ಜನಹಿತಕ್ಕೆ ಪೂರಕವಾದ ಹೊಸತನಕ್ಕೆ ಒತ್ತು
Team Udayavani, Aug 12, 2021, 7:30 AM IST
ಕಾರ್ಕಳ: ಹಿಂದುತ್ವ, ಅಭಿವೃದ್ಧಿ, ಯುವ ನಾಯಕತ್ವ ಈ ಮೂರು ಮೂಲ ಮಂತ್ರಗಳನ್ನು ಜಪಿಸುತ್ತ ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಛಾಪು ಮೂಡಿಸುತ್ತಿರುವ ಯುವ ನಾಯಕ ವಿ. ಸುನಿಲ್ ಕುಮಾರ್ ಕಾರ್ಕಳ ಕ್ಷೇತ್ರದಲ್ಲಿ ಮೂರು ಬಾರಿ ಜಯ ಸಾಧಿಸಿದವರು. ಇವರ ಸಂಘಟನ ಸಾಮರ್ಥ್ಯ, ನಾಯಕತ್ವ ಗುಣ, ಅಭಿವೃದ್ಧಿ ಕಾರ್ಯಗಳನ್ನು ಮನಗಂಡ ಬಿಜೆಪಿ ವರಿಷ್ಠರು ಸಚಿವ ಸ್ಥಾನದ ಬಹುದೊಡ್ಡ ಜವಾಬ್ದಾರಿಯನ್ನು ಕಿರಿಯ ವಯಸ್ಸಿನಲ್ಲೇ ವಹಿಸಿದ್ದಾರೆ. ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆಯ ನೂತನ ಸಚಿವರಾಗಿರುವ ಸುನಿಲ್ ಕುಮಾರ್ ಅವರು ತಮ್ಮ ಕನಸು, ಯೋಚನೆ ಮತ್ತು ಯೋಜನೆಗಳೇನು ಎನ್ನುವ ಬಗ್ಗೆ “ಉದಯವಾಣಿ’ಯೊಂದಿಗೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಹೊಸ ಹೊಣೆಗಾರಿಕೆಯನ್ನು ಹೇಗೆ ನಿಭಾಯಿಸುವಿರಿ?
ಮೊದಲ ಬಾರಿ ಪಕ್ಷ ನನಗೆ ದೊಡ್ಡ ಹೊಣೆಗಾರಿಕೆಯನ್ನು ನೀಡಿದೆ. ಸಾರ್ವಜನಿಕ ಕ್ಷೇತ್ರ, ಸಾಮಾಜಿಕ ಚಟುವಟಿಕೆ ಇವೆಲ್ಲ ನನಗೆ ಹೊಸದೇನೂ ಅಲ್ಲ. ಬಾಲ್ಯದಿಂದಲೂ ಸಾಮಾಜಿಕ ಚಟುವಟಿಕೆಗಳಲ್ಲಿ, ವಿದ್ಯಾರ್ಥಿ ಜೀವನದಲ್ಲಿ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದೆ. ಆದುದರಿಂದ ಇದನ್ನು ಸಮರ್ಥನಾಗಿ ನಿರ್ವಹಿಸುವ ವಿಶ್ವಾಸ ಇದೆ.
ಸಚಿವರಾಗಿ ನಿಮ್ಮಿಂದ ಜನತೆ ಏನನ್ನು ನಿರೀಕ್ಷಿಸಬಹುದು?
ಮುಖ್ಯಮಂತ್ರಿ ನನಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆಯ ಜವಾಬ್ದಾರಿ ನೀಡಿದ್ದಾರೆ. ಮೊದಲ ಬಾರಿ ಸಚಿವನಾಗಿರುವ ಹಿನ್ನೆಲೆಯಲ್ಲಿ ಸಾಕಷ್ಟು ಅನುಭವವನ್ನು ಪಡೆಯಬೇಕಿದೆ, ಅಧ್ಯಯನ ನಡೆಸಬೇಕಿದೆ. ನಾನು ಯಾವಾಗಲೂ ಹೊಸತನದ ಬಗ್ಗೆ ಆಲೋಚನೆ ಮಾಡುವ ವ್ಯಕ್ತಿ. ಎಲ್ಲದರಲ್ಲಿಯೂ ಹೊಸತನವನ್ನು ಹುಡುಕುತ್ತಿರುತ್ತೇನೆ. ಇಲಾಖೆಗಳ ಕಾರ್ಯಚಟುವಟಿಕೆಗಳಲ್ಲಿ ಹೊಸತನಕ್ಕೆ ಒತ್ತು ನೀಡುವ ಜತೆಯಲ್ಲಿ ಈ ಹೊಸತನ ಜನೋಪಯೋಗಿಯಾಗಿರುವಂತೆ ನೋಡಿಕೊಳ್ಳುವೆ.
ಅಭಿವೃದ್ಧಿ ಕಾರ್ಯಗಳ ಬಗ್ಗೆ ಯಾವ ರೀತಿಯ ಯೋಜನೆ ಹೊಂದಿರುವಿರಿ?
ಇಂಧನ ಖಾತೆಗೆ ಸಂಬಂಧಿಸಿ ಹಲವಾರು ರೀತಿಯ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯವಿದೆ. ಈಗಾಗಲೇ ಜಾರಿಯಲ್ಲಿರುವ ಉತ್ತಮ ಯೋಜನೆಗಳಿಗೆ ಪೂರಕವಾಗಿ ಹೊಸ ತಂತ್ರಜ್ಞಾನ ಆಧಾರಿತ ಜನಹಿತ ಯೋಜನೆಗಳನ್ನು ಜಾರಿಗೊಳಿಸುವೆ. ಹಳೆಯ ಮಾದರಿಯ ವಿದ್ಯುತ್ ಪರಿವರ್ತಕಗಳ ಬದಲಿಗೆ ಹೊಸ ತಂತ್ರಜ್ಞಾನ ಆಧಾರಿತ ಪರಿವರ್ತಕ ಜೋಡಿಸುವ ಯೋಜನೆ ಇದೆ.
ಡೀಮ್ಡ್ ಫಾರೆಸ್ಟ್ ಸಹಿತ ಕರಾವಳಿಯಲ್ಲಿ ಹಲವು ಸಮಸ್ಯೆಗಳಿವೆಯಲ್ಲವೇ?
ಒಂದು ದಿನ, ಆರು ತಿಂಗಳು, ಒಂದು ವರ್ಷದಲ್ಲಿ ಹೀಗೆ ತತ್‌ಕ್ಷಣದಲ್ಲಿ ಎಲ್ಲ ಸಮಸ್ಯೆಗಳು ಪರಿಹಾರ ಕಾಣಲು ಅಸಾಧ್ಯ. ಡೀಮ್ಡ್ ಫಾರೆಸ್ಟ್ ಸಮಸ್ಯೆ ಪರಿಹಾರಕ್ಕೆ ಈಗಾಗಲೇ ಮುಂದಡಿ ಇಟ್ಟಿದ್ದೇನೆ. ಇತರ ಸಮಸ್ಯೆಗಳನ್ನೂ ಪರಿಹರಿಸಲಾಗುತ್ತದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿಂತ ನೀರಾಗಿದೆ ಎಂಬ ಆಕ್ಷೇಪ ಇದೆಯಲ್ಲ?
ಅದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವೆ. ಅಧ್ಯಯನ ನಡೆಸಿ ಅಲ್ಲಿ ಹೊಸತನವನ್ನು ತರುವೆ. ಒಂದು ವೇಳೆ ಹಾಗಿದ್ದರೆ ಅದಕ್ಕೆ ಜೀವ ತುಂಬಿ ರಾಜ್ಯದ ಸಾಂಸ್ಕೃತಿಕ ವೈಭವ ಮರುಕಳಿಸುವಂತೆ ನೋಡಿಕೊಳ್ಳುವೆ.
ಅವಿಭಜಿತ ಜಿಲ್ಲೆಯ ಜನರು ನಿಮ್ಮಿಂದ ಯಾವ ಕೊಡುಗೆಯನ್ನು ನಿರೀಕ್ಷಿಸಬಹುದು?
ಮುಖ್ಯವಾಗಿ ಇಲ್ಲಿನ ಜನರಿಗೆ ಉದ್ಯೋಗ ಸಿಗಬೇಕು. ಉದ್ಯೋಗ ಸಿಗಬೇಕಾದರೆ ಅದಕ್ಕೆ ಪೂರಕವಾದ ಶಿಕ್ಷಣ ಮತ್ತು ಕೈಗಾರಿಕೆಗಳು ಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಯೋಜನೆ ಹೊಂದಿದ್ದೇವೆ. ಉದ್ಯೋಗ ಆಧಾರಿತ ಹಲವು ಕೈಗಾರಿಕೆಗಳು ಇಲ್ಲಿ ಸ್ಥಾಪನೆಯಾಗಬೇಕೆಂಬ ಬಯಕೆ ಹೊಂದಿದ್ದು, ಆ ನಿಟ್ಟಿನಲ್ಲಿ ಪ್ರಯತ್ನಿಸುವೆ.
ಸಂಘಟನೆ ಆಧರಿಸಿ ನಿಮಗೆ ಅವಕಾಶ ದೊರಕಿದೆ. ಪಕ್ಷ ಮತ್ತು ಸರಕಾರ ಎರಡನ್ನು ಹೇಗೆ ನಿಭಾಯಿಸುವಿರಿ?
ಸರಕಾರ ಮತ್ತು ಪಕ್ಷದ ಚಟುವಟಿಕೆ ಎರಡನ್ನು ಜತೆಜತೆಯಾಗಿ ನಿರ್ವಹಿಸಬೇಕಿದೆ. ಪಕ್ಷದ ಚಟುವಟಿಕೆಗೂ ಹೆಚ್ಚು ಒತ್ತು ಕೊಡಬೇಕಾದ ಅನಿವಾರ್ಯತೆಯಿದೆ. ಎಲ್ಲದಕ್ಕೂ ಧ್ವನಿಯಾಗಿ ಕಾರ್ಯ ನಿರ್ವಹಿಸುವೆ. ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಪಕ್ಷ ಸಂಘಟನೆಯ ಕಾರ್ಯವನ್ನು ಮಾಡುವೆ.
ಸಾರ್ವಜನಿಕರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸುವಿರಿ?
ಶಾಸಕನಾಗಿ, ಈಗ ಸಚಿವನಾಗಿಯೂ ಇರಬಹುದು; ನನ್ನಲ್ಲಿ ಯಾವ ಬದಲಾವಣೆಗಳೂ ಆಗುವುದಿಲ್ಲ. ಮೊದಲು ಯಾವ ರೀತಿ ಇದ್ದೆನೋ ಅದೇ ರೀತಿ ಇರುತ್ತೇನೆ. ನನ್ನನ್ನು ಭೇಟಿಯಾಗಲು ಯಾವುದೇ ಮಧ್ಯವರ್ತಿಗಳ ಆವಶ್ಯಕತೆ ಇಲ್ಲ. ಸಾರ್ವಜನಿಕರು ಯಾವುದೇ ಸಮಸ್ಯೆ ಹಿಡಿದುಕೊಂಡು ಬಂದರೂ ಪರಿಹಾರ ಒದಗಿಸುವ ಕಾರ್ಯವನ್ನು ಖಂಡಿತ ಮಾಡುತ್ತೇನೆ. ಜನರ ಸೇವೆಗೆ ಸದಾ ಸಿದ್ಧನಾಗಿರುತ್ತೇನೆ.
ಕ್ಷೇತ್ರದ ಅಭಿವೃದ್ದಿಗೆ ಯಾವುದಾದರೂ ಯೋಜನೆ ಇದೆಯೇ?
ಶಾಸಕನಾಗಿಯೂ ಕ್ಷೇತ್ರದ ಅಭಿವೃದ್ದಿಗೆ ಸಾಕಷ್ಟು ಶ್ರಮಿಸಿರುವೆ. ನಮ್ಮದು ಗ್ರಾಮೀಣ ಪ್ರದೇಶವೇ ಹೆಚ್ಚಿರುವ ಕ್ಷೇತ್ರ. ರೈತರ ಮತ್ತು ರೈತ ಕಾರ್ಮಿಕರ ಆದಾಯ ಹೆಚ್ಚಾಗುವಂತೆ ಯೋಜನೆ ರೂಪಿಸುವೆ. ಉಳಿದಂತೆ ಯುವ ಜನತೆಗೆ ಕೆಲಸ ಸಿಗುವಂತೆ ಮತ್ತು ಉತ್ತಮ ವಿದ್ಯಾಭ್ಯಾಸ ಸಿಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ನಡೆಯಲಿವೆ. ಒಟ್ಟಿನಲ್ಲಿ ಸುಸ್ಥಿರ ಅಭಿವೃದ್ಧಿಯ ಕನಸು ಹೊಂದಿರುವೆ. ಕಾರ್ಕಳ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸುತ್ತೇನೆ.
–ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.