ಪಡುಬಿದ್ರಿ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಪಂಚಾಯತ್‌ನಲ್ಲಿ ಸಭೆ
Team Udayavani, May 1, 2022, 11:29 AM IST
ಪಡುಬಿದ್ರಿ: ಅತೀ ಹೆಚ್ಚು ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ ಪಡುಬಿದ್ರಿಯಲ್ಲಿ ಅದರ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಚಿಂತಿಸಲುಸ್ಥಳೀಯ ಗ್ರಾ. ಪಂ. ನಲ್ಲಿ ಆರ್‌ಟಿಒ ಸಹಿತ ವಿವಿಧ ಇಲಾಖಾಧಿಕಾರಿಗಳು ಮತ್ತು ವಿವಿಧ ಮುಖಂಡರ ಜತೆಗೆ ಸಮಾಲೋಚನಾ ಸಭೆಯು ಶುಕ್ರವಾರ ಗ್ರಾ. ಪಂ. ಸಭಾಭವನದಲ್ಲಿ ನಡೆಯಿತು.
ಬಸ್ಸು ತಂಗುದಾಣ, ರಿಕ್ಷಾ, ಟೆಂಪೋ, ಕಾರು ನಿಲ್ದಾಣಗಳಿಗೆ ಸೂಕ್ತ ಸ್ಥಳ ನಿಗದಿಪಡಿಸುವ ಬಗ್ಗೆ ಚರ್ಚಿಸಲಾಯಿತು.
ಉಡುಪಿ ಕಡೆಯಿಂದ ಬರುವ ಎಕ್ಸ್‌ಪ್ರೆಸ್ ಬಸ್ ಮತ್ತು ಸರ್ವಿಸ್ ಬಸ್‌ಗಳು ಕೋರ್ಟ್‌ಯಾರ್ಡ್ ಬಳಿಯಿಂದ ಸರ್ವಿಸ್ ರಸ್ತೆಗೆ ಬಂದು ಸಿಎ ಬ್ಯಾಂಕ್ ಸಿಟಿ ಶಾಖೆ ಮುಂಭಾಗ ನಿಲುಗಡೆಗೊಳಿಸಬೇಕು. ಮಂಗಳೂರು ಕಡೆಯಿಂದ ಬರುವ ಎಲ್ಲ ಬಸ್‌ಗಳು ಪಂಪ್‌ಹೌಸ್ ಬಳಿಯಿಂದ ಸರ್ವಿಸ್ ರಸ್ತೆಗೆ ಆಗಮಿಸಿ ಸನ್ನಿಧಿ ಮೆಡಿಕಲ್ ಬಳಿ ನಿಲುಗಡೆಗೊಳಿಸಬೇಕು. ಮತ್ತು ಎರಡೂ ಬದಿಯಿಂದ ಸರ್ವಿಸ್ ರಸ್ತೆ ಇರುವಲ್ಲಿಯವರೆಗೆ ಬಸ್ಸುಗಳು ಸರ್ವಿಸ್ ರಸ್ತೆಯಲ್ಲೇ ಸಂಚರಿಸಬೇಕು.
ಅತೀ ಹೆಚ್ಚು ರಿಕ್ಷಾಗಳಿದ್ದು, ಅವುಗಳನ್ನು ವಿಂಗಡಿಸಿ, ಪಶ್ಚಿಮ ಭಾಗದಲ್ಲಿ ನವರಂಗ್ ಎದುರುಗಡೆ ಮತ್ತು ಬಸ್ಸು ನಿಲ್ದಾಣ ಬಳಿಯ ಬೂತ್ ಬಳಿ ಸರ್ವಿಸ್ ರಸ್ತೆಯ ಒಳಭಾಗದಲ್ಲಿ ನಿಲುಗಡೆಗೊಳಿಸಬೇಕು. ಪೂರ್ವ ಬದಿಯಲ್ಲಿ ಕಾರ್ಕಳ ರಸ್ತೆಯ ಹಳೇ ಲೋಕೋಪಯೋಗಿ ರಸ್ತೆಯಲ್ಲಿ ಮತ್ತು ಹಳೇ ಕೆಇಬಿ ರಸ್ತೆಯ ಉತ್ತರ ಬದಿಯಲ್ಲಿ ನಿಲುಗಡೆಗೊಳಿಸಬೇಕು.
75 ಅಧಿಕ ಟೆಂಪೋಗಳಿದ್ದು, ಕಾರ್ಕಳ ರಸ್ತೆಯ ಬಸ್ ನಿಲ್ದಾಣವನ್ನು ಬಿಟ್ಟು ಅದರ ಪೂರ್ವ ಬದಿಯಲ್ಲಿ ನಿಲುಗಡೆಗೊಳಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಎಲ್ಲ ಬದಲಾವಣೆಗಳಿಗಾಗಿ ಪಡುಬಿದ್ರಿಯಲ್ಲಿನ ಅನಧಿಕೃತ ಅಂಗಡಿ ಮುಂಗಟ್ಟುಗಳನ್ನು ಹಾಗೂ ಅನಧಿಕೃತ ಗೂಡಂಗಡಿಗಳನ್ನು ನೋಟಿಸ್ ನೀಡಿ ತೆರವುಗೊಳಿಸಲೂ ಸಭೆಯಲ್ಲಿ ಚಿಂತನೆಯನ್ನು ನಡೆಸಲಾಯಿತು.
ಈ ಎಲ್ಲ ನಿರ್ಧಾರಗಳು ತಾತ್ಕಾಲಿಕವಾಗಿರುತ್ತವೆ. ಮುಂದಿನ ಮೇ ತಿಂಗಳ ಅಂತ್ಯದೊಳಗಾಗಿ ಇವುಗಳ ಅನುಷ್ಟಾನವಾಗಲಿದೆ. ಬಳಿಕ ಸಮಸ್ಯೆ ಬಗೆಹರಿಯದಿದ್ದಲ್ಲಿ ಮಾರ್ಪಾಡುಗೊಳಿಸಲೂ ಸಭೆಯಲ್ಲಿ ನಿರ್ಧರಿಸಲಾಯಿತು.
ಇದೇ ಸಂದರ್ಭ ಮಂಗಳವಾರ ಸಂತೆ ದಿನದಂದು ಸರ್ವಿಸ್ ರಸ್ತೆಯಲ್ಲಿ ಯಾವುದೇ ವಾಹನ ನಿಲುಗಡೆಗೆ ಅವಕಾಶ ಇಲ್ಲ. ಎಲ್ಲಾ ವಾಹನಗಳು ಬೋರ್ಡ್ ಶಾಲಾ ಆವರಣದಲ್ಲಿ ನಿಲುಗಡೆಗೊಳಿಸಬೇಕು. ಅಲ್ಲದೆ ಇನ್ನು ಮುಂದೆ ಸರ್ವಿಸ್ ರಸ್ತೆಯಲ್ಲಿ ಎಲ್ಲಾ ಉದ್ಯಮದವರು ತಮ್ಮ ಅಂಗಡಿಗಳ ಮುಂದೆ ಪಾದಚಾರಿಗಳಿಗೆ ಮೀಸಲಾಗಿರುವ ಜಾಗದಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಬಾರದು. ಈ ಬಗ್ಗೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ತಿಳಿಸಲಾಯಿತು.
ಗ್ರಾ.ಪಂ. ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಯಶೋದಾ ಪೂಜಾರಿ, ಆರ್‌ಟಿಒ ಅಧಿಕಾರಿ ಜೆ. ಪಿ. ಗಂಗಾಧರ್, ಪಡುಬಿದ್ರಿ ಠಾಣಾಧಿಕಾರಿ ಅಶೋಕ್ ಕುಮಾರ್, ನವಯುಗ್ ಕಂಪೆನಿಯ ಶ್ರೀನಿವಾಸನ್, ಮುಖಂಡರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಹರೀಶ್ ಕುಮಾರ್ ಶೆಟ್ಟಿ, ಕೌಸರ್ ಉಪಸ್ಥಿತರಿದ್ದರು. ಪಿಡಿಒ ಪಂಚಾಕ್ಷರಿ ಸ್ವಾಮಿ ಕೆರಮಠ ನಿರ್ವಹಿಸಿದರು.
ಪ್ರಾ. ಸಾ. ಅಧಿಕಾರಿ ಮಾತಿಗೆ ಆಕ್ಷೇಪ
ಗೊಂದಲದೊಂದಿಗೆ ಆರಂಭಗೊಂಡ ಸಭೆಯಲ್ಲಿ ಈ ಹಿಂದಿನ ಹಲವು ನಿರ್ಣಯಗಳಿಗೆ ಸಭಿಕರು ಆಕ್ಷೇಪವೆತ್ತಿದರು. ಪಡುಬಿದ್ರಿಯಲ್ಲಿ 45ಮೀಟರ್ ಜಾಗವನ್ನು ಬಳಸಿಕೊಂಡು ಹೆದ್ದಾರಿ ಚತುಃಷ್ಪಥ ಕಾಮಗಾರಿಯನ್ನು ನಡೆಸಿರುವುದೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ ಎಂಬ ಮಾತುಗಳೂ ಕೇಳಿಬಂತು. ಸಭೆಯನ್ನೇ ‘ಶಿಸ್ತಿಲ್ಲದ ಸಂತೆ’ ಎಂದು ಉಲ್ಲೇಖೀಸಿ ಮಾತನಾಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಾತುಗಳಿಗೆ ರಿಕ್ಷಾ ಯೂನಿಯನ್ ಸದಸ್ಯರು, ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಗ್ರಾ. ಪಂ. ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ವಲಯ ಸ್ಟಿಕ್ಕರ್ ಹಾಗೂ ಯೂನಿಫಾರ್ಮ್ ಹಾಕದೇ ರಿಕ್ಷಾ ಚಾಲಕರು ಬಂದಿರುವುದನ್ನು ಗಮನಿಸಿ ಮಾತನಾಡಿದ್ದ ಅಧಿಕಾರಿಗೆ ತಾವು ಪಂಚಾಯತ್ ಕರೆದಿರುವ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿರುವುದಾಗಿ ಹೇಳಿದ ಪ್ರಕಾಶ್ ಶೆಟ್ಟಿ ಅವರು ಸಾರಿಗೆ ಕಚೇರಿಯಲ್ಲಿನ ಭ್ರಷ್ಟಾಚಾರವನ್ನು ಮೊದಲು ಹತ್ತಿಕ್ಕಿ ಈ ಸಭೆಯ ಬಗೆಗೆ ಆಕ್ಷೇಪಿಸಿ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.