆ. ಶೀಘ್ರದಲ್ಲಿಯೇ ಕಾಮಗಾರಿಯನ್ನು ನಡೆಸಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಜಗದೀಶ್ ಭಟ್ ಅವರು ಹೇಳಿದ್ದಾರೆ.
ಶ್ರಮದಾನ
ಈ ಮೊದಲು ಹಲವೆಡೆಗಳಲ್ಲಿ ಡಾಮರು ಕಿತ್ತು ಬಂದು ದೊಡ್ಡ ಗುಂಡಿಗಳೊಂದಿಗೆ ರಸ್ತೆ ಹಾಳಾದ್ದರಿಂದ ಗ್ರಾಮ ಪಂಚಾಯತ್ ಮತ್ತು ಕಟಪಾಡಿ ರಿಕ್ಷಾ ಚಾಲಕರು-ಮಾಲಕರು ಶ್ರಮದಾನ ನಡೆಸಿದ್ದರು. ಜತೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.